ವಿಶ್ವ ಯುವಜನೋತ್ಸವ 2027ರಲ್ಲಿ ಪ್ರದರ್ಶನಗೊಳ್ಳಲಿರುವ ಮುಳ್ಳುತಂತಿಯ ‘ಶಾಂತಿಯ ಶಿಲುಬೆ’
ವ್ಯಾಟಿಕನ್ ವರದಿ
ದಕ್ಷಿಣ ಕೊರಿಯಾದ ರಾಜಧಾನಿಯಾದ ಸೋಲ್‌ನಲ್ಲಿ ನಡೆಯಲಿರುವ 2027ರ ವಿಶ್ವ ಯುವಜನೋತ್ಸವಕ್ಕಾಗಿ ಸಿದ್ಧತೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಅಲ್ಲಿನ ಮಹಾಧರ್ಮಕ್ಷೇತ್ರವು ಈ ಮಹತ್ವದ ಸಮಾರಂಭದೊಂದಿಗೆ ಸಂಬಂಧಿಸಿದ ವಿಶಿಷ್ಟ ಸಂಕೇತವೊಂದನ್ನು ಪರಿಚಯಿಸಿದೆ. ಉತ್ತರ ಮತ್ತು ದಕ್ಷಿಣ ಕೊರಿಯಾವನ್ನು ವಿಭಜಿಸುವ ಗಡಿಭಾಗದಲ್ಲಿರುವ ಅಸೈನಿಕೀಕೃತ ವಲಯವಾದ DMZ ಪ್ರದೇಶದಿಂದ ತೆಗೆದುಹಾಕಲಾದ ಮುಳ್ಳುತಂತಿಗಳಿಂದ “ಶಾಂತಿಯ ಶಿಲುಬೆ”ಯನ್ನು ನಿರ್ಮಿಸಲಾಗುತ್ತಿದೆ.
ಶಾಂತಿಯ ಸಂಕೇತ
ಫೀಡೆಸ್ ಸುದ್ದಿಸಂಸ್ಥೆಯ ಪ್ರಕಾರ, ಈ ಮುಳ್ಳುತಂತಿಯ ಶಿಲುಬೆ, ಕೊರಿಯಾದ ವಿಭಜಿತ ವಾಸ್ತವಿಕತೆಯನ್ನು ನೆನಪಿಸುವುದರ ಜೊತೆಗೆ, ವಿಭಜನೆಯ ನೋವನ್ನು ಶಾಂತಿಯ ಸಂಕೇತವಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದೆ. ಸುಮಾರು ಐದು ಮೀಟರ್ ಎತ್ತರದ ಈ ಶಿಲುಬೆಯನ್ನು, ವಿಶ್ವ ಯುವಜನೋತ್ಸವಕ್ಕಾಗಿ ಸೋಲ್‌ನಲ್ಲಿ ಸೇರುವ ಯುವಜನರಿಗೆ ಪ್ರದರ್ಶಿಸಲಾಗುತ್ತದೆ. ವಿಶ್ವ ಯುವಜನೋತ್ಸವದ ಸಂದರ್ಭದಲ್ಲಿ ಪೂಜ್ಯ ಜಗದ್ಗುರುಗಳು ಈ ಶಿಲುಬೆಯನ್ನು ಆಶೀರ್ವದಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈ ಉಪಕ್ರಮವು, “ವಿಭಜನೆಯ ಸಂಕೇತಗಳನ್ನು ಸೌಹಾರ್ದ, ಪ್ರಾರ್ಥನೆ ಮತ್ತು ಭರವಸೆಯ ಚಿಹ್ನೆಗಳಾಗಿ ಪರಿವರ್ತಿಸಲು ಯುವಜನರನ್ನು ಆಹ್ವಾನಿಸಲಿ — ಅವರ ವೈಯಕ್ತಿಕ ಜೀವನಗಳಲ್ಲಿಯೂ ಸಹ” ಎಂದು ಸೋಲ್ ಮಹಾಧರ್ಮಕ್ಷೇತ್ರ ಆಶಿಸುತ್ತಿದೆ ಎಂದು ಫೀಡೆಸ್ ಸುದ್ದಿಸಂಸ್ಥೆ ತಿಳಿಸಿದೆ.
