ಹೆಬ್ರಾನ್ ಬಳಿ ಇಸ್ರೇಲಿ ವಸಾಹತುಗಾರರು ಸುಟ್ಟಿದ್ದಾರೆ ಎಂದು  ಪ್ಯಾಲೇಸ್ತೀನಿಯರು ಹೇಳುತ್ತಿರುವ ಹಾನಿಗೊಳಗಾದ ಕಾರನ್ನು ಜನರು ಪರಿಶೀಲಿಸುತ್ತಿರುವ ದೃಶ್ಯ. (ಚಿತ್ರ ಕೃಪೆ: AFP ಅಥವಾ ಪರವಾನಗಿದಾರರು) ಹೆಬ್ರಾನ್ ಬಳಿ ಇಸ್ರೇಲಿ ವಸಾಹತುಗಾರರು ಸುಟ್ಟಿದ್ದಾರೆ ಎಂದು ಪ್ಯಾಲೇಸ್ತೀನಿಯರು ಹೇಳುತ್ತಿರುವ ಹಾನಿಗೊಳಗಾದ ಕಾರನ್ನು ಜನರು ಪರಿಶೀಲಿಸುತ್ತಿರುವ ದೃಶ್ಯ. (ಚಿತ್ರ ಕೃಪೆ: AFP ಅಥವಾ ಪರವಾನಗಿದಾರರು) 

ಗಾಜಾ ಮತ್ತು ವೆಸ್ಟ್ ಬ್ಯಾಂಕನ್ನು ಮರೆಯಬೇಡಿ: ಪೂಜ್ಯ ಧರ್ಮಾಧ್ಯಕ್ಷರ ಮನವಿ

ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಜೆರುಸಲೇಮ್ ಲ್ಯಾಟಿನ್ ಪ್ರಧಾನ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಪೂಜ್ಯ ವಿಲಿಯಂ ಶೋಮಾಲಿ ಅವರು ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಪ್ರದೇಶಗಳ ಮೇಲಿನ ಗಮನ ಕಡಿಮೆಯಾಗಬಾರದೆಂದು ಮನವಿ ಮಾಡಿದರು. “ಇಂದು ಎಲ್ಲರ ಗಮನ ಇರಾನ್ ಮತ್ತು ದಕ್ಷಿಣ ಲೆಬನಾನ್ ಕಡೆ ತಿರುಗಿದೆ. ಆದರೆ ಗಾಜಾದಲ್ಲಿ 20 ಲಕ್ಷ ಜನರು ಇನ್ನೂ ಸಂಕಟದಲ್ಲಿದ್ದಾರೆ. ಈ ಸಮಸ್ಯೆ ಇನ್ನೂ ಪರಿಹಾರ ಕಂಡಿಲ್ಲ,” ಎಂದು ಅವರು ದೂರವಾಣಿ ಮಾತುಕತೆಯಲ್ಲಿ ತಿಳಿಸಿದರು.

ಲೇಖಕರು: ರಾಬರ್ಟೊ ಪಾಗ್ಲಿಅಲಂಗ

ಅವರು ಗಾಜಾದ ಆರ್ಥಿಕ ಸ್ಥಿತಿ ತೀವ್ರವಾಗಿ ಕುಸಿದಿರುವುದನ್ನು ಉಲ್ಲೇಖಿಸಿ, ಮೂಲಭೂತ ಅಗತ್ಯಗಳಾದ ಔಷಧಿಗಳು, ಆಂಟಿಬಯಾಟಿಕ್ಸ್ ಮತ್ತು ವೈದ್ಯಕೀಯ ಸಾಧನಗಳ ಕೊರತೆ ಮುಂದುವರಿದಿದೆ ಎಂದು ಹೇಳಿದರು. “ಭದ್ರತೆ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಪ್ರತಿದಿನ ಗಾಜಾದಲ್ಲಿ ಪ್ಯಾಲೇಸ್ತೀನಿಯರು ಹತ್ಯೆಯಾಗುತ್ತಿದ್ದಾರೆ. ರಾಫಾ ಗಡಿದ್ವಾರವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ,” ಎಂದು ಅವರು ಎಚ್ಚರಿಸಿದರು. ಪುನರ್‌ನಿರ್ಮಾಣದ ಕುರಿತು ಈಗ ಯಾರೂ ಮಾತನಾಡುತ್ತಿಲ್ಲ ಎಂಬುದನ್ನು ವಿಷಾದಿಸುತ್ತಾ, “ಇನ್ನೂ 80% ಮೂಲಸೌಕರ್ಯ ನಾಶವಾಗಿದೆ,” ಎಂದು ಹೇಳಿದರು. ಸಾಧ್ಯವಾದವರು ಪ್ರದೇಶವನ್ನು ತೊರೆದು ಹೋಗುತ್ತಿದ್ದಾರೆ; ಕೆಲವರು ಆಸ್ಟ್ರೇಲಿಯಾದತ್ತ ವಲಸೆ ಹೋಗಿದ್ದು, ಅಲ್ಲಿ ಸುಮಾರು 50 ಕುಟುಂಬಗಳನ್ನು ಸ್ವಾಗತಿಸಲಾಗಿದೆ.

