ಸೊಡಾಲಿತಿಯಂ ಚಳವಳಿಯ ಸದಸ್ಯರಿಂದ ವರ್ಷಗಳ ಕಾಲ ದೌರ್ಜನ್ಯಕ್ಕೆ ಒಳಗಾದ ಕ್ಯಾಂಪೆಸಿನೋಸ್‌ಗಳ ಮುಂದೆ ಪೆರುವಿನ ಕಾರ್ಡಿನಲ್‌ಗಳು ಮತ್ತು ಧರ್ಮಾಧ್ಯಕ್ಷರು ಮೊಣಕಾಲೂರಿದರು. ಸೊಡಾಲಿತಿಯಂ ಚಳವಳಿಯ ಸದಸ್ಯರಿಂದ ವರ್ಷಗಳ ಕಾಲ ದೌರ್ಜನ್ಯಕ್ಕೆ ಒಳಗಾದ ಕ್ಯಾಂಪೆಸಿನೋಸ್‌ಗಳ ಮುಂದೆ ಪೆರುವಿನ ಕಾರ್ಡಿನಲ್‌ಗಳು ಮತ್ತು ಧರ್ಮಾಧ್ಯಕ್ಷರು ಮೊಣಕಾಲೂರಿದರು. 

“ಸೊಡಾಲಿತಿಯಂ” ಹಿಂಸಾಚಾರಕ್ಕೆ ಬಲಿಯಾದವರ ಮುಂದೆ ಮೊಣಕಾಲೂರಿದ ಕಾರ್ಡಿನಲ್‌ಗಳು ಮತ್ತು ಧರ್ಮಾಧ್ಯಕ್ಷರು.

ಪ್ರಾಯಶ್ಚಿತ್ತ ಬಲಿಪೂಜೆಯ ಸಂದರ್ಭದಲ್ಲಿ, ವ್ಯಾಟಿಕನ್ ಪ್ರತಿನಿಧಿಗಳು ಮತ್ತು ಪೆರುವಿನ ಧರ್ಮಗುರುಗಳು ರೈತರ ಮುಂದೆ ಮೊಣಕಾಲೂರಿ ಕ್ಷಮೆ ಯಾಚಿಸಿದರು.2025ರಲ್ಲಿ ರದ್ದುಪಡಿಸಲ್ಪಟ್ಟ “ಸೊಡಾಲಿತಿಯಂ ಕ್ರಿಸ್ತಿಯಾನೆ ವಿಟೇ” ಎಂಬ ಧಾರ್ಮಿಕ ಸಂಘಟನೆಯ ಸದಸ್ಯರಿಂದ ಅನುಭವಿಸಿದ ದೌರ್ಜನ್ಯಗಳಿಗೆ ಪ್ರತಿಯಾಗಿ “ಪರಿಹಾರ” ಕೋರಿ, ಮೂಲನಿವಾಸಿ ಸಮುದಾಯವು ಹಲವು ವರ್ಷಗಳಿಂದ ಮನವಿಗಳನ್ನು ಸಲ್ಲಿಸುತ್ತಿತ್ತು.

