ಏಪ್ರಿಲ್ 21 ರಂದು ಮಲಾಬೋದಲ್ಲಿ ರಾಷ್ಟ್ರೀಯ ವಿಶ್ವವಿದ್ಯಾಲಯದ 'ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಕ್ಯಾಂಪಸ್' ಉದ್ಘಾಟನೆಯಲ್ಲಿ ವಂ. ಗುರು ಇನೋಸೆನ್ಸಿಯೊ ಮೊಯ್ಸೆಸ್ ಏಪ್ರಿಲ್ 21 ರಂದು ಮಲಾಬೋದಲ್ಲಿ ರಾಷ್ಟ್ರೀಯ ವಿಶ್ವವಿದ್ಯಾಲಯದ 'ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಕ್ಯಾಂಪಸ್' ಉದ್ಘಾಟನೆಯಲ್ಲಿ ವಂ. ಗುರು ಇನೋಸೆನ್ಸಿಯೊ ಮೊಯ್ಸೆಸ್ 

ಕ್ಲಾರೆಟಿಯನ್ ಯಾಜಕರೋರ್ವರಿಂದ ಈಕ್ವೆಟೋರಿಯಲ್ ಗಿನಿಯ ಧರ್ಮಸಭೆಯ ಪರಿವರ್ತನೆಯ ಕುರಿತು ಚಿಂತನೆ

ಮಲಾಬೊದಲ್ಲಿರುವ ಕ್ಲಾರೆಟಿಯನ್ ಯಾಜಕರಾದ ವಂ. ಗುರು ಇನೋಸೆನ್ಸಿಯೊ ಮೊಯ್ಸೆಸ್ ಅವರು, ಕಥೋಲಿಕ ಬಹುಮತವಿರುವ ಈ ದೇಶದಲ್ಲಿ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರ ಉಪಸ್ಥಿತಿಯ ಮಹತ್ವದ ಕುರಿತು ಚಿಂತನೆ ವ್ಯಕ್ತಪಡಿಸಿ, 1982ರಲ್ಲಿ ನಡೆದ ಪೂಜ್ಯ ಜಗದ್ಗುರುವಿನ ಭೇಟಿಯ ಬಳಿಕ ಈಕ್ವೆಟೋರಿಯಲ್ ಗಿನಿಯ ಧರ್ಮಸಭೆಯಲ್ಲಿ ಸಂಭವಿಸಿದ ಪ್ರಮುಖ ಬದಲಾವಣೆಗಳನ್ನು ತಿಳಿಸಿದ್ದಾರೆ.

ಲೇಖಕರು: ಕ್ಲಾಡಿಯಾ ಟೊರೆಸ್ – ಕಿಲಾಂಬಾ, ಈಕ್ವೆಟೋರಿಯಲ್ ಗಿನಿ

ಮಲಾಬೊದಲ್ಲಿರುವ ಕ್ಲಾರೆಟಿಯನ್ ಯಾಜಕರಾದ ವಂ. ಗುರು ಇನೋಸೆನ್ಸಿಯೊ ಮೊಯ್ಸೆಸ್,44 ವರ್ಷಗಳ ಹಿಂದೆ ಸಂತ ಜಗದ್ಗುರು ಎರಡನೇ ಜಾನ್ ಪಾಲ್ ಅವರು ಈಕ್ವೆಟೋರಿಯಲ್ ಗಿನಿಗೆ ಭೇಟಿ ನೀಡಿದಾಗ ಅವರು   ಬಾಲಕರಾಗಿದ್ದರು. ಈಗ ಅವರು ತಮ್ಮ ದೇಶಕ್ಕೆ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರ ಭೇಟಿಯ ಮಹಾಧರ್ಮಪ್ರಾಂತ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಕರ್ತವ್ಯವನ್ನು ಅವರು ಕೃತಜ್ಞತೆಯೊಂದಿಗೆ ಸ್ವೀಕರಿಸಿದ್ದಾರೆ.

