ದಕ್ಷಿಣ ಅರೇಬಿಯಾದ ಪ್ರೇಷಿತ ಪ್ರತಿನಿಧಿ, ಧರ್ಮಾಧ್ಯಕ್ಷರಾದ ಪಾವೊಲೊ ಮಾರ್ಟಿನೆಲ್ಲಿ ದಕ್ಷಿಣ ಅರೇಬಿಯಾದ ಪ್ರೇಷಿತ ಪ್ರತಿನಿಧಿ, ಧರ್ಮಾಧ್ಯಕ್ಷರಾದ ಪಾವೊಲೊ ಮಾರ್ಟಿನೆಲ್ಲಿ  (@VaticanNews)

ಪ್ರೇಷಿತ ಪ್ರತಿನಿಧಿ: ಮಾನವತೆ ವಿವೇಕ ಕಳೆದುಕೊಂಡರೂ ಪ್ರೀತಿಗೆ ಸಾಕ್ಷಿಯಾಗುವ

ದಕ್ಷಿಣ ಅರೇಬಿಯಾದ ಪ್ರೇಷಿತ ಪ್ರತಿನಿಧಿಯಾದ ಧರ್ಮಾಧ್ಯಕ್ಷ ಪೌಲೊ ಮಾರ್ಟಿನೆಲ್ಲಿ ಅವರು ಪುನರುತ್ಥಾನ ಮಹೋತ್ಸವದ ಸಂದೇಶದಲ್ಲಿ ಆಳವಾದ ಆತ್ಮೀಯ ಸತ್ಯವನ್ನು ಒತ್ತಿಹೇಳುತ್ತಾರೆ—ಮಾನವತೆ ತನ್ನ ವಿವೇಕವನ್ನು ಕಳೆದುಕೊಂಡಂತೆಯೇ ಕಾಣಿಸಿದರೂ, ಕೆಡುಕು ಪ್ರಭುತ್ವ ಸಾಧಿಸಿದಂತೆ ಕಂಡರೂ, ವಿಶ್ವಾಸಿಗಳ ಕರ್ತವ್ಯ ಪ್ರೀತಿಯ ಜಯಕ್ಕೆ ಸಾಕ್ಷಿಯಾಗುವುದು.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

ಶಿಲುಬೆಯ ಮೂಲಕ, ಪುನರುತ್ಥಾನಿ ಪ್ರಭುವಿನ ಜಯವು ನಮಗೆ ದೃಢವಾದ ಭರವಸೆಯನ್ನು ನೀಡುತ್ತದೆ—ಕೆಡುಕು ಮತ್ತು ಮರಣ ಅಂತಿಮ ಮಾತಲ್ಲ. ಮಾನವ ಇತಿಹಾಸದ ಎಲ್ಲಾ ಅಂಧಕಾರಗಳ ಮಧ್ಯೆಯೂ, ಪ್ರಭುವಿನ ಪುನರುತ್ಥಾನವೇ ಅಂತಿಮ ಬೆಳಕು.

ಪುನರುತ್ಥಾನ ಮರಣ ಮತ್ತು ಕೆಡುಕಿನ ಮೇಲೆ ಪ್ರಭುವಿನ ಶಾಶ್ವತ ಜಯ. “ಇಂದು ನಾವು ಮರಣ ಮತ್ತು ಕೆಡುಕಿನ ಮೇಲೆ ಪ್ರಭುವಿನ ವಿಜಯವನ್ನು ಆಚರಿಸುತ್ತೇವೆ. ಅವರ ಹೋರಾಟ ಮಾನವ ಸೇನೆಗಳ ವಿರುದ್ಧವಲ್ಲ; ನಿಜವಾದ ಶತ್ರುವಾದ ಕೆಡುಕಿನ ವಿರುದ್ಧ. ಪುನರುತ್ಥಾನ ಮಹೋತ್ಸವದಲ್ಲಿ ಪ್ರೀತಿ ಮತ್ತು ಕರುಣೆ ತಮ್ಮ ಸಂಪೂರ್ಣ ಮಹಿಮೆಯಲ್ಲಿ ಹೊರಹೊಮ್ಮುತ್ತವೆ,” ಎಂದು ಧರ್ಮಾಧ್ಯಕ್ಷರು ಹೇಳಿದ್ದಾರೆ. ಮುಂದುವರೆಸಿ: “ಪುನರುತ್ಥಾನವು ಕೆಡುಕು ಮತ್ತು ಮರಣ ಯಾವತ್ತೂ ಅಂತಿಮ ಮಾತಾಗುವುದಿಲ್ಲ. ಪ್ರಭುವಿನ ಜಯವು ಶಾಶ್ವತವಾಗಿದೆ ಎಂಬುದನ್ನು ನಮಗೆ ಖಚಿತಪಡಿಸುತ್ತದೆ.

