ಗುವಾಮ್‌ನಲ್ಲಿ ನಡೆದ ಓಶಿಯಾನಿಯಾ ಕಥೋಲಿಕ ಧರ್ಮಾಧ್ಯಕ್ಷರ ಮಹಾಸಂಘದ (FCBCO) ಸಭೆ ಗುವಾಮ್‌ನಲ್ಲಿ ನಡೆದ ಓಶಿಯಾನಿಯಾ ಕಥೋಲಿಕ ಧರ್ಮಾಧ್ಯಕ್ಷರ ಮಹಾಸಂಘದ (FCBCO) ಸಭೆ  

ಗುವಾಮ್ ಸಭೆಯಲ್ಲಿ ಆಧುನಿಕ ಗುಲಾಮಗಿರಿ ಮತ್ತು ವಲಸೆ ಕುರಿತು ಚರ್ಚಿಸಿದ ಓಶಿಯಾನಿಯಾದ ಧರ್ಮಾಧ್ಯಕ್ಷರು

ಗುವಾಮ್‌ನಲ್ಲಿ ನಡೆದ ಮೂರು ದಿನಗಳ ಸಭೆಯಲ್ಲಿ, ಓಶಿಯಾನಿಯಾ ಕಥೋಲಿಕ ಧರ್ಮಾಧ್ಯಕ್ಷರ ಮಹಾಸಂಘವು ಆಧುನಿಕ ಗುಲಾಮಗಿರಿ ಮತ್ತು ವಲಸೆ, ರೂಪುಗೊಳಿಕೆ, ಧರ್ಮಪಾಲನಾ ಸೇವೆ, ಜಾಗತೀಕರಣ ಮತ್ತು ಸಾಮಾಜಿಕ ಅನ್ಯಾಯಗಳ ಕುರಿತು ಗಮನ ಕೇಂದ್ರೀಕರಿಸಿತು.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

ಓಶಿಯಾನಿಯಾದ ವಿವಿಧ ಭಾಗಗಳಿಂದ ಆಗಮಿಸಿದ ಕಥೋಲಿಕ ಧರ್ಮಾಧ್ಯಕ್ಷರು ಮೇ 18ರಿಂದ 20ರವರೆಗೆ ಗುವಾಮ್‌ನಲ್ಲಿ ಸೇರಿ, ಆಧುನಿಕ ಗುಲಾಮಗಿರಿ, ವಲಸೆ ಮತ್ತು ಪೆಸಿಫಿಕ್ ಪ್ರದೇಶದಲ್ಲಿನ ಧರ್ಮಸೇವೆಯ ಭವಿಷ್ಯ ಸೇರಿದಂತೆ ಪ್ರಾದೇಶಿಕ ಸವಾಲುಗಳ ಕುರಿತು ಚರ್ಚಿಸಿದರು.

ಪತ್ರಿಕಾ ಪ್ರಕಟಣೆಯ ಪ್ರಕಾರ, ಓಶಿಯಾನಿಯಾ ಕಥೋಲಿಕ ಧರ್ಮಾಧ್ಯಕ್ಷರ ಮಹಾಸಂಘದ (FCBCO) ಕಾರ್ಯಕಾರಿ ಸಮಿತಿಯು, ಅಸಹಾಯಕ ವಲಸೆ ಕಾರ್ಮಿಕರಿಗೆ ಧರ್ಮಸಭೆ ಹೇಗೆ ಬೆಂಬಲ ನೀಡಬಹುದು ಮತ್ತು ಪ್ರದೇಶದಾದ್ಯಂತ ಮಾನವ ಘನತೆಯನ್ನು ಗೌರವಿಸುವ ವಲಸೆ ವ್ಯವಸ್ಥೆಯನ್ನು ಹೇಗೆ ಉತ್ತೇಜಿಸಬಹುದು ಎಂಬುದನ್ನು ಪರಿಗಣಿಸಿತು.

ಗ್ರಾಮೀಣ ಮತ್ತು ಪ್ರಾದೇಶಿಕ ಪ್ರದೇಶಗಳಲ್ಲಿ ತಾತ್ಕಾಲಿಕ ವಲಸೆ ಕಾರ್ಮಿಕರು ಎದುರಿಸುತ್ತಿರುವ ಆಧುನಿಕ ಗುಲಾಮಗಿರಿಯ ಅಪಾಯಗಳ ಕುರಿತು ನ್ಯೂ ಸೌತ್ ವೇಲ್ಸ್ ತನಿಖೆಗೆ ಮಹಾಸಂಘ ಇತ್ತೀಚೆಗೆ ಸಲ್ಲಿಸಿದ ವರದಿಯೂ ಸಭೆಯ ಪ್ರಮುಖ ವಿಷಯವಾಗಿತ್ತು ಎಂದು ಪ್ರಕಟಣೆ ತಿಳಿಸಿತು.