ಮಲಾಬೊದಲ್ಲಿನ ರಾಷ್ಟ್ರೀಯ ವಿಶ್ವವಿದ್ಯಾಲಯದ ‘ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಕ್ಯಾಂಪಸ್’ ಉದ್ಘಾಟನಾ ಕಾರ್ಯಕ್ರಮದ ಹಿನ್ನಲೆಯಲ್ಲಿ ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ, ಅವರು ಕಥೋಲಿಕ ಬಹುಮತವಿರುವ ಈ ದೇಶದಲ್ಲಿ ಪೂಜ್ಯ ಜಗದ್ಗುರುವಿನ ಉಪಸ್ಥಿತಿಯ ಮಹತ್ವದ ಕುರಿತು ಚಿಂತನೆ ವ್ಯಕ್ತಪಡಿಸಿದರು. ಜೊತೆಗೆ, 1982ರಲ್ಲಿ ನಡೆದ ಕೊನೆಯ ಜಗದ್ಗುರುವಿನ ಭೇಟಿಯಿಂದ ನಂತರ ಧರ್ಮಸಭೆಯಲ್ಲಿ ಸಂಭವಿಸಿದ ಪ್ರಮುಖ ಬದಲಾವಣೆಗಳ ಒಂದು ಅವಲೋಕನವನ್ನು ನೀಡಿದರು; ವಿಶೇಷವಾಗಿ ಯಾಜಕ ವೃತ್ತಿಗಳಿಗೆ ಹೆಚ್ಚುತ್ತಿರುವ ಪ್ರವೃತ್ತಿ ಮತ್ತು ಹೆಚ್ಚು ಸ್ಥಳೀಯ ಸ್ವರೂಪದ ಧರ್ಮಸಭೆಯ ಬೆಳವಣಿಗೆಯ ಚಿತ್ರಣವನ್ನು ನೀಡಿದ್ದಾರೆ.

ಪ್ರಶ್ನೆ: ಈಕ್ವೆಟೋರಿಯಲ್ ಗಿನಿಗೆ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರ ಭೇಟಿಯ ಮಹತ್ವವೇನು?

ನಿಜವಾಗಿ ಹೇಳುವುದಾದರೆ, ಇದು ನಮಗೆ ಒಂದು ವಿಶೇಷ ಕ್ಷಣವಾಗಿದೆ. ಈಕ್ವೆಟೋರಿಯಲ್ ಗಿನಿಗೆ ಮೊದಲ ಬಾರಿಗೆ ಒಬ್ಬ ಜಗದ್ಗುರು ಬಂದಿದ್ದರು, ಆದರೆ ಅದು ಒಂದು ಕ್ಷಣಿಕ ಘಟನೆಯಂತಿತ್ತು—ನಮ್ಮಲ್ಲಿ ಅನೇಕರು ಆಗ ಮಕ್ಕಳಾಗಿದ್ದೆವು. ಜೊತೆಗೆ ಅದು ಬಹಳ ಚಿಕ್ಕ ಭೇಟಿಯೂ ಆಗಿತ್ತು; ಸಂತ ಜಗದ್ಗುರು ಎರಡನೇ ಜಾನ್ ಪಾಲ್ ಅವರು ಒಂದು ರಾತ್ರಿ ಕೂಡ ಉಳಿಯಲಿಲ್ಲ. ಅನೇಕ ವರ್ಷಗಳ ನಂತರ—ಸುಮಾರು 44 ವರ್ಷಗಳ ಬಳಿಕ—ಬಹುಸಂಖ್ಯಾತ ಕಥೋಲಿಕ ದೇಶವಾಗಿರುವ ನಮ್ಮನ್ನು ಮತ್ತೊಮ್ಮೆ ಜಗದ್ಗುರು ಭೇಟಿ ಮಾಡುವ ಅವಕಾಶ  ದೊರೆತಿದೆ, ಮತ್ತು ನಾವು ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರನ್ನು ಕಾಣುವ ಭಾಗ್ಯ ಪಡೆದಿದ್ದೇವೆ. ನಾವು ರಚಿಸಿರುವ ಗೀತೆ ಹೇಳುವಂತೆ, ಇದು ನಮಗೆ ಭರವಸೆ ಮತ್ತು ಆನಂದದ ಕಾರಣವಾಗಿದೆ.

ನಾವು ಅನೇಕ ಕುಟುಂಬ ಸಮಸ್ಯೆಗಳಿರುವ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ; ಜೊತೆಗೆ ಆಫ್ರಿಕಾದ ಪರಿಸ್ಥಿತಿಯು ಸಶಸ್ತ್ರ ಸಂಘರ್ಷಗಳು ಮತ್ತು ಬಹಳ ದ್ವೇಷದಿಂದ ಕೂಡಿದೆ, ಆದರೆ ಅಲ್ಲಿ ಭರವಸೆಯೂ ಇದೆ. ಆದ್ದರಿಂದ, ಇದು ನಮಗೆ ಭರವಸೆ, ಏಕತೆ ಮತ್ತು ನಮ್ಮ ನಂಬಿಕೆಯನ್ನು ಬಲಪಡಿಸುವ ಕ್ಷಣವಾಗಿದೆ ಎಂದು ನಾವು ನಂಬುತ್ತೇವೆ.

