ವಂ. ಗುರು ಫ್ರಾನ್ಸೆಸ್ಕೊ ಪ್ಯಾಟನ್ ವಂ. ಗುರು ಫ್ರಾನ್ಸೆಸ್ಕೊ ಪ್ಯಾಟನ್  (AFP or licensors)

ವಂ. ಗುರು ಫ್ರಾನ್ಸೆಸ್ಕೊ ಪ್ಯಾಟನ್: ಶುಭ ಶುಕ್ರವಾರದ ಶಿಲುಬೆ ಹಾದಿ ಧ್ಯಾನಗಳು ತೀರ್ಪಿಗೆ ಅಲ್ಲ, ಮನಸ್ಸಿನ ಪರಿವರ್ತನೆಗೆ ಕರೆ

ರೋಮ್‌ನ ಕೊಲೊಸಿಯಂನಲ್ಲಿ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ನೇತೃತ್ವದಲ್ಲಿ ನಡೆಯಲಿರುವ ಶುಭ ಶುಕ್ರವಾರದ ಶಿಲುಬೆ ಹಾದಿ ಧ್ಯಾನಗಳ ರಚಯಿತೃ ಗುರು ವಂ. ಫ್ರಾನ್ಸೆಸ್ಕೊ ಪ್ಯಾಟನ್ ಅವರು, ಇಂದಿನ ಜಗತ್ತಿನ ಅನೇಕ ಜನರು ತಮ್ಮ ಜೀವನದಲ್ಲಿಯೇ ಶಿಲುಬೆ ಹಾದಿಯ ಅನುಭವವನ್ನು ಜೀವಿಸುತ್ತಿದ್ದಾರೆ ಎಂದು ಆಳವಾಗಿ ಗಮನ ಸೆಳೆಯುತ್ತಾರೆ.

ಲೇಖಕರು: ರಾಬರ್ಟೊ ಸೆಟೆರಾ

“ಈ ಧ್ಯಾನಗಳಲ್ಲಿನ ಚಿಂತನೆಗಳು ಮತ್ತು ಪ್ರಾರ್ಥನೆಗಳಲ್ಲಿ, ಇಂದಿನ ವಾಸ್ತವಿಕ ಪರಿಸ್ಥಿತಿಯ ಪ್ರೇರಣೆ ಹಾಗೂ ನೈಜ ವ್ಯಕ್ತಿಗಳ ಅನುಭವಗಳ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ,” ವಿಶೇಷವಾಗಿ ಯುದ್ಧದ ಪರಿಣಾಮವಾಗಿ ಮಧ್ಯಪೂರ್ವದ ಕ್ರೈಸ್ತರು ಅನುಭವಿಸುತ್ತಿರುವ ನೋವುಗಳಲ್ಲಿ ಆ ಪ್ರತಿಫಲನ ತೀವ್ರವಾಗಿ ಕಾಣುತ್ತದೆ.

ಈ ರೀತಿಯಾಗಿ, ಫ್ರಿಯರ್ಸ್ ಮೈನರ್ ಸಮುದಾಯದ ಗುರು ಫ್ರಾನ್ಸೆಸ್ಕೊ ಪ್ಯಾಟನ್ ಅವರು, ಶುಭ ಶುಕ್ರವಾರದ ಸಂಜೆ ರೋಮ್‌ನ ಕೊಲೊಸಿಯಂನಲ್ಲಿ ಪೂಜ್ಯ ಜಗದ್ಗುರು 14ನೆ ಲಿಯೋ ಅವರ ನೇತೃತ್ವದಲ್ಲಿ ನಡೆಯಲಿರುವ ಶಿಲುಬೆಯ ಮಾರ್ಗದ ಧ್ಯಾನಗಳ ಮೂಲವನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಈ ಸಂದರ್ಶನದಲ್ಲಿ, 2016ರಿಂದ 2025ರ ಜೂನ್ ತನಕ ಪವಿತ್ರ ಭೂಮಿಯ ರಕ್ಷಕರಾಗಿ (Custos of the Holy Land) ಸೇವೆ ಸಲ್ಲಿಸಿದ್ದ ಗುರು ಪ್ಯಾಟನ್ ಅವರು, ಪೂಜ್ಯ ಜಗದ್ಗುರುಗಳ ಈ ಆಯ್ಕೆ ಸಂತ ಫ್ರಾನ್ಸಿಸ್ ಅಸ್ಸಿಸಿಯವರ ನಿಧನದ ಎಂಟನೇ ಶತಮಾನೋತ್ಸವದೊಂದಿಗೆ ಹೇಗೆ ಹೊಂದಿಕೊಂಡಿದೆ ಎಂಬುದನ್ನು ವಿವರಿಸಿದರು.

ಪ್ರಶ್ನೆ: ಗುರುಗಳೇ, ರೋಮ್‌ನ ಕೊಲೊಸಿಯಂನಲ್ಲಿ ಶುಭ ಶುಕ್ರವಾರದಂದು ನಡೆಯಲಿರುವ ಶಿಲುಬೆ ಹಾದಿ ಧ್ಯಾನಗಳಿಗೆ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ನಿಮ್ಮನ್ನು ಬರವಣಿಗೆಗೆ ನಿಯೋಜಿಸಿರುವುದು, ಪವಿತ್ರ ಭೂಮಿಯತ್ತ ಹಾಗೂ ಮಧ್ಯಪೂರ್ವದ ದೇಶಗಳನ್ನು ಪೀಡಿಸುತ್ತಿರುವ ದುರಂತಗಳತ್ತ ಅವರ ವಿಶೇಷ ಗಮನ ಮತ್ತು ಆತ್ಮೀಯ ಕಾಳಜಿಯ ನಿರ್ವಿವಾದ ಸಂಕೇತವೆಂದು ನೀವು ಭಾವಿಸುತ್ತೀರಾ?

ಉತ್ತರ: ತಮ್ಮ ಆಯ್ಕೆಯಾದ ದಿನದಿಂದಲೇ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ  ಶಾಂತಿಯ ವರಕ್ಕಾಗಿ ನಿರಂತರವಾಗಿ ಪ್ರಾರ್ಥಿಸುತ್ತಾ ಬಂದಿದ್ದಾರೆ. ಅವರು ಕೇವಲ ಪವಿತ್ರ ಭೂಮಿಯತ್ತ ಮಾತ್ರವಲ್ಲ, ಯುದ್ಧದ ಪರಿಣಾಮವಾಗಿ ನೋವು ಅನುಭವಿಸುತ್ತಿರುವ ಎಲ್ಲಾ ದೇಶಗಳು, ಜನಾಂಗಗಳು ಮತ್ತು ವ್ಯಕ್ತಿಗಳತ್ತ ತಮ್ಮ ಸಮೀಪತೆ ಮತ್ತು ಐಕ್ಯತೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.