ವಿಶೇಷವಾಗಿ, ಸ್ಥಳಾಂತರಗೊಂಡ ಮತ್ತು ವಲಸೆ ಸಮುದಾಯಗಳ ಹಕ್ಕುಗಳು ಹಾಗೂ ಕಲ್ಯಾಣಕ್ಕಾಗಿ ಧ್ವನಿಯಾಗಿರುವ “ಮೈಗ್ರೆಂಟ್ಸ್ ಅಂಡ್ ರೆಫ್ಯೂಜೀಸ್ ಓಶಿಯಾನಿಯಾ ನೆಟ್ವರ್ಕ್”ಗೆ ತಮ್ಮ ನಿರಂತರ ಬದ್ಧತೆಯನ್ನು ಧರ್ಮಾಧ್ಯಕ್ಷರು ಪುನರುಚ್ಚರಿಸಿದರು.

ಪ್ರಾದೇಶಿಕ ಸಮಸ್ಯೆಗಳನ್ನು ಕಾರ್ಯರೂಪದಲ್ಲಿ ಎದುರಿಸುವ ಕುರಿತು ವ್ಯಾಪಕ ಚರ್ಚೆಗಳು

ಈ ಸಭೆಯಲ್ಲಿ, ವಲಸೆಯು ಜನರನ್ನು ಕಳುಹಿಸುವ ಮತ್ತು ಸ್ವೀಕರಿಸುವ ದೇಶಗಳ ಮೇಲೆ ಬೀರುವ ವ್ಯಾಪಕ ಪರಿಣಾಮಗಳ ಕುರಿತು ಹಾಗೂ ಸಾಮಾನ್ಯ ವಿಶ್ವಾಸಿಗಳು, ಯಾಜಕರು ಮತ್ತು ಧರ್ಮಾಧ್ಯಕ್ಷರಿಗಾಗಿ ಧರ್ಮಪಾಲನಾ ಸೇವೆ ಮತ್ತು ರೂಪುಗೊಳಿಕೆಯನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲಾಯಿತು.

ಇದಲ್ಲದೆ, ಓಶಿಯಾನಿಯಾದ ವಿಶಾಲ ಭೌಗೋಳಿಕ ವ್ಯಾಪ್ತಿಯ ನಡುವೆ ಪರಸ್ಪರ ಸಂಪರ್ಕವನ್ನು ಕಾಪಾಡಿಕೊಳ್ಳಲು ಡಿಜಿಟಲ್ ಸಂವಹನ ಸಾಧನಗಳನ್ನು ಬಳಸುವ ಮಹತ್ವವನ್ನೂ ಭಾಗವಹಿಸಿದವರು ಒತ್ತಿಹೇಳಿದರು. ಜಾಗತೀಕರಣ, ಪರಿಸರ ಸವಾಲುಗಳು ಮತ್ತು ಸಾಮಾಜಿಕ ಅನ್ಯಾಯಗಳಿಗೆ ಧರ್ಮಸಭೆ ಹೇಗೆ ಪ್ರತಿಕ್ರಿಯಿಸಬಹುದು ಎಂಬುದರ ಕುರಿತೂ ಅವರು ಚಿಂತನೆ ನಡೆಸಿದರು.

ಗುವಾಮ್ ಮಹಾಧರ್ಮಾಧ್ಯಕ್ಷರಾದ ರಾಯನ್ ಪಿ. ಜಿಮೆನೆಜ್ ಅವರ ನೇತೃತ್ವದಲ್ಲಿ ನಡೆದ ಈ ಸಭೆಯು, ಮರಿಯಾನಾ ದ್ವೀಪಗಳ ಮೂಲನಿವಾಸಿಗಳಾದ ಚಮೊರು ಜನಾಂಗದ  ಮಕ್ಕಳು ಸ್ಥಳೀಯ ಭಾಷೆಯಲ್ಲಿ ಪ್ರಾರ್ಥನೆ ಮತ್ತು ಹಾಡುಗಳೊಂದಿಗೆ ಸಾಂಪ್ರದಾಯಿಕ ಸ್ವಾಗತದೊಂದಿಗೆ ಸೋಮವಾರ ಆರಂಭವಾಯಿತು.

