ಕೃತಕ ಬುದ್ಧಿಮತ್ತೆ ಕೃತಕ ಬುದ್ಧಿಮತ್ತೆ  (REUTERS)

ಕೃತಕ ಬುದ್ಧಿಮತ್ತೆಯ ಕುರಿತು ಆಫ್ರಿಕಾದ ದೃಷ್ಟಿಕೋನ

ಕಳೆದ ವಾರ ಪಾಂಟಿಫಿಕಲ್ ಉರ್ಬಾನಿಯಾನಾ ವಿಶ್ವವಿದ್ಯಾಲಯದಲ್ಲಿ ಸಂವಹನ ವಿಭಾಗದ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ, ಮಾನವ ಮುಖಗಳು ಮತ್ತು ಧ್ವನಿಗಳನ್ನು ಸಂರಕ್ಷಿಸುವ ವಿಷಯದ ಕುರಿತು ಚರ್ಚೆ ನಡೆಯಿತು. ತಂತ್ರಜ್ಞಾನದ ಪ್ರಗತಿಯ ಮಧ್ಯೆ ಮಾನವ ಗೌರವ, ಗುರುತು ಮತ್ತು ಸೃಜನಶೀಲತೆಯನ್ನು ರಕ್ಷಿಸುವ ಅಗತ್ಯವನ್ನು ಭಾಷಣಕಾರರು ಒತ್ತಿಹೇಳಿದರು.

ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೋ, CPS 

2026ರ ಮೇ 21ರಂದು ಸಂವಹನ ವಿಭಾಗ ಆಯೋಜಿಸಿದ್ದ “ಮಾನವ ಧ್ವನಿಗಳು ಮತ್ತು ಮುಖಗಳ ಸಂರಕ್ಷಣೆ” ಎಂಬ ವಿಷಯದ ಸಮ್ಮೇಳನವು, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ 60ನೇ ವಿಶ್ವ ಸಾಮಾಜಿಕ ಸಂವಹನ ದಿನದ ಸಂದೇಶದಿಂದ ಪ್ರೇರಿತವಾಗಿತ್ತು.

ಪಾಂಟಿಫಿಕಲ್ ಉರ್ಬಾನಿಯಾನಾ ವಿಶ್ವವಿದ್ಯಾಲಯದಲ್ಲಿ ನಡೆದ ಈ ಸಮ್ಮೇಳನದಲ್ಲಿ ಭಾಗವಹಿಸಿದವರು, ಡಿಜಿಟಲ್ ಯುಗದಲ್ಲಿ ಮಾನವ ಗೌರವ, ನಿಜವಾದ ಸಂಬಂಧಗಳು ಮತ್ತು ನೈತಿಕ ಸಂವಹನವನ್ನು ರಕ್ಷಿಸುವ ಅಗತ್ಯವನ್ನು ಚರ್ಚಿಸಿ ಒತ್ತಿಹೇಳಿದರು. ಡೀಪ್‌ಫೇಕ್‌ಗಳು, ತಪ್ಪುಮಾಹಿತಿ, ಅಲ್ಗೊರಿದಮ್ ಪಕ್ಷಪಾತ ಮತ್ತು ಡಿಜಿಟಲ್ ಬಹಿಷ್ಕಾರದ ಅಪಾಯಗಳ ಬಗ್ಗೆ  ಎಚ್ಚರಿಕೆ ನೀಡಿದರು. ಅದೇ ಸಮಯದಲ್ಲಿ, ಜವಾಬ್ದಾರಿ ಮತ್ತು ನೈತಿಕ ಮೌಲ್ಯಗಳ ಮಾರ್ಗದರ್ಶನದಲ್ಲಿ ಕೃತಕ ಬುದ್ಧಿಮತ್ತೆ ಒಳ್ಳೆಯ ಸಾಧ್ಯತೆಗಳನ್ನೂ ಒದಗಿಸಬಲ್ಲದು ಎಂಬುದನ್ನು ಅವರು ಒಪ್ಪಿಕೊಂಡರು.

ಸಮೃದ್ಧಿಗೊಳಿಸಿದ ಸಂವಾದ

ಕೃತಕ ಬುದ್ಧಿಮತ್ತೆ ವೇಗವಾಗಿ ಸಮಾಜವನ್ನು ಪರಿವರ್ತಿಸುತ್ತಿದೆ. ಇದು ಹೊಸ ಆವಿಷ್ಕಾರಗಳಿಗೆ ಅವಕಾಶಗಳನ್ನು ಒದಗಿಸುತ್ತಿದ್ದರೂ, ಅದೇ ಸಮಯದಲ್ಲಿ ತುರ್ತು ನೈತಿಕ, ಸಾಂಸ್ಕೃತಿಕ ಮತ್ತು ಮಾನವೀಯ ಆತಂಕಗಳನ್ನೂ ಹುಟ್ಟುಹಾಕುತ್ತಿದೆ.

ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಸಮ್ಮೇಳನದ ಭಾಷಣಕಾರರಲ್ಲಿ ಒಬ್ಬರಾದ ಡಾ. ಜಾಯ್ ಬುಒಲಾಂವಿನಿ, ಇದು ತಾವು ಭಾಗವಹಿಸಿದ್ದ ಕೃತಕ ಬುದ್ಧಿಮತ್ತೆ ಕುರಿತ ಅತ್ಯಂತ ಸಮೃದ್ಧ ಸಂವಾದವಾಗಿದೆ ಎಂದು ಹೇಳಿದರು. ಏಕೆಂದರೆ ಈ ವೇದಿಕೆ ಪತ್ರಕರ್ತರು, ವಿಜ್ಞಾನಿಗಳು, ನೈತಿಕ ತಜ್ಞರು, ರಾಜಕೀಯ ವಿಶ್ಲೇಷಕರು ಮತ್ತು ಸಂವಹನ ತಜ್ಞರನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸಿತು.

AI ತಂತ್ರಜ್ಞಾನಗಳು ವೇಗವಾಗಿ ಮುಂದುವರಿಯುತ್ತಿದ್ದರೂ, ಅವುಗಳ ದಿಕ್ಕನ್ನು ಜವಾಬ್ದಾರಿಯುತವಾಗಿ ರೂಪಿಸುವ ಸಾಮರ್ಥ್ಯ ಮಾನವಕುಲದ ಕೈಯಲ್ಲೇ ಇನ್ನೂ ಇದೆ ಎಂದು ಅವರು ಒತ್ತಿಹೇಳಿದರು. ಸಮ್ಮೇಳನದಲ್ಲಿ ವ್ಯಕ್ತವಾದ ಪ್ರಮುಖ ಆತಂಕಗಳಲ್ಲಿ ಒಂದೆಂದರೆ, ಮುಖ ಗುರುತಿಸುವ ವ್ಯವಸ್ಥೆಗಳು, ಡೀಪ್‌ಫೇಕ್‌ಗಳು ಮತ್ತು ಸ್ವಯಂಚಾಲಿತ ನಿರ್ಧಾರ ವ್ಯವಸ್ಥೆಗಳಲ್ಲಿ AI ಬಳಕೆಯ ಹೆಚ್ಚಳವಾಗಿತ್ತು.

ಡಾ. ಬುಒಲಾಂವಿನಿ, “X-coded” ವ್ಯಕ್ತಿ ಎಂದು ತಾವು ಕರೆಯುವ ವರ್ಗದ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದರು. ಅಂದರೆ, AI ವ್ಯವಸ್ಥೆಗಳ ಮೂಲಕ ಹಾನಿಗೊಳಗಾಗುವ, ಭೇದಭಾವಕ್ಕೆ ಒಳಗಾಗುವ ಅಥವಾ ದುರ್ಬಳಕೆಗೆ ಒಳಗಾಗುವ ವ್ಯಕ್ತಿಗಳು. ಯಾರೂ ಇದರಿಂದ ಸುರಕ್ಷಿತರಲ್ಲ ಎಂದು ಅವರು ಹೇಳಿದರು. ಸಾರ್ವಜನಿಕ ವ್ಯಕ್ತಿಗಳ ಚಿತ್ರಗಳನ್ನು ತಿರುಚಿ ಬಳಸುವ ಉದಾಹರಣೆಗಳು ಮತ್ತು ಮಹಿಳೆಯರು ಹಾಗೂ ಬಾಲಕಿಯರನ್ನು ಗುರಿಯಾಗಿಸಿಕೊಂಡ ಅಶ್ಲೀಲ ಡೀಪ್‌ಫೇಕ್‌ಗಳನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು.