ವೆಸ್ಟ್ ಬ್ಯಾಂಕ್‌ನಲ್ಲಿಯೂ ಉದ್ವಿಗ್ನತೆ ಹೆಚ್ಚುತ್ತಿದೆ ಎಂದು ಶ್ರೇಷ್ಠ ಗುರು ವಿವರಿಸಿದರು. ವಿಶೇಷವಾಗಿ ವಸತಿ ವಸಾಹತುಗಳ ಸಮಸ್ಯೆ ಗಂಭೀರವಾಗಿದೆ. “ಈಗ ಸುಮಾರು 200 ವಸಾಹತುಗಳಿದ್ದು, ಅವುಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ,” ಎಂದು ಹೇಳಿದರು. ಇಸ್ರೇಲ್   ಪ್ಯಾಲೇಸ್ತೀನಿಯರನ್ನು ಕೆಲವೇ ಪ್ರದೇಶಗಳಿಗೆ ಸೀಮಿತಗೊಳಿಸಿ, ನಗರಗಳ ಸುತ್ತ ವಸಾಹತುಗಳನ್ನು ನಿರ್ಮಿಸುವ ಮೂಲಕ ಭೂಮಿಯನ್ನು ಕಬಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. “ಇದರಿಂದ ಪ್ಯಾಲೇಸ್ತೀನ್ ರಾಜ್ಯದ ಉದಯವನ್ನು ತಡೆಯುವ ಉದ್ದೇಶವಿದೆ,” ಎಂದು ಅವರು ಸ್ಪಷ್ಟಪಡಿಸಿದರು.

ಹೆಬ್ರೋನ್-ಬೆತ್ಲೆಹೆಮ್, ರಾಮಲ್ಲಾ ಮತ್ತು ನಾಬ್ಲಸ್-ಜೆನಿನ್ ಪ್ರದೇಶಗಳಲ್ಲಿ ಪ್ಯಾಲೇಸ್ತೀನಿಯರನ್ನು ಕೇಂದ್ರೀಕರಿಸಲು ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದರು. ಅದೇ ವೇಳೆ, ಉತ್ತರ-ದಕ್ಷಿಣ ಮಾರ್ಗದಲ್ಲಿ ವಸಾಹತುಗಳು ಹೆಚ್ಚುತ್ತಿವೆ. “ಪ್ಯಾಲೇಸ್ತೀನ್ ಪ್ರದೇಶಗಳ 53% ‘ಏರಿಯಾ C’ಯಲ್ಲಿ ಬರುತ್ತದೆ, ಅಲ್ಲಿ ನಿರ್ಮಾಣಕ್ಕೆ ಅನುಮತಿ ಇಲ್ಲ. ಆದರೆ ವಸಾಹತುಗಾರರು ತಮ್ಮ ಇಚ್ಛೆಯಂತೆ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ,” ಎಂದು ಅವರು ತಿಳಿಸಿದರು.

ಕ್ರೈಸ್ತ ಸಮುದಾಯಗಳ ಮೇಲೂ ಹಿಂಸಾಚಾರ ಹೆಚ್ಚುತ್ತಿದೆ ಎಂದು ಅವರು ವಿಷಾದಿಸಿದರು. ತೈಬೆಹ್ ಪ್ರದೇಶದಲ್ಲಿ ವಸಾಹತುಗಾರರು ನಿರಂತರವಾಗಿ ದಾಳಿ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ ಹಾಗೂ ರೈತರು ತಮ್ಮ ಹೊಲಗಳಲ್ಲಿ ಕೆಲಸ ಮಾಡುವುದನ್ನು ತಡೆಯುತ್ತಿದ್ದಾರೆ. ಇಂತಹ ಘಟನೆಗಳು ಈಗ ದಿನನಿತ್ಯದ ಸಂಗತಿಯಾಗಿವೆ. “ಕೆಲವು ಕಡೆಗಳಲ್ಲಿ ಜನರನ್ನು ಕೊಲ್ಲಲಾಗುತ್ತಿದೆ. ಜನರಲ್ಲಿ ಭಯ ಹೆಚ್ಚಾಗಿದೆ,” ಎಂದು ಅವರು ಹೇಳಿದರು. ಬೆತ್ಲೆಹೆಮ್ ಸಮೀಪದ ಪ್ರದೇಶದಲ್ಲಿ ಕ್ರೈಸ್ತ ಕುಟುಂಬಗಳ ಭೂಮಿಯಲ್ಲಿ ಹೊಸ ವಸಾಹತು ನಿರ್ಮಾಣವಾಗುತ್ತಿದೆ ಎಂದು ಅವರು ತಿಳಿಸಿದರು. “ಇದು ಪ್ಯಾಲೇಸ್ತೀನ್ ರಾಜ್ಯದ ಭವಿಷ್ಯವನ್ನೇ ತಡೆಯುತ್ತದೆ,” ಎಂದು ಅವರು ಎಚ್ಚರಿಸಿದರು.