ಲೇಖಕರು: ಸಲ್ವತೊರೆ ಚೇರ್ನ್ಯೂಝಿಯೋ

ವ್ಯಾಟಿಕನ್‌ನ ಕಾರ್ಡಿನಲ್‌ಗಳು, ಧರ್ಮಾಧ್ಯಕ್ಷರು ಮತ್ತು ಒಬ್ಬ ಧರ್ಮಗುರು ಸೇರಿದಂತೆ ಪ್ರತಿನಿಧಿ ಮಂಡಳಿ ಹಾಗೂ ಪೆರುವಿನ ಕ್ಯಾಥೊಲಿಕ್ ಧರ್ಮಸಭೆಯ ಪ್ರತಿನಿಧಿಗಳು, ತಡವಾಗಿ ಬಂದ ನ್ಯಾಯ ಮತ್ತು ಸೌಹಾರ್ದತೆಯಿಗಾಗಿ ಕ್ಷಮೆಯ ಸಂಕೇತವಾಗಿ ಪೆರುವಿನ ರೈತರ (ಕ್ಯಾಂಪೆಸಿನೋಸ್) ಮುಂದೆ ಮೊಣಕಾಲೂರಿದರು.ಇದು ಅತ್ಯಂತ ಸಂಕೇತಾತ್ಮಕ ಮತ್ತು ಅದೇ ಸಮಯದಲ್ಲಿ ಮನಮುಟ್ಟುವ ಘಟನೆಯಾಗಿದ್ದು, ಮೇ 23ರ ಸಂಜೆ ಉತ್ತರ ಪೆರುವಿನ ಪಿಯೂರಾ ನಗರದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಕಟಾಕಾವೋಸ್ ಪಟ್ಟಣದ ಸಂತ ಜುವಾನ್ ಬೌತಿಸ್ತ ದೇವಾಲಯದ ಬಲಿಪೀಠದ ಮುಂದೆ ನಡೆಯಿತು. ಪ್ಲಾಜಾ ದೆ ಆರ್ಮಾಸ್ ಕಡೆ ಮುಖ ಮಾಡಿರುವ ಆ ದೇವಾಲಯದಲ್ಲಿ, ಟಲ್ಲಾನ್ ಮೂಲನಿವಾಸಿ ಸಮುದಾಯದ ಕ್ಯಾಂಪೆಸಿನೋಸ್‌ಗಳಿಗೆ, ದೇಶದ ಧರ್ಮಸಭೆಯ ಪ್ರತಿನಿಧಿಗಳು ಪರಿಹಾರ ನೀಡಲು ಸಿದ್ಧರಾಗಿದ್ದಾರೆ ಎಂಬ ಸ್ಪಷ್ಟ ಸಂಕೇತವನ್ನು ನೀಡಲಾಯಿತು.“ಸೊಡಾಲಿತಿಯಂ ಆಫ್ ಕ್ರಿಶ್ಚಿಯನ್ ಲೈಫ್” (SCV) ಸಂಘಕ್ಕೆ ಸಂಬಂಧಿಸಿದ ಕೆಲವು ವಲಯಗಳು ಮತ್ತು ಸದಸ್ಯರಿಂದ ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ದೌರ್ಜನ್ಯಗಳು, ಹಿಂಸೆ, ಭೂಕಬಳಿಕೆ, ಕಿರುಕುಳ ಮತ್ತು ಸಾಮಾಜಿಕ ಹಾಗೂ ಕಾರ್ಮಿಕ ಹಕ್ಕುಗಳ ಉಲ್ಲಂಘನೆಗಳ ನಂತರ ಈ ಕ್ಷಮೆಯ ಕಾರ್ಯ ನೆರವೇರಿಸಲಾಯಿತು. ಪತ್ರಕರ್ತರಾದ ಪೆದ್ರೊ ಸಾಲಿನಾಸ್ ಮತ್ತು ಪಾವೊಲಾ ಉಗಾಝ್ ಅವರ ತನಿಖಾ ಕಾರ್ಯದ ಮೂಲಕ ಬಹಿರಂಗಗೊಂಡ ದೌರ್ಜನ್ಯ ಮತ್ತು ಭ್ರಷ್ಟಾಚಾರದ ಹಗರಣಗಳು ಸಾಬೀತಾದ ಹಿನ್ನೆಲೆಯಲ್ಲಿ, 2025ರಲ್ಲಿ ಪೂಜ್ಯ ಜಗದ್ಗುರು ಫ್ರಾನ್ಸಿಸ್ “ಸೊಡಾಲಿತಿಯಂ” ಎಂಬ ಧಾರ್ಮಿಕ ಸಂಘಟನೆಯನ್ನು ರದ್ದುಪಡಿಸಿದ್ದರು. 

“ನಾವು ಇಪ್ಪತ್ತು ವರ್ಷಗಳ ಹಿಂದೆಯೇ ಬರಬೇಕಾಗಿತ್ತು…”