ಹಾಗೆಯೇ, ಅನುಮತಿಯಿಲ್ಲದೆ AI ತಂತ್ರಜ್ಞಾನಗಳ ಮೂಲಕ ವ್ಯಕ್ತಿಗಳ ಗುರುತು, ಧ್ವನಿ ಮತ್ತು ಕಲಾತ್ಮಕ ಕೃತಿಗಳನ್ನು ಮರುಸೃಷ್ಟಿಸಬಹುದಾದ ಪರಿಸ್ಥಿತಿಯಲ್ಲಿ, ಜೈವಿಕ ಗುರುತು ಹಕ್ಕುಗಳು, ಸೃಜನಾತ್ಮಕ ಹಕ್ಕುಗಳು ಮತ್ತು ವ್ಯಕ್ತಿಗಳ ರಕ್ಷಣೆಗೆ ಬಲವಾದ ಕಾನೂನುಗಳ ಅಗತ್ಯವಿದೆ ಎಂದು ಅವರು ವಾದಿಸಿದರು.

AIಯ ಭವಿಷ್ಯ ರೂಪಿಸುವಲ್ಲಿ ಆಫ್ರಿಕಾದ ಸ್ಥಾನ

ಈ ಸಮ್ಮೇಳನದಲ್ಲಿ ಭಾಗವಹಿಸಿದವರು, ಆಫ್ರಿಕಾ ಕೇವಲ ಇತರ ದೇಶಗಳಲ್ಲಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನವನ್ನು ಬಳಸುವಷ್ಟರಲ್ಲಿ ನಿಲ್ಲದೆ, ಅದರ ರೂಪುಗೊಳಿಸುವಿಕೆಯಲ್ಲಿ ಸಕ್ರಿಯ ಪಾತ್ರವಹಿಸುವ ಅಗತ್ಯವಿದೆ ಎಂದು ಒತ್ತಿಹೇಳಿದರು. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ವಿಟ್‌ವಾಟರ್ಸ್‌ರ್ಯಾಂಡ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಪ್ರಾಧ್ಯಾಪಕರಾದ ಬೆಂಜಮಿನ್ ರೋಸ್ಮನ್, ಜಾಗತಿಕ AI ಅಭಿವೃದ್ಧಿಯಲ್ಲಿ ಆಫ್ರಿಕಾದ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿವರಿಸಿದರು. ಭಾಷಾ ವೈವಿಧ್ಯತೆ, ಆರೋಗ್ಯ ಸೇವೆ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ಆಫ್ರಿಕಾ ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.

ಖಂಡದಾದ್ಯಂತ 2,000ಕ್ಕೂ ಹೆಚ್ಚು ಭಾಷೆಗಳು ಮಾತನಾಡಲ್ಪಡುತ್ತಿದ್ದರೂ, ಅವುಗಳಲ್ಲಿ ಅನೇಕವು “ಕಡಿಮೆ ಸಂಪನ್ಮೂಲ ಹೊಂದಿದ ಭಾಷೆಗಾಗಿವೆ” (low-resource languages). ಅಂದರೆ, AI ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ತರಬೇತುಗೊಳಿಸಲು ಅಗತ್ಯವಿರುವ ಸಾಕಷ್ಟು ಡೇಟಾ ಲಭ್ಯವಿಲ್ಲ.

AI ಎಂದರೆ ಕೇವಲ ತಂತ್ರಜ್ಞಾನಕ್ಕೆ ಪ್ರವೇಶವಲ್ಲ; ಅದನ್ನು ಯಾರು ವಿನ್ಯಾಸಗೊಳಿಸುತ್ತಾರೆ ಮತ್ತು ಅದರೊಳಗೆ ಯಾರ ಮೌಲ್ಯಗಳನ್ನು ಅಳವಡಿಸಲಾಗಿದೆ ಎಂಬುದೂ ಮುಖ್ಯ ಎಂದು ಅವರು ಒತ್ತಿಹೇಳಿದರು. Deep Learning Indaba ಮುಂತಾದ ಉಪಕ್ರಮಗಳ ಮೂಲಕ, ಆಫ್ರಿಕಾದ ಸಂಶೋಧಕರು ಮತ್ತು ನವೋದ್ಯಮಿಗಳು ನೈತಿಕ ಹಾಗೂ ಸಾಂಸ್ಕೃತಿಕವಾಗಿ ಸೂಕ್ತವಾದ AI ವ್ಯವಸ್ಥೆಗಳನ್ನು ನಿರ್ಮಿಸಲು ಬಲವಾದ ಪ್ಯಾನ್-ಆಫ್ರಿಕನ್ ಸಹಕಾರಗಳನ್ನು ರೂಪಿಸುತ್ತಿದ್ದಾರೆ.