ನಾವು ಬಹುಕಾಲದಿಂದ ಸುವಾರ್ತಾ ಪ್ರಸಾರದಲ್ಲಿ ತೊಡಗಿದ್ದೇವೆ. ಇಲ್ಲಿ ಈಗಾಗಲೇ ಅನೇಕ ಧರ್ಮಸಭೆಗಳು ಮತ್ತು ಇತರ ಪಂಥಗಳೂ ಇವೆ. ಆದರೆ ನಾವು ಕಥೋಲಿ ಮತ್ತು ಕ್ರೈಸ್ತರ ನಂಬಿಕೆಯನ್ನು ಇನ್ನಷ್ಟು ಬಲಪಡಿಸಬೇಕು, ಅವರು ಅದನ್ನು ನಿಜವಾಗಿ ಅರ್ಥಮಾಡಿಕೊಳ್ಳುವಂತೆ ಮಾಡಬೇಕು. ಆದ್ದರಿಂದ, ಪೂಜ್ಯ ಜಗದ್ಗುರುವಿನ ಈ ಭೇಟಿ ನಮಗೆ ಒಂದು ಮಹತ್ತರ ಪ್ರೇರಣೆ—ಅತ್ಯಂತ ಮುಖ್ಯ ಮತ್ತು ವಿಶೇಷವಾದುದು. ಇದು ಸ್ಪಷ್ಟವಾಗಿ ಒಂದು ಆತ್ಮಪಾಲನಾ ಭೇಟಿ.

ಕೆಲವರು ಇದನ್ನು ಕೇವಲ ಸಾಂಸ್ಕೃತಿಕ ಪ್ರದರ್ಶನದ ಕ್ಷಣವೆಂದು ನೋಡಬಹುದಾದರೂ, ಬಹುಪಾಲು ಜನರು ಇದನ್ನು ಬಹುಕಾಲದಿಂದ ಕಾಯುತ್ತಿದ್ದರು—ಇದು ಜನಸಾಮಾನ್ಯರಷ್ಟೇ ಅಲ್ಲ, ಧಾರ್ಮಿಕರ ಸೇವಕ- ಸೇವಕಿಯರಿಗೂ ಮತ್ತು ಯಾಜಕರಿಗೂ ನವೀಕರಣದ ಮತ್ತೊಂದು ಮೂಲವಾಗಿದೆ. ಅವರು ನಮ್ಮ ಕುರಿಗಾಹಿ.

ಪ್ರಶ್ನೆ: 1982ರಲ್ಲಿ ನಡೆದ ಜಗದ್ಗುರುವಿನ ಭೇಟಿಯಿಂದ ನಂತರ ಈಕ್ವೆಟೋರಿಯಲ್ ಗಿನಿಯ ಧರ್ಮಸಭೆ ಹೇಗೆ ಬದಲಾಗಿದೆ?

ಧರ್ಮಸಭೆ ಬಹಳ ದೊಡ್ಡ ಮಟ್ಟದಲ್ಲಿ ಬದಲಾಗಿದೆ. ನಾನು ಕ್ಲಾರೆಟಿಯನ್ ಆಗಿರುವುದರಿಂದ ಮಾತ್ರ ಅಲ್ಲ, ಆ ಸಮಯದಲ್ಲಿ ಪೂಜ್ಯ ಜಗದ್ಗುರು ಹೇಳಿದಂತೆ, ಈ ಪ್ರದೇಶದಲ್ಲಿ ಸುವಾರ್ತಾ ಪ್ರಸಾರ ಬಹುಪಾಲು ಕ್ಲಾರೆಟಿಯನ್‌ಗಳ ಮೂಲಕವೇ ನಡೆಯಿತು— ಅದು ಯೇಸುಸಭಾ ಯಾಜಕರು ಅಥವಾ ಡೊಮಿನಿಕನ್‌ಗಳ ಮೂಲಕವೂ ಆಗಬಹುದಾಗಿತ್ತು. ಕಾರಣಾಂತರಗಳಿಂದ, ಮುಖ್ಯವಾಗಿ ಕ್ಲಾರೆಟಿಯನ್‌ಗಳೇ ಸುವಾರ್ತೆಯನ್ನು ಬಹುಪಾಲು ಹರಡಿದ್ದಾರೆ.