ಭರವಸೆಯ ಸಂಕೇತ
ಏಪ್ರಿಲ್ ತಿಂಗಳಲ್ಲಿ, ಸೋಲ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾದ ಪೀಟರ್ ಸೂನ್-ತೈಕ್ ಚುಂಗ್ ಅವರ ಅಧ್ಯಕ್ಷತೆಯಲ್ಲಿ ವಿಶ್ವ ಯುವಜನೋತ್ಸವ ಆಯೋಜನಾ ಸಮಿತಿಯು, ಕೊರಿಯಾದ ಯುವ ಸ್ವಯಂಸೇವಕರಿಗೆ ಆಶೀರ್ವಾದ ನೀಡುವ ಸಮಾರಂಭವನ್ನು ನಡೆಸಿತು. ಈ ಸಮಾರಂಭದಲ್ಲಿ, ಮುಳ್ಳುತಂತಿಯ ಶಿಲುಬೆ ಯೋಜನೆಯನ್ನು ಆರಂಭಿಸಿದ ವಾಕಿಂಗ್ ಟುಗೆದರ್(Walking Together) ಫೌಂಡೇಶನ್ ಸದಸ್ಯರೂ ಉಪಸ್ಥಿತರಿದ್ದರು. ಈ ಯೋಜನೆಯಲ್ಲಿ, ಕೈಯಾರೆ ಮುಳ್ಳುತಂತಿಗಳನ್ನು ಪರಿವರ್ತಿಸಿ, ಅವುಗಳನ್ನು ಒಟ್ಟುಗೂಡಿಸಿ ಒಂದು ದೊಡ್ಡ ಶಿಲುಬೆಯಾಗಿ ರೂಪಿಸಲಾಗುತ್ತಿದೆ. ಈ ಕಾರ್ಯವು ಸೋಲ್ ಮಹಾಧರ್ಮಕ್ಷೇತ್ರದ ಕೇಂದ್ರವಾಗಿರುವ ಮ್ಯೋಂಗ್‌ದೊಂಗ್ ಪ್ರಧಾನ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದು, 2027ರ ಏಪ್ರಿಲ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಸಮಾರಂಭದಲ್ಲಿ ಮಾತನಾಡಿದ ಪೂಜ್ಯ ಮಹಾಧರ್ಮಾಧ್ಯಕ್ಷ ಚುಂಗ್, ಉತ್ತರ ಮತ್ತು ದಕ್ಷಿಣ ಕೊರಿಯಾದ ಗಡಿಭಾಗದಲ್ಲಿರುವ ಮುಳ್ಳುತಂತಿಗಳ ಬಗ್ಗೆ ಉಲ್ಲೇಖಿಸಿದರು. ಅವು ಕೊರಿಯಾ ಉಪಖಂಡದ ನೋವಿನ ವಿಭಜನೆ ಮತ್ತು ಸಹೋದರರ ನಡುವಿನ ಯುದ್ಧದ ಸಂಕೇತವಾಗಿವೆ ಎಂದು ಅವರು ಹೇಳಿದರು. “ಒಮ್ಮೆ ಮರಣದ ಸಾಧನವಾಗಿದ್ದ ಶಿಲುಬೆ, ಯೇಸು ಕ್ರಿಸ್ತನ ಮರಣ ಮತ್ತು ಪುನರುತ್ಥಾನದ ಮೂಲಕ ಶಾಂತಿ, ಸೌಹಾರ್ದ, ತ್ಯಾಗ ಮತ್ತು ಪ್ರೀತಿಯ ಸಂಕೇತವಾಯಿತು. ಅದೇ ರೀತಿ, ಈ ಶಿಲುಬೆಯೂ ನಮ್ಮ ಹೃದಯಗಳಲ್ಲಿ ಸೌಹಾರ್ದ, ಶಾಂತಿ ಮತ್ತು ಪ್ರೀತಿಯ ಸಂಕೇತವಾಗಿ ಬೇರುಬಿಡಲಿ ಎಂದು ನಾವು ಪ್ರಾರ್ಥಿಸೋಣ,” ಎಂದು ಅವರು ಹೇಳಿದರು.
