ವಂದನೀಯ ಗುರು ಜಾಕ್ ಹೋ ವಂದನೀಯ ಗುರು ಜಾಕ್ ಹೋ 

ಆಸ್ಟ್ರೇಲಿಯಾದ ದೂರದ ನಾಡಿನಿಂದ ವ್ಯಾಟಿಕನ್ ನಗರದವರೆಗೆ: “ಸಣ್ಣದಾದರೂ ಶಕ್ತಿಶಾಲಿ” ಕಥೋಲಿಕ ಸಮುದಾಯ

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ರಾಜ್ಯದ ಒಂದು ಸಣ್ಣ ಪಟ್ಟಣದಿಂದ ಬಂದ ಮೂವರು ಯಾತ್ರಿಕರಿಗೆ, ಸಾಮಾನ್ಯ ಸಾರ್ವಜನಿಕ ಭೇಟಿಯ ನಂತರ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರನ್ನು ಭೇಟಿಯಾದ ಅನುಭವವು, ತಮ್ಮ “ಭೌಗೋಳಿಕವಾಗಿ ದೂರವಾದ” ತಾಯ್ನಾಡು ಮತ್ತು ಕಥೋಲಿಕ ಧರ್ಮಸಭೆಯ ಹೃದಯಭಾಗದ ನಡುವಿನ ಅಂತರವನ್ನು ಕಡಿಮೆ ಮಾಡಿದಂತಾಯಿತು.

ಲೇಖಕರು: ಕೀಲ್ ಗಸ್ಸಿ

ಪ್ರತಿ ಬುಧವಾರವೂ ಸಾವಿರಾರು ಯಾತ್ರಿಕರು ಪೂಜ್ಯ ಜಗದ್ಗುರುಗಳ ವಾರಾಂತ್ಯದ ಸಾರ್ವಜನಿಕ ಭೇಟಿಯಲ್ಲಿ ಭಾಗವಹಿಸಲು ಸಂತ ಪೇತ್ರರ ಚೌಕದಲ್ಲಿ ತುಂಬಿರುತ್ತಾರೆ. ಟಾಂಜಾನಿಯಾ ಮತ್ತು ಭಾರತದಿಂದ ಬ್ರೆಜಿಲ್ ಹಾಗೂ ಕೆನಡಾವರೆಗೆ, ಜಗತ್ತಿನ ಅನೇಕ ದೇಶಗಳ ಪ್ರತಿನಿಧಿಗಳು ಅಲ್ಲಿ ಸದಾ ಕಾಣಿಸಿಕೊಳ್ಳುತ್ತಾರೆ.

ಮೇ 20ರಂದು, ಆಸ್ಟ್ರೇಲಿಯಾದಿಂದ ಸುಮಾರು 10,000 ಮೈಲುಗಳು (15,980 ಕಿ.ಮೀ.) ಪ್ರಯಾಣಿಸಿ, ಒಂದು ಸಣ್ಣ ಯಾತ್ರಿಕರ ತಂಡ ವ್ಯಾಟಿಕನ್ ನಗರ ತಲುಪಿತು. ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರನ್ನು ಭೇಟಿಯಾಗಿ ಅವರೊಂದಿಗೆ ತಮ್ಮ ಕಥೆಯನ್ನು ಹಂಚಿಕೊಳ್ಳುವ ಅವಕಾಶಕ್ಕಾಗಿ ಅವರು ಈ ದೀರ್ಘ ಪ್ರಯಾಣವನ್ನು ಕೈಗೊಂಡಿದ್ದರು.

ವಾರ್ಷಿಕೋತ್ಸವದ ಆಚರಣೆ

ಕ್ವೀನ್ಸ್‌ಲ್ಯಾಂಡ್‌ನ ಚೈಲ್ಡರ್ಸ್ ಎಂಬ ಸಣ್ಣ ಪಟ್ಟಣದ ನಿವಾಸಿಗಳಾದ ವಂದನೀಯ ಗುರು ಜಾಕ್ ಹೋ ಹಾಗೂ ಜೋ ಮತ್ತು ಜಿಲಿಯನ್ ರುಸ್ಸೋ ಅವರು ಪ್ರತ್ಯೇಕವಾಗಿ ರೋಮ್ ಯಾತ್ರೆಯನ್ನು ಯೋಜಿಸಿದ್ದರು. ಆದರೆ ನಂತರ, ತಮ್ಮ ವೈಯಕ್ತಿಕ ಯಾತ್ರೆಗಳನ್ನು ಒಂದು ಸಾಮೂಹಿಕ ಆಚರಣೆಯಾಗಿ ರೂಪಿಸಬಹುದೆಂದು ಅವರು ಅರಿತುಕೊಂಡರು.