ದೇವರಿಗೆ ಕೃತಜ್ಞತೆಯೊಂದಿಗೆ ಮತ್ತು ಪವಿತ್ರ ಆತ್ಮದ ಪ್ರೇರಣೆಯಿಂದ, ಈಗ ಇಲ್ಲಿ ಅನೇಕ ಧಾರ್ಮಿಕ ಸಂಘಗಳು ಹೆಚ್ಚಾಗಿವೆ. ಅಮಲೋದ್ಭವ ಮಾತೆಯ ಸಭೆ (ಮಿಷನರೀಸ್ ಆಫ್ ಮೇರಿ ಇಮ್ಯಾಕ್ಯುಲೇಟ್) ಇಲ್ಲಿದ್ದಾರೆ; ಹಾಗೆಯೇ ಕ್ಲಾರೆಟಿಯನ್ ಮಿಷನರಿಗಳ ವಿನಂತಿಯ ಮೇರೆಗೆ ಅವರ ಆಗಮನದ ಎರಡು ವರ್ಷಗಳ ನಂತರ ಬಂದ ಮಿಷನರೀಸ್ ಆಫ್ ದ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಸಹ ಇಲ್ಲಿದ್ದಾರೆ.

ಇಲ್ಲಿ ಅನೇಕ ಧಾರ್ಮಿಕ ಸಂಘಗಳು ಮತ್ತು ಬಹಳಷ್ಟು ಪ್ರಾಂತೀಯ ಯಾಜಕರು ಇದ್ದಾರೆ. ಇದು ನಿಜವಾಗಿಯೂ ಹೆಚ್ಚು ಸ್ಥಳೀಯ ಧರ್ಮಸಭೆಯಾಗಿದೆ. ಇತರ ದೇಶಗಳಿಂದ ಬರುವ ಮಿಷನರಿಗಳು ಪ್ರತಿದಿನ ಕಡಿಮೆಯಾಗುತ್ತಿದ್ದಾರೆ; ಮತ್ತು ನಮ್ಮ ಧರ್ಮಪ್ರಾಂತ್ಯಗಳಿಗೆ ಈಗ ಈಕ್ವೆಟೋರಿಯಲ್ ಗಿನಿಯ ಸ್ವಂತ ಧರ್ಮಾಧ್ಯಕ್ಷರು ಇರುವುದೂ ಇಲ್ಲಿ ಕಥೋಲಿಕ ಧರ್ಮಸಭೆಯ ಪರಿಪಕ್ವತೆಯ ಒಂದು ಸಂಕೇತವಾಗಿದೆ.

ಇದರ ರೂಪವು ಉತ್ತಮದತ್ತ ಬದಲಾಗಿದೆ. ಅನೇಕ ಯುವಕರು ತಮ್ಮ ಶ್ರೇಷ್ಠತೆಯನ್ನು ನೀಡಲು ಸಿದ್ಧರಾಗಿದ್ದು, ಹಿಂದೆ ಮಿಷನರಿಗಳು ತಲುಪಲು ಸಾಧ್ಯವಾಗದ ಅತ್ಯಂತ ದೂರದ ಪ್ರದೇಶಗಳಿಗೂ ತಲುಪುತ್ತಿದ್ದಾರೆ. ನಾವು ಎಲ್ಲೆಡೆ ಇದ್ದೇವೆ. ಇಂದು ಧಾರ್ಮಿಕ ಸಭೆಗಳಲ್ಲಿಯೂ ನಾವು ಬಹುಪಾಲು ಸ್ಥಳೀಯರೇ ಆಗಿದ್ದೇವೆ.

