ಕೃಪಾಪೂರ್ಣ ನಾಲ್ಕನೇ ನೆರ್ಸೆಸ್ ಕೃಪಾಪೂರ್ಣ ನಾಲ್ಕನೇ ನೆರ್ಸೆಸ್  

ಪೂರ್ವ ಕ್ರೈಸ್ತ ಸಮಾಜದ ಮಹಾನ್ ‘ಏಕತಾಸಾಧಕ’: ನೆರ್ಸೆಸ್ ಶ್ನೋರ್ಹಾಲಿ

ಅರ್ಮೇನಿಯನ್ ಧರ್ಮಸಭೆಯ ಕಥೋಲಿಕೋಸ್ ಒಂದನೇ ಅರಾಮ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು, 12ನೇ ಶತಮಾನದ ಅರ್ಮೇನಿಯನ್ ಧರ್ಮಸಭೆಯ ಕಥೋಲಿಕೋಸ್ ಆಗಿದ್ದ ನೆರ್ಸೆಸ್ ಶ್ನೋರ್ಹಾಲಿ ಅವರನ್ನು ರೋಮನ್ ರಕ್ತಸಾಕ್ಷಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಘೋಷಿಸಿದರು. ಇದು “ಸಂತರ ಏಕತಾಸಾಧನೆಯ” ಒಂದು ಅದ್ಭುತ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

ಸಂತ ನೆರ್ಸೆಸ್ ಶ್ನೋರ್ಹಾಲಿ ಅವರು ಮಹಾನ್ ಆತ್ಮವನ್ನು ಹೊಂದಿದ್ದವರಾಗಿದ್ದು, ಬಹುಮುಖ ಪ್ರತಿಭೆ ಮತ್ತು ಅಪಾರ ಸಾಹಿತ್ಯ ಸೃಜನಶೀಲತೆಯ ಮನಸ್ಸಿನವರಾಗಿದ್ದರು. ಇದರ ಕಾರಣದಿಂದ — ವಿಶೇಷವಾಗಿ ಅವರ ಬರಹಗಳ ಪ್ರೇರಣಾದಾಯಕ ಮತ್ತು ಸೌಹಾರ್ದಭರಿತ ಸ್ವಭಾವದ ಹಿನ್ನೆಲೆಯಲ್ಲಿ — ಅವರ ಸಮಕಾಲೀನರು ಅವರನ್ನು “ಶ್ನೋರ್ಹಾಲಿ” ಎಂದು ಕರೆಯುತ್ತಿದ್ದರು. “ಶ್ನೋರ್ಹಾಲಿ” ಎಂಬ ಪದದ ಅರ್ಥ “ಕೃಪಾಪೂರ್ಣರು” ಅಥವಾ “ಅನುಗ್ರಹದಿಂದ ತುಂಬಿದವರು” ಎಂಬುದಾಗಿದೆ.

ಸಿಲಿಸಿಯಾದ ಅರ್ಮೇನಿಯನ್ ಅಪೋಸ್ತೋಲಿಕ್ ಧರ್ಮಸಭೆಯ ಕಥೋಲಿಕೋಸ್ ಆಗಿರುವ ಪರಮಪೂಜ್ಯ ಒಂದನೇ ಅರಾಮ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಅರ್ಮೇನಿಯನ್ ಧರ್ಮಸಭೆಯ ಅತ್ಯಂತ ಪ್ರಾಚೀನ ಮತ್ತು ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಸಂತ ನೆರ್ಸೆಸ್ ಶ್ನೋರ್ಹಾಲಿ ಅವರನ್ನು ಸ್ಮರಿಸಿದರು. ಇತ್ತೀಚೆಗೆ ಅವರನ್ನು ರೋಮನ್ ರಕ್ತಸಾಕ್ಷಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬುದನ್ನೂ ಅವರು ಉಲ್ಲೇಖಿಸಿದರು.