ಇದು ನಿಜವಾಗಿ ಹೊಸದಾಗಿ ಆರಂಭವಾದ ನಿಲುವಲ್ಲ; ಕಳೆದ ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಸಭೆಯ ಸ್ಥಿರ ಮಾರ್ಗವೇ ಇದಾಗಿದೆ. 1917ರ ಆಗಸ್ಟ್ 1ರಂದು ಪೂಜ್ಯ ಜಗದ್ಗುರು ಹದಿನೈದನೇ ಬೆನೆಡಿಕ್ಟ್ ಯುದ್ಧದಲ್ಲಿದ್ದ ಸೇನೆಗಳಿಗೆ ಆಶೀರ್ವಾದ ನೀಡುವುದನ್ನು ನಿರಾಕರಿಸಿ, ನಡೆಯುತ್ತಿದ್ದ ಯುದ್ಧವನ್ನು “ಅನಾವಶ್ಯಕ ಹತ್ಯಾಕಾಂಡ” ಎಂದು ವ್ಯಾಖ್ಯಾನಿಸಿದರು. ಅದೇ ಸಮಯದಲ್ಲಿ ಅವರು ಯುದ್ಧದಲ್ಲಿದ್ದ ರಾಷ್ಟ್ರಗಳ ನಾಯಕರಿಗೆ ಮನವಿ ಮಾಡಿ, ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿಯನ್ನು ಸಾಧಿಸಲು ಸಂವಾದದ ಮೂಲಕ ಮುಂದಾಗಬೇಕೆಂದು ಒತ್ತಿಹೇಳಿದರು.

ಅವರು ಅಂತರರಾಷ್ಟ್ರೀಯ ಕಾನೂನುಗಳ ಗೌರವವನ್ನು ಕಾಪಾಡುವುದು, ಆಕ್ರಮಿತ ಪ್ರದೇಶಗಳನ್ನು ಹಿಂತಿರುಗಿಸುವುದು, ಜನರ ಸ್ವತಂತ್ರ ಸಂಚಾರವನ್ನು ಪುನಃಸ್ಥಾಪಿಸುವುದು, ಹಾಗೂ ಶಸ್ತ್ರಸಜ್ಜಿಕೆಯನ್ನು ಕಡಿಮೆ ಮಾಡುವ ಮೂಲಕ ಸಾಮಾನ್ಯ ಹಿತ ಮತ್ತು ಅಭಿವೃದ್ಧಿಗಾಗಿ ಸಂಪನ್ಮೂಲಗಳನ್ನು ಮುಕ್ತಗೊಳಿಸುವುದು ಅಗತ್ಯವೆಂದು ಸ್ಪಷ್ಟವಾಗಿ ಸೂಚಿಸಿದರು. 

ಪ್ರಶ್ನೆ: ಈ ಆಹ್ವಾನವನ್ನು ಸ್ವೀಕರಿಸುವುದು ನಿಮಗೆ ಖಂಡಿತವಾಗಿಯೂ ಒಂದು ಆಶ್ಚರ್ಯಕರ ಅನುಭವವಾಗಿರಬೇಕು ಎಂದು ನಾನು ಊಹಿಸುತ್ತೇನೆ.

ಉತ್ತರ:ಹೌದು, ನಾನು ಹೇಳಬೇಕಾದರೆ ಅದು ಬಹಳ ದೊಡ್ಡ ಆಶ್ಚರ್ಯವಾಗಿತ್ತು. ನನ್ನನ್ನು ನೇರವಾಗಿ ರಾಜ್ಯ ಕಾರ್ಯಾಲಯ (Secretariat of State) ಸಂಪರ್ಕಿಸಿತು. ಅವರು ನನಗೆ ತಿಳಿಸಿದಂತೆ, ಸಂತ ಅಸ್ಸಿಸಿಯ ಫ್ರಾನ್ಸಿಸರ ನಿಧನದ ಎಂಟನೇ ಶತಮಾನೋತ್ಸವದ ಸಂದರ್ಭದಲ್ಲಿ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಈ ಧ್ಯಾನಗಳನ್ನು ಸಿದ್ಧಪಡಿಸಲು ನನ್ನನ್ನು ವಿನಂತಿಸಬೇಕೆಂದು ಅವರಿಗೆ ಸೂಚಿಸಿದ್ದರು.

ಈ ಜವಾಬ್ದಾರಿ ನನ್ನಲ್ಲಿ ಒಂದೆಡೆ ಭಯಭಕ್ತಿಯ ಭಾವವನ್ನು ಹುಟ್ಟಿಸಿದರೆ, ಮತ್ತೊಂದೆಡೆ ಅದು ನನಗೆ ಮಹತ್ತರ ಗೌರವವನ್ನೂ ನೀಡಿತು.

ಪ್ರಶ್ನೆ: ಈ ಧ್ಯಾನಗಳನ್ನು ಬರೆಯುವ ಸಂದರ್ಭದಲ್ಲಿ ನಿಮಗೆ ಪ್ರಮುಖವಾಗಿ ಯಾವುದು ಪ್ರೇರಣೆ ನೀಡಿತು?

ಉತ್ತರ: ಈ ಧ್ಯಾನ ಸಂಪೂರ್ಣವಾಗಿ ಶುಭಸಂದೇಶ ಆಧಾರಿತವಾಗಿದೆ.  ಸುವಾರ್ತೆಗಳಿಂದ, ವಿಶೇಷವಾಗಿ  ಸಂತ ಯೋವಾನ್ನರ ಶುಭಸಂದೇಶದಿಂದ ಪ್ರೇರಣೆ ಪಡೆದಿದ್ದೇನೆ. ಏಕೆಂದರೆ ಅವರು ಪ್ರಭು ಯೇಸು ಕ್ರಿಸ್ತರ ಪಾಡುಗಳ ರಹಸ್ಯವನ್ನು ಅತ್ಯಂತ ಆಳವಾಗಿ ಮತ್ತು ತೀವ್ರವಾಗಿ ಅನಾವರಣಗೊಳಿಸುವ ದೃಷ್ಟಿಯನ್ನು ಹೊಂದಿದ್ದಾರೆ. ಜೊತೆಗೆ, ಸಂತ ಫ್ರಾನ್ಸಿಸ್ ಅವರ “ಬರಹಗಳು” ಕ್ರೈಸ್ತ  ಆಧ್ಯಾತ್ಮಿಕತೆಯ ಅಮೂಲ್ಯ ಸಂಪತ್ತಾಗಿದ್ದು, ಅವುಗಳೂ ಈ ಧ್ಯಾನಗಳ ರೂಪಗೊಳಿಸುವಿಕೆಗೆ ಮಹತ್ವದ ಆಧಾರವಾಗಿವೆ.