ಉದಾಹರಣೆಗೆ, ನಮ್ಮ ಧಾರ್ಮಿಕ ಸಭೆಯಲ್ಲಿ,ಇಲ್ಲಿ ಸುಮಾರು 50 ಕ್ಲಾರೆಟಿಯನ್‌ಗಳಿದ್ದು, ಅವರಲ್ಲಿ ಕೇವಲ ಇಬ್ಬರು ಮಾತ್ರ ವಿದೇಶಿಗರು—ಒಬ್ಬ ಅಮೆರಿಕನ್ ಮತ್ತು ಒಬ್ಬ ಸ್ಪಾನಿಷ್. ಉಳಿದವರು ಎಲ್ಲರೂ ಗಿನಿಯವರೇ. ಕ್ರಿಸ್ತನಲ್ಲಿನ ಈ ಜೀವನಶೈಲಿಯನ್ನು ಅಂಗೀಕರಿಸಲು ನಮ್ಮನ್ನು ಪ್ರೇರೇಪಿಸಿದ ಧಾರ್ಮಿಕ ಸೇವಕ- ಸೇವಕಿಯರ ಮತ್ತು ಪ್ರಾಂತೀಯ ಯಾಜಕರ ಮಿಷನರಿ ಆತ್ಮದ ಫಲ ಇದಾಗಿದೆ.

ಪ್ರಶ್ನೆ: ಧಾರ್ಮಿಕ ಜೀವನಕ್ಕೆ ಯುವಕರಲ್ಲಿ ಕರೆಯು ಹೆಚ್ಚಾಗಿದೆಯೆ?

ಹೌದು, ಅನೇಕ ಯುವಕರಿದ್ದಾರೆ. ಬಾಟಾದ ಅಂತರಧರ್ಮಪ್ರಾಂತ್ಯೀಯ ಧರ್ಮಗುರು ತರಬೇತಿ ಕೇಂದ್ರವು ಸಂಪೂರ್ಣವಾಗಿ ತುಂಬಿದ್ದು, ಸ್ಥಳದ ಕೊರತೆಯಿಂದ ಅದನ್ನು ವಿಸ್ತರಿಸಬೇಕಾಗಿದೆ. ಇಲ್ಲಿ ನಂಬಿಕೆಯೂ ಬಲಗೊಳ್ಳುತ್ತಿದೆ.

ಆದರೆ, ಮಹಿಳಾ ಧಾರ್ಮಿಕ  ಸಭೆಗಳಲ್ಲಿ ಇದು ಕಾಣಿಸುತ್ತಿಲ್ಲ. ಏಕೆ ಎಂಬುದು ನಮಗೆ ಸ್ಪಷ್ಟವಾಗಿಲ್ಲ—ಇದಕ್ಕೆ ಗಂಭೀರ ವಿಶ್ಲೇಷಣೆ ಅಗತ್ಯವಿದೆ. ಪುರುಷ ಧಾರ್ಮಿಕ ಸಭೆಗಳು ಮತ್ತು ಧರ್ಮಪ್ರಾಂತ್ಯೀಯ ಯಾಜಕ ಸೇವೆಗೆ ಕರೆಗಳು ಇವೆ. ಆದರೆ ಮಹಿಳಾ ಕರೆಗಳಲ್ಲಿ ತೊಂದರೆ ಇದೆ, ಮತ್ತು ಅದರ ಕಾರಣಗಳನ್ನು ನಾವು ಅಧ್ಯಯನ ಮಾಡಬೇಕು. ನಾವು ಒಂದೇ ದೇಶದಲ್ಲಿದ್ದರೂ, ಯುವತಿಯರು ಧಾರ್ಮಿಕ ಜೀವನವನ್ನು ಅಂಗೀಕರಿಸುವುದು ಈಗ ಏಕೆ ಹೆಚ್ಚು ಕಷ್ಟವಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ.

ಪ್ರಶ್ನೆ: ಇದಕ್ಕೆ ಕಾರಣ ಏನು ಎಂದು ನೀವು ಭಾವಿಸುತ್ತೀರಿ?

ನನ್ನ ವೈಯಕ್ತಿಕ ಅಭಿಪ್ರಾಯವಿದೆ: ಮಹಿಳಾ ಧಾರ್ಮಿಕ ಸಭೆಗಳು ತಮ್ಮ ಶೈಕ್ಷಣಿಕ ರೂಪರೇಷೆಯನ್ನು ಪುನರ್ವಿಮರ್ಶೆ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ನಾನು ಒಂದು ಸಮ್ಮೇಳನದಲ್ಲಿ ಹೇಳಿದ್ದಂತೆ, ಹಿಂದೆ ವಿವಿಧ ಕಾರಣಗಳಿಂದ ಶಿಕ್ಷಣದ ಅವಕಾಶಗಳು ಹೆಚ್ಚು ಸೀಮಿತವಾಗಿದ್ದವು. ಆದರೆ ಇಂದು, 17 ಅಥವಾ 18 ವರ್ಷದ, ಪ್ರೌಢಶಾಲಾ ಶಿಕ್ಷಣ ಮುಗಿಸಿದ ಯುವತಿ ಉನ್ನತ ಶಿಕ್ಷಣದ ಆಸೆ ಹೊಂದಿರದಿದ್ದರೆ, ಅದು ಒಂದು ತೊಂದರೆಯಾಗಿ ಪರಿಣಮಿಸುತ್ತದೆ.