ಈ ಮೂವರೂ “ಪವಿತ್ರ ಹೃದಯ ಕಥೋಲಿಕ ಧರ್ಮಕೇಂದ್ರದ” ಸದಸ್ಯರಾಗಿದ್ದಾರೆ. ಅವರು ತಮ್ಮ ಧರ್ಮಕೇಂದ್ರದ ಪ್ರಾಥಮಿಕ ಶಾಲೆಯಾದ “ಸಂತ ಜೋಸೆಫ್ ಕಥೋಲಿಕ ಶಾಲೆ”ಯ ಸ್ಥಾಪನೆಯ 100ನೇ ವಾರ್ಷಿಕೋತ್ಸವವನ್ನು ಸ್ಮರಿಸಲು ನಿರ್ಧರಿಸಿದರು. ಈ ಶಾಲೆಯನ್ನು 1926ರಲ್ಲಿ ಸಂತ ಜೋಸೆಫ್ ಧರ್ಮಭಗಿನಿಯರು ಸ್ಥಾಪಿಸಿದ್ದರು ಮತ್ತು ಇಂದು ಸುಮಾರು 200 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ.

ಚೈಲ್ಡರ್ಸ್ ಪಟ್ಟಣವು ಚಿಕ್ಕದಾಗಿದ್ದರೂ, ಈ ಯಾತ್ರೆಯನ್ನು ಅವರು “ನಮ್ಮ ಸಣ್ಣ ಪಟ್ಟಣವನ್ನು ವಿಶ್ವವ್ಯಾಪಿ ಧರ್ಮಸಭೆಯೊಂದಿಗೆ ಸಂಪರ್ಕಿಸುವ ಅವಕಾಶ”ವೆಂದು ಕಂಡರು. ಜೊತೆಗೆ, “ಪೂಜ್ಯ ಜಗದ್ಗುರುಗಳ ಆಶೀರ್ವಾದದಂತ ಏನನ್ನಾದರೂ ನಮ್ಮ ಸಣ್ಣ ಪಟ್ಟಣಕ್ಕೆ ಹಿಂದಕ್ಕೆ ಕೊಂಡೊಯ್ಯುವ ಅವಕಾಶ”ವೆಂದು ಅವರು ಭಾವಿಸಿದರು ಎಂದು ಸಾರ್ವಜನಿಕ ಭೇಟಿಯ ನಂತರ ವಂದನೀಯ ಗುರು ಜಾಕ್ ವ್ಯಾಟಿಕನ್ ಸುದ್ದಿ ಸಂಸ್ಥೆಗೆ ತಿಳಿಸಿದರು. 

ಮತ್ತು ನಿಜವಾಗಿಯೂ ಅದನ್ನು ಗಳಿಸಿದರೂ ಕೂಡ. ಅವರು ಕೇವಲ ಸಾರ್ವಜನಿಕ ಭೇಟಿಯಲ್ಲಿ ಭಾಗವಹಿಸುವ ಅವಕಾಶವನ್ನು ಮಾತ್ರವಲ್ಲ, ಪೂಜ್ಯ ಜಗದ್ಗುರುಗಳನ್ನು ವೈಯಕ್ತಿಕವಾಗಿ ಭೇಟಿಯಾಗುವ ಭಾಗ್ಯವನ್ನೂ ಹೊಂದಿದರು.

