ಪ್ರಭುವಿನ ದಿನದ ಧ್ಯಾನ: “ಆತಂಕದ ಮೂಲಕ ದಾರಿ”
ಲೇಖಕರು: ವಂ ಗುರು ಮರಿಯನ್ ನ್ಗುಯೆನ್
ಇಂದಿನ ಶುಭಸಂದೇಶದಲ್ಲಿ ಶಿಷ್ಯರು ಕಂಗಾಲಾಗಿದ್ದಾರೆ. ಪ್ರಭು ಯೇಸು ತಾವು ಹೊರಟು ಹೋಗುವ ಕುರಿತು ಹೇಳುತ್ತಿದ್ದಾರೆ, ಯೂದಾಸ್ ಈಗಾಗಲೇ ಅಂಧಕಾರದೊಳಗೆ ಹೋಗಿದ್ದಾನೆ, ಪೇತ್ರನಿಗೆ ಕೋಳಿ ಕೂಗುವ ಮುನ್ನ ತನ್ನ ಗುರುವನ್ನು ಮೂರು ಬಾರಿ ನಿರಾಕರಿಸುವನೆಂದು ಈಗ ತಾನೆ ಪ್ರಭು ತಿಳಿಸಿದ್ದಾನೆ.
ಎಲ್ಲವೂ ಅನಿಶ್ಚಿತತೆಯಿಂದ ಕೂಡಿದೆ. ತಾವು ಹಿಂಬಾಲಿಸಿದವರು ತಮ್ಮನ್ನು ಬಿಟ್ಟು ಹೋಗಲಿದ್ದಾರೆ, ತಮ್ಮಲ್ಲಿ ಅತಿ ಬಲಿಷ್ಠನೆನಿಸಿಕೊಂಡವನು ಬೀಳಲಿದ್ದಾನೆ.
ಶುಭಸಂದೇಶದ ಈ ಚಿತ್ರಣ, ನಮ್ಮ ಪ್ರಸ್ತುತಕ್ಕಿಂತ ವಿಭಿನ್ನವಾಗೇನೂ ಇಲ್ಲ. ಅದೆಷ್ಟೋ ಜನರು ಸೋಲಿನ ಭಯದಿಂದ, ನಿಯಂತ್ರಣ ಕಳೆದುಕೊಳ್ಳುವ ಭಯದಿಂದ, ತಾವು ಅಪೂರ್ಣರು ಎಂಬ ಭಯದಿಂದ ಒಂದು ರೀತಿಯ ಮೌನ ಆತಂಕದಲ್ಲೇ ಜೀವಿಸುತ್ತಿದ್ದಾರೆ. ವಿವಿಧ ರೀತಿಯ ವಿವರಣೆಗಳನ್ನು, ಊಹಾಪೋಹಗಳನ್ನು ಹರಡುವ ಅನೇಕ ನಿರಂತರ ಧ್ವನಿಗಳು ನಮ್ಮನ್ನು ಸುತ್ತುವರೆದಿವೆ. ಹೆಚ್ಚು ಗದ್ದಲ, ಅಲ್ಪ ಅಧಿಕಾರ ಮತ್ತು ಅದಕ್ಕಿಂತಲೂ ಅಲ್ಪ ಶಾಂತಿಯೇ ನಮ್ಮ ವಾಸ್ತವವಾಗಿದೆ.
ಈ ಆತಂಕಗಳ ಮಧ್ಯೆಯೇ ಪ್ರಭು ಯೇಸು “ನಿಮ್ಮ ಹೃದಯಗಳು ಕಳವಳಗೊಳ್ಳದಿರಲಿ. ದೇವರಲ್ಲಿ ವಿಶ್ವಾಸವಿಡಿ; ನನ್ನಲ್ಲಿಯೂ ವಿಶ್ವಾಸವಿಡಿ” ಎಂದು ಹೇಳುತ್ತಾರೆ.
ಸಂತ ಜಾನ್ ಕ್ರಿಸೋಸ್ಟಮ್ ತಿಳಿಸುವಂತೆ ಪ್ರಭು ಯೇಸುವಿನ ಈ ಕರೆ ಸಲಹೆಯಲ್ಲ, ಒಂದು ಆಜ್ಞೆಯಾಗಿದೆ. (ಯೋವಾನ್ನ 73 ಉಪದೇಶ). ಗಾಳಿಯನ್ನೂ ಸರೋವರವನ್ನೂ “ಸುಮ್ಮನಿರು” ಎಂದು ಆಜ್ಞಾಪಿಸಿದ ಅದೇ ಅಧಿಕಾರಯುತ ಧ್ವನಿಯಿದು... ಅವು ಶಾಂತವಾದವು (ಮತ್ತಾಯ 8:27).
