ಪವಿತ್ರ ಭೂಮಿಯ ಪಾಲಕರಾದ ಗುರು ಫ್ರಾನ್ಸೆಸ್ಕೊ ಇಯೆಲ್ಪೊ ಅವರ ನೇತೃತ್ವದಲ್ಲಿ, 2026ರ ಶುಭ ಶುಕ್ರವಾರದ ಶಿಲುಬೆ ಹಾದಿ ಜೆರುಸಲೇಮಿನ ಹಳೆಯ ಪಟ್ಟಣದಲ್ಲಿ  ನೆರವೇರಿತು. ಪವಿತ್ರ ಭೂಮಿಯ ಪಾಲಕರಾದ ಗುರು ಫ್ರಾನ್ಸೆಸ್ಕೊ ಇಯೆಲ್ಪೊ ಅವರ ನೇತೃತ್ವದಲ್ಲಿ, 2026ರ ಶುಭ ಶುಕ್ರವಾರದ ಶಿಲುಬೆ ಹಾದಿ ಜೆರುಸಲೇಮಿನ ಹಳೆಯ ಪಟ್ಟಣದಲ್ಲಿ ನೆರವೇರಿತು. 

ಯುದ್ಧದ ನೆರಳಿನಲ್ಲಿ ಜೆರುಸಲೇಮಿನಲ್ಲಿ ಶಿಲುಬೆ ಹಾದಿ

ಪವಿತ್ರ ಭೂಮಿಯ ಪಾಲಕರ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಗುರು ಇಬ್ರಾಹಿಂ ಫಾಲ್ಟಾಸ್ ಅವರು, ಶುಭ ಶುಕ್ರವಾರದ ಬೆಳಿಗ್ಗೆ ಜೆರುಸಲೇಮಿನ ಹಳೆಯ ಪಟ್ಟಣದಲ್ಲಿ ಕೇವಲ 10 ಫ್ರಾನ್ಸಿಸ್ಕನ್ ಸನ್ಯಾಸಿಗಳು ಶಿಲುಬೆ ಹಾದಿಯ ಪುರಾತನ ಆಚರಣೆಯನ್ನು ನೆರವೇರಿಸಲು ಸಾಧ್ಯವಾದ ಸಂದರ್ಭವನ್ನು ಹಂಚಿಕೊಂಡಿದ್ದಾರೆ.

ವಂ. ಗುರು ಇಬ್ರಾಹಿಂ ಫಾಲ್ಟಾಸ್

ಪವಿತ್ರ ಭೂಮಿಯ ಪಾಲಕರಾದ ಗುರು ಫ್ರಾನ್ಸೆಸ್ಕೊ ಇಯೆಲ್ಪೊ ಅವರ ನೇತೃತ್ವದಲ್ಲಿ, ಶುಭ ಶುಕ್ರವಾರದಂದು ಜೆರುಸಲೇಮಿನ ಹಳೆಯ ಪಟ್ಟಣದಲ್ಲಿ ಶಿಲುಬೆ ಹಾದಿ ನೆರವೇರಿತು. ಆದರೆ ಇದು ಸಾಮಾನ್ಯ ವರ್ಷಗಳಂತಿರಲಿಲ್ಲ — ಯುದ್ಧದ ನೆರಳು ಈ ಬಾರಿ ಪ್ರಾರ್ಥನೆಗೂ ಮಿತಿ ವಿಧಿಸಿತು. ಪವಿತ್ರ ಭೂಮಿಯ ಪಾಲಕರ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ವಂ. ಗುರು ಇಬ್ರಾಹಿಂ ಫಾಲ್ಟಾಸ್ ಅವರು ಹೇಳುವಂತೆ, ಈ ಬಾರಿ ಶಿಲುಬೆ ಹಾದಿಯಲ್ಲಿ ಕೇವಲ 10 ಫ್ರಾನ್ಸಿಸ್ಕನ್ ಸನ್ಯಾಸಿಗಳು ಮಾತ್ರ ಭಾಗವಹಿಸಿದರು. ಸಾಮಾನ್ಯವಾಗಿ ಸಾವಿರಾರು ಯಾತ್ರಿಕರು ನಡೆಯುವ ಈ ಪವಿತ್ರ ಮಾರ್ಗ — ವಿಯಾ ದೊಲೊರೋಸಾ — ಈ ಬಾರಿ ಮೌನ ಮತ್ತು ನಿಯಂತ್ರಣದ ನಡುವೆಯೇ ಸಾಗಿತು.