“ಪವಿತ್ರ ಹೃದಯ” ಧರ್ಮಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ವಂದನೀಯ ಗುರು ಜಾಕ್ ಅವರಿಗೆ, ಇದು ಅಸಾಧಾರಣ ಅನುಭವವಾಗಿತ್ತು. ಮತ್ತು ಅದು ತಮ್ಮ ವೈಯಕ್ತಿಕ ಅನುಭವಕ್ಕಿಂತಲೂ ದೊಡ್ಡದ್ದಾಗಿದೆ ಎಂದು ವರ್ಣಿಸಿದರು.

“ಈ ಯಾತ್ರೆಯಲ್ಲಿ ನನ್ನ ಪ್ರಾರ್ಥನೆಗಳಲ್ಲಿ ನಾನು ಹೊತ್ತುಕೊಂಡು ಬಂದಿರುವ ಜನರು — ನಮ್ಮ ಧರ್ಮಕೇಂದ್ರದ ವಿಶ್ವಾಸಿಗಳು, ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಕುಟುಂಬಗಳು — ನಾವು ಭೌಗೋಳಿಕವಾಗಿ ದೂರದಲ್ಲಿದ್ದರೂ, ನಾವು ಒಂಟಿಯಲ್ಲ ಎಂಬ ಭಾವನೆಯನ್ನು ನೀಡುತ್ತದೆ,” ಎಂದು ಅವರು ಹೇಳಿದರು.

ಆಸ್ಟ್ರೇಲಿಯಾದಲ್ಲಿನ ಕಥೋಲಿಕ ವಿಶ್ವಾಸ

ಈ ಮೂವರು ಯಾತ್ರಿಕರಿಗಾಗಿ, ಕಥೋಲಿಕ ವಿಶ್ವಾಸವು ಅವರ ಜೀವನದ ಅವಿಭಾಜ್ಯ ಭಾಗವಾಗಿದೆ. ಆದರೆ, ಅವರು ಆಸ್ಟ್ರೇಲಿಯಾದ ಜನಸಂಖ್ಯೆಯ ಅತಿ ಸಣ್ಣ ಶೇಕಡಾವಾರು ಭಾಗಕ್ಕೆ ಸೇರಿದ್ದಾರೆ. ಸಂಪೂರ್ಣ ಜನಸಂಖ್ಯೆಯಲ್ಲಿ ಕೇವಲ ಸುಮಾರು 20% ಜನರು ಮಾತ್ರ ಕಥೋಲಿಕರಾಗಿದ್ದು, ಸಾಮಾನ್ಯ ವಾರಾಂತ್ಯದಲ್ಲಿ ಕೇವಲ 8% ಜನರು ಮಾತ್ರ ಪವಿತ್ರ ಬಲಿದಾನದಲ್ಲಿ ಭಾಗವಹಿಸುತ್ತಾರೆ.

ಈ ಸವಾಲಿನ ಬಗ್ಗೆ ವಂದನೀಯ ಗುರು ಜಾಕ್ ಅವರಿಗೆ ಸಂಪೂರ್ಣ ಅರಿವು ಇದೆ. “ಧರ್ಮಸಭೆಯ ದೃಷ್ಟಿಯಿಂದ, ವಿಶೇಷವಾಗಿ ನಮ್ಮ ಧರ್ಮಕೇಂದ್ರದಲ್ಲಿ, ನಮ್ಮ ಸಂಖ್ಯೆ ತುಂಬಾ ಚಿಕ್ಕವು. ಅತಿ ಸಣ್ಣ ಪಟ್ಟಣಗಳಲ್ಲಿ ಅತಿ ಕಡಿಮೆ ಸಂಖ್ಯೆಯ ಜನರಿದ್ದೇವೆ,” ಎಂದು ಅವರು ಒತ್ತಿಹೇಳಿದರು. ಸುಮಾರು 2,000 ಜನಸಂಖ್ಯೆಯಿರುವ ಚೈಲ್ಡರ್ಸ್ ಪಟ್ಟಣದಲ್ಲಿ ಈ ಸವಾಲು ನಿಜವಾಗಿಯೂ ಗಂಭೀರವಾಗಿದೆ, ವಿಶೇಷವಾಗಿ ಯುವಜನರನ್ನು ಮತ್ತೆ ಧರ್ಮಸಭೆಯತ್ತ ಕರೆತರುವ ವಿಷಯದಲ್ಲಿ.