ದಕ್ಷಿಣ ಅರೇಬಿಯಾದ ಪ್ರೇಷಿತ ಪ್ರತಿನಿಧಿ ವಲಯವು ಯುನೈಟೆಡ್ ಅರಬ್ ಎಮಿರೇಟ್ಸ್, ಓಮಾನ್ ಮತ್ತು  ಯೆಮೆನ್ ರಾಷ್ಟ್ರಗಳನ್ನು ಒಳಗೊಂಡಿದೆ—ಈ ಪ್ರದೇಶಗಳಲ್ಲಿ ಇರುವ ವಿಶ್ವಾಸಿಗಳಿಗೆ ಈ ಸಂದೇಶ ವಿಶೇಷವಾಗಿ ಮಹತ್ವದ್ದಾಗಿದೆ.

ಬಲಿಪೂಜೆಯಿಂದ ದೂರವಾದ ವಿಶ್ವಾಸಿಗಳ ನೋವು

ಇತ್ತೀಚಿನ ಪರಿಸ್ಥಿತಿಗಳ ಪರಿಣಾಮವಾಗಿ, ಅನೇಕ ಧರ್ಮಸಭೆಗಳಲ್ಲಿ ಪುನರುತ್ಥಾನ ಮಹೋತ್ಸವದ ಬಲಿಪೂಜೆಗಳು ಬದಲಾಗಿವೆ. ದುಬೈಯ ವಿವಿಧ ಭಾಗಗಳಲ್ಲಿ ಇರುವ ಪ್ರಧಾನ ದೇವಾಲಯಗಳಲ್ಲಿ ಆಚರಣೆಗಳು ಅಡ್ಡಿಯಾಗಿದ್ದು, ಕೆಲವು ಸ್ಥಳಗಳಲ್ಲಿ ತಾತ್ಕಾಲಿಕವಾಗಿ ದೇವಾಲಯಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಉಂಟಾಗಿದೆ.

ಈ ಸಂದರ್ಭದಲ್ಲಿ ಧರ್ಮಾಧ್ಯಕ್ಷರು ವಿಶ್ವಾಸಿಗಳ ನೋವನ್ನು ಗುರುತಿಸಿ “ನಾವು ಮತ್ತೆ ಎಲ್ಲರೊಂದಿಗೆ ಸೇರಿ ದೇವಾಲಯಗಳಲ್ಲಿ ಬಲಿಪೂಜೆ ಆಚರಿಸುವ ದಿನಗಳು ಬರಲೆಂದು ಹಾರೈಸುತ್ತೇವೆ,” ಎಂದು ಅವರು ಹೇಳಿದರು. “ಈ ಸಂಕಷ್ಟದ ದಿನಗಳನ್ನು ಪ್ರಭುವಿನೊಂದಿಗೆ ಏಕತೆಯಲ್ಲಿ ಅರ್ಪಿಸಿ. ನಿಮ್ಮ ನೋವು, ನಿಮ್ಮ ತ್ಯಾಗವು ಧರ್ಮಸಭೆಯ ಹಿತಕ್ಕಾಗಿ ಮತ್ತು ಲೋಕದ ಶಾಂತಿಗಾಗಿ ಫಲ ನೀಡಲಿ” ಎಂದು ಆಧ್ಯಾತ್ಮಿಕ ಕರೆ ನೀಡಿದರು.

