ಯೋಜನೆಯ ಫಲಾನುಭವಿಗಳಲ್ಲಿ ಒಬ್ಬರೊಂದಿಗೆ CPS ಸಭೆಯ  ಧರ್ಮಭಗಿನಿಯರಾದ ಸಹೋದರಿ ಲುಡ್‌ಬಿರ್ಗಾ ಶುಮಾಕರ್ ಮತ್ತು ಸಹೋದರಿ ಫೆಲಿಸ್ಟರ್ ದುಬೆ. ಯೋಜನೆಯ ಫಲಾನುಭವಿಗಳಲ್ಲಿ ಒಬ್ಬರೊಂದಿಗೆ CPS ಸಭೆಯ ಧರ್ಮಭಗಿನಿಯರಾದ ಸಹೋದರಿ ಲುಡ್‌ಬಿರ್ಗಾ ಶುಮಾಕರ್ ಮತ್ತು ಸಹೋದರಿ ಫೆಲಿಸ್ಟರ್ ದುಬೆ.  

ಜೀವನವನ್ನು ಆರಿಸಿಕೊಳ್ಳಿ: ಗ್ರಾಮೀಣ ಜಿಂಬಾಬ್ವೆಯಲ್ಲಿ ಭರವಸೆಯ ಬೆಳಕಾಗಿರುವ ಕಥೋಲಿಕ ಧರ್ಮಭಗಿನಿ

ಆಫ್ರಿಕಾದಲ್ಲಿ HIV ಮತ್ತು AIDS ಮಹಾಮಾರಿ ತೀವ್ರಗೊಂಡ ಸಂದರ್ಭದಲ್ಲಿ, ದಕ್ಷಿಣ ಜಿಂಬಾಬ್ವೆಯ ಮಾತಬೆಲೆ ಪ್ರದೇಶದ ಜನರು ತಮ್ಮ ಭರವಸೆಯನ್ನು ಕಳೆದುಕೊಂಡಿದ್ದರು. ಗಾಳಿಯಿಂದ ಕೂಡಿದ, ಒಣಭೂಮಿಯಾದ ಈ ಪ್ರದೇಶವು ಮೌನದಲ್ಲಿ ನಿಂತಂತಾಗಿತ್ತು. ಆದರೆ, ಅಲ್ಲಿನ ಜನರ ನೋವು ವಂದನೀಯ ಧರ್ಮಭಗಿನಿ ಲುಡ್‌ಬಿರ್ಗಾ ಶುಮಾಕರ್ ಅವರ ಹೃದಯವನ್ನು ಸ್ಪರ್ಶಿಸಿತು. ಅದರ ಪರಿಣಾಮವಾಗಿ ಅವರು “ಸ್ಕೆಟಿಂಪಿಲೋ ಕೇಂದ್ರ”ವನ್ನು ಸ್ಥಾಪಿಸಿದರು. ಬಳಿಕ ಅನೇಕ ಧರ್ಮಭಗಿನಿಯರು ಅವರ ಹೆಜ್ಜೆಗುರುತುಗಳನ್ನು ಅನುಸರಿಸಿ ಈ ಸೇವೆಯಲ್ಲಿ ಕೈಜೋಡಿಸಿದರು.

ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೋ, CPS 

ವಂದನೀಯ ಫೆಲಿಸ್ಟರ್ ದುಬೆ, CPS ಅವರ ಆಡಳಿತದಲ್ಲಿ ಅಮೂಲ್ಯ ರಕ್ತದ ಧರ್ಮಸಭೆಯ ಧರ್ಮಭಗಿನಿಯರು ನಡೆಸುತ್ತಿರುವ “ಸ್ಕೆಟಿಂಪಿಲೋ ಕೇಂದ್ರ” ಇಂದು ಪುನರುಜ್ಜೀವಿತ ಭರವಸೆಯ ಕೇಂದ್ರವಾಗಿ ಪರಿಣಮಿಸಿದೆ. “ಸ್ಕೆಟಿಂಪಿಲೋ” ಎಂಬ ಹೆಸರಿನ ಅರ್ಥ “ಜೀವನವನ್ನು ಆರಿಸಿಕೊಳ್ಳಿ” ಎಂಬುದಾಗಿದೆ. ಈ ಧ್ಯೇಯವಾಕ್ಯವನ್ನು ಕೇಂದ್ರದಲ್ಲಿ ಪ್ರತಿದಿನವೂ ಬದುಕಲಾಗುತ್ತಿದೆ. 1998ರಲ್ಲಿ ಜರ್ಮನಿಯಲ್ಲಿ ಜನಿಸಿದ ವಂದನೀಯ ಧರ್ಮಭಗಿನಿ ಲುಡ್‌ಬಿರ್ಗಾ ಶುಮಾಕರ್, CPS ಅವರು ಈ ಕೇಂದ್ರವನ್ನು ಸ್ಥಾಪಿಸಿದರು.