ಡಾ. ಬುಒಲಾಂವಿನಿ ಸಹ ಇದೇ ರೀತಿಯ ಆತಂಕಗಳನ್ನು ವ್ಯಕ್ತಪಡಿಸಿದರು. ಅವರು “ಡೇಟಾ ವಸಾಹತುಶಾಹಿಯ ಎರಡನೇ ಅಲೆ” ಬಗ್ಗೆ ಎಚ್ಚರಿಸಿದರು. ಅಂದರೆ, ಆಫ್ರಿಕಾದ ಡಿಜಿಟಲ್ ಡೇಟಾವನ್ನು ತೆಗೆದುಕೊಂಡು ವಿದೇಶಿ ಕಂಪನಿಗಳನ್ನು ಶ್ರೀಮಂತಗೊಳಿಸಲಾಗುತ್ತಿದೆ, ಆದರೆ ಸ್ಥಳೀಯ ಸಮುದಾಯಗಳಿಗೆ ಅದರ ಲಾಭ ಸಿಗುತ್ತಿಲ್ಲ ಎಂದು ಹೇಳಿದರು. ಆಫ್ರಿಕಾದ ಸರ್ಕಾರಗಳು ಮತ್ತು ಸಂಸ್ಥೆಗಳು ಡಿಜಿಟಲ್ ಸಂಪನ್ಮೂಲಗಳನ್ನು ರಕ್ಷಿಸಬೇಕು ಹಾಗೂ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಆಫ್ರಿಕಾದ ಧ್ವನಿಗೂ ಪ್ರತಿನಿಧಿತ್ವ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸ್ಥಳೀಯ ಭಾಷೆಗಳ ಮೂಲಕ ರೈತರಿಗೆ ಕೃಷಿ ಉತ್ಪಾದಕತೆ ಮತ್ತು ಜೀವನೋಪಾಯವನ್ನು ಸುಧಾರಿಸಲು ನೆರವಾಗುವ FarmerLine ಮುಂತಾದ ಆಫ್ರಿಕಾ ನೇತೃತ್ವದ AI ಸಾಧನಗಳನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು.

AIಯ ನೈತಿಕ ಬಳಕೆ ಮತ್ತು ಧರ್ಮಸಭೆ

ವಂ. ಗುರು ಫಾಸ್ಟಿನ್ ಫುರಾಹಾ ಅವರು, 60ನೇ ವಿಶ್ವ ಸಂವಹನ ದಿನಕ್ಕಾಗಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ನೀಡಿದ ಸಂದೇಶದ ಕುರಿತು ಚಿಂತನೆ ಹಂಚಿಕೊಂಡರು. ಮಾನವ ಮುಖಗಳು ಮತ್ತು ಧ್ವನಿಗಳು ಪವಿತ್ರವಾದ ವರಗಳಾಗಿದ್ದು, ಅವುಗಳನ್ನು ರಕ್ಷಿಸಬೇಕು ಎಂದು ಅವರು ಒತ್ತಿಹೇಳಿದರು. ಧರ್ಮಸಭೆ AIಯನ್ನು ಒಂದು ಸಾಧನವಾಗಿ ನೋಡುತ್ತದೆ, ಆದರೆ ಮಾನವ ಬುದ್ಧಿಮತ್ತೆ ಅಥವಾ ಆಧ್ಯಾತ್ಮಿಕ ಸೇವೆಯ ಪರ್ಯಾಯವಾಗಿ ಅಲ್ಲ ಎಂದು ಅವರು ಹೇಳಿದರು.

ವ್ಯಾಟಿಕನ್‌ನ Antiqua et Nova ದಸ್ತಾವೇಜನ್ನು ಉಲ್ಲೇಖಿಸಿದ ಅವರು, AI ಸುವಾರ್ತಾ ಪ್ರಸಾರ ಮತ್ತು ಸಂವಹನಕ್ಕೆ ನೆರವಾಗಬಹುದು, ಆದರೆ ನಿಜವಾದ ಮಾನವ ಸಂಬಂಧ, ಜ್ಞಾನ ಅಥವಾ ಪಾಲನಾ ಸಾನ್ನಿಧ್ಯವನ್ನು ಅದು ಎಂದಿಗೂ ಬದಲಾಯಿಸಲಾರದು ಎಂದು ತಿಳಿಸಿದರು.

