ಜಿಬೂಟಿಯ ದೂರದ ಮರುಭೂಮಿ ಪ್ರದೇಶದಲ್ಲಿ ಪ್ರಯಾಣಿಸುತ್ತಿರುವ ಇಥಿಯೋಪಿಯಾದ ವಲಸಿಗರು. (AFP ಅಥವಾ ಪರವಾನಗಿ ಹೊಂದಿದ ಮೂಲಗಳು) ಜಿಬೂಟಿಯ ದೂರದ ಮರುಭೂಮಿ ಪ್ರದೇಶದಲ್ಲಿ ಪ್ರಯಾಣಿಸುತ್ತಿರುವ ಇಥಿಯೋಪಿಯಾದ ವಲಸಿಗರು. (AFP ಅಥವಾ ಪರವಾನಗಿ ಹೊಂದಿದ ಮೂಲಗಳು)  (AFP or licensors)

ವಲಸಿಗರ ರಕ್ಷಣೆ ಮತ್ತು ಮಾನವ ಘನತೆಗೆ ಗೌರವ ನೀಡುವಂತೆ ಇಥಿಯೋಪಿಯಾದ ಧರ್ಮಾಧ್ಯಕ್ಷರ ಮನವಿ

ಇಥಿಯೋಪಿಯಾದ ಕಥೋಲಿಕ ಧರ್ಮಾಧ್ಯಕ್ಷರ ಮಹಾಸಂಘವು ಧರ್ಮಪಾಲನಾ ಮನವಿಯೊಂದನ್ನು ಪ್ರಕಟಿಸಿದ್ದು, ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಯುರೋಪಿನ ವಲಸೆ ಮಾರ್ಗಗಳಲ್ಲಿ ಗಂಭೀರ ಅಪಾಯಗಳನ್ನು ಎದುರಿಸುತ್ತಿರುವ ಇಥಿಯೋಪಿಯಾದ ವಲಸಿಗರಿಗೆ ತುರ್ತು ರಕ್ಷಣೆಯನ್ನು ಒದಗಿಸುವಂತೆ ಕರೆ ನೀಡಿದೆ.

ಲೇಖಕರು: ಬೆಜಾವಿಟ್ ಬೊಗಾಲೆ – ಅಡಿಸ್ ಅಬಾಬಾ

“ದಯಾವಂತರು ಭಾಗ್ಯವಂತರು;ದೇವರ ದಯೆ ಅವರಿಗೆ ದೊರಕುವುದು.” (ಮತ್ತಾಯ 5:7) ಎಂಬ ಶುಭಸಂದೇಶದ ವಾಕ್ಯವನ್ನು ಉಲ್ಲೇಖಿಸುತ್ತಾ, ಇಥಿಯೋಪಿಯಾದ ಧರ್ಮಾಧ್ಯಕ್ಷರು, ಅನೇಕ ಇಥಿಯೋಪಿಯಾದವರಿಗಾಗಿ ವಲಸೆ ಎಂಬುದು ಆಯ್ಕೆಯ ವಿಷಯವಲ್ಲ, ಬದುಕುಳಿಯುವ ಅನಿವಾರ್ಯತೆಯಾಗಿದೆ ಎಂದು ಒತ್ತಿಹೇಳುತ್ತಾರೆ.

ಉದ್ಯೋಗ, ಘನತೆ ಮತ್ತು ತಮ್ಮ ಕುಟುಂಬಗಳನ್ನು ಪೋಷಿಸುವ ಸಾಧನಗಳಿಗಾಗಿ ಯುವಜನರು ಮತ್ತು ಯುವತಿಯರು ತಮ್ಮ ತಾಯ್ನಾಡನ್ನು ತೊರೆಯುತ್ತಿದ್ದಾರೆ ಎಂದು ಇಥಿಯೋಪಿಯಾದ ಧರ್ಮಾಧ್ಯಕ್ಷರು ತಮ್ಮ ಧರ್ಮಪಾಲನಾ ಮನವಿಯಲ್ಲಿ ತಿಳಿಸಿದ್ದಾರೆ.