ಯುದ್ಧದ ನಡುವೆ ನಿರಂತರ ಪ್ರಾರ್ಥನೆ

“ಯುದ್ಧ ಅಂತ್ಯವಾಗಲಿ, ಶಾಂತಿ ಮತ್ತು ಸೌಹಾರ್ದತೆ ನೆಲೆಸಲಿ” ಎಂಬುದಕ್ಕಾಗಿ ನಾವು ನಿರಂತರವಾಗಿ ಪ್ರಾರ್ಥಿಸುತ್ತಿದ್ದೇವೆ. ಭಯ ಮತ್ತು ಅನಿಶ್ಚಿತತೆಯ ಈ ಸಮಯದಲ್ಲಿ, ಪುನರುತ್ಥಾನ ಮಹೋತ್ಸವದ ಘೋಷಣೆ—“ಪ್ರಭು ಪುನರುತ್ಥಾನಗೊಂಡಿದ್ದಾರೆ; ನಿಜವಾಗಿಯೂ ಪುನರುತ್ಥಾನಗೊಂಡಿದ್ದಾರೆ”ಎಂಬುದು ವಿಶ್ವಾಸಿಗಳಿಗೆ ಆಳವಾದ ಧೈರ್ಯ ನೀಡುತ್ತದೆ. ಈ ಇಡೀ ವಾರವನ್ನು ಒಂದೇ ಮಹತ್ವದ ದಿನದಂತೆ ಕಂಡು ಪುನರುತ್ಥಾನದ ಆನಂದವನ್ನು ಪ್ರತಿದಿನ ಅನುಭವಿಸಿ” ಎಂದು ಕರೆ ನೀಡಿದರು.

ಸಂಘರ್ಷದ ಮಧ್ಯೆಯೂ ಭರವಸೆಯ ಬೆಳಕು

ಈ ಪ್ರದೇಶದಲ್ಲಿ ಹೊಸ ಯುದ್ಧದ ಸಂಘರ್ಷದ ನಡುವೆಯೇ ನಾವು  ತಪಸ್ಸು ಕಾಲವನ್ನು ಪೂರೈಸಿ, ಇಂದು  ಪುನರುತ್ಥಾನ ಮಹೋತ್ಸವದ ಈ ದಿನಕ್ಕೆ ಬಂದಿದ್ದೇವೆರ. ಪೂಜ್ಯ ಜಗದ್ಗುರುಗಳಾದ ೧೪ನೆ ಲಿಯೋ ಅವರು ಶಾಂತಿಗಾಗಿ ನೀಡಿದ ಕರೆಗಳನ್ನು  ಸ್ಮರಿಸಿ ಮತ್ತು ಸ್ಥಳೀಯ ಅಧಿಕಾರಿಗಳ ಭದ್ರತಾ ಕ್ರಮಗಳಿಗೆ ಕೃತಜ್ಞತೆ ಸಲ್ಲಿಸಿದರು.

“ಪ್ರಾರ್ಥನೆ ನಮ್ಮನ್ನು ಈ ಕಠಿಣ ಅವಧಿಯಲ್ಲಿ ತಾಳ್ಮೆಯಿಂದ ಉಳಿಸಿದೆ. ಪ್ರಭು ನಮ್ಮನ್ನು ಮರಳುಭೂಮಿಯಂತೆ ಕಾಣುವ ಸಂಕಷ್ಟಗಳ ಮಧ್ಯೆಯೂ ನಡೆಸಿದ್ದಾರೆ. ದೇವಮಾತೆ ಮಮತೆಯಿಂದ ನಮ್ಮನ್ನು ಕಾಪಾಡಿದ್ದಾರೆ,” ಎಂದು ಅವರು ಹೇಳಿದರು.