ಧರ್ಮಾಧ್ಯಕ್ಷರು ಗುವಾಮ್‌ನಲ್ಲಿ ಹುತಾತ್ಮರಾದ 17ನೇ ಶತಮಾನದ ಸ್ಪ್ಯಾನಿಷ್ ಜೆಸುಯಿಟ್ ಧರ್ಮಪ್ರಚಾರಕರಾದ ಧನ್ಯ ಡಿಯೆಗೊ ಲೂಯಿಸ್ ದೆ ಸಾನ್ ವಿಟೊರೆಸ್ ಅವರ ಪುಣ್ಯಕ್ಷೇತ್ರಕ್ಕೂ ಭೇಟಿ ನೀಡಿದರು. ಜೊತೆಗೆ, ಚಮೊರು ಸಂಸ್ಕೃತಿಯನ್ನು ಪರಿಚಯಿಸುವ ಆತಿಥ್ಯ ಸಮಾರಂಭದಲ್ಲೂ ಭಾಗವಹಿಸಿದರು.

ವಿಶ್ವಾಸದೊಂದಿಗೆ ಭವಿಷ್ಯದತ್ತ

ಇದಲ್ಲದೆ, 2028ರಲ್ಲಿ ಪವಿತ್ರ ಪರಮ ಪ್ರಸಾದ ಸಮಾವೇಶಕ್ಕೆ ಮುನ್ನ ಸಿಡ್ನಿಯಲ್ಲಿ ನಡೆಯಲಿರುವ ಓಶಿಯಾನಿಯಾದ ಎಲ್ಲಾ ಧರ್ಮಾಧ್ಯಕ್ಷರ ಪೂರ್ಣಸಭೆಯ ಕುರಿತು ಧರ್ಮಾಧ್ಯಕ್ಷರು ಪ್ರಾಥಮಿಕ ಚರ್ಚೆಗಳನ್ನು ಆರಂಭಿಸಿದರು ಎಂದು ಪ್ರಕಟಣೆ ತಿಳಿಸಿದೆ.

ಸಭೆಯ ಕಾರ್ಯಸೂಚಿಗಾಗಿ ಆರಂಭಿಕ ಸಲಹೆಗಳಲ್ಲಿ ಸಿನೋಡಾಲಿಟಿ ಕುರಿತ ನಿರಂತರ ಚಿಂತನೆ, ಯುವಜನರ ತೊಡಗಿಸಿಕೊಳ್ಳುವಿಕೆ, ರಕ್ಷಣೆ, ಮೂಲನಿವಾಸಿಗಳ ಧರ್ಮಸೇವೆ ಮತ್ತು ಪರಿಸರದ ಜವಾಬ್ದಾರಿಯುತ ಸಂರಕ್ಷಣೆ ಸೇರಿವೆ. ಈ ಸಭೆಯು, ದೂಲ್ಸೆ ನೋಂಬ್ರೆ ದೆ ಮರಿಯಾ ಮಹಾಗಿರ್ಜೆ–ಬಸಿಲಿಕಾದಲ್ಲಿ ನಡೆದ ದ್ವೀಪವ್ಯಾಪಿ ಪವಿತ್ರ ಬಲಿಪೂಜೆಯೊಂದಿಗೆ ಸಮಾಪ್ತಿಯಾಯಿತು. ಇದರಲ್ಲಿ ಸಾವಿರಕ್ಕೂ ಹೆಚ್ಚು ವಿಶ್ವಾಸಿಗಳು ಭಾಗವಹಿಸಿದರು.

ತಮ್ಮ ಪ್ರವಚನದಲ್ಲಿ, ಮಹಾಧರ್ಮಾಧ್ಯಕ್ಷ ಜಿಮೆನೆಜ್ ಅವರು ಓಶಿಯಾನಿಯಾದ ಧರ್ಮಸಭೆಯನ್ನು “ಏಕತೆ,” “ಧೈರ್ಯಶಾಲಿ ಸಾಕ್ಷ್ಯ” ಮತ್ತು “ಅನ್ಯಾಯ ಹಾಗೂ ಪರಿಸರ ಸಂಕಷ್ಟದ ನಡುವೆ ಸೃಷ್ಟಿಯ ಪ್ರವಾದಿ ಸಂರಕ್ಷಣೆ”ಗೆ ಕರೆ ನೀಡಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

20 ಮೇ 2026, 18:20