ಈ ಕಾರ್ಯವು, “ಸೊಡಾಲಿತಿಯಂ” ಸಂಘದ ವಿಸರ್ಜನಾ ಪ್ರಕ್ರಿಯೆಯ ಅಪೋಸ್ತೋಲಿಕ ಆಯುಕ್ತರಾಗಿ ಒಂದು ವರ್ಷದ ಹಿಂದೆ ಪೆರುಗೆ ಕಳುಹಿಸಲ್ಪಟ್ಟಿದ್ದ ಧರ್ಮಸಿದ್ಧಾಂತ ವಿಭಾಗದ ಅಧಿಕಾರಿ ಮಾನ್ಯಧರ್ಮಗುರು ಜೋರ್ಡಿ ಬೆರ್ಟೊಮೆಯು ಅವರಿಗೆ ರೈತರು ಸಲ್ಲಿಸಿದ್ದ ಮನವಿಗಳಿಗೆ ಪ್ರತಿಕ್ರಿಯೆಯಾಗಿತ್ತು. ವ್ಯಾಟಿಕನ್ ಪ್ರತಿನಿಧಿ ಮಂಡಳಿಯ ಈ ಸಂಕೇತಾತ್ಮಕ ನಡೆ ಮತ್ತು ಕ್ಷಮೆಯಾಚನೆ, ಪೆಂತೆಕೋಸ್ತ ಮಹೋತ್ಸವದ ಅಂಗವಾಗಿ ಸಂತ ಜುವಾನ್ ಬೌತಿಸ್ತ ದೇವಾಲಯದಲ್ಲಿ ಆಚರಿಸಲಾದ ಪವಿತ್ರ ಬಲಿಪೂಜೆಯ ಪರಮಾವಧಿಯ ಕ್ಷಣವಾಗಿತ್ತು.ಮಾನ್ಯಧರ್ಮಗುರು ಬೆರ್ಟೊಮೆಯು ಅವರು ಪೆರುವಿನ ಅಪೋಸ್ತೋಲಿಕ ನಿಯೋಗದಲ್ಲಿ ಎರಡು ವಾರಗಳ ಕಾಲ ಸಂತ್ರಸ್ತರ ಮಾತುಗಳನ್ನು ಆಲಿಸಿದರು. ಅವರು ಲಿಮಾದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಕಾರ್ಲೊಸ್ ಕಾಸ್ಟಿಲ್ಲೊ ಮತ್ತಾಸ್ಸೊಲಿಯೊ, ಹುವಾಂಕಾಯೊ ನಿವೃತ್ತ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಪೆದ್ರೊ ಬರೇಟೊ, ಪಿಯೂರಾದ ಮಹಾಧರ್ಮಾಧ್ಯಕ್ಷ ಲುಸಿಯಾನೊ ಮಾಝಾ ಮತ್ತು ತ್ರುಹಿಲೊ ಮಹಾಧರ್ಮಾಧ್ಯಕ್ಷ ಅಲ್ಫ್ರೆಡೊ ವಿಸ್ಕಾರ್ರಾ ಅವರೊಂದಿಗೆ ಸೇರಿ ಬಲಿಪೂಜೆಯನ್ನು ಅರ್ಪಿಸಿದರು.

ಅಧಿಕಾರಿಗಳು, ನಾಗರಿಕ ಸಮಾಜದ ಸದಸ್ಯರು ಮತ್ತು ರಾಜತಾಂತ್ರಿಕ ಪ್ರತಿನಿಧಿಗಳೂ ಉಪಸ್ಥಿತರಿದ್ದರು. ಜೊತೆಗೆ, ಕೈಯಲ್ಲಿ ಬಿಳಿ ಹೂಗಳನ್ನು ಹಿಡಿದ ಕಟಾಕಾವೋಸ್‌ನ ರೈತರೂ ಭಾಗವಹಿಸಿದ್ದರು. “ಸೊಡಾಲಿತಿಯಂ”ಗೆ ಸಂಬಂಧಿಸಿದ ಕಂಪನಿಗಳ ಭೂ ಕಳ್ಳಸಾಗಣೆಯನ್ನು ವಿರೋಧಿಸಿ ಹೋರಾಡಿದ ನಂತರ ಮೃತರಾದ ಮೂಲನಿವಾಸಿ ನಾಯಕರು ಕ್ರಿಸ್ಟಿನೊ ಮೆಲ್ಚೊರ್ ಫ್ಲೊರೆಸ್ ಮತ್ತು ಗ್ವಾಡಲುಪೆ ಝಪಾಟಾ ಸೋಸಾ ಅವರ ಕುಟುಂಬ ಸದಸ್ಯರು, ಹಾಗೆಯೇ ಇತರ ಬಂಧುಗಳು ಮತ್ತು ಕಟಾಕಾವೋಸ್‌ನ ಕೃಷಿಕ ಸಮುದಾಯದ ಸದಸ್ಯರೂ ಈ ಕಾರ್ಯಕ್ರಮದಲ್ಲಿ ಸೇರಿದ್ದರು. “ನಾವು ಇಪ್ಪತ್ತು ವರ್ಷಗಳ ಹಿಂದೆಯೇ ಬರಬೇಕಾಗಿತ್ತು; ಇಂದು ನಾವು ಕ್ಷಮೆ ಯಾಚಿಸುತ್ತೇವೆ,” ಎಂದು ಮಾನ್ಯಧರ್ಮಗುರು ಮೊನ್ಸಿನೊರ್ ಬೆರ್ಟೊಮೆಯು ಹೇಳಿದರು.