ಫೆಬ್ರವರಿ 28ರಿಂದ ಆರಂಭವಾದ ಯುದ್ಧ ಮಧ್ಯಪ್ರಾಚ್ಯದಾದ್ಯಂತ ಹರಡಿದ್ದು, ಜೆರುಸಲೇಮನ್ನೂ ತಾಕಿದೆ. ಈ ಹಿನ್ನೆಲೆ, ತಪಸ್ಸು ಕಾಲದ ಆಧ್ಯಾತ್ಮಿಕ ಅನುಭವ ಸಂಪೂರ್ಣವಾಗಿ ಸಾಧ್ಯವಾಗಲಿಲ್ಲ. ಇದೇ ಕಾರಣದಿಂದ, ಪುನರುತ್ಥಾನ ತ್ರಿದಿನದ ಆಚರಣೆಗಳಲ್ಲಿ ಜನಸಾಮಾನ್ಯರ ದೊಡ್ಡ ಭಾಗವಹಿಸುವಿಕೆ ಈ ವರ್ಷ ಕಾಣಿಸದಂತಾಗಿದೆ.

ಈ ದಿನಗಳು ಕ್ರಿಸ್ತನ ನೋವಿನ ದಾರಿಯನ್ನು ಮತ್ತೆ ನೆನಪಿಸುತ್ತವೆ — ದ್ರೋಹ, ನಿರಾಕರಣೆ, ಬಂಧನ, ಮರಣದಂಡನೆ… ಮತ್ತು ಅಂತಿಮವಾಗಿ, ತಂದೆಯ ಇಚ್ಛೆಗೆ ಸಂಪೂರ್ಣ ಸಮರ್ಪಣೆ. ಕತ್ತಲೆಯಿಂದ ಬೆಳಕಿನತ್ತ ಸಾಗುವ ಈ ಪಯಣವೇ ಪುನರುತ್ಥಾನದ ಅರ್ಥ. ಈ ವರ್ಷದ ಶಿಲುಬೆ ಹಾದಿ, ಯೇಸುವಿನ ಸಂಕಟಗಳನ್ನು ಧ್ಯಾನಿಸುವುದಕ್ಕಿಂತಹೆಚ್ಚಾಗಿ — ಇಂದಿನ ಮಾನವಕೋಟಿಯ ನೋವಿನ ಪ್ರತಿಬಿಂಬವಾಗಿಯೇ ಕಾಣಿಸಿಕೊಂಡಿತು.