ರಾಜತಾಂತ್ರಿಕತೆಯ ಆದರ್ಶ ವ್ಯಕ್ತಿತ್ವ

ಪೂರ್ವ ಕ್ರೈಸ್ತ ಸಮಾಜದ ಈ ಧ್ಯಾನಿ ಮತ್ತು ದೈವಶಾಸ್ತ್ರಜ್ಞರಾದ ಇವರು ಅವರು ಕವಿ ಮತ್ತು ಸಂಗೀತ ಸಂಯೋಜಕರೂ ಆಗಿದ್ದು, 1173ರಲ್ಲಿ ನಿಧನರಾದರು. ವಿಶ್ವಸಂಸ್ಥೆಯೂ ಇವರ ಸೇವೆಗೆ ಮಾನ್ಯತೆ ನೀಡಿದೆ. ಅವರ ನಿಧನದ 850ನೇ ವಾರ್ಷಿಕೋತ್ಸವದ ಅಂಗವಾಗಿ, 2023ರಲ್ಲಿ UNESCO ಅವರನ್ನು ಮಹಾನ್ ವ್ಯಕ್ತಿಗಳು ಮತ್ತು ಪ್ರಮುಖ ಘಟನೆಗಳ ಸ್ಮರಣಾ ವಾರ್ಷಿಕೋತ್ಸವಗಳ ಪಟ್ಟಿಯಲ್ಲಿ ಸೇರಿಸಿತು. 1166ರಲ್ಲಿ ನೆರ್ಸೆಸ್ ಕಥೋಲಿಕೋಸ್ ಆಗಿ ಆಯ್ಕೆಯಾದರು ಮತ್ತು “ನೆರ್ಸೆಸ್ ನಾಲ್ಕನೇ” ಎಂಬ ಹೆಸರನ್ನು ಸ್ವೀಕರಿಸಿದರು. ತಮ್ಮ ನಿಧನದವರೆಗೆ ಅವರು ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು.

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಸ್ಮರಿಸಿದಂತೆ, ಅವರ ಕಾರ್ಯಗಳು ಅವರನ್ನು ಕ್ರೈಸ್ತ ಧರ್ಮಸಭೆಗಳ ನಡುವಿನ ಸಂವಾದದ ಮುಂಚೂಣಿಯ ವ್ಯಕ್ತಿಯನ್ನಾಗಿ ಗುರುತಿಸಿವೆ. ಅವರ ಏಕತಾಸಾಧಕ ಮನೋಭಾವವು ಆಳವಾದ ಮಾನವೀಯತೆ ಮತ್ತು ಶಾಂತಿಯ ಕುರಿತ ಸೂಕ್ಷ್ಮ ಸಂವೇದನೆಯೊಂದಿಗೆ ಕೂಡಿಕೊಂಡಿತ್ತು.

ತಮ್ಮ ಕಾಲದ ವಿವಾದಗಳ ನಡುವೆಯೂ, ಧಾರ್ಮಿಕ ಮತ್ತು ಜನಾಂಗೀಯ ಸಂಘರ್ಷಗಳನ್ನು ಗುಣಪಡಿಸುವ ಕಾರ್ಯದಲ್ಲಿ ಅವರು ರಾಜತಾಂತ್ರಿಕತೆಯ ಆದರ್ಶ ವ್ಯಕ್ತಿತ್ವವಾಗಿ ಗುರುತಿಸಲ್ಪಟ್ಟರು.

