ಅಮೆರಿಕದ 250ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಅಂಗವಾಗಿ ದೇಶವನ್ನು ಯೇಸುವಿನ ಪವಿತ್ರ ಹೃದಯಕ್ಕೆ ಸಮರ್ಪಿಸಲಿರುವ ಅಮೆರಿಕದ ಧರ್ಮಾಧ್ಯಕ್ಷರು
ಲೇಖಕರು: ಡೆವಿನ್ ವಾಟ್ಕಿನ್ಸ್
ಅಮೆರಿಕ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿ (USCCB) ತನ್ನ 2026ರ ವಸಂತಕಾಲದ ಪೂರ್ಣಸಭೆಯನ್ನು ಫ್ಲೋರಿಡಾ ರಾಜ್ಯದ ಓರ್ಲ್ಯಾಂಡೋ ನಗರದಲ್ಲಿ ಜೂನ್ 10ರಿಂದ 12ರವರೆಗೆ ನಡೆಸಲಿದೆ. ಈ ಸಭೆಯ ಅಂಗವಾಗಿ, ಧರ್ಮಾಧ್ಯಕ್ಷರು ಬಲಿಪೂಜೆಯನ್ನು ಅರ್ಪಿಸಿ, ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಯೇಸುವಿನ ಪವಿತ್ರ ಹೃದಯಕ್ಕೆ ಸಮರ್ಪಿಸಲಿದ್ದಾರೆ. ಈ ಸಮರ್ಪಣಾ ವಿಧಿಯು ಜೂನ್ 11ರ ಗುರುವಾರ ನಡೆಯಲಿದ್ದು, ಅದಕ್ಕೂ ಮುನ್ನ ಧರ್ಮಾಧ್ಯಕ್ಷರು ಪವಿತ್ರ ಹೃದಯದ ಕುರಿತು ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ.
ಜುಲೈ 4ರಂದು ಅಮೆರಿಕವು ತನ್ನ ಸ್ವಾತಂತ್ರ್ಯ ಘೋಷಣಾಪತ್ರಕ್ಕೆ ಸಹಿ ಹಾಕಿದ 250ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಸಮರ್ಪಣೆ ನಡೆಯುತ್ತಿದೆ. ಈ ಉಪಕ್ರಮದ ಉದ್ದೇಶ, ಈ ಸ್ಮರಣೋತ್ಸವದಲ್ಲಿ ಹೆಚ್ಚಿನ ಕಥೋಲಿಕ ವಿಶ್ವಾಸಿಗಳು ಭಾಗವಹಿಸುವಂತೆ ಪ್ರೇರೇಪಿಸುವುದಾಗಿದೆ. ಈ ಕಾರ್ಯಕ್ರಮವನ್ನು USCCBಯ ಯೂಟ್ಯೂಬ್ ವಾಹಿನಿಯಲ್ಲಿ ನೇರಪ್ರಸಾರ ಮಾಡಲಾಗುತ್ತದೆ.
ಈ ಸಮರ್ಪಣೆಗೆ ಸಿದ್ಧತೆಯಾಗಿ, ಧರ್ಮಕ್ಷೇತ್ರಗಳು ಮತ್ತು ವೈಯಕ್ತಿಕ ವಿಶ್ವಾಸಿಗಳನ್ನು “250 ಗಂಟೆಗಳ ಆರಾಧನೆ” ಮತ್ತು/ಅಥವಾ “250 ಕರುಣೆಯ ಕಾರ್ಯಗಳಲ್ಲಿ” ಭಾಗವಹಿಸಲು ಆಹ್ವಾನಿಸಲಾಗಿದೆ. 2024ರಲ್ಲಿ, ಪರಲೋಕಸ್ಥ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರು ‘ಡಿಲೆಕ್ಸಿಟ್ ನೋಸ್’ (“ಅವರು ನಮ್ಮನ್ನು ಪ್ರೀತಿಸಿದರು”) ಎಂಬ ತಮ್ಮ ವಿಶ್ವಪತ್ರಿಕೆಯನ್ನು ಪ್ರಕಟಿಸಿದ್ದರು. ಅದರಲ್ಲಿ, ಯೇಸುವಿನ ಪವಿತ್ರ ಹೃದಯದ ಮಾನವೀಯ ಮತ್ತು ದೈವಿಕ ಪ್ರೀತಿಯನ್ನು ವಿವರಿಸುತ್ತಾ, ಈ ಭಕ್ತಿಯನ್ನು ಆಧುನಿಕ ಮೇಲ್ಮೈಯ ಬದುಕಿಗೆ ಒಂದು ಔಷಧಿಯಾಗಿ ಅವರು ಪ್ರಸ್ತುತಪಡಿಸಿದ್ದರು.