ಈ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ, ವಂದನೀಯ ಗುರು ಜಾಕ್ ಯುವಜನರನ್ನು ಸೆಳೆಯುವ ಸಾಮಾನ್ಯ ವಿಧಾನಕ್ಕಿಂತ ವಿಭಿನ್ನವಾದ ಮಾರ್ಗವನ್ನು ಅನುಸರಿಸಿದರು. ಯುವಜನರು ಸೇರಲು ಕಾರ್ಯಕ್ರಮಗಳನ್ನು ರೂಪಿಸುವುದಕ್ಕಿಂತ, ಅವರಿಗೆ ಯಾವ ವಿಷಯಗಳಲ್ಲಿ ಆಸಕ್ತಿ ಇದೆ ಎಂಬುದನ್ನು ಅರಿತುಕೊಳ್ಳಲು ಅವರು ಪ್ರಯತ್ನಿಸಿದರು. ನಂತರ, ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಧರ್ಮಕೇಂದ್ರದ ಸೇವೆಯಲ್ಲಿ ಬಳಸಿಕೊಳ್ಳಲು ಅವಕಾಶಗಳನ್ನು ಸೃಷ್ಟಿಸಿದರು.

“ಪವಿತ್ರ ಹೃದಯ” ಧರ್ಮಕೇಂದ್ರದ ವಿಶ್ವಾಸಿಗಳ ಸಂಖ್ಯೆ ಕಡಿಮೆ ಇದ್ದರೂ, ಅದರಿಂದ ಅದು ಸಾಧಾರಣ ಧರ್ಮಕೇಂದ್ರವಲ್ಲ ಎಂದು ವಂದನೀಯ ಗುರು ಜಾಕ್ ಒತ್ತಿಹೇಳಿದರು. “ನಾವು ದೇಶದ ಅತಿ ಚಿಕ್ಕ ಧರ್ಮಕ್ಷೇತ್  ಧರ್ಮಕೇಂದ್ರಗಳಲ್ಲಿ ಒಂದಾಗಿದ್ದರೂ, ಅದರಿಂದ ನಾವು ಅತ್ಯುತ್ತಮ, ಅತ್ಯಂತ ನವೀನ, ಅತ್ಯಂತ ಚುರುಕಾದ ಮತ್ತು ಅತ್ಯಂತ ಸೃಜನಾತ್ಮಕ  ಧರ್ಮಕೇಂದ್ರವಾಗಲು ಸಾಧ್ಯವಿಲ್ಲ ಎಂಬುದಲ್ಲ,” ಎಂದು ಅವರು ತಮ್ಮ ವಿಶ್ವಾಸಿಗಳಿಗೆ ಆಗಾಗ ಹೇಳುತ್ತೇನೆ ಎಂದು ಹಂಚಿಕೊಂಡರು.

ಅವರ ಅಭಿಪ್ರಾಯದಲ್ಲಿ, ಅವರ ಭರವಸೆ ಅಡಗಿರುವುದು “ನಾವು ಚಿಕ್ಕವರಾಗಿದ್ದರೂ, ಶಕ್ತಿಶಾಲಿಗಳಾಗಿರಬಹುದು” ಎಂಬ ವಿಶ್ವಾಸದಲ್ಲಿ.

ತಲೆಮಾರುಗಳ ಪರಂಪರೆ

ಸಮುದಾಯದ ಯುವಜನರಲ್ಲಿ ಹೂಡಿಕೆ ಮಾಡುವುದು ಜಿಲಿಯನ್ ಮತ್ತು ಜೋ ಅವರ ಮನಸ್ಸಿಗೆ ಅತ್ಯಂತ ಹತ್ತಿರವಾದ ವಿಷಯವಾಗಿದೆ. ಅವರು ಧರ್ಮಕೇಂದ್ರದ ಜೀವನದಲ್ಲೂ ಮತ್ತು ಶಾಲಾ ಸಮುದಾಯದಲ್ಲೂ ಸಕ್ರಿಯರಾಗಿದ್ದಾರೆ. ಜೋ ಅವರು “ಪವಿತ್ರ ಹೃದಯ” ಧರ್ಮಕೇಂದ್ರದ ಧರ್ಮಪಾಲನಾ ನಾಯಕತ್ವ ತಂಡದ ಸದಸ್ಯರಾಗಿದ್ದು, ಧರ್ಮಕೇಂದ್ರದ ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿದ್ದಾರೆ. ಜೊತೆಗೆ, ಕಳೆದ 70 ವರ್ಷಗಳಿಂದ ಮೂರು ತಲೆಮಾರುಗಳ ಕಾಲ ಅವರ ಕುಟುಂಬ ಈ ಶಾಲೆಯೊಂದಿಗೆ ಸಂಬಂಧ ಹೊಂದಿದೆ.