ಪ್ರಭು ಯೇಸು ದೂರದಿಂದ ಸಾಂತ್ವನ ನೀಡುವವರಂತೆ ಮಾತಾಡುವುದಿಲ್ಲ. ಒಂದು ದೈವಿಕ ಅಧಿಕಾರದಿಂದ ಮಾತಾಡುತ್ತಾರೆ. ನಾವು ದೇವರನ್ನು ನಂಬುವುದಾದರೆ, ಪ್ರಭು ಯೇಸುವನ್ನೂ ನಂಬಬೇಕು, ಏಕೆಂದರೆ ದೇವರೊಂದಿಗೆ ಪರಿಪೂರ್ಣ ಅನ್ಯೋನ್ಯತೆಯಲ್ಲಿ ಪ್ರಭು ಯೇಸು ಇದ್ದಾರೆ. (ಯೊವಾನ್ನ 14:10)
ಶಾಂತಿ ಜೀವನದ ಬಿರುಗಾಳಿಗಳನ್ನು ನಿಯಂತ್ರಿಸುವುದರಿಂದ ಬರುವುದಿಲ್ಲ; ಅವುಗಳಿಗೆ ಆಜ್ಞಾಪಿಸುವವನಲ್ಲಿ ವಿಶ್ವಾಸವಿಡುವುದರಿಂದ ಬರುತ್ತದೆ.
ನಂತರ ಪ್ರಭು ಯೇಸು “ನನ್ನ ತಂದೆಯ ಮನೆಯಲ್ಲಿ ಅನೇಕ ನಿವಾಸಗಳಿವೆ” ಎಂದು ಹೇಳುತ್ತಾರೆ. ನಾವು ಕೈಬಿಡಲ್ಪಡುವೆವೋ ಎಂಬ ಭಯವನ್ನು ಹೋಗಲಾಡಿಸಲು ಯೇಸು ಹೀಗೆ ಹೇಳುತ್ತಾರೆಂದು ಸಂತ ಜಾನ್ ಕ್ರಿಸೋಸ್ಟಮ್ ತಿಳಿಸುತ್ತಾರೆ. ಇವು ಕೇವಲ ಸ್ಥಳಗಳಷ್ಟೇ ಅಲ್ಲ ಬದಲಾಗಿ ತಂದೆಯ ಮನೆಯಲ್ಲಿ ನಮಗಾಗಿ ಇರುವ ಶಾಶ್ವತ ಮನೆಗಳಾಗಿವೆ.
ನಾವು ಅನೇಕ ಬಾರಿ ಪರರಂತೆ ಅಥವಾ ಹೊರಗಿನವರಂತೆ ಅನುಭವಿಸುವ ಈ ಜಗತ್ತಿನಲ್ಲಿ, ಯೇಸು ನಮಗೆ ಒಂದು ಸ್ಥಳವನ್ನು ಖಚಿತಪಡಿಸುತ್ತಾರೆ—ಅದು ನಾವು ಗಳಿಸಿದ್ದರಿಂದ ಅಲ್ಲ, ನಾವು ಅವರಿಗೆ ಸೇರಿದವರಾಗಿದ್ದರಿಂದ. ಅವರ ಇಚ್ಛೆ ಹೊರತುಪಡಿಸುವುದಲ್ಲ, ಸೇರಿಸುವುದು—ತನ್ನ ಹಿಂಡನ್ನು ಕಾಪಾಡುವ ಕುರುಬನಂತೆ, ತನ್ನ ಮಕ್ಕಳನ್ನು ತನ್ನತ್ತ ಸೆಳೆಯುವ ತಂದೆಯಂತೆ.
ಸ್ವರ್ಗವು ಕೊರತೆ ಅಥವಾ ಸ್ಪರ್ಧೆಯ ಸ್ಥಳವಲ್ಲ, ಸಮೃದ್ಧಿಯ ಸ್ಥಳ—ಅವರ ಬಳಿಗೆ ಬರುವ ಎಲ್ಲರಿಗೂ ಸ್ಥಳವಿದೆ. ಕ್ರಿಸ್ತನು ನಮ್ಮ ಮುಂದೇ ಹೋಗುವುದು ಸ್ವರ್ಗವನ್ನು ನಿರ್ಮಿಸಲು ಅಲ್ಲ, ತನ್ನ ಶಿಲುಬೆ, ಪುನರುತ್ಥಾನ ಮತ್ತು ಸ್ವರ್ಗಾರೋಹಣದ ಮೂಲಕ ಅದನ್ನು ತೆರೆಯಲು—ನಮ್ಮ ಮಾನವತ್ವವನ್ನು ತಂದೆಯ ಸನ್ನಿಧಿಗೆ ಕರೆತರಲು.
ಆದ್ದರಿಂದಲೇ ಪ್ರಭು ಯೇಸು ಹೇಳುವುದು: “ನಾನೇ ಮಾರ್ಗ, ಸತ್ಯ ಮತ್ತು ಜೀವ.”
ಅವರು ನಮಗೆ ನಕ್ಷೆಯನ್ನು ಕೊಡುವುದಿಲ್ಲ. ಬದಲಿಗೆ ತನ್ನನ್ನೇ ನೀಡಿದ್ದಾರೆ.
ಹೀಗಾಗಿ ಇದು ಶಾಂತಿಯ ಮಾರ್ಗ: ಮುಂದೆ ಇರುವ ದಾರಿಯ ಬಗ್ಗೆ ಖಚಿತತೆ ಅಲ್ಲ, ಮಾರ್ಗವಾಗಿರುವ ಅವರಲ್ಲಿ ವಿಶ್ವಾಸ.
*ಸಂತ ಮಾರ್ಟಿನ್ ಮಠದ ಮಠಾಧೀಶರು,ಲೇಸಿ, ವಾಷಿಂಗ್ಟನ್
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).