ಮಯನ್ಮಾರಿನ ನಿರಾಶ್ರಿತರ ಶಿಬಿರದಲ್ಲಿ ಬೇಡುತ್ತಿರುವ ಯುವಕ ಮಯನ್ಮಾರಿನ ನಿರಾಶ್ರಿತರ ಶಿಬಿರದಲ್ಲಿ ಬೇಡುತ್ತಿರುವ ಯುವಕ 

ಮಯನ್ಮಾರ್: ಲೊಯ್ಕಾವ್‌ನಲ್ಲಿ 3 ವರ್ಷಗಳ ನಂತರ ಮೊದಲ ಬಾರಿಗೆ ಪುನರುತ್ಥಾನ ಮಹೋತ್ಸವ ಜಾಗರಣೆ ಬಲಿಪೂಜೆ

ಸೈನಿಕ ಆಕ್ರಮಣದ ದೀರ್ಘ ವರ್ಷಗಳ ನಂತರ,ಲೊಯ್ಕಾವ್, ಮಯನ್ಮಾರ್ ನಲ್ಲಿರುವ ಕ್ರಿಸ್ತ ರಾಜರ ಪ್ರಧಾನ ದೇವಾಲಯ ಮತ್ತೆ ವಿಶ್ವಾಸಿಗಳು ಹಾಗೂ ವಂ. ಗುರುಗಳ ಕೈಗೆ ಮರಳಿದೆ. ಈಗ ಅವರು ಒಟ್ಟಾಗಿ ಪುನರುತ್ಥಾನ ಮಹೋತ್ಸವ ಜಾಗರಣೆ ಬಲಿಪೂಜೆಯನ್ನು ಆಚರಿಸುತ್ತಿರುವುದು—ಸಂಘರ್ಷದಿಂದ ಕಂಗೆಟ್ಟಿರುವ ದೇಶದಲ್ಲಿ ಭರವಸೆಯ ಜೀವಂತ ಸಂಕೇತವಾಗಿದೆ.

ವರದಿ: ಪೌಲೊ ಅಫ್ಫಟಾಟೋ

ಮೂರು ವರ್ಷಗಳ ಬಳಿಕ ಈ ಜಾಗರಣೆ ಬಲಿಪೂಜೆ ಮತ್ತೆ ಪ್ರಧಾನ ದೇವಾಲಯದಲ್ಲಿ ನಡೆಯುತ್ತಿರುವುದು ಸ್ಥಳೀಯ ಧರ್ಮಸಭೆಗೆ ಆಳವಾದ ಆಧಾರ, ಬೆಳಕು ಮತ್ತು ಭರವಸೆಯ ಅನುಭವವಾಗಿದೆ. ದೇಶವನ್ನು ಚೂರುಮೂರು ಮಾಡುತ್ತಿರುವ ಗೃಹಸಂಘರ್ಷದ ಮಧ್ಯೆಯೇ ಈ ಆಚರಣೆ ಹೊಸ ಪ್ರಭಾತದ ಸೂಚನೆಯಾಗಿದೆ.

2023ರ ನವೆಂಬರ್‌ನಲ್ಲಿ, ಕ್ರಿಸ್ತ ರಾಜರ ಪ್ರಧಾನ ದೇವಾಲಯ ಸಂಕೀರ್ಣವನ್ನು ಸೇನೆ ತನ್ನ ಆಧೀನಕ್ಕೆ ತೆಗೆದುಕೊಂಡು ಹೋರಾಟದ ಕೇಂದ್ರವಾಗಿ ಬಳಸಿಕೊಂಡಿತ್ತು. ಧಾರ್ಮಿಕ ಸೇವಾ ಕೇಂದ್ರದ ಮೇಲೆ ಬಾಂಬ್ ದಾಳಿ ನಡೆದ ಪರಿಣಾಮ, ಧರ್ಮಾಧ್ಯಕ್ಷರಾದ ವಂ ಸೆಲ್ಸೊ ಬಾ ಶ್ವೆ, ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು ಹಾಗೂ ಆಶ್ರಯ ಪಡೆದಿದ್ದ 80 ವಿಶ್ವಾಸಿಗಳು ಅಲ್ಲಿಂದ ಪಲಾಯನ ಮಾಡಿ ತಮ್ಮ ಧರ್ಮಾಸನದಿಂದ ದೂರದಲ್ಲಿ ದೇಶಭ್ರಷ್ಟ ಜೀವನವನ್ನು ಪ್ರಾರಂಭಿಸಬೇಕಾಯಿತು.