ಅದೇ ರೀತಿಯಲ್ಲಿ, ರೋಮ್‌ನಲ್ಲಿ ಅಧ್ಯಯನ ಮಾಡುತ್ತಿರುವ ನೈಜೀರಿಯಾದ ವಿದ್ಯಾರ್ಥಿ ಮೆಸಿಯೋಯೆ ತೊಹೀಬ್, AI ಮಾನವ ಕಾರ್ಯವನ್ನು ಉತ್ತಮಗೊಳಿಸಬೇಕು, ಆದರೆ ಮಾನವತೆಯನ್ನು ಬದಲಿಸಬಾರದು ಎಂದು ಹೇಳಿದರು. ವಿಶೇಷವಾಗಿ Gen Z ಯುವಜನರು ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆಗಾಗಿ AI ಮೇಲೆ ಅತಿಯಾಗಿ ಅವಲಂಬಿಸಬಾರದು ಎಂದು ಅವರು ಎಚ್ಚರಿಸಿದರು. AI ಒಂದು ಪ್ರೋಗ್ರಾಂ ಮಾಡಲ್ಪಟ್ಟ ಮತ್ತು ಮಿತಿಯೊಳಗಿನ ವ್ಯವಸ್ಥೆಯಾಗಿದ್ದರೆ, ಮಾನವ ಸಾಮರ್ಥ್ಯ ಅಳೆಯಲಾಗದಷ್ಟು ವಿಶಾಲವಾಗಿದೆ ಎಂದು ಹೇಳಿದರು.

ಯುವಜನರು ತಮ್ಮ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡು, ತಮ್ಮ ಗುರುತು ಮತ್ತು ಸೃಜನಶೀಲತೆಯನ್ನು ಕಳೆದುಕೊಳ್ಳದೆ ಜವಾಬ್ದಾರಿಯುತವಾಗಿ AIಯನ್ನು ಬಳಸಬೇಕು ಎಂದು ಅವರು ಪ್ರೋತ್ಸಾಹಿಸಿದರು. AI ಇನ್ನಷ್ಟು ಮುಂದುವರಿಯುತ್ತಿರುವ ಈ ಕಾಲದಲ್ಲಿ, ವಿಶೇಷವಾಗಿ ಮಾನವ ಸಂಬಂಧಗಳು, ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ನೈತಿಕ ನಿರ್ಧಾರಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಸ್ಪಷ್ಟ ನೈತಿಕ ಗಡಿಗಳು ಇರಲೇಬೇಕು ಎಂದು ಅವರು ಒತ್ತಿಹೇಳಿದರು.

ಉಬುಂಟು, ನ್ಯಾಯ ಮತ್ತು ಆಫ್ರಿಕಾದ ಧ್ವನಿಗಳ ರಕ್ಷಣೆ

ಅನಸ್ತಾಂಸಿಯಾ ಮಕುನೂ ಅವರು, “ನಾನು ಇದ್ದೇನೆ ಏಕೆಂದರೆ ನಾವು ಇದ್ದೇವೆ” ಎಂಬ ಆಫ್ರಿಕಾದ Ubuntu ತತ್ವಶಾಸ್ತ್ರವನ್ನು ಆಧರಿಸಿ, ಕಾನೂನು ಮತ್ತು ಸಂವಹನದ ದೃಷ್ಟಿಕೋನಗಳಿಂದ AI ಕುರಿತು ಚರ್ಚೆ ನಡೆಸಿದರು. ಆಫ್ರಿಕಾದ ಸಮಾಜಗಳು ಮುಖಾಮುಖಿ ಸಂಬಂಧಗಳು, ನೈತಿಕ ಕಥನಗಳು ಮತ್ತು ಸಮುದಾಯದ ಆಲಿಸುವಿಕೆಗಳ ಮೇಲೆ ಆಳವಾಗಿ ನೆಲೆಯೂರಿವೆ ಎಂದು ಅವರು ಹೇಳಿದರು. AI ಮೂಲಕ ಸೃಷ್ಟಿಸಲ್ಪಡುವ ಧ್ವನಿಗಳು, ಬಾಟ್‌ಗಳು ಮತ್ತು ವರ್ಚುವಲ್ ವಾಸ್ತವಿಕತೆಗಳು ಈ ನಿಜವಾದ ಮಾನವ ಸಂಬಂಧಗಳನ್ನು ದುರ್ಬಲಗೊಳಿಸುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳ ಮೇಲಿನ ಹೆಚ್ಚುತ್ತಿರುವ ಅವಲಂಬನೆ ಬಗ್ಗೆ ಮಕುನೂ ಅವರು ಆತಂಕ ವ್ಯಕ್ತಪಡಿಸಿದರು. ಇಂತಹ ತಂತ್ರಜ್ಞಾನಗಳು ಬಹುಪಾಲು ಸಂದರ್ಭಗಳಲ್ಲಿ ಆಫ್ರಿಕಾದ ವಾಸ್ತವತೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದರು.