2023ರ ವ್ಯಾಟಿಕನ್ ಸಮ್ಮೇಳನ

2023ರ ನವೆಂಬರ್-ಡಿಸೆಂಬರ್ ತಿಂಗಳಲ್ಲಿ, ಸಂತ ನೆರ್ಸೆಸ್ ಅವರ ಕುರಿತು ವ್ಯಾಟಿಕನ್‌ನಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವೊಂದು ನಡೆಯಿತು. ಈ ಕಾರ್ಯಕ್ರಮವನ್ನು ಪಾಂಟಿಫಿಕಲ್ ಓರಿಯಂಟಲ್ ಸಂಸ್ಥೆ ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ಪರಿಚಯಿಸುತ್ತಾ, ಅದರ ಆಯೋಜಕರಲ್ಲಿ ಒಬ್ಬರಾದ ಮಾರ್ಕೋ ಬೈಸ್ ಅವರು, ನೆರ್ಸೆಸ್ ಅವರಲ್ಲಿದ್ದ ಕೆಲವು ಗುಣಗಳು ಪಶ್ಚಿಮದ ಇಬ್ಬರು ಮಹಾನ್ ಸಂತರಾದ ಅಸ್ಸಿಸಿಯ ಫ್ರಾನ್ಸಿಸ್ ಮತ್ತು ಕ್ಲೇರ್ವೊವಿನ ಬೆರ್ನಾರ್ಡ್ ಅವರನ್ನು ನೆನಪಿಸುತ್ತವೆ ಎಂದು ಹೇಳಿದರು.

ನೆರ್ಸೆಸ್ ಅವರು “ವಿನಯ ಮತ್ತು ಬಡವರ ಮೇಲಿನ ಸಮರ್ಪಣೆ”ಯನ್ನು ಹೊಂದಿದ್ದರು ಎಂದು ಅವರು ವಿವರಿಸಿದರು. ತಮ್ಮ ಧರ್ಮಸಭೆಯ ಅತ್ಯುನ್ನತ ಹುದ್ದೆಯನ್ನು ತಲುಪಿದ ನಂತರವೂ ಅವರು ಈ ಗುಣಗಳನ್ನು ಉಳಿಸಿಕೊಂಡಿದ್ದರು. ಜೊತೆಗೆ, “ದೈವಶಾಸ್ತ್ರೀಯ ವಿಶ್ಲೇಷಣೆಯ ಸೂಕ್ಷ್ಮತೆ ಮತ್ತು ತಮ್ಮ ಧರ್ಮಸಭೆಯನ್ನು ಮುನ್ನಡೆಸುವ ಅಪಾರ ರಾಜಕೀಯ ನಾಯಕತ್ವ ಸಾಮರ್ಥ್ಯ”ವೂ ಅವರಲ್ಲಿತ್ತು ಎಂದು ಮಾರ್ಕೋ ಬೈಸ್ ಹೇಳಿದರು. ಈ ಗುಣಗಳು, ಅವರ ಸಮಕಾಲೀನರಾಗಿದ್ದ ಪ್ರಸಿದ್ಧ ಫ್ರೆಂಚ್ ಗುರುವೋರ್ವರನ್ನು ನೆನಪಿಸುತ್ತವೆ ಎಂದೂ ಅವರು ಹೇಳಿದರು.

2023ರ ಸೆಪ್ಟೆಂಬರ್‌ನಲ್ಲಿ, ವ್ಯಾಟಿಕನ್ ಅಂಚೆ ಇಲಾಖೆ ಅವರ ಗೌರವಾರ್ಥ ಸ್ಮರಣಾರ್ಥ ಅಂಚೆ ಚೀಟಿಯನ್ನು ಕೂಡ ಬಿಡುಗಡೆ ಮಾಡಿತು. ಅದರಲ್ಲಿ ಅವರನ್ನು “ತಮ್ಮ ಧರ್ಮಸಭೆಯ ಬೋಧನೆಗಳಲ್ಲಿ ಆಳವಾಗಿ ಪಾಂಡಿತ್ಯ ಹೊಂದಿದ್ದ, ಕ್ರಿಸ್ತನ ಪಾಡುಗಳಿಗೆ ಸಂಪೂರ್ಣ ಸಮರ್ಪಿತರಾಗಿದ್ದ, ವಿಶಿಷ್ಟ ಆಧ್ಯಾತ್ಮಿಕ ಲೇಖಕ” ಎಂದು ಸ್ಮರಿಸಲಾಯಿತು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

18 ಮೇ 2026, 21:41