ಈ ಚಿಂತನೆಗಳು ಮತ್ತು ಪ್ರಾರ್ಥನೆಗಳಲ್ಲಿ ಪ್ರೇರಣೆ  ಪವಿತ್ರ ಗ್ರಂಥದಿಂದ ಮಾತ್ರ ಬಂದಿಲ್ಲ; ಇವು ಇಂದಿನ ವಾಸ್ತವಿಕ ಪರಿಸ್ಥಿತಿಗಳಿಂದಲೂ ಮತ್ತು ನೈಜ ವ್ಯಕ್ತಿಗಳ ಅನುಭವಗಳಿಂದಲೂ ಉದ್ಭವಿಸಿವೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ನಾನು ಭೇಟಿಯಾದ ಅನೇಕ ಜನರ ಜೀವನದಲ್ಲಿ, ಶಿಲುಬೆ ಹಾದಿಯ ಪಾತ್ರಗಳನ್ನು ನಾನು ನೇರವಾಗಿ ಗುರುತಿಸಲು ಸಾಧ್ಯವಾಯಿತು.

ತಾಯಂದಿರು ಮತ್ತು ಮಹಿಳೆಯರ ನೋವಿನ ಕುರಿತು ನಾನು ಮಾತನಾಡುವಾಗ, ಲ’ಒಸ್ಸರ್ವಾತೋರೆ ರೊಮಾನೋದಲ್ಲಿ ಉಲ್ಲೇಖಿಸಲ್ಪಟ್ಟ ಮತ್ತು ಇಂದಿನ ಕಾಲದಲ್ಲಿ ಮರಿಯಮ್ಮ, ವೆರೋನಿಕಾ ಮತ್ತು ಜೆರುಸಲೇಮಿನ ಮಹಿಳೆಯರ ರೂಪವನ್ನು ಜೀವಂತವಾಗಿ ಪ್ರತಿಬಿಂಬಿಸುವ ಮಹಿಳೆಯರ ಛಾಯೆಗಳು ಮನಸ್ಸಿನ ಹಿನ್ನೆಲೆಯಲ್ಲೇ ಕಾಣಿಸುತ್ತವೆ.

ಅಧಿಕಾರದ ವಕ್ರ ಕಲ್ಪನೆ ಮತ್ತು ಅದರ ದುರುಪಯೋಗದ ಕುರಿತು ಚಿಂತಿಸುವಾಗ, ಜಗತ್ತಿನ ಎಲ್ಲರ ಕಣ್ಣ ಮುಂದೆ ನಡೆಯುತ್ತಿರುವ ಅಂತರರಾಷ್ಟ್ರೀಯ ಘಟನೆಗಳು ಅದರ ಹಿಂದೆ ನಿಂತಿವೆ. ಸಿರೇನ್ಯದ ಸಿಮೋನನ ವ್ಯಕ್ತಿತ್ವವು, ಕಳೆದ ವರ್ಷಗಳಲ್ಲಿ ನಾನು ಭೇಟಿಯಾದ ಅನೇಕ ಸ್ವಯಂಸೇವಕರು, ಮಾನವೀಯ ಸೇವಕರು ಮತ್ತು ಸಂವಹನ ಕಾರ್ಯಕರ್ತರ ಮುಖವನ್ನು ತಾಳಿಕೊಂಡಿದೆ — ಅವರು ತಮ್ಮ ಜೀವವನ್ನೇ ಅಪಾಯಕ್ಕೆ ಒಳಪಡಿಸಿ,  ಕಾಳಜಿ ವಹಿಸಲು ಅಥವಾ ಸತ್ಯವನ್ನು ಬಹಿರಂಗಪಡಿಸಲು ಪ್ರಯತ್ನಿಸಿದ್ದಾರೆ, ಅವರಲ್ಲಿ ಹಲವರು ಕ್ರೈಸ್ತರಾಗಿಯೂ ಇರಲಿಲ್ಲ.

ಈ ಧ್ಯಾನಗಳಲ್ಲಿ ಉಲ್ಲೇಖವಾಗುವ ನೈಜ ಪರಿಸ್ಥಿತಿಗಳು ವ್ಯಕ್ತಿಗಳ ಮೇಲೆ ತೀರ್ಪು ನೀಡುವ ಉದ್ದೇಶವನ್ನು ಹೊಂದಿಲ್ಲ; ಅವು ಚಿಂತನೆಗೆ ಆಹ್ವಾನಿಸುತ್ತವೆ, ಪ್ರಶ್ನೆಗಳನ್ನು ಎಬ್ಬಿಸುತ್ತವೆ ಮತ್ತು ಅಗತ್ಯವಿದ್ದರೆ ಮನಸ್ಸಿನ ಪರಿವರ್ತನೆಗೂ ಪ್ರೇರೇಪಿಸುತ್ತವೆ. ಈ ಸಂದೇಶದ ಮೂಲಭಾವ ಧಾರ್ಮಿಕವಾಗಿದ್ದು, ದೇವನ ಮಗನಾಗಿ ಅವತಾರಗೊಂಡ ಪ್ರಭು ಯೇಸು ಕ್ರಿಸ್ತರು ಪ್ರತಿಯೊಬ್ಬ ಮಾನವನೊಂದಿಗೆ ಹೊಂದಿರುವ ಸಮೀಪತೆಯನ್ನು ವ್ಯಕ್ತಪಡಿಸಲು ಉದ್ದೇಶಿಸಿದೆ.

ಕೊಲೊಸಿಯಂನಲ್ಲಿ ನಡೆಯುವ ಶಿಲುಬೆ ಹಾದಿ ಧ್ಯಾನಗಳನ್ನು, ನಾವು ಪ್ರತೀ ಶುಕ್ರವಾರ ವಿಯಾ ದೋಲೊರೊಸಾ ಮಾರ್ಗದಲ್ಲಿ ನಡೆಸುವ ಶಿಲುಬೆ ಹಾದಿಯಿಂದ ಪ್ರೇರಿತವಾಗಿ ರೂಪಿಸಲು ನಾನು ಪ್ರಯತ್ನಿಸಿದೆ. ಅದೇ ಸಮಯದಲ್ಲಿ, ಸಂತ ಫ್ರಾನ್ಸಿಸ್ ಅವರ ಆಧ್ಯಾತ್ಮಿಕ ಜೀವನದಿಂದಲೂ ಆಧಾರ ಪಡೆದು, ವಿಶ್ವಾಸಿಗಳಿಗೆ “ಪ್ರಭು ಯೇಸು ಕ್ರಿಸ್ತರ ಹೆಜ್ಜೆ ಗುರುತುಗಳಲ್ಲಿ ನಡೆಯಲು” ಸಹಾಯವಾಗಲಿ ಮತ್ತು ವಿಶ್ವಾಸವಿಲ್ಲದವರು ಕೂಡ ಪ್ರಭು ಯೇಸು ಕ್ರಿಸ್ತರು ಪ್ರತಿಯೊಬ್ಬರ ಜೀವನದ ಬಗ್ಗೆ ಕಾಳಜಿ ಹೊಂದಿದ್ದಾರೆ ಎಂಬುದನ್ನು ಕಂಡುಹಿಡಿಯಲಿ ಎಂಬ ಆಶಯವಿದೆ.