ಪುನರುತ್ಥಾನ: ಕೆಡುಕು ಅಂತಿಮ ಮಾತಾಗುವುದಿಲ್ಲ ಎಂಬ ಭರವಸೆ

ಈ ಪುನರುತ್ಥಾನ ಮಹೋತ್ಸವದಲ್ಲಿ, ಪ್ರಭುವಿನ ಮರಣ ಮತ್ತು ಕೆಡುಕಿನ ಮೇಲಿನ ಜಯವನ್ನು ನಾವು ಆಚರಿಸುತ್ತೇವೆ ಎಂದು ಅವರು ವಿಶ್ವಾಸಿಗಳಿಗೆ ನೆನಪಿಸಿದರು. ಅವರ ಹೋರಾಟ “ಮಾನವ ಸೇನೆಗಳ ವಿರುದ್ಧವಲ್ಲ; ನಿಜವಾದ ಶತ್ರು ಕೆಡುಕೇ ಆಗಿದೆ” ಎಂದು ಅವರು ಒತ್ತಿಹೇಳಿದರು.

ಪವಿತ್ರ ಶುಕ್ರವಾರದ ಪ್ರವಚನದಲ್ಲಿ, ಪ್ರಭುವಿನ ಶಿಲುಬೆ ಯಾತನೆಯ ಬೆಳಕಿನಲ್ಲಿ, ಇತ್ತೀಚಿನ ವಾರಗಳು ಮತ್ತು ವರ್ಷಗಳಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆದಿರುವ ಘಟನೆಗಳನ್ನು ನಾವು ಧ್ಯಾನಿಸಬಹುದು ಎಂದು ಅವರು ಹೇಳಿದರು. ಕೆಡುಕು ಮತ್ತು ಹಿಂಸಾಚಾರದ ರಹಸ್ಯದ ಎದುರು ನಿಂತಾಗ, ಈ ಎಲ್ಲದ ಅರ್ಥವೇನು ಎಂಬ ಪ್ರಶ್ನೆಯನ್ನು ನಾವು ನಮ್ಮೊಳಗೆ ಕೇಳಿಕೊಳ್ಳುತ್ತೇವೆ.

ಈ ಯುದ್ಧದ ದಿನಗಳಲ್ಲಿ, ಹಿಂಸಾಚಾರದ ಅಸಂಬದ್ಧತೆಯನ್ನು ನಾವು ಸ್ಪಷ್ಟವಾಗಿ ಅನುಭವಿಸುತ್ತೇವೆ.ಅದು ಸಮಸ್ಯೆಗಳನ್ನು ಪರಿಹರಿಸುವುದಿಲ್ಲ; ಬದಲಾಗಿ ಅವುಗಳನ್ನು ಹೆಚ್ಚಿಸುತ್ತದೆ. ಅದು ಮರಣವನ್ನು ತರಿಸುತ್ತದೆ, ಭಯವನ್ನು ಉಂಟುಮಾಡುತ್ತದೆ, ಮತ್ತು ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಹೆಚ್ಚಿಸುತ್ತದೆ.

ಮಾನವತೆ ವಿವೇಕ ಕಳೆದುಕೊಂಡಂತೆ ಕಾಣುವ ಕ್ಷಣಗಳು

“ಪ್ರಕೃತಿ ವಿಕೋಪಗಳನ್ನು ನೋಡಿದಾಗ ನಾವು ದುಃಖಪಡುತ್ತೇವೆ. ಆದರೆ ಮಾನವರು ಪರಸ್ಪರ ಪ್ರಾಣಾಂತಿಕ ಆಯುಧಗಳ ಮೂಲಕ ಒಬ್ಬರಿಗೊಬ್ಬರು ನೋವುಂಟುಮಾಡುವುದನ್ನು ನೋಡಿದಾಗ, ಮಾನವತೆ ತನ್ನ ವಿವೇಕವನ್ನು ಕಳೆದುಕೊಂಡಂತೆ ಕಾಣುತ್ತದೆ,” ಎಂದು ಅವರು ಹೇಳಿದರು.