ವಸಂತಕಾಲದ ಪೂರ್ಣಸಭೆ
ಪತ್ರಿಕಾ ಪ್ರಕಟಣೆಯ ಪ್ರಕಾರ, USCCBಯ ವಸಂತಕಾಲದ ಪೂರ್ಣಸಭೆಯಲ್ಲಿ ಜೂನ್ 10 ಮತ್ತು 11ರಂದು ಸಾರ್ವಜನಿಕ ಅಧಿವೇಶನಗಳು ನಡೆಯಲಿದ್ದು, ಅವುಗಳನ್ನೂ ನೇರಪ್ರಸಾರ ಮಾಡಲಾಗುತ್ತದೆ. ಒಕ್ಲಹೋಮಾ ನಗರದ ಮಹಾಧರ್ಮಾಧ್ಯಕ್ಷರಾದ ಪೌಲ ಕೋಕ್ಲಿ ಅವರು, USCCBಯ ಅಧ್ಯಕ್ಷರಾಗಿ ತಮ್ಮ ಮೊದಲ ಭಾಷಣದೊಂದಿಗೆ ಸಾರ್ವಜನಿಕ ಅಧಿವೇಶನವನ್ನು ಉದ್ಘಾಟಿಸಲಿದ್ದಾರೆ.
ಅಮೆರಿಕದ ಪವಿತ್ರ ಪೀಠದ ರಾಯಭಾರಿಯಾದ ಮಹಾಧರ್ಮಾಧ್ಯಕ್ಷ ಗ್ಯಾಬ್ರಿಯೆಲೆ ಜಿಯೋರ್ಡಾನೊ ಕಚ್ಚಿಯಾ ಅವರು ಕೂಡ ಧರ್ಮಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಅಮೆರಿಕದ ಧರ್ಮಾಧ್ಯಕ್ಷರು, ಮಾನ್ಯ ಮೊನ್ಸಿನಿಯೊರ್ ಜೋಸೆಫ್ ಫ್ರಾನ್ಸಿಸ್ ಬುಹ್ ಮತ್ತು ಜಾನ್ ರಿಕ್ ಮಿಲ್ಲರ್ ಅವರ ಪವಿತ್ರೀಕರಣ ಪ್ರಕ್ರಿಯೆಗಳ ಕುರಿತು ಸೇರಿದಂತೆ ಹಲವು ವಿಷಯಗಳ ಮೇಲೆ ಮತ ಚಲಾಯಿಸಲಿದ್ದಾರೆ. ದೈವಿಕ ಆರಾಧನಾ ಸಮಿತಿಯು, ಹೊಸ ಬಲಿಪೂಜೆಯ ವಾಚನಮಾಲೆ ಆವೃತ್ತಿಯ ಕೆಲವು ಭಾಗಗಳನ್ನೂ, 2025ರ ರೋಮನ್ ಮಿಸ್ಸಲ್ – ಪ್ರಾರ್ಥನಾ ಸಮಯಗಳ ಪೂರಕ ಗ್ರಂಥವನ್ನೂ ಧರ್ಮಾಧ್ಯಕ್ಷರ ಅನುಮೋದನೆಗಾಗಿ ಮಂಡಿಸಲಿದೆ. ಧರ್ಮಾಧ್ಯಕ್ಷರು, ಮಕ್ಕಳ ಮತ್ತು ಯುವಜನರ ರಕ್ಷಣಾ ಘೋಷಣಾಪತ್ರದ ಪರಿಷ್ಕರಣೆಯ ಕುರಿತೂ ಚರ್ಚಿಸಲಿದ್ದಾರೆ. ಹೆಚ್ಚಿನ ಅಭಿವೃದ್ಧಿ ಅಗತ್ಯವಿದೆ ಎಂದು ಗುರುತಿಸಲಾದ ಅಂಶಗಳನ್ನು ಈ ಪರಿಷ್ಕರಣೆ ಸ್ಪರ್ಶಿಸುತ್ತದೆ.
ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಪರಿಷ್ಕರಣೆ “ದುರುಪಯೋಗ ತಡೆಗಟ್ಟುವಿಕೆ ಮತ್ತು ಆರೋಪಗಳಿಗೆ ಸ್ಪಂದಿಸಲು ಅಗತ್ಯವಾದ ವ್ಯವಸ್ಥೆಗಳು ಮುಂದುವರಿಯುವಂತೆ ಮಾಡುವ ಧರ್ಮಾಧ್ಯಕ್ಷರ ನಿರಂತರ ಬದ್ಧತೆಯನ್ನು” ಒತ್ತಿಹೇಳುತ್ತದೆ. ಮಕ್ಕಳ ಮತ್ತು ಯುವಜನರ ರಕ್ಷಣಾ ಸಮಿತಿಯ ಪ್ರಕಾರ, ಈ ಬದಲಾವಣೆಗಳು ಪೀಡಿತರಿಗೆ ಸಂವೇದನಾಶೀಲತೆಯನ್ನು ತೋರಿಸುವುದರ ಜೊತೆಗೆ, ಆರೋಪಿತರ ಹಕ್ಕುಗಳು, ನ್ಯಾಯಸಮ್ಮತ ಪ್ರಕ್ರಿಯೆ ಮತ್ತು ಧರ್ಮಶಾಸ್ತ್ರದ ನಿಯಮಗಳ ಸಮತೋಲನವನ್ನು ಕಾಪಾಡುವ ಪ್ರಯತ್ನವಾಗಿವೆ.
2027ರಲ್ಲಿ ದಕ್ಷಿಣ ಕೊರಿಯಾದ ರಾಜಧಾನಿಯಾದ ಸೋಲ್‌ನಲ್ಲಿ ನಡೆಯಲಿರುವ ವಿಶ್ವ ಯುವಜನೋತ್ಸವದತ್ತ ಧರ್ಮಸಭೆ ಸಾಗುತ್ತಿರುವ ಸಂದರ್ಭದಲ್ಲಿ, ಅಮೆರಿಕ ಧರ್ಮಸಭೆಯ ಭಾಗವಹಿಸುವಿಕೆಯ ಕುರಿತೂ ಧರ್ಮಾಧ್ಯಕ್ಷರು ಚರ್ಚಿಸಲಿದ್ದಾರೆ. ಇದಲ್ಲದೆ, ಕಥೋಲಿಕ ಕಾರಾಗೃಹ ಸೇವೆ, ಸಿನೋಡ್ ಅನುಷ್ಠಾನ ಮತ್ತು ಡಿಸೆಂಬರ್ 12ರಂದು ಆರಂಭವಾಗಲಿರುವ ಅಂತರಖಂಡ ಗ್ವಾಡಲುಪೆ ನವದಿನ ಪ್ರಾರ್ಥನಾ ಅಭಿಯಾನದ ಕುರಿತು ಮಾಹಿತಿಯನ್ನೂ ಅವರು ಆಲಿಸಲಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).