ಅಲ್ಗೊರಿದಮ್ ಪಕ್ಷಪಾತ, ನಿಗಾವ್ಯವಸ್ಥೆ, ಡೇಟಾ ನಿಯಂತ್ರಣ ಕಾರ್ಯಗಳಲ್ಲಿ ಆಫ್ರಿಕಾದ ಕಾರ್ಮಿಕರ ದುರ್ಬಳಕೆ ಮತ್ತು ದುರ್ಬಲ ಸಮುದಾಯಗಳಲ್ಲಿ ಸ್ಥಾಪಿಸಲ್ಪಟ್ಟ ಡೇಟಾ ಕೇಂದ್ರಗಳಿಂದ ಉಂಟಾಗುವ ಪರಿಸರ ಹಾನಿ ಮುಂತಾದ ವಿಷಯಗಳನ್ನು ಅವರು ಉಲ್ಲೇಖಿಸಿದರು. ಕಾನೂನು ದೃಷ್ಟಿಯಿಂದ, ಪಕ್ಷಪಾತಪೂರ್ಣ ಮುಖ ಗುರುತಿಸುವ ವ್ಯವಸ್ಥೆಗಳು ವಿಶೇಷವಾಗಿ ಕಪ್ಪು ಸಮುದಾಯಗಳು ಮತ್ತು ಮಹಿಳೆಯರ ವಿರುದ್ಧ ವ್ಯವಸ್ಥಾತ್ಮಕ ಅನ್ಯಾಯವನ್ನು ಬಲಪಡಿಸಬಹುದು ಎಂದು ಎಚ್ಚರಿಸಿದರು. ಮಾನವ ಗೌರವ, ಮಾನವ ಹಕ್ಕುಗಳು ಮತ್ತು ಸಾಂಸ್ಕೃತಿಕ ಗುರುತನ್ನು ರಕ್ಷಿಸುವ ಆಫ್ರಿಕಾ ಕೇಂದ್ರಿತ AI ಆಡಳಿತದ ಅಗತ್ಯವನ್ನು ಅವರು ಒತ್ತಿಹೇಳಿದರು.

ಅದೇ ಸಮಯದಲ್ಲಿ, AIಯ ಸಕಾರಾತ್ಮಕ ಸಾಧ್ಯತೆಗಳನ್ನು ಮಕುನೂ ಅವರು ಒಪ್ಪಿಕೊಂಡರು. ಸಂಕೀರ್ಣ ಕಾನೂನು ಮತ್ತು ನೀತಿ ದಸ್ತಾವೇಜುಗಳನ್ನು ಸರಳಗೊಳಿಸುವ ಮೂಲಕ ಶಿಕ್ಷಣಕ್ಕೆ ಪ್ರವೇಶವನ್ನು ಸುಲಭಗೊಳಿಸಲು, ಭಾಷಾ ಅಡೆತಡೆಗಳನ್ನು ನಿವಾರಿಸಲು ಮತ್ತು ಯುವ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು AI ಸಹಾಯ ಮಾಡಬಹುದು ಎಂದು ಅವರು ಹೇಳಿದರು.

ಸಮ್ಮೇಳನವು ಒಂದು ದೃಢವಾದ ಒಮ್ಮತದೊಂದಿಗೆ ಅಂತ್ಯಗೊಂಡಿತು: ತಂತ್ರಜ್ಞಾನ ನಿರಂತರವಾಗಿ ಅಭಿವೃದ್ಧಿಯಾಗುತ್ತಿದ್ದರೂ, AI ಮಾನವಕುಲದ ಸೇವೆಯಲ್ಲಿಯೇ ಉಳಿಯಬೇಕು. ನಿಜವಾದ ಮಾನವ ಧ್ವನಿಗಳು, ಮುಖಗಳು, ಸಂಸ್ಕೃತಿಗಳು ಮತ್ತು ಸಂಬಂಧಗಳನ್ನು ಸಂರಕ್ಷಿಸುವುದು ಸಮಾಜದ ಭವಿಷ್ಯಕ್ಕಾಗಿ ಅತ್ಯಗತ್ಯವಾಗಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

26 ಮೇ 2026, 20:43