“ಕೆಡುಕಿನ ರಹಸ್ಯ ಎಷ್ಟು ದೂರವರೆಗೆ ವ್ಯಾಪಿಸಬಹುದು ಎಂಬುದನ್ನು ನಾವು ಸ್ವಲ್ಪ ಭಯದಿಂದಲೇ ಪ್ರಶ್ನಿಸುವಾಗ,“ಅದರ ಉತ್ತರವನ್ನು ನಾವು ಶಿಲುಬೆಯ ರಹಸ್ಯದಲ್ಲೇ ಕಂಡುಕೊಳ್ಳುತ್ತೇವೆ—ನಿರ್ದೋಷಿಯಾದ ದೇವಪುತ್ರನ ತಿರಸ್ಕಾರದಲ್ಲಿ, ಅವಮಾನದಲ್ಲಿ, ಹೊಡೆತಗಳಲ್ಲಿ, ಮತ್ತು ಕಠಿಣ ಪಾಡುಗಳು—ಇವೆಲ್ಲವೂ ಶಿಲುಬೆಯಲ್ಲಿನ ಸತ್ಯಗಳು.

“ಅವರನ್ನು ಅತಿ ದೊಡ್ಡ ಅಪರಾಧಿಯಂತೆ ಕೊಲ್ಲುವುದು ಮಾನವ ಇತಿಹಾಸದಲ್ಲಿನ ಅತ್ಯಂತ ಭಯಾನಕ ಘಟನೆಯಾಗಿದೆ,” ಎಂದು ಅವರು ವಿಷಾದಿಸಿದರು.

ಸಾಮಾನ್ಯವಾಗಿ ಮಾನವ ಇತಿಹಾಸದಲ್ಲಿ ಪಾಪಿಗಳು ಪಾಪಿಗಳನ್ನು ಕೊಲ್ಲುತ್ತಾರೆ; ಆದರೆ ಪವಿತ್ರ ಶುಕ್ರವಾರದಂದು, ಪಾಪಿಗಳು ನಿರ್ದೋಷಿಯ ಮೇಲೆ ದೋಷಾರೋಪಣೆ ಮಾಡುತ್ತಾರೆ; ತಪ್ಪಿತಸ್ಥರಾದ ಮಾನವರು ದೇವಪುತ್ರನನ್ನು ತಿರಸ್ಕರಿಸಿ ಕೊಲ್ಲುತ್ತಾರೆ.”

ನಮ್ಮ ಕರ್ತವ್ಯ: ಪ್ರೀತಿ ಜಯಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗುವುದು

ಶಿಲುಬೆಯಿಂದ ಪ್ರಭು ಇತಿಹಾಸದ ಎಲ್ಲ ಕಾಲಗಳಲ್ಲಿ ಶಿಲುಬೆಗೆ ಹಾಕಲ್ಪಟ್ಟವರನ್ನೆಲ್ಲ ತನ್ನತ್ತ ಆಲಿಂಗಿಸಿ ಸೆಳೆಯುತ್ತಾನೆ; ಲೋಕದ ಎಲ್ಲಾ ನೋವುಗಳನ್ನು ಮತ್ತು ಮಾನವನಿಂದ ನಡೆದಿರುವ ಎಲ್ಲಾ ಕೆಡುಕನ್ನೂ ತನ್ನೊಳಗೆ ತೆಗೆದುಕೊಳ್ಳುತ್ತಾನೆ; ಈ ಮೂಲಕ ಶಿಲುಬೆಯನ್ನು ಲೋಕದ ಕೇಂದ್ರದಲ್ಲಿಯೂ ಇತಿಹಾಸದ ಕೇಂದ್ರದಲ್ಲಿಯೂ ಸ್ಥಾಪಿಸುತ್ತಾನೆ.