ಆದರೆ, ಅವಕಾಶಗಳನ್ನು ಕಂಡುಕೊಳ್ಳುವ ಬದಲು, ಅನೇಕ ವಲಸಿಗರು ಶೋಷಣೆ, ಹಿಂಸಾಚಾರ ಮತ್ತು ಆಳವಾದ ಅಸುರಕ್ಷತೆಯನ್ನು ಎದುರಿಸುತ್ತಿದ್ದಾರೆ. ವಲಸಿಗರನ್ನು ಎಂದಿಗೂ ಕೇವಲ ಅಂಕಿಅಂಶಗಳಾಗಿ ಪರಿಗಣಿಸಬಾರದು ಎಂದು ಧರ್ಮಾಧ್ಯಕ್ಷರು ಒತ್ತಾಯಿಸಿದ್ದಾರೆ. ಅವರ ಮಾನವ ಘನತೆ ಪವಿತ್ರವಾಗಿದ್ದು, ಗಡಿಗಳು, ಕಾನೂನುಬದ್ಧ ಸ್ಥಾನಮಾನ ಅಥವಾ ಆರ್ಥಿಕ ವ್ಯವಸ್ಥೆಗಳು ಅದನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಅವರು ದೃಢಪಡಿಸುತ್ತಾರೆ.

ಸೌದಿ ಅರೇಬಿಯಾ ರಾಜ್ಯದಲ್ಲಿ ಬಂಧನದಲ್ಲಿರುವ ನೂರಾರು ಇಥಿಯೋಪಿಯಾ ಪ್ರಜೆಗಳು ಮರಣದಂಡನೆಯ ಅಪಾಯದಲ್ಲಿದ್ದಾರೆ ಎಂಬ ವರದಿಗಳ ಬಗ್ಗೆ ಧರ್ಮಾಧ್ಯಕ್ಷರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಯಾವುದೇ ಕ್ರಮಗಳನ್ನು ತಕ್ಷಣ ಸ್ಥಗಿತಗೊಳಿಸಿ ದಯೆ ತೋರಿಸುವಂತೆ ಅವರು ಅಧಿಕಾರಿಗಳಿಗೆ ನೇರ ಮತ್ತು ತುರ್ತು ಮನವಿ ಮಾಡಿದ್ದಾರೆ.

ಕರುಣೆಯ ನೈತಿಕ ಅಗತ್ಯವನ್ನು ಒತ್ತಿಹೇಳುತ್ತಾ, ಧರ್ಮಾಧ್ಯಕ್ಷರು “ಕರುಣೆಯಿಂದ ನ್ಯಾಯ ಕುಗ್ಗುವುದಿಲ್ಲ; ಬದಲಾಗಿ ಅದು ಇನ್ನಷ್ಟು ಉನ್ನತಗೊಳ್ಳುತ್ತದೆ” ಎಂದು ಹೇಳಿದ್ದಾರೆ. ನಿರಾಶೆ ಮೇಲುಗೈ ಸಾಧಿಸುವ ಭೀತಿ ಇರುವ ಸಂದರ್ಭದಲ್ಲಿ, ಕರುಣೆ ಭರವಸೆಯನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಅಪಾಯಕಾರಿ ವಲಸೆ ಮಾರ್ಗಗಳು ಮತ್ತು ಮಾನವೀಯ ವೇದನೆ

ಈ ಧರ್ಮಪಾಲನಾ ಮನವಿಯಲ್ಲಿ, ವಿವಿಧ ಪ್ರದೇಶಗಳಲ್ಲಿ ಇಥಿಯೋಪಿಯಾದ ವಲಸಿಗರು ಎದುರಿಸುತ್ತಿರುವ ತೀವ್ರ ಸಂಕಷ್ಟಗಳನ್ನು ಉಲ್ಲೇಖಿಸಲಾಗಿದೆ.

ಕೆಂಪು ಸಮುದ್ರ ಮತ್ತು ಯೆಮೆನ್ ಮಾರ್ಗವಾಗಿ ಪ್ರಯಾಣಿಸುವವರು, ಹಿಂಸೆ, ಶೋಷಣೆ ಮತ್ತು ಮರಣದಿಂದ ಕೂಡಿದ ಅಪಾಯಕಾರಿ ಯಾತ್ರೆಗಳನ್ನು ಅನುಭವಿಸುತ್ತಿದ್ದಾರೆ. ಲೆಬನಾನ್‌ನಲ್ಲಿ ಮುಂದುವರಿದಿರುವ ಅಸ್ಥಿರತೆಯಿಂದ ಅನೇಕ ವಲಸಿಗರು ಅತ್ಯಂತ ಅಸುರಕ್ಷಿತ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದು, ಅವರನ್ನು ತಾಯ್ನಾಡಿಗೆ ಮರಳಿಸುವಂತೆ ಆಗ್ರಹಗಳು ಹೆಚ್ಚುತ್ತಿವೆ.