ಸಂತ ಜೋಸೆಫ್ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ಜೋ ಅವರಿಗೆ, ತಮ್ಮ ಕುಟುಂಬವು ಕಳೆದ 70 ವರ್ಷಗಳಿಂದ ಮೂರು ತಲೆಮಾರುಗಳ ಕಾಲ ಸಂಬಂಧ ಹೊಂದಿರುವ ಧರ್ಮಕೇಂದ್ರ ಮತ್ತು ಶಾಲೆಯನ್ನು ಪ್ರತಿನಿಧಿಸುವ ಈ ಪೂಜ್ಯ ಜಗದ್ಗುರುಗಳ ಭೇಟಿ ಒಂದು ವಿಶಿಷ್ಟ ಅನುಭವವಾಗಿತ್ತು. ಇದು ಒಂದು ಮಹಾ ಗೌರವವಾಗಿದ್ದು, ಇಂತಹ ಭೇಟಿಯನ್ನು ತಾವು ಎಂದಿಗೂ ಕಲ್ಪಿಸಿಕೊಂಡಿರಲಿಲ್ಲ ಎಂದು ಅವರು ಹಂಚಿಕೊಂಡರು.

ಮೊದಲ ಆಸ್ಟ್ರೇಲಿಯನ್ ಸಂತರಿಂದ

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರನ್ನು ಮುಖಾಮುಖಿಯಾಗಿ ಭೇಟಿಯಾದಾಗ, ಈ ಮೂವರು ಯಾತ್ರಿಕರು ತಮ್ಮ ರೋಮ್ ಯಾತ್ರೆಯ ಮುಖ್ಯ ಉದ್ದೇಶವನ್ನು ಮರೆಯಲಿಲ್ಲ. ಅವರು ಪೂಜ್ಯ ಜಗದ್ಗುರುಗಳಿಗೆ ನೀಡಿದ ವಿಶೇಷ ಕಾಣಿಕೆಗಳ ಮೂಲಕ, ಚೈಲ್ಡರ್ಸ್‌ನ ಎಲ್ಲಾ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಕುಟುಂಬಗಳನ್ನು ತಮ್ಮೊಂದಿಗೆ ಕೊಂಡೊಯ್ದರು.

ಹಳೆಯ ಸಂಪ್ರದಾಯವೊಂದನ್ನು ಸ್ಮರಿಸುತ್ತಾ, ಆಸ್ಟ್ರೇಲಿಯನ್ ಗುರುಗಳಾದ ವಂದನೀಯ ಗುರು ಜಾಕ್ ಅವರು, ಪೂಜ್ಯ ಜಗದ್ಗುರುಗಳ ಬಿಳಿ ತಲೆಟೋಪಿಯಾದ “ಜುಕೇಟೊ”ಗೆ ಬದಲಾಗಿ, ಹಿಂದಿನ ದಿನ ಖರೀದಿಸಿದ್ದ ಮತ್ತೊಂದು ಜುಕೇಟೊವನ್ನು ನೀಡಿದರು. ಚೈಲ್ಡರ್ಸ್‌ನ ವಿದ್ಯಾರ್ಥಿಗಳಿಗೆ ಮರಳಿ ಕೊಂಡೊಯ್ಯುವ ಉದ್ದೇಶದಿಂದ ಮಾಡಿದ ಈ ಸರಳವಾದರೂ ಮಹತ್ವಪೂರ್ಣವಾದ ಸಂಕೇತ ವಿಶೇಷವಾಗಿತ್ತು.