ಆ ನಂತರ ಧರ್ಮಸಭೆ ಭಾರೀ ಸಂಕಷ್ಟವನ್ನು ಅನುಭವಿಸಿತು. ಅನೇಕ ಧರ್ಮಕೇಂದ್ರಗಳು ಮುಚ್ಚಲ್ಪಟ್ಟವು. ವಿಶ್ವಾಸಿಗಳು ತಮ್ಮ ಜೀವ ರಕ್ಷಿಸಿಕೊಳ್ಳಲು ಕಾಡುಗಳತ್ತ ಓಡಿಹೋದ ಕಾರಣ, ಸಮುದಾಯವೇ ಚದರಿಹೋಗುವ ಸ್ಥಿತಿ ನಿರ್ಮಾಣವಾಯಿತು.

ಜನರೊಂದಿಗೆ ಉಳಿಯುವ ಧರ್ಮಸೇವೆ

“ಇಂದಿಗೂ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ; ನಿರಂತರ ಸಶಸ್ತ್ರ ಸಂಘರ್ಷ ಮತ್ತು ತೀವ್ರ ಮಾನವೀಯ ಸಂಕಷ್ಟ ಮುಂದುವರಿಯುತ್ತಿದೆ,” ಎಂದು ವಂ. ಗುರು ಪೌಲ್ ಟಿನ್‌ರೆಹ್ ತಿಳಿಸಿದ್ದಾರೆ. ಆದಾಗ್ಯೂ, ಸೇನೆ ಆ ಪ್ರದೇಶವನ್ನು ತೊರೆದ ನಂತರ ಧರ್ಮಸಭೆ ತನ್ನ ಸಂಕೀರ್ಣವನ್ನು ಮರಳಿ ಪಡೆದಿರುವುದು ಮಹತ್ವದ ತಿರುವಾಗಿದೆ. ಇಬ್ಬರು ಗುರುಗಳು ಪ್ರಧಾನ ದೇವಾಲಯ ಮತ್ತು ಧಾರ್ಮಿಕ ಸೇವಾ ಕೇಂದ್ರವನ್ನು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ, ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು ಮತ್ತು ವಿಶ್ವಾಸಿಗಳು ಸಂತೋಷ ಹಾಗೂ ಭಾವೋದ್ರೇಕದಿಂದ ಪುನರುತ್ಥಾನ ಮಹೋತ್ಸವ ಆಚರಣೆಗೆ ಒಂದಾಗಿದ್ದಾರೆ.

“ದೇವರ ಜನರು ಇಸ್ರಾಯೇಲರಂತೆ ಶಾಂತಿ, ರಕ್ಷಣೆಯನ್ನೂ ವಿಮೋಚನೆಯನ್ನು ಬೇಡಿಕೊಳ್ಳುತ್ತಾರೆ. ನಮ್ಮ ಪುನರುತ್ಥಾನ ಮಹೋತ್ಸವದ ಭರವಸೆ ಎಂದರೆ—ಮರಣ, ಅಂಧಕಾರ ಮತ್ತು ನಿರಾಶೆಯ ಮೇಲೆ ಜಯ; ಪುನರುತ್ಥಾನಿ ಪ್ರಭುವಿನೊಂದಿಗಿನ ಜೀವಂತ ಐಕ್ಯ,” ಎಂದು ಅವರು ಹೇಳಿದರು. ಈ ನಡುವೆ, ಧರ್ಮಾಧ್ಯಕ್ಷರಾದ ಸೆಲ್ಸೊ ಬಾ ಶ್ವೆ ಸ್ಥಳಾಂತರಗೊಂಡ ಜನರೊಂದಿಗೇ ಪುನರುತ್ಥಾನ ಮಹೋತ್ಸವವನ್ನು ಆಚರಿಸುತ್ತಿದ್ದಾರೆ.