ಅನೇಕ ಗಲ್ಫ್ ರಾಷ್ಟ್ರಗಳಲ್ಲಿ, ಪ್ರಾದೇಶಿಕ ಉದ್ವಿಗ್ನತೆಗಳು ವಲಸಿಗ ಸಮುದಾಯಗಳಿಗೆ ಅಸುರಕ್ಷಿತ ವಾತಾವರಣವನ್ನು ಉಂಟುಮಾಡುತ್ತಿವೆ. ದಕ್ಷಿಣ ಆಫ್ರಿಕಾದಲ್ಲಿ, ವಿದೇಶಿ ವಿರೋಧಿ ಹಿಂಸಾಚಾರದ ಪುನರಾವರ್ತಿತ ಘಟನೆಗಳು ಜೀವ ಮತ್ತು ಜೀವನೋಪಾಯಗಳಿಗೆ ನಿರಂತರ ಬೆದರಿಕೆಯಾಗಿವೆ.

ಆತಂಕಕಾರಿ ವಿಷಯವೆಂದರೆ, ಸುಡಾನ್–ಲಿಬಿಯಾ–ಯುರೋಪ್ ಮಾರ್ಗ ಎಂದು ಧರ್ಮಾಧ್ಯಕ್ಷರು ಸೂಚಿಸುತ್ತಾರೆ. ಈ ಮಾರ್ಗದಲ್ಲಿ ವಲಸಿಗರು ಮರುಭೂಮಿ ದಾಟುವಿಕೆ, ಮಾನವ ಕಳ್ಳಸಾಗಣೆ, ಬಂಧನ, ಬಲವಂತದ ದುಡಿಮೆ ಮತ್ತು ಮೆಡಿಟರೇನಿಯನ್ ಸಮುದ್ರದ ಮೂಲಕದ ಅಪಾಯಕಾರಿ ಸಮುದ್ರಯಾನಗಳನ್ನು ಎದುರಿಸುತ್ತಾರೆ. ಅನೇಕರು ಈ ಮಾರ್ಗಗಳಲ್ಲೇ ಪ್ರಾಣ ಕಳೆದುಕೊಳ್ಳುತ್ತಾರೆ; ಕೆಲವರು ಮಾತ್ರ ಲಾಂಪೆಡುಸಾ ತೀರವನ್ನು ತಲುಪಲು ಸಾಧ್ಯವಾಗುತ್ತದೆ.

ಧರ್ಮಸಭೆಯ ಐಕ್ಯತೆಯ ಸಾಕ್ಷ್ಯ

ವಲಸಿಗರು ಮತ್ತು ನಿರಾಶ್ರಿತರ ಪರ ಧರ್ಮಸಭೆಯ ನಿರಂತರ ಬದ್ಧತೆಯನ್ನು ಧರ್ಮಾಧ್ಯಕ್ಷರು ವ್ಯಕ್ತಪಡಿಸಿದರು. ಸಮುದ್ರದಲ್ಲಿ ಪ್ರಾಣ ಕಳೆದುಕೊಂಡ ವಲಸಿಗರ ಸ್ಮರಣಾರ್ಥವಾಗಿ ಲಾಂಪೆಡುಸಾದಲ್ಲಿ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರು ಪ್ರಾರ್ಥಿಸಿ ಪುಷ್ಪಗುಚ್ಛವನ್ನು ಅರ್ಪಿಸಿದ ಐತಿಹಾಸಿಕ ಕಾರ್ಯವನ್ನು ಅವರು ಕರುಣೆ ಮತ್ತು ಐಕ್ಯತೆಯ ಶಕ್ತಿಯುತ ಸಂಕೇತವಾಗಿ ಉಲ್ಲೇಖಿಸುತ್ತಾರೆ.