ಪ್ರಭು ಯೇಸು ಕ್ರಿಸ್ತರಲ್ಲಿ, ಜೀವನದ ಅರ್ಥ ಕಳೆದುಕೊಂಡ ಸಂದರ್ಭದಲ್ಲಿಯೂ ಆಶೆಯನ್ನು ಮತ್ತು ಬದುಕಿನ ಕಾರಣವನ್ನು ಕಂಡುಕೊಳ್ಳಬಹುದು ಎಂಬುದನ್ನು ತೋರಿಸಲು ನಾನು ಬಯಸಿದೆ.

ನನ್ನ ಆಶಯವೇನೆಂದರೆ, ಪ್ರತಿಯೊಬ್ಬ ವ್ಯಕ್ತಿಯೂ ಪ್ರಭು ಯೇಸು ಕ್ರಿಸ್ತರನ್ನು ಎದುರಿಸಿ, ಅವರ ಹಿಂದೆ ಕಾಲ್ವರಿ ಕಡೆ ಸಾಗುವಾಗ, ಅವರ ಸಮೀಪತೆಯನ್ನು ಮತ್ತು ಪ್ರೀತಿಯನ್ನು ಆಳವಾಗಿ ಅನುಭವಿಸಲಿ. ಪ್ರಭು ಯೇಸು ಕ್ರಿಸ್ತರು ನಮ್ಮ ಪ್ರತಿಯೊಬ್ಬರಿಗಾಗಿ ತಮ್ಮ ಜೀವವನ್ನು ಅರ್ಪಿಸಿದ್ದಾನೆ ಎಂಬುದನ್ನು ಅರಿತು, ಪ್ರತಿಯೊಬ್ಬನನ್ನೂ ತಮ್ಮೊಂದಿಗೆ “ತಂದೆಯ ಬಳಿಗೆ ಮರಳಿಸಲು” ಇಚ್ಛಿಸುತ್ತಾರೆ ಎಂಬುದನ್ನು ಗ್ರಹಿಸಲಿ.

ಅವರ ಮೂಲಕವೇ ಜೀವನದ ಪೂರ್ಣತೆಯನ್ನು ಕಂಡುಕೊಳ್ಳಬಹುದು; ಮರಣಶೀಲ ಮತ್ತು ಸೀಮಿತವಾದ ಮಾನವ ಜೀವನವನ್ನೂ, ಪುನರುತ್ಥಾನ, ನಿತ್ಯಜೀವನ ಮತ್ತು ದೇವರ ಜೀವನದಲ್ಲಿ ಪಾಲ್ಗೊಳ್ಳುವ ದೃಷ್ಟಿಕೋನದೊಂದಿಗೆ ಬದುಕಬಹುದು ಎಂಬ ಅರಿವು ಪ್ರತಿಯೊಬ್ಬರಿಗೂ ದೊರಕಲಿ ಎಂಬುದು ನನ್ನ ಹಾರೈಕೆ.

ಪ್ರಶ್ನೆ: ಗುರುಗಳೇ, ನಿಮ್ಮ ‘Custos’ (ಪವಿತ್ರ ಭೂಮಿಯ ರಕ್ಷಕ) ಸೇವಾ ಅವಧಿಯು ಒಂಬತ್ತು ವರ್ಷಗಳ ಕಾಲ ಬಹಳ ಗಂಭೀರ ಘಟನೆಗಳ ಮಧ್ಯೆ ಸಾಗಿದಂತಾಗಿದೆ — ಸಿರಿಯಾದ ಅಂತರ್ಯುದ್ಧ, ಕೋವಿಡ್ ಮಹಾಮಾರಿ, ಗಾಜಾದ ಯುದ್ಧ. ಈಗ ನಿಮ್ಮ ಜವಾಬ್ದಾರಿಯ ಅಂತ್ಯದಲ್ಲಿ, ಮೋಶೆ ಕೇವಲ ನೋಡಲು ಮಾತ್ರ ಸಾಧ್ಯವಾದ ಆ ಭೂಮಿಯನ್ನು ನೋಡುವ ಪರ್ವತದಲ್ಲಿ, ನೀವು ಸರಳ ಸಹೋದರನಾಗಿ ಉಳಿಯಲು ನಿರ್ಧರಿಸಿದ್ದೀರಿ. ನೀವು ಏಕೆ ನೆಬೋ ಪರ್ವತವನ್ನು ಆಯ್ಕೆ ಮಾಡಿದ್ದೀರಿ?

ಉತ್ತರ: ನಿಖರವಾಗಿ ಹೇಳುವುದಾದರೆ, ನಾನು ನೆಬೋ ಪರ್ವತದಲ್ಲಿ ವಾಸಿಸಲು ನನ್ನ ಸಿದ್ಧತೆಯನ್ನು ಅರ್ಪಿಸಿದೆ. ಇಷ್ಟು ವರ್ಷಗಳ ಕಾಲ ಅಧಿಕಾರ ಮತ್ತು ಆಡಳಿತದ ಜವಾಬ್ದಾರಿಗಳಲ್ಲಿ ಕಳೆದ ನಂತರ, ನಾನು ಮತ್ತೆ ಸರಳ ಮೈನರ್ ಸಹೋದರನಾಗಿ ಬದುಕಬೇಕೆಂಬ ಅಗತ್ಯವನ್ನು ಆಳವಾಗಿ ಅನುಭವಿಸಿದೆ.

ಸಣ್ಣದಾದ, ಕೆಲವು ಮಟ್ಟಿಗೆ ಅಂಚಿನಲ್ಲಿರುವ ಸಮುದಾಯದಲ್ಲಿ (fraternity) ವಾಸಿಸುವುದು, ನನಗೆ ಪ್ರಾರ್ಥನೆಯ  ಜೀವನಶೈಲಿಯನ್ನು ಮರುಸ್ಥಾಪಿಸಲು, ಅಧ್ಯಯನವನ್ನು ಪುನರಾರಂಭಿಸಲು, ಯಾತ್ರಿಕರಿಗೆ ಸೇವೆ ಸಲ್ಲಿಸಲು ಮತ್ತು ವಿನಮ್ರ ಸೇವೆಗಳನ್ನು ನಿರ್ವಹಿಸಲು ಅವಕಾಶ ನೀಡುತ್ತದೆ.

ಇದಲ್ಲದೆ, ನೆಬೋ ಪರ್ವತವು ನನಗೆ ಸದಾ ವಿಶೇಷ ಆಕರ್ಷಣೆಯಾಗಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ, ಇದು ಸಂತ ಮೋಶೆಯ ವ್ಯಕ್ತಿತ್ವದೊಂದಿಗೆ ಸಂಬಂಧ ಹೊಂದಿದೆ — ಆ ವ್ಯಕ್ತಿತ್ವ ಅತ್ಯಂತ ಆಳವಾದದ್ದು, ಶ್ರೀಮಂತವಾದದ್ದು, ಮತ್ತು ನಾನು ಅದನ್ನು ಇನ್ನಷ್ಟು ಆಳವಾಗಿ ಅರಿತುಕೊಳ್ಳಲು ಬಯಸುತ್ತೇನೆ.