ಇನ್ನೂ ಸೌದು ಗ್ರಾಮದಲ್ಲಿರುವ ಅವರು, ಕಠಿಣ ಪರಿಸ್ಥಿತಿಯಲ್ಲಿ ಬದುಕುತ್ತಿರುವ ವಿಶ್ವಾಸಿ ಕುಟುಂಬಗಳೊಂದಿಗೆ ನಿಂತು ಅವರ ಆಳವಾದ ವಿಶ್ವಾಸಕ್ಕೆ ಸಾಕ್ಷಿಯಾಗಿದ್ದಾರೆ.

“ನಾವು ಅವರ ಜೊತೆಯಲ್ಲಿದ್ದೇವೆ;  ಗುರುಗಳು ಮತ್ತು ಧಾರ್ಮಿಕ ಸಹೋದರ-ಸಹೋದರಿಯರೊಂದಿಗೆ ನಮ್ಮ ಐಕ್ಯತೆಯನ್ನು ವ್ಯಕ್ತಪಡಿಸುತ್ತೇವೆ. ನಾವು ಅವರ ವಿಶ್ವಾಸವನ್ನು ಬಲಪಡಿಸುತ್ತೇವೆ. ಅವರೊಂದಿಗೆ ಸೇರಿ ಪುನರುತ್ಥಾನ ಮಹೋತ್ಸವ—ಅಂಧಕಾರದಿಂದ ಬೆಳಕಿನತ್ತ ಸಾಗುವ ದಿವ್ಯ ಪಯಣ—ಅನುಭವಿಸುತ್ತೇವೆ. ಶಾಂತಿ ಮತ್ತು ಸೌಹಾರ್ದತೆಯ ಕಾಲಕ್ಕಾಗಿ ಪ್ರಭುವಿನಲ್ಲಿ ಪ್ರಾರ್ಥಿಸುತ್ತೇವೆ,” ಎಂದು ಹೇಳಿದರು.

ಸುಮಾರು ನಾಲ್ವತ್ತು ಲಕ್ಷ ಸ್ಥಳಾಂತರಿತರು

ಕಾಯಾ ರಾಜ್ಯ ಸಂಘರ್ಷದಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಪ್ರಮುಖವಾಗಿದೆ. ಕಾಚಿನ್, ಶಾನ್,ಚಿನ್, ರಾಖೈನ್ ರಾಜ್ಯಗಳು ಹಾಗೂ ಸಾಗೈಂಗ್ ಪ್ರದೇಶದಲ್ಲಿಯೂ ಸಂಘರ್ಷ ತೀವ್ರವಾಗಿದೆ. ಮಯಾನಮಾರ್‌ನಲ್ಲಿ ಸ್ಥಳಾಂತರಿತರ ಸಂಖ್ಯೆ ಈಗ 36 ಲಕ್ಷ ಮೀರಿದ್ದು, ಶೀಘ್ರದಲ್ಲೇ 40 ಲಕ್ಷ ಮೀರಲಿದೆ ಎಂದು ಅಂದಾಜಿಸಲಾಗಿದೆ.

ವಿಶ್ವಾಸ ಮತ್ತು ಸಹನಶೀಲತೆಯ ಸಾಕ್ಷಿ

ಈ ರಾಜಕೀಯ ಪರಿವರ್ತನೆಯ ಕಾಲಘಟ್ಟದಲ್ಲಿ, ಯಾಂಗೋನ್ ಸೇರಿದಂತೆ ವಿವಿಧ ನಗರಗಳಲ್ಲಿ—“ಜನರು ದೇವಾಲಯಗಳಲ್ಲಿ ಕಿಕ್ಕಿರಿದು ಸೇರುತ್ತಿದ್ದಾರೆ; ಪುನರುತ್ಥಾನ ಮಹೋತ್ಸವ ಆಚರಣೆಗಳಿಗೆ ಬರಲು ವಿಶ್ವಾಸಿಗಳು ಹೆದರುವುದಿಲ್ಲ,” ಎಂದು ಕಥೋಲಿಕ ವಿಶ್ವಾಸಿ ಹಾಗೂ ಶಿಕ್ಷಕರಾದ ಜೋಸೆಫ್ ಕುಂಗ್ ತಿಳಿಸಿದ್ದಾರೆ.