“ಪ್ರಿಯ ಸಹೋದರ-ಸಹೋದರಿಯರೇ, ನಮ್ಮ ಕರ್ತವ್ಯ ಪ್ರೀತಿ ಜಯಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗುವುದು” ಎಂದು ಅವರು ಮನವಿ ಮಾಡಿದರು. ಪುನರುತ್ಥಾನ ಮಹೋತ್ಸವದ ಸಂದೇಶದಲ್ಲಿ, ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ ಅವರು ಘಟನೆಗಳು ನಮ್ಮ ನಿಯಂತ್ರಣದಾಚೆ ನಡೆಯುವಾಗ ವಿಶ್ವಾಸಿಗಳು ಅನುಭವಿಸುವ ಭಯವನ್ನು ಗುರುತಿಸಿದರು—ವಿಶೇಷವಾಗಿ ಯುದ್ಧದ ಭೀತಿ ಮತ್ತು ಅದರ ವಿಸ್ತರಣೆಯ ಆತಂಕ.

ಮಾನವರು ತಮ್ಮ ಉದ್ಯೋಗಗಳ ಬಗ್ಗೆ ಮತ್ತು ತಮ್ಮ ಕುಟುಂಬಗಳ ಬಗ್ಗೆ, ವಿಶೇಷವಾಗಿ ತಮ್ಮ ಮಕ್ಕಳ ಮತ್ತು ಅವರ ಭವಿಷ್ಯದ ಬಗ್ಗೆ ಯೋಚಿಸುವುದು ಸಹಜವೆಂದು ಅವರು ಗಮನಿಸಿದರು; ಮತ್ತು ಈ ಕಳೆದುಕೊಳ್ಳುವ ಭಯವನ್ನು ಅವರು ಮರಿಯ ಮಗ್ಗದಲೆನಾ ಮತ್ತು ಶಿಷ್ಯರ ಭಯದೊಂದಿಗೆ ಹೋಲಿಸಿದರು—ಅವರು ಪ್ರಭುವನ್ನು ಕಳೆದುಕೊಳ್ಳುವ ಭಯದಲ್ಲಿದ್ದರು.

ಮರಣವು ಅವರನ್ನು ಹಿಡಿದುಕೊಳ್ಳಲಿಲ್ಲ

“ಮರಣವು ಯೇಸುವನ್ನು ಹಿಡಿದುಕೊಳ್ಳಲಿಲ್ಲ,” ಏಕೆಂದರೆ ಅವರು ಪ್ರಭು, ಮತ್ತು ಪುನರುತ್ಥಾನಗೊಂಡಿದ್ದಾರೆ.

ಈ ನಂಬಿಕೆಯೊಂದಿಗೆ, ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ ಅವರು ಧೈರ್ಯ ನೀಡುತ್ತಾ ಹೇಳಿದರು: “ನಮ್ಮೊಳಗೆ ಪ್ರಭುವಿನ ಸಾನ್ನಿಧ್ಯವಿದೆ ಎಂಬ ನಿಶ್ಚಿತತೆ ಮತ್ತು ಅವರ ಜಯದ ಖಚಿತತೆ ಎಲ್ಲವನ್ನೂ ಬದಲಾಯಿಸುತ್ತದೆ.”

“ಅದು ಜೀವನವನ್ನು ಮತ್ತು ಮರಣವನ್ನು ನೋಡುವ ನಮ್ಮ ದೃಷ್ಟಿಯನ್ನು ಬದಲಾಯಿಸುತ್ತದೆ; ಅದು ನೋವನ್ನು ನೋಡುವ ನಮ್ಮ ದೃಷ್ಟಿಯನ್ನೂ ಬದಲಾಯಿಸುತ್ತದೆ,” ಎಂದು ಅವರು ಹೇಳಿದರು. “ಶಿಲುಬೆಗೆ ಹಾಕಲ್ಪಟ್ಟು ಪುನರುತ್ಥಾನಗೊಂಡ ಕ್ರಿಸ್ತನ ಬೆಳಕಿನಲ್ಲಿ, ಸೃಷ್ಟಿಯನ್ನು, ಲೋಕವನ್ನು ಮತ್ತು ಇತಿಹಾಸವನ್ನು ಮತ್ತೆ ಓದಲು ನಾವು ಆಹ್ವಾನಿಸಲ್ಪಟ್ಟಿದ್ದೇವೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

07 ಏಪ್ರಿಲ್ 2026, 00:51