ಜೆರುಸಲೇಮ್: ಹೀಬ್ರೂ ಭಾಷೀಯ ಕಥೋಲಿಕರಿಗಾಗಿ 70 ವರ್ಷದ ಪಾಲನಾ ಸೇವೆ
ಲೇಖಕರು: ಕರೋಲ್ ಡಾರ್ಮೊರೋಸ್
ಮೇ 2ರಂದು ಜೆರುಸಲೇಮಿನ ನೋಟ್ರೆ ಡೇಮ್ ಕೇಂದ್ರದಲ್ಲಿ ನಡೆದ ಈ ಜಯಂತಿ ಕಾರ್ಯಕ್ರಮದಲ್ಲಿ ಸುಮಾರು 350 ಮಂದಿ ಧರ್ಮಕೇಂದ್ರದ ಸದಸ್ಯರು ಮತ್ತು ಅತಿಥಿಗಳು ಭಾಗವಹಿಸಿದರು. ಪ್ರೇಷಿತ ಸಂತ ಜೇಮ್ಸ್ ಹಬ್ಬದ ಪವಿತ್ರ ಬಲಿಪೂಜೆಯನ್ನು ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಕ್ಷೇತ್ರದ ಪ್ರಧಾನ ಧರ್ಮಾಧ್ಯಕ್ಷರಾದ ಕಾರ್ಡಿನಲ್ ಪಿಯರ್ಬತ್ತಿಸ್ತ ಪಿಜ್ಜಬಲ್ಲಾ ಅವರು ಅರ್ಪಿಸಿದರು.
ಹೀಬ್ರೂ ಭಾಷೆಯ ಧರ್ಮಸಭೆ
ಸಂತ ಜೇಮ್ಸ್ ಪ್ರೇಷಿತ ಧರ್ಮಪ್ರಾಂತ್ಯ ಇಸ್ರಾಯೇಲಿನಲ್ಲಿ ಧರ್ಮಸಭೆಯ ಉಪಸ್ಥಿತಿಯ ವಿಶಿಷ್ಟ ಗುರುತು: ಇದು ದೈನಂದಿನ ಜೀವನದ ಮತ್ತು ಹೃದಯದ ಭಾಷೆಯಾಗಿರುವ ಹೀಬ್ರೂ ಭಾಷೆಯಲ್ಲಿ ಮಾತನಾಡುತ್ತಿದ್ದು, ಒಂದೇ ಸಮಯದಲ್ಲಿ ಕಥೋಲಿಕ ಧರ್ಮಸಭೆಯ ವಿಶ್ವವ್ಯಾಪಕತೆಯಲ್ಲಿ ದೃಢವಾಗಿ ನೆಲಸಿದೆ.
ಈ ವಾರ್ಷಿಕೋತ್ಸವವು ಹಲವು ವರ್ಷಗಳಿಂದ ಪ್ರೇಷಿತ ಧರ್ಮಪ್ರಾಂತ್ಯದ ಸಮುದಾಯವನ್ನು ನಿರ್ಮಿಸಿರುವ ಯಾಜಕರು, ಸಮರ್ಪಿತ ಜೀವನ ನಡೆಸುವವರು ಮತ್ತು ಭಕ್ತರಿಗೆ ಕೃತಜ್ಞತೆ ಸಲ್ಲಿಸಲು ಒಂದು ಅವಕಾಶವಾಗಿತ್ತು.
ಆಚರಣೆಗಳು ದ್ವಿಮುಖವಾಗಿದ್ದವು; ಗಂಭೀರ ಪವಿತ್ರ ಬಲಿಪೂಜೆಯ ಆಚರಣೆಯ ಜೊತೆಗೆ, ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಸಂಗೀತ, ವೈಯಕ್ತಿಕ ಸಾಕ್ಷ್ಯಗಳು ಮತ್ತು ಕ್ರಿಶ್ಚಿಯನ್ ಮೀಡಿಯಾ ಸೆಂಟರ್ ನಿರ್ಮಿಸಿದ ಡಾಕ್ಯುಮೆಂಟರಿ ಚಿತ್ರದ ಮೊದಲ ಪ್ರದರ್ಶನವೂ ನಡೆಯಿತು ಎಂದು catholic.co.il ವರದಿ ಮಾಡಿದೆ.
ಒಂದೇ ದೇಹ
2005ರಿಂದ 2008ರವರೆಗೆ ಸಂತ ಜೇಮ್ಸ್ ಪ್ರೇಷಿತ ಧರ್ಮಪ್ರಾಂತ್ಯದ ಪ್ರತಿನಿಧಿಯಾಗಿದ್ದ ಕಾರ್ಡಿನಲ್ ಪಿಜ್ಜಾಬಲ್ಲಾ ಅವರು “[ಇಸ್ರಾಯೇಲ್ ಜನರನ್ನು] ಅರ್ಥಮಾಡಿಕೊಳ್ಳುವ ಮಹತ್ವ” ಮತ್ತು “ಧರ್ಮಸಭೆಗೆ ಅರ್ಥಮಾಡಿಕೊಳ್ಳಲು ಮತ್ತು ಭವಿಷ್ಯದ ಕಡೆ ನೋಡಲು ಸಹಾಯ ಮಾಡುವಲ್ಲಿ ಸಮುದಾಯಗಳ ಜವಾಬ್ದಾರಿಯನ್ನು ಗುರುತಿಸುವ ಅಗತ್ಯ”ವನ್ನು ಒತ್ತಿಹೇಳಿದರು. ಈ ಸಂಬಂಧ “ಇಂದಿನ ಕಾಲದಲ್ಲಿ ಎಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ” ಎಂದು ಅವರು ಗಮನಿಸಿದರು. ಪ್ರೇಷಿತ ಧರ್ಮಪ್ರಾಂತ್ಯ ಮುಂದುವರಿಯಲು ಕಾರಣವಾದದ್ದು “ಯಾವುದೇ ಧರ್ಮಸಭಾ ತಂತ್ರವಲ್ಲ, ಆದರೆ ಒಂದೇ ಮೂಲ—ಯೇಸು” ಎಂದು ಕಾರ್ಡಿನಲ್ ಹೇಳಿದರು.