2020ರ ಶುಭ ಶುಕ್ರವಾರದ ಶಿಲುಬೆ ಹಾದಿ — ಆ ಅನುಭವ ಇನ್ನೂ ಮನಸ್ಸಿನಲ್ಲಿ ಸ್ಪಷ್ಟವಾಗಿ ಉಳಿದಿದೆ. ಮಹಾಮಾರಿಯ ನಿರ್ಬಂಧಗಳ ಮಧ್ಯೆ, ಯಾವುದೇ ಯಾತ್ರಿಕರು ಅಥವಾ ಸ್ಥಳೀಯ ಭಕ್ತರ ಸಾನ್ನಿಧ್ಯವಿಲ್ಲದೆ, ಆಗಿನ ಪವಿತ್ರ ಭೂಮಿಯ ಪಾಲಕರಾದ ಗುರು ಫ್ರಾನ್ಸೆಸ್ಕೊ ಪ್ಯಾಟನ್, ನಾನು ಹಾಗೂ ಸಂತ ಸೇವಿಯರ್ ದೇವಾಲಯದ ಗಾರ್ಡಿಯನ್ ಗುರು ಮಾರ್ಸೆಲೊ ಚಿಕ್ಕಿನೆಲ್ಲಿ — ನಾವು ಮೂವರೇ ವಿಯಾ ದೊಲೊರೋಸಾ ಮಾರ್ಗದಲ್ಲಿ ನಡೆದೆವು. ಶಿಲುಬೆಯ ಭಾರವನ್ನು ಹೊತ್ತು ಸಾಗಿದ ನಮ್ಮ ಪ್ರಭು ಕ್ರಿಸ್ತರ ಪಾಡುಗಳನ್ನು ಸುಮಾರು ಐವತ್ತು ಸೈನಿಕರ ಕಟ್ಟುನಿಟ್ಟಿನ ನಿಗಾವಳಿಯ ನಡುವೆ ಧ್ಯಾನಿಸುತ್ತಾ, ಭಕ್ತರಿಗೆ ಅತ್ಯಂತ ಹತ್ತಿರವಾದ ಈ ಭಕ್ತಿಪೂರ್ಣ ಆಚರಣೆಯನ್ನು ಪ್ರಾರ್ಥನೆಯೊಂದಿಗೆ ನೆರವೇರಿಸಲಾಯಿತು. ಆದರೆ ಇದು ನಿಗಾವಳಿಯ ಜೊತೆಗೆ ನಡೆಯಿತು.

ಜೆರುಸಲೇಮಿನ ಹಳೆಯ ಪಟ್ಟಣದಲ್ಲಿ ಶಿಲುಬೆ ಹಾದಿಯ ಈ ಭಕ್ತಿಪರಂಪರೆ ಯಾವಾಗ ಆರಂಭವಾಯಿತು ಎಂಬುದು ನಮಗೆ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಶಿಲುಬೆಯ ಭಾರವನ್ನು ಹೊತ್ತು ಸಾಗಿದ ನಮ್ಮ ಪ್ರಭು ಕ್ರಿಸ್ತರ ಪಾಡುಗಳನ್ನು ಧ್ಯಾನಿಸುವ ಈ ಮಾರ್ಗ, ಬಹುಶಃ ಅವರ ಮರಣದ ತಕ್ಷಣವೇ ಆರಂಭವಾಗಿರಬಹುದೆಂದು ಕಲ್ಪಿಸಬಹುದು. ದೇವರ ತಾಯಿಯಾದ ಮರಿಯಮ್ಮ ತಮ್ಮ ಪುತ್ರನ ಹೆಜ್ಜೆ ಗುರುತುಗಳನ್ನು ಮರುಸಂಚರಿಸಿದರು ಎಂಬುದನ್ನು ನಾವು ಮನಗಾಣಬಹುದು.ತನ್ನ ಮಗನು ಬಿದ್ದೆದ್ದ ಕಲ್ಲು ಹಾದಿಯನ್ನು ಮತ್ತೆ ನೋಡುವಾಗ, ಅವನ ಹೆಜ್ಜೆಗಳ ಪ್ರತಿಧ್ವನಿಯನ್ನು ಮತ್ತೆ ಕೇಳುವಾಗ, ಅವನು ಅನುಭವಿಸಿದ ಅವಮಾನಗಳ ನೋವನ್ನು ತನ್ನ ಹೃದಯದಲ್ಲಿ ಮರುಅನುಭವಿಸುವ ತಾಯಿಯ ಆಳವಾದ ವ್ಯಥೆಯನ್ನು ನಾವು ಸ್ಪರ್ಶಿಸಬಹುದು.