ಇದಲ್ಲದೆ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಲಾಂಪೆಡುಸಾ ಭೇಟಿ ಈಗಾಗಲೇ ನಿಗದಿಯಾಗಿರುವುದನ್ನೂ ಅವರು ಉಲ್ಲೇಖಿಸುತ್ತಾ, ಈ ಭೇಟಿ, ವಲಸಿಗರೊಂದಿಗೆ ನಿಂತು ಜಾಗತಿಕ ಮಟ್ಟದಲ್ಲಿ ಅವರ ಘನತೆಯನ್ನು ರಕ್ಷಿಸುವ ಧರ್ಮಸಭೆಯ ಧ್ಯೇಯವನ್ನು ಮುಂದುವರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ

ಕಥೋಲಿಕ ಧರ್ಮಸಭೆಯ ಧರ್ಮೋಪದೇಶ ಗ್ರಂಥವನ್ನು (CCC 2241) ಉಲ್ಲೇಖಿಸುತ್ತಾ, ಹೆಚ್ಚು ಸಮೃದ್ಧ ರಾಷ್ಟ್ರಗಳಿಗೆ ಸುರಕ್ಷತೆ ಮತ್ತು ಜೀವನೋಪಾಯವನ್ನು ಹುಡುಕುವವರನ್ನು ಸ್ವಾಗತಿಸುವ ನೈತಿಕ ಕರ್ತವ್ಯವಿದೆ ಎಂದು ಧರ್ಮಾಧ್ಯಕ್ಷರು ಪುನರುಚ್ಚರಿಸುತ್ತಾರೆ. ಅವರು ಐಕ್ಯತೆ, ನ್ಯಾಯ ಮತ್ತು ಜವಾಬ್ದಾರಿತನದತ್ತ ಜಾಗತಿಕ ಬದ್ಧತೆಯನ್ನು ನವೀಕರಿಸುವಂತೆ ಕರೆ ನೀಡಿದ್ದಾರೆ.

ಅದೇ ಸಮಯದಲ್ಲಿ, ಬಡತನ, ನಿರುದ್ಯೋಗ, ಸಂಘರ್ಷ, ಪರಿಸರ ಹಾನಿ ಮತ್ತು ಯುವಜನರಿಗೆ ಅವಕಾಶಗಳ ಕೊರತೆ ಸೇರಿದಂತೆ ವಲಸೆಯ ಮೂಲ ಕಾರಣಗಳನ್ನು ತುರ್ತುವಾಗಿ ಪರಿಹರಿಸುವ ಅಗತ್ಯವಿದೆ ಎಂದು ಅವರು ಒತ್ತಿಹೇಳುತ್ತಾರೆ. ಈ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ, ಬಿಕ್ಕಟ್ಟು ಇನ್ನಷ್ಟು ಗಂಭೀರವಾಗುತ್ತದೆ ಎಂದು ಅವರು ಎಚ್ಚರಿಸುತ್ತಾರೆ.

ಸಮಾಜವು ತನ್ನ ಅತೀ ದುರ್ಬಲ ಸದಸ್ಯರೊಂದಿಗೆ ಹೇಗೆ ವರ್ತಿಸುತ್ತದೆ ಎಂಬುದರಲ್ಲಿಯೇ ಮಾನವೀಯತೆ ಮತ್ತು ನಾಗರಿಕತೆಯ ನಿಜವಾದ ಅಳತೆ ಅಡಗಿದೆ ಎಂದು ಇಥಿಯೋಪಿಯಾದ ಧರ್ಮಾಧ್ಯಕ್ಷರು ದೃಢಪಡಿಸುತ್ತಾರೆ.

ಈ ಮನವಿಯು, ವಲಸೆ ಬಿಕ್ಕಟ್ಟನ್ನು ಎದುರಿಸುವಲ್ಲಿ ಸಂವಾದ, ಕರುಣೆ ಮತ್ತು ಜ್ಞಾನಕ್ಕೆ ಕರೆ ನೀಡುವುದರೊಂದಿಗೆ ಸಮಾಪ್ತಿಗೊಳ್ಳುತ್ತದೆ.

ಇಥಿಯೋಪಿಯಾದ ವಲಸಿಗರು, ಅವರ ಕುಟುಂಬಗಳು ಮತ್ತು ನಿರ್ಧಾರ ಕೈಗೊಳ್ಳುವ ಎಲ್ಲರನ್ನು ಸರ್ವಶಕ್ತ ದೇವರ ಕರುಣೆ ಮತ್ತು ಮಾರ್ಗದರ್ಶನಕ್ಕೆ ಧರ್ಮಾಧ್ಯಕ್ಷರು ಒಪ್ಪಿಸುತ್ತಾ, ನೋವಿನ ಮೇಲೆ ಕರುಣೆ ಮೇಲುಗೈ ಸಾಧಿಸಲಿ ಮತ್ತು ಮಾನವ ಘನತೆ ಯಾವಾಗಲೂ ಕಾಪಾಡಲ್ಪಡಲಿ ಎಂದು ಪ್ರಾರ್ಥಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

22 ಮೇ 2026, 20:12