ಯುವತಿಯರಿಗೆ ಉತ್ತಮ ಶೈಕ್ಷಣಿಕ ರೂಪರೇಷೆಯನ್ನು ಉತ್ತೇಜಿಸುವುದು ಅಗತ್ಯವೆಂದು ತೋರುತ್ತದೆ. ಅನೇಕರು ಅಧ್ಯಯನದ ಆಸೆ ಹೊಂದಿದ್ದಾರೆ, ಆದರೆ ಕೆಲವು ಧಾರ್ಮಿಕ ಸಭೆಗಳಲ್ಲಿ ಉನ್ನತ ಶಿಕ್ಷಣದ ಕೊರತೆಯಿದೆ : ಅವರು ನವಶಿಷ್ಯರ ಶಿಬಿರವನ್ನು ಪ್ರವೇಶಿಸುತ್ತಾರೆ, ಭಗಿನಿಯರಾಗುತ್ತಾರೆ ಮತ್ತು ಅಲ್ಲಿಗೆ ಅವರ ಅಧ್ಯಯನ ಮುಗಿಯುತ್ತದೆ. 

ಇದು ಒಂದು ಸಮಸ್ಯೆ ಎಂದು ನಾನು ಭಾವಿಸುತ್ತೇನೆ. ಇದು ಪುರುಷ ಧಾರ್ಮಿಕ ಸಭೆಗಳಲ್ಲಿ ಅಥವಾ ಯಾಜಕರಲ್ಲಿ ನಡೆಯುವುದಿಲ್ಲ, ಏಕೆಂದರೆ ಅವರು ಮುಂದುವರೆದು ವಿಶ್ವವಿದ್ಯಾಲಯ ಅಧ್ಯಯನಗಳನ್ನು ಮಾಡುತ್ತಾರೆ. ಯುವತಿಗೆ ಅದು ಸಾಧ್ಯವಾಗದಿದ್ದರೆ, ಅದು ಒಂದು ಅಡಚಣೆಯಾಗುತ್ತದೆ.

ಇದಲ್ಲದೆ, ನಾವು ಕರೆಗಳ ಸೇವೆಯನ್ನು ಇನ್ನಷ್ಟು ಬಲಪಡಿಸಬೇಕು. ಬಹುಶಃ ನಾವು ಸ್ವಲ್ಪ ಸಡಿಲರಾಗಿದ್ದೇವೆ. ನಾವು ಭಾಷೆಯನ್ನು ಹೊಂದಿಸಿ, ಇಂದಿನ ಕಾಲವನ್ನು ಅರ್ಥಮಾಡಿಕೊಂಡು, ಹಳೆಯ ಮಾರ್ಗದಲ್ಲೇ ಸಿಲುಕದೆ ಅದೇ ಸಂದೇಶವನ್ನು ಹೊಸ ರೀತಿಯಲ್ಲಿ ಹೇಳಬೇಕು. ನಾವು ಸುವಾರ್ತೆಯನ್ನು ಅಥವಾ ಅದರ ಬೇಡಿಕೆಗಳನ್ನು ಕಡಿಮೆ ಮಾಡಬಾರದು, ಆದರೆ ಅದನ್ನು ಸಂದರ್ಭಕ್ಕೆ ಹೊಂದಿಸಬೇಕು. ಅದಕ್ಕಾಗಿ ಆಫ್ರಿಕಾದಲ್ಲಿ ನಾವು “ಸಂಸ್ಕೃತೀಕರಣ” (inculturation) ಬಗ್ಗೆ ಮಾತನಾಡುತ್ತೇವೆ—ಅಂದರೆ ಸಂಸ್ಕೃತಿಗೆ ಹೊಂದಿಕೊಂಡ ಸಂದೇಶ. ಇದು ನನ್ನ ಅಭಿಪ್ರಾಯ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

21 ಏಪ್ರಿಲ್ 2026, 23:43