ಎರಡನೆಯದಾಗಿ, ಈ ಸ್ಥಳವು ಶತಮಾನಗಳ ಕಾಲ ಬೈಜಾಂಟೈನ್ ಮಠವಾಗಿಯೂ ಮತ್ತು ಪವಿತ್ರ ಸ್ಥಳವಾಗಿಯೂ ಕಾರ್ಯನಿರ್ವಹಿಸಿತು. ನಂತರ ಐತಿಹಾಸಿಕ ಘಟನೆಗಳ ಪರಿಣಾಮವಾಗಿ ಅದು ನಾಶವಾಗಿ ಅವಶೇಷಗಳಾಗಿ ಉಳಿಯಿತು. ಆದರೆ ಸುಮಾರು ನೂರು ವರ್ಷಗಳ ಹಿಂದೆ, ಪವಿತ್ರ ಭೂಮಿಯ ರಕ್ಷಕ ಸಹೋದರರ ಪ್ರಯತ್ನಗಳಿಂದ ಅದು ಪುನರುತ್ಥಾನಗೊಂಡಿತು.

ಇಲ್ಲಿ ಜೋರ್ಡಾನ್‌ನಲ್ಲಿ, ಈ ಸ್ಥಳವನ್ನು ಹೊಂದಿದ್ದ ಬೇಡುಯಿನ್ ಕುಟುಂಬದೊಂದಿಗೆ ಅವರು ಸ್ನೇಹವನ್ನು ಬೆಳೆಸಿದರು. 1932ರಲ್ಲಿ ಆ ಕುಟುಂಬವು ಈ ಸ್ಥಳವನ್ನು ಪವಿತ್ರ ಭೂಮಿಯ ಪಾಲಕರಿಗೆ ಮಾರಾಟ ಮಾಡಿದ ನಂತರವೂ, ಅವರು ನಮ್ಮೊಂದಿಗೆ ಸಹಕಾರವನ್ನು ಮುಂದುವರಿಸಿದರು.

ಇದು ಎಲ್ಲರಿಗೂ, ಎಲ್ಲರೊಂದಿಗೆ ಭೇಟಿಯಾಗುವ ಸ್ಥಳವಾಗಿದೆ — ಕ್ರೈಸ್ತರೂ ಮತ್ತು ಮುಸ್ಲಿಮರೂ ಇಲ್ಲಿ ಬರುತ್ತಾರೆ. ಇಲ್ಲಿ ಹರಡಿರುವ ವಿಶ್ವಾಸ ಮತ್ತು ಶಾಂತಿಯ ವಾತಾವರಣವನ್ನು ಪ್ರತಿಯೊಬ್ಬರೂ ಅನುಭವಿಸಬಹುದು. ಐದನೇ ಶತಮಾನದ ಯಾತ್ರಿಕನೊಬ್ಬ ಹೇಳಿದಂತೆ, ಇದು “ದೇಹ ಮತ್ತು ಆತ್ಮದ ಚಿಕಿತ್ಸೆಯನ್ನು” ಪ್ರತಿಯೊಬ್ಬರೂ ಪಡೆಯಬಹುದಾದ ಸ್ಥಳವಾಗಿದೆ. 

ಪ್ರಶ್ನೆ: ಪವಿತ್ರ ಭೂಮಿಯಲ್ಲಿ ಕ್ರೈಸ್ತರು ಪ್ರತಿದಿನವೂ ಶಿಲುಬೆ ಹಾದಿಯಂತಿರುವ ಜೀವನವನ್ನು ನಡೆಸುತ್ತಿದ್ದಾರೆ; ಅದರ ಅಂತಿಮ ಫಲಿತಾಂಶವಾಗಿ ಹೆಚ್ಚುತ್ತಿರುವುದು ವಲಸೆ. ಇಂತಹ ಪರಿಸ್ಥಿತಿಗಳಲ್ಲಿಯೇ “ಭೂಮಿಗೆ  ಉಪ್ಪಾಗಿರಲು” ಹೇಗೆ ಸಾಧ್ಯವಾಗಬಹುದು?

ಉತ್ತರ:ಇದು ಅತ್ಯಂತ ಕಷ್ಟಕರವಾದ ಸಂಗತಿಯಾಗಿದೆ, ಆದರೆ ಅಸಾಧ್ಯವಲ್ಲ. ಇಂದಿನ ಕಾಲದಲ್ಲಿ ಪವಿತ್ರ ಭೂಮಿಯಲ್ಲಿ ಬದುಕುತ್ತಿರುವ ಕ್ರೈಸ್ತರು ಮೊದಲ ತಲೆಮಾರಿನ ಕ್ರೈಸ್ತರೊಂದಿಗೆ ಬಹಳ ಹೋಲಿಕೆ ಹೊಂದಿದ್ದಾರೆ; ಅವರಲ್ಲಿ ಅದೇ ಗುಣಗಳೂ, ಅದೇ ಮಿತಿಗಳೂ ಇವೆ, ಮತ್ತು ಹೇಳುವುದಾದರೆ, ಅದೇ ಆಧ್ಯಾತ್ಮಿಕ ಸ್ವಭಾವವೂ ಇದೆ.

ಎಂತಾದರೂ, ಎರಡು ಸಾವಿರ ವರ್ಷಗಳ ಹಿಂದೆ ಪ್ರಭು ಯೇಸು ಕ್ರಿಸ್ತರು ತಮ್ಮ ಬಳಿ ಇದ್ದ ಅಲ್ಪಸಂಖ್ಯೆಯ ಶಿಷ್ಯರಿಗೆ, “ಪುಟ್ಟಮಂದೆಯೇ, ಭಯಪಡಬೇಡ. ನಿನ್ನ ತಂದೆ ತಮ್ಮ ಸಾಮ್ರಾಜ್ಯವನ್ನು ನಿನಗೆ ನೀಡಲು ಇಷ್ಟಪಟ್ಟಿದ್ದಾರೆ,” ಎಂದು ಹೇಳಿದರು. ಆ ಸಮಯದಲ್ಲಿಯೂ ಶಿಷ್ಯರು ಸಂಖ್ಯಾಶಃ ಅಲ್ಪರಾಗಿದ್ದರು; ಆದರೂ ಅವರು ಜೀವನದ ನಿಜವಾದ ಅರ್ಥವನ್ನು ಕಂಡುಕೊಂಡಿದ್ದರು.

ಆ ಅರ್ಥವನ್ನು ಪ್ರಭು ಯೇಸು ಕ್ರಿಸ್ತರು ಪರ್ವತೋಪದೇಶದಲ್ಲಿ ಪ್ರಕಟಿಸಿದರು — ಧನ್ಯತೆಗಳಲ್ಲಿ ತಲುಪುವ ಆ ಉಪದೇಶದಲ್ಲಿ, ಶತ್ರುಗಳಿಗೂ ಕ್ಷಮಿಸುವುದು, ದಯೆಯನ್ನು ತೋರಿಸುವುದು ಮುಖ್ಯವೆಂದು ಅವರು ತಿಳಿಸಿದರು. ಮಕ್ಕಳನ್ನು, ಮಹಿಳೆಯರನ್ನು, ಬಡವರನ್ನು, ರೋಗಿಗಳನ್ನು ಮಾತ್ರವಲ್ಲದೆ, ಸುಂಕವಸೂಲಿಯವರು, ಪಾಪಿಗಳು ಮತ್ತು ವೇಶ್ಯೆಯರನ್ನೂ ಸ್ವೀಕರಿಸುವ ಮೂಲಕ ಅವರು ಜೀವನದ ನಿಜವಾದ ಮೌಲ್ಯವನ್ನು ತೋರಿಸಿದರು.