ಎರಡನೇ ಕಾಣಿಕೆ, ದಕ್ಷಿಣ ಆಸ್ಟ್ರೇಲಿಯಾದ ಪೆನೋಲಾದಲ್ಲಿ ಆಸ್ಟ್ರೇಲಿಯಾದ ಮೊದಲ ಮತ್ತು ಪ್ರಸ್ತುತ ಏಕೈಕ ಸಂತರಾದ ಶಿಲುಬೆಯ ಸಂತ ಮೇರಿ ಮ್ಯಾಕ್ಕಿಲೋಪ್ ಸ್ಥಾಪಿಸಿದ್ದ ಮೂಲ ಶಾಲೆಯ ನೆಲದ ಮರದ ಫಲಕಗಳಿಂದ ತಯಾರಿಸಲಾದ ಸರಳ ಮರದ ಶಿಲುಬೆಯಾಗಿತ್ತು. ಇದು ಅವರು ನಿರ್ಮಿಸಿದ ಮೊದಲ ಶಾಲೆಗಳಲ್ಲೊಂದು ಆಗಿದ್ದು, ಇಂತಹ ಐತಿಹಾಸಿಕ ಭಾಗವೊಂದನ್ನು ಹೊಂದಿರುವುದು ಅತ್ಯಂತ ವಿಶೇಷವಾಗಿದೆ ಎಂದು ವಂದನೀಯ ಗುರು ಜಾಕ್ ಹೇಳಿದರು.

ಅವರು ಪೂಜ್ಯ ಜಗದ್ಗುರುಗಳಿಗೆ ಶತಮಾನೋತ್ಸವ ಸ್ಮರಣಾರ್ಥ ಶಾಲಾ ಅಂಗಿಯೊಂದನ್ನೂ, ಧರ್ಮಕ್ಷೇತ್ರದ ಯುವಜನರು ತಯಾರಿಸಿದ ಸಣ್ಣ ಮೇಣದ ಬತ್ತಿಯೊಂದನ್ನೂ ಕಾಣಿಕೆಯಾಗಿ ನೀಡಿದರು. ತಮ್ಮ ಸಮುದಾಯ ಚಿಕ್ಕದಾಗಿದ್ದರೂ, “ಕತ್ತಲೆಯ ಸ್ಥಳದಲ್ಲಿ ಸಣ್ಣ ಬೆಳಕು ಹೊತ್ತಿದಾಗ ಅದು ಪ್ರಕಾಶಿಸುತ್ತದೆ” ಎಂಬುದನ್ನು ಇದು ನೆನಪಿಸುತ್ತದೆ ಎಂದು ವಂದನೀಯ ಗುರು ಜಾಕ್ ಹೇಳಿದರು.

ಈಗ, ಆಸ್ಟ್ರೇಲಿಯಾದ ಚೈಲ್ಡರ್ಸ್‌ನಲ್ಲಿರುವ ಈ “ಸಣ್ಣದಾದರೂ ಶಕ್ತಿಶಾಲಿ” ಕಥೋಲಿಕ ಸಮುದಾಯವು, ವಿಶ್ವವ್ಯಾಪಿ ಧರ್ಮಸಭೆಯೊಂದಿಗಿನ ತಮ್ಮ ಸಂಬಂಧದ ಒಂದು ಮಾತ್ರವಲ್ಲ, ಎರಡು ಸಂಕೇತಗಳನ್ನು ಸಂತ ಜೋಸೆಫ್ ಶಾಲೆಯಲ್ಲಿ ಪ್ರದರ್ಶಿಸುತ್ತಿದೆ. “ನಮ್ಮ ಮುಂದಿನ ಭವಿಷ್ಯ ಉತ್ತಮವಾಗಿದೆ” ಎಂಬುದನ್ನು ಇವು ಸದಾ ಅವರಿಗೆ ನೆನಪಿಸುತ್ತವೆ ಎಂದು ವಂದನೀಯ ಗುರು ಜಾಕ್ ಒತ್ತಿಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

21 ಮೇ 2026, 18:52