“ಹೇಗೆ ಮರಣದ ನಂತರ ಪುನರುತ್ಥಾನ ಬಂದಿದೆವೋ, ಅದೇ ರೀತಿಯಾಗಿ ಸಂಘರ್ಷ ಮತ್ತು ಯುದ್ಧದ ನಂತರವೂ ಸೌಹಾರ್ದ ಮತ್ತು ಶಾಂತಿ ಉದಯಿಸಬಹುದು” ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು.
ಶಾಂತಿಯ ಸಾಧನಗಳು
ಮಹಾಧರ್ಮಾಧ್ಯಕ್ಷ ಚುಂಗ್, ಶಿಲುಬೆ ನಿರ್ಮಾಣಕ್ಕೆ ಬಳಸಲಾಗುತ್ತಿರುವ ವಸ್ತುಗಳನ್ನು ಆಶೀರ್ವದಿಸಿ, ಅದರ ನಿರ್ಮಾಣದಲ್ಲಿ ಭಾಗವಹಿಸುತ್ತಿರುವ ಎಲ್ಲರೂ “ಶಾಂತಿಯ ಸಾಧನಗಳಾಗಲಿ” ಎಂದು ಪ್ರಾರ್ಥಿಸಿದರು. ಈ ಮುಳ್ಳುತಂತಿಯ ಶಿಲುಬೆ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಕರು, ಸುಮಾರು 50 ಸೆಂಟಿಮೀಟರ್ ಉದ್ದದ ತಂತಿ ತುಂಡುಗಳನ್ನು ಸುತ್ತಿಗೆ ಮತ್ತು ಕಮ್ಮಾರನ ಆಣಿಗಲ್ಲಿನ ಸಹಾಯದಿಂದ ರೂಪಿಸಿ, ಅವುಗಳನ್ನು ಶಿಲುಬೆಯ ರಚನೆಗೆ ಸೇರಿಸುತ್ತಿದ್ದಾರೆ.ಈ ಯೋಜನೆಯ ಆತ್ಮಿಕ ಆಯಾಮವು, ಸಮಾಜದಲ್ಲಿ ಗುಣಮುಖವಾಗಬೇಕಾದ ಗಾಯಗಳ ಕುರಿತು ಸ್ವಯಂಸೇವಕರು ಒಟ್ಟಾಗಿ ಚಿಂತಿಸಲು, ಶಾಂತಿಗಾಗಿ ಸಹಕರಿಸಿ ಪ್ರಾರ್ಥಿಸಲು ಪ್ರೇರೇಪಿಸುತ್ತದೆ.ಈ ಯೋಜನೆಯಲ್ಲಿ ವಿವಿಧ ಧರ್ಮಸಭೆ ಪ್ರದೇಶಗಳ ಸದಸ್ಯರು, ಧಾರ್ಮಿಕ ಸಂಘಟನೆಗಳವರು ಹಾಗೂ ಈ ಕಾರ್ಯಕ್ಕೆ ಕೊಡುಗೆ ನೀಡಲು ಆಸಕ್ತಿ ಹೊಂದಿರುವ ಅನೇಕರು ಭಾಗವಹಿಸುತ್ತಿದ್ದಾರೆ. ಫೀಡೆಸ್ ಸುದ್ದಿಸಂಸ್ಥೆಯ ಪ್ರಕಾರ, “ಈ ಯೋಜನೆಯು ಧರ್ಮಸಭೆಯ ಗಡಿಗಳನ್ನು ಮೀರಿಸಿ, ಸಾಮಾಜಿಕ ಐಕ್ಯತೆ ಮತ್ತು ಸೌಹಾರ್ದದ ಸಂದೇಶವನ್ನು ಹರಡುವ ಗುರಿಯನ್ನು ಹೊಂದಿದೆ.”
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).