ತಮ್ಮ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ, ನಂತರ ತಮ್ಮ ಜೀವವನ್ನೇ ಅರ್ಪಿಸುವ ಮೂಲಕ, ಮತ್ತು ನಮಗಾಗಿ ಮರಣವನ್ನು ಜಯಿಸುವ ಮೂಲಕ ಅವರು ಈ ಸತ್ಯವನ್ನು ಸಂಪೂರ್ಣವಾಗಿ ಪ್ರಕಟಿಸಿದರು. ಪವಿತ್ರ ಭೂಮಿಯಲ್ಲಿ ಕ್ರೈಸ್ತರಾಗಿರುವುದು — ಹಾಗೆಯೇ ಕ್ರೈಸ್ತರು ಅಲ್ಪಸಂಖ್ಯಾತರಾಗಿರುವುದು ಅಥವಾ ಹಿಂಸೆ ಅನುಭವಿಸುತ್ತಿರುವ ಜಗತ್ತಿನ ಎಲ್ಲ ಭಾಗಗಳಲ್ಲಿಯೂ — ಇದು ಕೇವಲ ಒಂದು ಗುರುತು ಅಲ್ಲ; ಇದು ಒಂದು ಕರೆಯೂ ಆಗಿದೆ ಮತ್ತು ಒಂದು ಸೇವೆಯೂ ಆಗಿದೆ.

ನಾವು ಪ್ರತಿಯೊಬ್ಬ ಮಾನವನನ್ನೂ, ಲಿಂಗ, ರಾಷ್ಟ್ರೀಯತೆ ಅಥವಾ ಧರ್ಮದ ಭೇದವಿಲ್ಲದೆ ಸ್ವೀಕರಿಸುವ ದೇವರ ಕರುಣೆಯ ಮುಖವನ್ನು ತೋರಿಸಲು ಕರೆಯಲ್ಪಟ್ಟಿದ್ದೇವೆ. ಜೊತೆಗೆ, ಇದೇ ಮೂಲಕ, ದೇವರ ರೂಪ ಮತ್ತು ಸಾದೃಶ್ಯದಲ್ಲಿ ಸೃಷ್ಟಿಸಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಪುತ್ರತ್ವದ ಘನತೆಯನ್ನು ಪ್ರಕಟಿಸಲು ನಾವು ಕರೆಯಲ್ಪಟ್ಟಿದ್ದೇವೆ — ಅವರು ಬೇರೆ ಜನಾಂಗದವರಾಗಿದ್ದರೂ, ತಪ್ಪು ಮಾಡಿದವರಾಗಿದ್ದರೂ, ಅಥವಾ ನನಗೆ ಹಾನಿ ಮಾಡಿದವರಾಗಿದ್ದರೂ ಸಹ.

ಪ್ರಶ್ನೆ: ಧರ್ಮಗಳು ಶಾಂತಿಯ ಸಾಧನವಾಗಿರಬೇಕು, ಆದರೆ ಇಂದಿನ ಪರಿಸ್ಥಿತಿಯಲ್ಲಿ ಮಧ್ಯಪೂರ್ವದ ಯುದ್ಧಗಳು — ಹಿಂದಿನ ದಶಕಗಳಿಗಿಂತ ಭಿನ್ನವಾಗಿ — ಇಂದು ಹೆಚ್ಚಾಗಿ ಧಾರ್ಮಿಕ ಉಲ್ಲೇಖಗಳನ್ನು ಹೊಂದಿರುವಂತಿವೆ. ಪಾಶ್ಚಾತ್ಯ ಧರ್ಮನಿರಪೇಕ್ಷ ಮಾದರಿಯಲ್ಲಿ ಹುಟ್ಟಿಕೊಂಡ ಇಸ್ರಾಯೇಲ್ ದೇಶವೂ ಇಂದು ಮೆಸ್ಸೀಯವಾದದ-ಮೂಲಭೂತವಾದದ ಪ್ರಭಾವಕ್ಕೆ ಒಳಗಾದಂತಿದೆ. ಇದು ಹೇಗೆ ಸಂಭವಿಸಿತು?

ಉತ್ತರ: ಇಲ್ಲಿ ನಡೆದಿರುವುದು, ಇತರಡೆಗಳಲ್ಲಿಯೂ ನಡೆದಿರುವುದೇ ಆಗಿದೆ — ವಿಶೇಷವಾಗಿ ಬರ್ಲಿನ್ ಗೋಡೆ ಕುಸಿದ ನಂತರದ ಕಾಲದಲ್ಲಿ. ಧರ್ಮನಿರಪೇಕ್ಷ ಸಿದ್ಧಾಂತಗಳು ಕುಸಿದುಬಿದ್ದವು; ಆ ನಂತರ ಅಧಿಕಾರದಲ್ಲಿದ್ದವರು ಗುರುತಿನ ನಿರ್ಮಾಣಕ್ಕೂ ಮತ್ತು ವಿರೋಧವನ್ನು ಹುಟ್ಟುಹಾಕುವುದಕ್ಕೂ ಧರ್ಮಗಳನ್ನು ಬಳಸಲು ಪ್ರಾರಂಭಿಸಿದರು.

ಪ್ರಭು ಯೇಸು ಕ್ರಿಸ್ತರ ಕಾಲದಲ್ಲಿಯೇ ದೇವರ ಹೆಸರಿನಲ್ಲಿ ಹಿಂಸೆಯನ್ನು ನ್ಯಾಯೀಕರಿಸಿದ್ದ “ಉಗ್ರ ಭಕ್ತರು” ಇದ್ದರು; ಇಂದು ಅವರು ಮತ್ತೆ ತಲೆಯೆತ್ತಿದ್ದಾರೆ ಎಂದು ನಾವು ಹೇಳಬಹುದು.

ಇಂದು ಈ “ಉಗ್ರ ಭಕ್ತರು” ಎಲ್ಲೆಡೆ ಕಾಣಿಸುತ್ತಾರೆ. ಮುಸ್ಲಿಂ ಜಗತ್ತಿನಲ್ಲಿ, ಶಸ್ತ್ರಸಜ್ಜಿತ ಮೂಲಭೂತವಾದಿ ಚಳವಳಿಗಳ ರೂಪದಲ್ಲಿ ಅವರನ್ನು ಕಾಣಬಹುದು. ಯೆಹೂದಿ ಜಗತ್ತಿನಲ್ಲಿ, ವಸಾಹತು ಸ್ಥಾಪಕರ ಮೂಲಕ ಮತ್ತು ಅವರನ್ನು ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಬಲಿಸುವವರ ಮೂಲಕ ಅವರು ಸ್ಪಷ್ಟವಾಗಿ ಪ್ರತಿನಿಧಿಸಲ್ಪಟ್ಟಿದ್ದಾರೆ.