ನವೀಕರಣ ಮತ್ತು ಭರವಸೆ

ತಮ್ಮ ಧರ್ಮೋಪದೇಶದಲ್ಲಿ, ಕಾರ್ಡಿನಲ್ ಕಾಸ್ಟಿಲ್ಲೊ ಮತ್ತಾಸ್ಸೊಲಿಯೊ ಅವರು “ನವೀಕರಣದ ಮಾರ್ಗದ ಮೇಲಿನ ಬದ್ಧತೆ” ಹಾಗೂ “ಮಾನವಕುಲಕ್ಕೆ ನಿಜವಾದ ಭರವಸೆಯ ಸಂಕೇತ” ಕುರಿತು ಮಾತನಾಡಿದರು.ಧರ್ಮಸಭೆಯೊಳಗಿನ “ಒಂದು ಗುಂಪು ಉಂಟುಮಾಡಿದ ದುರಂತ”ದ ನಂತರದ ಭರವಸೆಯ ಕುರಿತು ಅವರು ಉಲ್ಲೇಖಿಸಿದರು. ಆ ಗುಂಪು “ದುರದೃಷ್ಟವಶಾತ್ ಧರ್ಮಸಭೆಯ ಮೇಲೆ ನೆರಳು ಬೀರಿದೆ” ಎಂದರು.

“ಇಂದು ನಾವು ಈ ಅವಮಾನವನ್ನು ಮೀರಿ ಹೋಗಲು ಬಯಸುತ್ತೇವೆ” ಮತ್ತು ಪೂಜ್ಯ ಜಗದ್ಗುರು ಫ್ರಾನ್ಸಿಸ್ ಆರಂಭಿಸಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಮುಂದುವರಿಸುತ್ತಿರುವ “ಸೌಹಾರ್ದತೆಯ ಮಾರ್ಗ”ದಲ್ಲಿ ಮುಂದೆ ಸಾಗಲು ಬಯಸುತ್ತೇವೆ ಎಂದು ಅವರು ಹೇಳಿದರು. ಪೆರುವಿನಲ್ಲಿ ಧರ್ಮಾಧ್ಯಕ್ಷರಾಗಿದ್ದ ಸಮಯದಲ್ಲಿಯೇ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅನೇಕ ಸಂದರ್ಭಗಳಲ್ಲಿ “ಸೊಡಾಲಿತಿಯಂ” ಸಮಸ್ಯೆಯನ್ನು ಉಲ್ಲೇಖಿಸಿ, ಸಂತ್ರಸ್ತರಿಗೆ ಬೆಂಬಲ ನೀಡಿದ್ದರು. “ನಾವು ಇಲ್ಲಿ ಐಕ್ಯತೆಯ ಸಂಕೇತವಾಗಿ ಬಂದಿದ್ದೇವೆ. ಕೇವಲ ಧರ್ಮಸಭೆಯ ಪರವಾಗಿ ಕ್ಷಮೆ ಯಾಚಿಸಲು ಮಾತ್ರವಲ್ಲ — ಏಕೆಂದರೆ ಧರ್ಮಸಭೆಯೊಳಗಿನ ಒಂದು ಗುಂಪೇ ನೀವು ಇಂದಿಗೂ ಅನುಭವಿಸುತ್ತಿರುವ ಈ ಸಮಸ್ಯೆಯನ್ನು ಉಂಟುಮಾಡಿದೆ — ಆದರೆ ಧರ್ಮಸಭೆಯನ್ನು ನವೀಕರಿಸಲು ಮತ್ತು ಕೊನೆಯ ಇಬ್ಬರು ಪೂಜ್ಯ ಜಗದ್ಗುರುಗಳು ಮುಂದುವರಿಸಿದ ನವೀಕರಣದ ಮಾರ್ಗದಲ್ಲಿ ಸಾಗಲು ನಮ್ಮನ್ನು ಸಮರ್ಪಿಸಿಕೊಳ್ಳಲು ಬಂದಿದ್ದೇವೆ,” ಎಂದು ಕಾರ್ಡಿನಲ್ ಭರವಸೆ ನೀಡಿದರು.