ಜಯಂತಿ ಸಂದರ್ಭದಲ್ಲಿ ಉಲ್ಲೇಖಿಸಲಾದಂತೆ, ಪ್ರೇಷಿತ ಧರ್ಮಪ್ರಾಂತ್ಯ ತನ್ನ ಸೇವೆಗೆ ದಿನನಿತ್ಯ ಬದ್ದವಾಗಿದೆ: ಅನುವಾದಿಸುವುದು, ಜೊತೆ ನಡೆಯುವುದು, ಕೇಳುವುದು ಮತ್ತು ಸೇವೆ ಸಲ್ಲಿಸುವುದು. ಇದರ ಉದ್ದೇಶ ಪ್ರತ್ಯೇಕ ಧರ್ಮಸಭೆಯನ್ನು ನಿರ್ಮಿಸುವುದಲ್ಲ, ಆದರೆ ಯೇಸುವಿನ ಒಂದೇ ಧರ್ಮಸಭೆಗೆ ಒಳಗಿನಿಂದ ಸೇವೆ ಸಲ್ಲಿಸುವುದು. ವೈವಿಧ್ಯತೆ ಒಂದು ವರವಾಗಿಯೂ ಸವಾಲಾಗಿಯೂ ಇರುವ ಸಂದರ್ಭದಲ್ಲಿಯೂ, ಧರ್ಮಸಭೆ ಬೇರೆ ಬೇರೆ ದ್ವೀಪಗಳ ಸಮೂಹವಲ್ಲ, ಆದರೆ ಒಂದೇ ದೇಹವೆಂಬುದನ್ನು ಸಹ ಒತ್ತಿಹೇಳಲಾಯಿತು.
ವರ ಮತ್ತು ಜವಾಬ್ದಾರಿ
ಪ್ರೇಷಿತ ಧರ್ಮಪ್ರಾಂತ್ಯದ ಇಸ್ರಾಯೇಲಿನ ಹೀಬ್ರೂ ಭಾಷೀಯ ಸಮಾಜದಲ್ಲಿ ವಾಸಿಸುವ ಕಥೋಲಿಕರನ್ನು ಒಂದಾಗಿಸುತ್ತದೆ: ಯೆಹೂದ್ಯ ಮತ್ತು ಯೆಹೂದ್ಯ ಅಲ್ಲದ ಮೂಲದ ಭಕ್ತರು, ಸ್ಥಳೀಯ ಕ್ರೈಸ್ತರು, ವಲಸಿಗರು ಮತ್ತು ರಷ್ಯನ್ ಭಾಷಾಭಿಮಾನಿ ಗುಂಪುಗಳು. ಇದರ ಸಮುದಾಯಗಳು ಜೆರುಸಲೇಮ್, ತೆಲ್ ಅವೀವ್–ಜಾಫಾ, ಹೈಫಾ, ಬಿಯರ್ ಶೇವಾ ಮತ್ತು ಟಿಬೇರಿಯಾಸ್ ನಗರಗಳಲ್ಲಿ ಸಕ್ರಿಯವಾಗಿವೆ.
“ಎಪ್ಪತ್ತು ವರ್ಷಗಳು ಒಂದು ವರ. ಅದು ಒಂದು ಜವಾಬ್ದಾರಿಯೂ ಹೌದು,” ಎಂದು 2021ರಿಂದ ಪ್ರತಿನಿಧಿಯಾಗಿರುವ ವಂ. ಗುರು ಪಿಯೊತ್ರ್ ಝೆಲಾಝ್ಕೋ ಹೇಳಿದರು. ಅವರು ಮುಂದುವರೆದು, ಸಮುದಾಯಗಳ ಕರ್ತವ್ಯವೆಂದರೆ “ನಿಷ್ಠಾವಂತರಾಗಿಯೂ, ಜಾಗರೂಕರಾಗಿಯೂ, ಧೈರ್ಯಶಾಲಿಗಳಾಗಿಯೂ ಉಳಿದುಕೊಳ್ಳುವುದು—ಕಾಲದ ಸೂಚನೆಗಳನ್ನು ಕೇಳುವುದು, ಮುಂದಿನ ತಲೆಮಾರಿನ ಬಗ್ಗೆ ಕಾಳಜಿ ವಹಿಸುವುದು ಮತ್ತು ನಂಬಿಕೆ, ಸಂವಾದ ಮತ್ತು ಕರುಣೆಯ ಸೇತುವೆಗಳನ್ನು ನಿರ್ಮಿಸುತ್ತಿರುವುದನ್ನು ಮುಂದುವರಿಸುವುದು” ಎಂದು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).