ದುರದೃಷ್ಟವಶಾತ್, ಕ್ರೈಸ್ತರಲ್ಲಿಯೂ ಇವರನ್ನು ಕಾಣಬಹುದು — ಅವರು ಆಶೀರ್ವಾದಗಳ ಹೆಸರಿನಲ್ಲಿ ವಿಚಿತ್ರವಾದ ನಿಲುವುಗಳನ್ನು ಸ್ವೀಕರಿಸುತ್ತಾರೆ; ಇದು ಕಳೆದ ಭಾನುವಾರ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಸೂಚಿಸಿದ ಮಾರ್ಗಕ್ಕೂ, ಮತ್ತು ಎರಡು ಸಾವಿರ ವರ್ಷಗಳ ಹಿಂದೆ ಗೆತ್ಸೆಮನೆ ತೋಟದಲ್ಲಿ ಪ್ರಭು ಯೇಸು ಕ್ರಿಸ್ತರು ತೋರಿಸಿದ ಮಾರ್ಗಕ್ಕೂ ಸಂಪೂರ್ಣ ವಿರುದ್ಧವಾಗಿದೆ.

ಇದೇ ರೀತಿಯಲ್ಲಿ, ಧರ್ಮನಿರಪೇಕ್ಷ ರಾಜ್ಯವ್ಯವಸ್ಥೆಗಳಲ್ಲಿಯೂ ಒಂದು ವಿಧದ “ಉಗ್ರತೆ” ಕಾಣುತ್ತದೆ — ಅಲ್ಲಿ ಧಾರ್ಮಿಕ ಅಭಿವ್ಯಕ್ತಿಗಳನ್ನು ಭೇದಭಾವದಿಂದ ಮತ್ತು ಹಿಂಸಾತ್ಮಕವಾಗಿ ತಡೆಯಲಾಗುತ್ತದೆ. ಇಸ್ರಾಯೇಲ್‌ನಲ್ಲಿ ನಡೆಯುತ್ತಿರುವುದು ಯಾವುದೋ ವಿಚಿತ್ರ ಅಪವಾದವಲ್ಲ; ಅದು ಜಾಗತಿಕ ಪ್ರವೃತ್ತಿಯ ಒಂದು ಭಾಗವಾಗಿದೆ.

ಈ ಸಂದರ್ಭದಲ್ಲಿ ಧರ್ಮಸಭೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಧರ್ಮಸಭೆ ಶುಭಸಂದೇಶದ ಮೂಲ ಸತ್ಯಗಳನ್ನು ಪುನಃ ಒತ್ತಿಹೇಳಬೇಕು: “ಸೀಸರ್‌ಗೆ ಸೇರಿದದ್ದನ್ನು ಸೀಸರ್‌ಗೆ ಕೊಡಿ, ದೇವರಿಗೆ ಸೇರಿದದ್ದನ್ನು ದೇವರಿಗೆ ಕೊಡಿ.”

ಇದರ ಅರ್ಥ, ರಾಜಕೀಯ ಅಧಿಕಾರವನ್ನು ಪವಿತ್ರತೆಯಿಂದ ಬೇರ್ಪಡಿಸಿ, ಅದನ್ನು ಧರ್ಮನಿರಪೇಕ್ಷಗೊಳಿಸುವುದು; ಜೊತೆಗೆ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಖಚಿತಪಡಿಸುವುದು. ಧಾರ್ಮಿಕ ಮೂಲಭೂತವಾದಕ್ಕೂ ಮತ್ತು ಧರ್ಮದ ರಾಜಕೀಯ ದುರುಪಯೋಗಕ್ಕೂ ನೆಲವನ್ನೇ ತೆಗೆದುಹಾಕುವುದು ಅಗತ್ಯವಾಗಿದೆ.

ಇದನ್ನು ಸಾಧಿಸಲು, ಎಲ್ಲಾ ಧರ್ಮಗಳ ನಾಯಕರು ಒಟ್ಟಾಗಿ ಕೆಲಸ ಮಾಡಿ, ಹಿಂಸೆಯನ್ನು ನ್ಯಾಯೀಕರಿಸಲು ಧರ್ಮವನ್ನು ಬಳಸುವ ಯಾವುದೇ ಪ್ರಯತ್ನವನ್ನು ತಳ್ಳಿಹಾಕಬೇಕು.

ಅಬುಧಾಬಿಯಲ್ಲಿ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಮತ್ತು ಅಲ್-ಅಝರ್ ಮಹಾ ಇಮಾಮ್ ಸಹಿ ಮಾಡಿದ “ಮಾನವ ಸಹೋದರತ್ವದ ಘೋಷಣೆ” (Document on Human Fraternity), ಮತ್ತು ನಂತರ ‘ಸರ್ವ ಸಹೋದರರು’ (Fratelli tutti) ಎಂಬ ಪತ್ರದಲ್ಲಿ ಸ್ವೀಕರಿಸಲ್ಪಟ್ಟ ಅದರ ತತ್ವಗಳು, ಧರ್ಮಗಳ “ವಿಶ್ವ ಸಂಸ್ಥೆ”ಯಂತಿರುವ ಒಂದು ವೇದಿಕೆಯನ್ನು ನಿರ್ಮಿಸಲು ಅತ್ಯುತ್ತಮ ಆರಂಭವಾಗಬಹುದು.

ಇದಕ್ಕಿಂತಲೂ ಮುಖ್ಯವಾಗಿ, ಈ ದೃಷ್ಟಿಕೋನದಲ್ಲಿ ವಿಶ್ವಾಸಿಗಳಿಗೆ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಆದರೆ, “ಉಗ್ರ ಭಕ್ತರು” ಈ ಪ್ರಯತ್ನಗಳಿಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸುವರು ಎಂಬುದನ್ನು ನಾವು ತಿಳಿದಿರಬೇಕು, ಏಕೆಂದರೆ ಅವರು ತಮ್ಮದೇ ಧಾರ್ಮಿಕ ಕಾರಣಗಳನ್ನು ಉಲ್ಲೇಖಿಸಿ ತಮ್ಮ ನಿಲುವನ್ನು ಸಮರ್ಥಿಸಲು ಪ್ರಯತ್ನಿಸುವರು.