“ನಾವು ಮರೆಯಬಾರದು,ಮರೆಯಲೇಬಾರದು,ಆದರೆ ನಾವು ತಿದ್ದಿಕೊಳ್ಳಲು ನೆನಪಿಸಿಕೊಳ್ಳುವುದನ್ನು ಕಲಿಯಬೇಕು. ಕೇವಲ ನಮ್ಮನ್ನು ತಿದ್ದಿಕೊಳ್ಳುವುದಕ್ಕಲ್ಲ — ಏಕೆಂದರೆ ನಾವು ಎಲ್ಲರೂ ಪಾಪಿಗಳೇ — ಆದರೆ ತಿದ್ದಲಾಗದವರಾಗಿದ್ದೇವೆ ಎಂದು ನಂಬುವವರನ್ನು ತಿದ್ದಲು ಸಹಾಯ ಮಾಡಲು. ತಮ್ಮನ್ನು ದೇವರೆಂದು ಭಾವಿಸುವವರನ್ನು ತಿದ್ದಲು ಕಾರ್ಯನಿರ್ವಹಿಸಬೇಕು; ಆದರೆ ನಾವು ದೇವರಲ್ಲ, ನಾವು ಮಾನವರು, ಪಾಪಿಗಳು. ನಾವು ಬದಲಾಗಬಹುದು, ಬದಲಾಗಲೇಬೇಕು ಮತ್ತು ಉತ್ತಮರಾಗಬೇಕು.”

ಶಾಂತಿಗಾಗಿ ಮನವಿ

ನಂತರ ಕಾರ್ಡಿನಲ್ ಮತ್ತಾಸ್ಸೊಲಿಯೊ ಅವರು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ತಮ್ಮ ಜಗದ್ಗುರು ಪದವಿಯ ಕೇಂದ್ರ ವಿಷಯವನ್ನಾಗಿ ಮಾಡಿರುವ “ನಿರಾಯುಧ ಮತ್ತು ನಿಶ್ಯಸ್ತ್ರೀಕರಣಗೊಳಿಸುವ ಶಾಂತಿ”ಗಾಗಿ ಕರೆ ನೀಡಿದರು. ಈ ಶಾಂತಿ “ಶಸ್ತ್ರಾಸ್ತ್ರಗಳಿಂದ” ಅಲ್ಲ, ಆದರೆ “ಮಾತುಗಳ” ಮೂಲಕ, “ಸಂಕೇತಗಳ” ಮೂಲಕ ಸಾಧಿಸಲ್ಪಡುತ್ತದೆ ಎಂದು ಅವರು ಹೇಳಿದರು. ಸಾಮಾನ್ಯ ಜನರು ಈ ನಿಟ್ಟಿನಲ್ಲಿ“ಮುಂಚೂಣಿಯವರಾಗಲು ಕರೆಯಲ್ಪಟ್ಟಿದ್ದಾರೆ” ಮತ್ತು “ಒಟ್ಟಾಗಿ ನಿರ್ಮಿಸಲು ಕರೆಯಲ್ಪಟ್ಟಿದ್ದಾರೆ.” ಜಗತ್ತಿನ ಎಲ್ಲ ಜನಪ್ರಿಯ ಚಳವಳಿಗಳಲ್ಲಿಯೂ ಇದೇ ನಡೆಯುತ್ತಿದೆ — ಅವು ಮೌನವಾಗಿ ಅಡಗಿಕೊಂಡಿದ್ದರೂ ಈಗ ಎಚ್ಚೆತ್ತುಕೊಂಡು, ಮಾನವಕುಲವನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತಿವೆ ಎಂದು ಅವರು ಹೇಳಿದರು.

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಬದ್ಧತೆ, ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರ ಮನವಿ

“ಶಾಂತಿಯನ್ನು ಶಾಂತಿಯ ಮೂಲಕ, ಸಂವಾದದ ಮೂಲಕ, ಜನರನ್ನು ಮತ್ತು ಪ್ರತಿಯೊಬ್ಬರಲ್ಲಿರುವ ಮೌಲ್ಯವನ್ನು ಗುರುತಿಸುವ ಮೂಲಕ ನಿರ್ಮಿಸಿದರೆ, ಆಗ ಅದು ಶಾಶ್ವತವಾಗಿರುತ್ತದೆ,” ಎಂದು ಕಾರ್ಡಿನಲ್ ಕಾಸ್ಟಿಲ್ಲೊ ಹೇಳಿದರು. ಅವರು ಮತ್ತೊಮ್ಮೆ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಮಾತುಗಳನ್ನು ಉಲ್ಲೇಖಿಸಿದರು.