ಜೆರುಸಲೇಮಿನಲ್ಲೇ ನಮ್ಮ ಪ್ರಭು ಕ್ರಿಸ್ತ ಪಾಡುಗಳನ್ನು ಅನುಭವಿಸಿದ ಪವಿತ್ರ ಸ್ಥಳಗಳಲ್ಲೇ ಅದನ್ನು ಸ್ಮರಿಸುವ ಭಕ್ತಿಪ್ರಕಾರ ನಡೆದುಬರುತ್ತಿದೆ ಎಂಬುದನ್ನು ಯಾತ್ರಿಕೆಯಾಗಿದ್ದ ಎಗೆರಿಯಾ ಮೊದಲಿಗೆ ವ್ಯಾಪಕವಾಗಿ ಉಲ್ಲೇಖಿಸಿದರು. ಬಳಿಕ ಅನೇಕ ಯಾತ್ರಿಕರು, ಇತಿಹಾಸಕಾರರು ಮತ್ತು ವೃತ್ತಾಂತಕಾರರು ಈ ಭಕ್ತಿಪರಂಪರೆಯ ಗುರುತುಗಳನ್ನು ತಮ್ಮ ಬರಹಗಳಲ್ಲಿ ಉಳಿಸಿಕೊಂಡಿದ್ದಾರೆ.

ಆದರೆ, ನಮ್ಮ ಪ್ರಭು ಕ್ರಿಸ್ತರ ಪೀಡೆಯ ಮೇಲಿನ ಸಂತ ಫ್ರಾನ್ಸಿಸ್ ಅಸ್ಸಿಸಿಯವರ ಆಳವಾದ ಭಕ್ತಿ, ಪವಿತ್ರ ಭೂಮಿಗೆ ಅವರು ಕೈಗೊಂಡ ಶಾಂತಿಯ ಯಾತ್ರೆಯ ಫಲವಾಗಿ, ಈ ಭಕ್ತಿಪ್ರಕಾರಕ್ಕೆ ಹೊಸ ಪ್ರೇರಣೆಯನ್ನು ನೀಡಿದೆಯೆಂದು ಹೇಳಬಹುದು. ಅಸ್ಸಿಸಿಯ ಸಂತರು ಕ್ರಿಸ್ತರನ್ನು ಅಪಾರ ಪ್ರೀತಿಯಿಂದ ಪ್ರೀತಿಸಿದವರು; ಪವಿತ್ರ ಸ್ಥಳಗಳನ್ನು ಭೇಟಿ ಮಾಡುವುದಕ್ಕೂ, ಅವುಗಳನ್ನು ಸಂರಕ್ಷಿಸುವುದಕ್ಕೂ ಅವರ ಮನಸ್ಸಿನಲ್ಲಿ ಗಾಢವಾದ ಬಯಕೆ ಇತ್ತು. ವಿಯಾ ದೊಲೊರೋಸಾ ಮಾರ್ಗದಲ್ಲೇ ತನ್ನ ಸಹೋದರ ಸನ್ಯಾಸಿಗಳು ಪವಿತ್ರ ಸ್ಥಳಗಳ ಪಾಲಕರಾಗಬೇಕೆಂಬ ಆಸೆಯನ್ನು ಸಂತ ಫ್ರಾನ್ಸಿಸ್ ಹೃದಯದಲ್ಲಿ ಬೆಳೆಸಿಕೊಂಡಿರಬಹುದು ಎಂಬ ಕಲ್ಪನೆ ಸಹ ಸ್ವಾಭಾವಿಕವಾಗಿದೆ. ಬಾಲ ಯೇಸುವಿನ ಮೇಲೆ ಅವರಿಗೆ ಅಪಾರ ಸೌಮ್ಯ ಪ್ರೀತಿ ಇತ್ತು; ಅವರನ್ನು ಸದಾ ಕಣ್ಣೆದುರು ಮತ್ತು ಹೃದಯದಲ್ಲಿ ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ, ಗ್ರೆಚ್ಚಿಯೋದಲ್ಲಿ ಮೊದಲ ಗೋದಲಿಯನ್ನು  ಕಟ್ಟಿದರು.