ಪ್ರಶ್ನೆ: ಸುಮಾರು 80 ವರ್ಷಗಳಿಂದ ಇಸ್ರಾಯೇಲ್–ಪ್ಯಾಲೆಸ್ತೀನ್ ಸಂಘರ್ಷವು ಮುಂದುವರೆಯುತ್ತಿದೆ. ಇಂದಿನ ಯುದ್ಧದಲ್ಲಿ ಭಾಗಿಯಾಗಿರುವವರಲ್ಲಿ ಸುಮಾರು ತೊಂಬತ್ತೈದು ಶೇಕಡಾ ಜನರು ತಮ್ಮ ಜೀವನದಲ್ಲಿ ಶಾಂತಿಯನ್ನು ಎಂದಿಗೂ ಅನುಭವಿಸದವರಾಗಿದ್ದಾರೆ. ಇಂತಹ ಐತಿಹಾಸಿಕವಾಗಿ ಗಾಢವಾಗಿ ಬೇರೂರಿರುವ ಸಂಘರ್ಷದ ಹಿನ್ನೆಲೆಯಲ್ಲಿ, ಪವಿತ್ರ ಭೂಮಿಯಲ್ಲಿ ಶಾಶ್ವತ ಮತ್ತು ನ್ಯಾಯಸಮ್ಮತ ಶಾಂತಿ ಸ್ಥಾಪನೆಯಾಗುವ ಸಾಧ್ಯತೆ ವಾಸ್ತವವಾಗಿ ಇದೆಯೇ?

ಉತ್ತರ:ತಡವಾಗಲಿ ಬೇಗವಾಗಲಿ, ಶಾಂತಿ ಖಂಡಿತವಾಗಿಯೂ ಬರುತ್ತದೆ — ಇದು ಅನಿವಾರ್ಯ. ಆದರೆ ಆ ದಾರಿಗೆ ಇನ್ನೂ ದೀರ್ಘ ಪ್ರಯಾಣ ಬಾಕಿಯಿದೆ. ಇದು ಪೀಳಿಗೆಯ ಬದಲಾವಣೆಯನ್ನು, ರಾಜಕೀಯ ನಾಯಕತ್ವದ ಬದಲಾವಣೆಯನ್ನು (ಒಂದು ಸಮಸ್ಯೆಯಿಂದ ಮತ್ತೊಂದು ದೊಡ್ಡ ಸಮಸ್ಯೆಗೆ ಹೋಗದೇ ಇರಲೆಂದು ಆಶಿಸುತ್ತಾ), ಮತ್ತು ಮುಖ್ಯವಾಗಿ ಸಂಸ್ಕೃತಿಯ ಬದಲಾವಣೆಯನ್ನು ಅಗತ್ಯವಾಗಿಸುತ್ತದೆ.

ಇಂದು — ದುರ್ಭಾಗ್ಯವಶಾತ್ — ನಿಜವಾದ ದೃಷ್ಟಿಯುಳ್ಳ ಪ್ರವಾದಿಗಳೂ ಅಥವಾ ದೂರದೃಷ್ಟಿಯ ನಾಯಕರೂ ಕಾಣಿಸುತ್ತಿಲ್ಲ. ಆದರೆ ಇದು ಕೇವಲ ಇಸ್ರಾಯೇಲ್ ಮತ್ತು ಪ್ಯಾಲೆಸ್ತೀನ್ ಅಥವಾ ಮಧ್ಯಪೂರ್ವದ ಸಮಸ್ಯೆಯಲ್ಲ; ಇದು ಜಾಗತಿಕ ಸಮಸ್ಯೆಯಾಗಿದೆ. 

ಆದರೂ, ನಾಗರಿಕ ಸಮಾಜದಲ್ಲಿ ಕೆಲವು ಆಶಾದಾಯಕ ಸೂಚನೆಗಳು ಕಂಡು ಬರುತ್ತಿವೆ. ಉದಾಹರಣೆಗೆ, ಇಸ್ರಾಯೇಲ್‌ನ ಮಾಓಜ್ ಇನೋನ್ ಮತ್ತು ಪ್ಯಾಲೆಸ್ತೀನ್‌ನ ಅಝೀಸ್ ಅಬು ಸರಾ ಪ್ರಾರಂಭಿಸಿದ ಚಳವಳಿ, ಅಥವಾ “ಶಾಂತಿಗಾಗಿ ಬೆತ್ತಲೆ ಕಾಲಿನಲ್ಲಿ ನಡೆಯುವ ತಾಯಂದಿರು” (Mothers Who Walk Barefoot for Peace), ಅಥವಾ “ಶಾಂತಿಗಾಗಿ ನಂಬಿಕೆಯ ಮಹಿಳೆಯರು” (Women of Faith for Peace), ಹಾಗೆಯೇ ಇವುಗಳಂತೆ ಇನ್ನೂ ಅನೇಕ ಸಣ್ಣ ಗುಂಪುಗಳು ಬೆಳೆಯುವ ನಿರೀಕ್ಷೆಯನ್ನು ಮೂಡಿಸುತ್ತಿವೆ.

ನಮ್ಮ ಸ್ವಂತ ಶಾಲೆಗಳು ಸಹ ಸಹಬಾಳ್ವೆ ಮತ್ತು ಸಹೋದರತ್ವದತ್ತ ಶಿಕ್ಷಣ ನೀಡುವ ಉದಾಹರಣೆಗಳಾಗಿವೆ. ಕಳೆದ ಹಲವು ವರ್ಷಗಳಿಂದ ನಾನು ಸತತವಾಗಿ ಹೇಳುತ್ತಿರುವಂತೆ, ಶಾಲಾ ವ್ಯವಸ್ಥೆಯಲ್ಲಿ ಪರಸ್ಪರ ಗೌರವ ಮತ್ತು ಒಪ್ಪಿಕೊಳ್ಳುವ ಮನೋಭಾವವನ್ನು ಬೆಳೆಸಲು, ಸಂಘರ್ಷ ನಿರ್ವಹಣೆ ಮತ್ತು ಶಾಂತಿ ಶಿಕ್ಷಣಕ್ಕಾಗಿ ಕಡ್ಡಾಯ ಪಠ್ಯಕ್ರಮಗಳನ್ನು ಪರಿಚಯಿಸುವುದು ರಾಜಕೀಯ ಮಟ್ಟದಲ್ಲಿಯೂ ಒಂದು ಹೊಣೆಗಾರಿಕೆಯಾಗಿದೆ.

ಇದು ಅರೇಝೋ ಪ್ರದೇಶದಲ್ಲಿರುವ ಶಾಂತಿಯ ನಗರವಾದ ರೊಂಡಿನೆ (Rondine)ಯಲ್ಲಿ ಅನುಸರಿಸಲಾಗುತ್ತಿರುವ ಮಾದರಿಯಂತೆಯೇ ಇರಬೇಕು. ಇದು ಕೇವಲ ಇಸ್ರಾಯೇಲ್ ಮತ್ತು  ಪ್ಯಾಲೆಸ್ತೀನಿಗೆ ಮಾತ್ರ ಸೀಮಿತವಾದ ಸತ್ಯವಲ್ಲ; ಯುರೋಪಿನ ದೇಶಗಳಿಗೂ ಇದೇ ಅಗತ್ಯ ಅನ್ವಯಿಸುತ್ತದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

01 ಏಪ್ರಿಲ್ 2026, 22:05