ಅದೇ ವೇಳೆ, “ಪೂಜ್ಯ ಜಗದ್ಗುರು ಫ್ರಾನ್ಸಿಸ್ ಬಹಳ ಇಷ್ಟಪಟ್ಟು ಹೇಳುತ್ತಿದ್ದ ಒಂದು ವಿಷಯವನ್ನೂ” ಅವರು ಸ್ಮರಿಸಿದರು: ಅವರು “ನಿಮ್ಮನ್ನು ಬಹಳ ಪ್ರೀತಿಸುತ್ತಿದ್ದರು” ಮತ್ತು “ಕೆಲಸ ಮಾಡುವ ಜನರು ಬಹಳ ಕಷ್ಟ ಅನುಭವಿಸುತ್ತಾರೆ, ಆದರೆ ಅವರು ಎಂದಿಗೂ ಭರವಸೆಯನ್ನು ಕಳೆದುಕೊಳ್ಳಬಾರದು” ಎಂಬುದನ್ನು ವಿಶೇಷವಾಗಿ ನೆನಪಿಸುತ್ತಿದ್ದರು. ತಮ್ಮ ಮರಣಕ್ಕೂ ಮುನ್ನ ಅರ್ಜೆಂಟೀನಾದ ಪೂಜ್ಯ ಜಗದ್ಗುರುಗಳೊಂದಿಗೆ ನಡೆಸಿದ ಕೊನೆಯ ಮಾತುಕತೆಗಳಲ್ಲಿ ಒಂದನ್ನು ಕಾರ್ಡಿನಲ್ ಸ್ಮರಿಸಿದರು: “ನೀವು ಜನಪ್ರಿಯ ಚಳವಳಿಗಳ ಬಗ್ಗೆ ಮಾತನಾಡುತ್ತೀರಿ, ಆದರೆ ಅವು ಪ್ರಸಿದ್ಧ ಚಳವಳಿಗಳಲ್ಲ.” ಅದಕ್ಕೆ ಪೂಜ್ಯ ಜಗದ್ಗುರು ಉತ್ತರಿಸಿದರು: “ಹೌದು, ಆದರೆ ಅವು ಬೀಜಗಳಂತಿವೆ, ಮತ್ತು ಅವು ಎಲ್ಲೆಡೆ ಇವೆ. ಅವು ಮರೆಮಾಚಲ್ಪಟ್ಟಿವೆ, ಆದರೆ ಒಂದು ದಿನ ಹೊರಹೊಮ್ಮಲಿವೆ.”

ಆದ್ದರಿಂದ, ಕಾರ್ಡಿನಲ್ ಮತ್ತಾಸ್ಸೊಲಿಯೊ ಅವರ ಮನವಿಯು ಭರವಸೆಯ ಸಂದೇಶವನ್ನು ಹರಡುವುದಾಗಿತ್ತು — “ಇಂದು ಎಂದಿಗಿಂತಲೂ ಹೆಚ್ಚು ತುರ್ತಾಗಿ ಅಗತ್ಯವಿರುವ” ಸಂದೇಶ. ಏಕೆಂದರೆ “ಲೋಕವನ್ನು ನಾಶಮಾಡಲು ಬಯಸುವ ಶಕ್ತಿಶಾಲಿ ಶಕ್ತಿಗಳ” ಎದುರು ಮಾನವಕುಲ ನಿಂತಿದೆ ಎಂದು ಅವರು ಹೇಳಿದರು. ಆದರೆ, “ಲೋಕವು ದೇವರಿಗೆ ಸೇರಿದ್ದು ಮತ್ತು ಎಲ್ಲರಿಗೂ ಸೇರಿದೆ. ಆದ್ದರಿಂದ ಇಂದಿನ ಸುವಾರ್ತೆಯು ಹೇಳುವಂತೆ ನಾವು ನಡೆಯೋಣ: ಕ್ಷಮಿಸುವ ಮೂಲಕ, ನಾವು ಮತ್ತೊಬ್ಬರ ಮೌಲ್ಯವನ್ನು ಗುರುತಿಸುತ್ತೇವೆ.”  ದೇವಾಲಯದಲ್ಲಿ ಸೇರಿದ್ದ ಕ್ಯಾಂಪೆಸಿನೋಸ್‌ಗಳಿಗೆ (ರೈತರಿಗೆ)   “ನಮಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು” ಎಂದು ಲಿಮಾದ ಮಹಾಧರ್ಮಾಧ್ಯಕ್ಷರು ಸಮಾರೋಪದಲ್ಲಿ ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

25 ಮೇ 2026, 18:57