“ಇದು ಮಹತ್ತರ ವಿಶ್ವಾಸ ಮತ್ತು ಸಹನಶೀಲತೆಯ ಸಾಕ್ಷಿ; ನಮಗೆಲ್ಲರಿಗೂ ಭರವಸೆಯ ಬೆಳಕು. ನಾವು ಪರಸ್ಪರ ಬಲಗೊಳ್ಳುತ್ತೇವೆ; ಪ್ರಾರ್ಥನೆಗೆ ಸೇರುತ್ತೇವೆ; ಸಕ್ರಾಮೆಂಟ್‌ಗಳನ್ನು ಸ್ವೀಕರಿಸುತ್ತೇವೆ. ದುಷ್ಟತನ ಅಂತಿಮ ಮಾತು ಅಲ್ಲ—ಕ್ರಿಸ್ತನು ಮರಣವನ್ನು ಜಯಿಸಿದ್ದಾನೆ,” ಎಂದು ಅವರು ಹೇಳಿದರು.

ಶಾಂತಿ: ಒಟ್ಟಾಗಿ ನಿರ್ಮಿಸಬೇಕಾದ ದಾರಿ

ಪವಿತ್ರ ಗುರುವಾರದಂದು ಯಾಂಗೋನ್ ಪ್ರಧಾನ ದೇವಾಲಯದಲ್ಲಿ ನಡೆದ ಬಲಿಪೂಜೆಯಲ್ಲಿ, ಪ್ರಧಾನ ಗುರು ಚಾರ್ಲ್ಸ್ ಮಾಂಗ್ ಬೋ “ಶಾಂತಿ ಮತ್ತು ಸೌಹಾರ್ದತೆಯ ಪುನರುತ್ಥಾನ ಮಹೋತ್ಸವ”ಕ್ಕಾಗಿ ಮನವಿ ಮಾಡಿದರು.

“ನಾವು ಒಬ್ಬರೇ ನಡೆದುಕೊಂಡರೆ, ಸ್ವಾರ್ಥದಿಂದ ಯೋಚಿಸಿದರೆ, ಶಾಂತಿಯನ್ನು ನಿರ್ಮಿಸಲು ಸಾಧ್ಯವಿಲ್ಲ. ಶಾಂತಿ ಎಂದರೆ ಇನ್ನೊಬ್ಬರನ್ನು ಸಹೋದರನಾಗಿ, ದೇವರ ಅಮೂಲ್ಯ ವರವಾಗಿ ಸ್ವೀಕರಿಸುವ ಮನೋಭಾವದಿಂದ ಹುಟ್ಟುತ್ತದೆ. ನಾವು ಶಾಂತಿಯನ್ನು ಬಯಸಿದರೆ, ಪರಸ್ಪರ ಸಂಪರ್ಕ ಸಾಧಿಸಬೇಕು; ಒಬ್ಬರತ್ತ ಒಬ್ಬರು ಬರಬೇಕು; ಕೈಕುಲುಕಬೇಕು; ಸಂಕಷ್ಟದಲ್ಲಿರುವವರೊಂದಿಗೆ ಕೈಜೋಡಿಸಬೇಕು,” ಎಂದು ಅವರು ಹೇಳಿದರು.

“ಪುನರುತ್ಥಾನಿ ಪ್ರಭುವಿನ ಕೃಪೆಯಿಂದ ನಮ್ಮನ್ನು ನಾವು ಪರಿವರ್ತಿಸಿಕೊಳ್ಳುವ ಅವಕಾಶವೇ ಈ ಪುನರುತ್ಥಾನ ಮಹೋತ್ಸವ. ಇದೇ ಶಾಂತಿಯನ್ನು ನಿರ್ಮಿಸುವ ದಾರಿ,” ಎಂದು ದೇಶಕ್ಕೆ ಸಂದೇಶ ನೀಡಿದರು. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

04 ಏಪ್ರಿಲ್ 2026, 17:21