ಕ್ರೈಸ್ತರ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ಶ್ರೇಷ್ಠ ಗುರು ಗಮನ ಸೆಳೆದರು. “ಆರಂಭಿಕ ಶತಮಾನಗಳಲ್ಲಿ ನಾವು ಬಹುಮತವಾಗಿದ್ದೆವು. ನಂತರ ಕ್ರಮೇಣ ನಮ್ಮ ಪ್ರಮಾಣ ಕುಸಿಯತೊಡಗಿತು,” ಎಂದು ಹೇಳಿದರು. ಇಂದಿನ ಸ್ಥಿತಿಯಲ್ಲಿ ಸಂಖ್ಯೆಯಲ್ಲಿ ಹೆಚ್ಚಿದ್ದರೂ ಪ್ರಮಾಣದಲ್ಲಿ ಕಡಿಮೆ ಎಂದು ಅವರು ವಿವರಿಸಿದರು. ಇಸ್ರಾಯೇಲ್, ಗಾಜಾ ಮತ್ತು ಪ್ಯಾಲೇಸ್ತೀನಲ್ಲಿರುವ ಅರಬಿಕ್ ಮಾತನಾಡುವ ಕ್ರೈಸ್ತರ ಸಂಖ್ಯೆ ಸುಮಾರು 1.8 ಲಕ್ಷ ಇದ್ದರೂ, ಒಟ್ಟು ಜನಸಂಖ್ಯೆಯಲ್ಲಿ ಅವರ ಪ್ರಮಾಣ ಕಡಿಮೆಯಾಗಿದೆ.

ಇದಾದರೂ, “ಪರಮಾತ್ಮನು ತನ್ನ ಸಭೆಯನ್ನು ಪವಿತ್ರ ಭೂಮಿಯಿಂದ ನಾಶವಾಗಲು ಬಿಡುವುದಿಲ್ಲ. ನಾವು ಸಣ್ಣ ಹಿಂಡು, ಆಗಿದ್ದರೂ ಪವಿತ್ರ ಸ್ಥಳಗಳ ಬಳಿಯೇ ಉಳಿಯುತ್ತೇವೆ,” ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಪುನರುತ್ಥಾನ ಮಹೋತ್ಸವದ ಆಚರಣೆಗಳೂ ನಡೆಯಲಿವೆ. ಗರಿಗಳ ಭಾನುವಾರದ ನಂತರ ಉಂಟಾದ ಗೊಂದಲಗಳ ಬಳಿಕ, ಭದ್ರತಾ ನಿಯಮಗಳೊಳಗೆ ತ್ರಿದಿನಾಚರಣೆ ನಡೆಸಲು ಅವಕಾಶ ನೀಡಲಾಗಿದೆ. “ಪವಿತ್ರ ಸಮಾಧಿ ದೇವಾಲಯದ ಬಾಗಿಲು ತೆರೆಯಲಾಗುತ್ತದೆ, ಸೀಮಿತ ಸಂಖ್ಯೆಯವರು ಮಾತ್ರ ಒಳಗೆ ಪ್ರವೇಶಿಸಲಿದ್ದಾರೆ, ನಂತರ ಮತ್ತೆ ಮುಚ್ಚಲಾಗುತ್ತದೆ,” ಎಂದು ಅವರು ಹೇಳಿದರು. ಇದೇ ಕ್ರಮ ಇತರ ಪೂರ್ವ ವಿಧಿವಿಧಾನಗಳಿಗೂ ಅನ್ವಯವಾಗಲಿದೆ. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

01 ಏಪ್ರಿಲ್ 2026, 22:10