1333ರಿಂದ ಫ್ರಾನ್ಸಿಸ್ಕನ್ ಸಭೆಯು ಈ ಪವಿತ್ರ ಸ್ಥಳಗಳ ಸ್ಮರಣೆಯನ್ನು ಕಾಪಾಡಿಕೊಂಡಿದೆ. 1342ರಲ್ಲಿ ಪೂಜ್ಯ ಜಗದ್ಗುರು ಆರನೇ ಕ್ಲೆಮೆಂಟ್ ಅವರು ನೀಡಿದ ಅಧಿಕೃತ ಜವಾಬ್ದಾರಿಯ ನಂತರ, ಇದು ಅವರ ಧಾರ್ಮಿಕ ಕರ್ತವ್ಯವಾಗಿದೆ. ಸಂಘರ್ಷಗಳಿಂದ ಗಾಯಗೊಂಡಿದ್ದರೂ, ದೇವರ ಸಾನ್ನಿಧ್ಯದಿಂದ ಪವಿತ್ರವಾದ ಈ ಭೂಮಿಯಲ್ಲಿ ಸೇವೆ ಮಾಡುವುದು ಅವರಿಗೆ ಗೌರವವೂ ಸವಾಲೂ ಆಗಿದೆ.

2026ರ ಪವಿತ್ರ ಪುನರುತ್ಥಾನದೆಡೆಗೆ ಸಾಗುತ್ತಿರುವ ಈ ಪ್ರಯಾಣದಲ್ಲಿ, ನಾವು ಹಿಂಸೆ, ಮರಣ ಮತ್ತು ಅನೇಕ ಸಹೋದರ-ಸಹೋದರಿಯರ ನೋವಿನಿಂದ ಕೂಡಿದ ವಾಸ್ತವಿಕತೆಯನ್ನು ಎದುರಿಸಿದ್ದೇವೆ — ಹಕ್ಕುಗಳಿಂದ ವಂಚಿತರಾಗಿರುವ, ಪ್ರೀತಿಯಿಂದ ದೂರವಾಗಿರುವ ಜೀವಗಳ ಮೌನ ವ್ಯಥೆಯನ್ನು ಕಂಡಿದ್ದೇವೆ. ಆದರೂ, ಈ ಕಷ್ಟಗಳ ನಡುವೆ ಸಹೋದರತ್ವದ ಸಂತೋಷವೂ, ಪವಿತ್ರ ಭೂಮಿಯ ಪಾಲಕರಿಗೆ ದೊರೆತ ಮಹತ್ತರ ಗೌರವವೂ ಗಮನಾರ್ಹವಾಗಿದೆ.ಪೂಜ್ಯ ಜಗದ್ಗುರು 14ನೇ ಲಿಯೋ ಅವರು ಸ್ವತಃ, ಪವಿತ್ರ ಭೂಮಿಯ ಮಾಜಿ ಪಾಲಕರಾದ ಗುರು ಫ್ರಾನ್ಸೆಸ್ಕೊ ಪ್ಯಾಟನ್ ಅವರಿಗೆ, ಪ್ರತಿ ವರ್ಷ ರೋಮ್‌ನ ಕೊಲೊಸ್ಸಿಯಮ್‌ನಲ್ಲಿ ಜರುಗುವ ಶಿಲುಬೆ ಹಾದಿಗಾಗಿ ಧ್ಯಾನ ಚಿಂತನೆಗಳನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ನೀಡಿದರು.

ಇದು ಪವಿತ್ರ ಭೂಮಿಯ ಪಾಲಕರಿಗೆ ಕೃಪೆಯ ಒಂದು ವಿಶೇಷ ಕ್ಷಣ — ಕ್ರಿಸ್ತರ ಪಾಡುಗಳಿಗೆ ಸಾಕ್ಷಿಯಾದ ಈ ಭೂಮಿ ಇಂದು ಮಾನವಕೋಟಿಯ ಗಾಯಗೊಂಡ ಮತ್ತು ನೋವಿನಿಂದ ನರಳುತ್ತಿರುವ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿರುವ ಈ ಸಂಕಷ್ಟಗಳ ಮಧ್ಯೆಯೇ, ದೈವಿಕ ಕೃಪೆಯ ಸ್ಪರ್ಶವನ್ನು ಅನುಭವಿಸುವ ಕ್ಷಣವಾಗಿದೆ.

ಪವಿತ್ರ ಭೂಮಿಯ ಪಾಲಕರ ಶಿಕ್ಷಣ ವಿಭಾಗದ ಮುಖ್ಯಸ್ಥರು

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

03 ಏಪ್ರಿಲ್ 2026, 19:23