ಅದು ಜಿಂಬಾಬ್ವೆ ಇತಿಹಾಸದ ಅತ್ಯಂತ ಕಠಿಣ ಕಾಲವಾಗಿತ್ತು. HIV ಮತ್ತು AIDS ಮಹಾಮಾರಿ ಅಪ್ಪಳಿಸಿ ಅನಾಥರು, ರೋಗಿಗಳು, ತಿರಸ್ಕೃತರು ಮತ್ತು ಸಮಾಜದ ಅಂಚಿಗೆ ತಳ್ಳಲ್ಪಟ್ಟವರನ್ನು ಹಿಂದೆ ಬಿಟ್ಟಿತ್ತು. ಅನೇಕರು ತಮ್ಮ ಭರವಸೆಯನ್ನು ಕಳೆದುಕೊಂಡಿದ್ದರು. ಆ ಸಂದರ್ಭದಲ್ಲಿ ಕರುಣೆಯಿಗಿಂತ ಕಳಂಕದ ಭಾವನೆವೇ ಹೆಚ್ಚು ಬಲವಾಗಿತ್ತು.

ಮತ್ತೆ ಚಿಗುರೊಡೆದ ಒಣಮರದ ತುಂಡು

ಸಮಾಜದ ಅಂಚಿಗೆ ತಳ್ಳಲ್ಪಟ್ಟವರು, ಬಡವರು, ಅಸಹಾಯಕರಾದ ಮಕ್ಕಳು ಹಾಗೂ HIV ಸೋಂಕಿನಿಂದ ನೇರವಾಗಿ ಅಥವಾ ಪರೋಕ್ಷವಾಗಿ ಬಾಧಿತರಾದ ವಯಸ್ಕರಿಗೆ ನೆರವಾಗಬೇಕಾದ ಅಗತ್ಯವನ್ನು ವಂದನೀಯ ಸಹೋದರಿ ಲುಡ್‌ಬಿರ್ಗಾ ಅರಿತುಕೊಂಡರು. 

ಅವರು ಗುಂಪುಗಳನ್ನು ರಚಿಸಿ, ಸಮುದಾಯ ಸೇವಕರಿಗೆ ತರಬೇತಿ ನೀಡಿದರು, ಮನೆಮನೆಗೆ ಭೇಟಿ ಕಾರ್ಯಕ್ರಮಗಳನ್ನು ಆಯೋಜಿಸಿದರು ಮತ್ತು ಕಳೆದುಹೋಗಿದ್ದ ಮಾನವ ಘನತೆಯನ್ನು ಪುನಃಸ್ಥಾಪಿಸುವ ಕಾರ್ಯವನ್ನು ಆರಂಭಿಸಿದರು. ರೋಗ ಮತ್ತು ಕಳಂಕದ ನಡುವೆಯೂ ತಮ್ಮ ಜೀವನಕ್ಕೆ ಇನ್ನೂ ಮೌಲ್ಯವಿದೆ ಎಂಬುದನ್ನು ನೆನಪಿಸುವುದನ್ನೇ ಅವರು ತಮ್ಮ ಧ್ಯೇಯವನ್ನಾಗಿಸಿಕೊಂಡರು. ಸಮಾಜದಲ್ಲಿ ಎದುರಿಸುತ್ತಿದ್ದ ತಿರಸ್ಕಾರ ಮತ್ತು ಪ್ರತ್ಯೇಕತೆಯ ನಡುವೆಯೂ, ಅವರ ಬದುಕು ಅಮೂಲ್ಯವೆಂಬ ಸಂದೇಶವನ್ನು ಅವರು ಸಾರಿದರು.

ಹೀಗೆ, ಭರವಸೆ ಮತ್ತೆ ಹುಟ್ಟಿಕೊಂಡಿತು. ಒಣಗಿದ ಮರದ ತುಂಡಿನಿಂದ ಹೊಸ ಚಿಗುರುಗಳು ಮೊಳೆಯುವ ದೃಶ್ಯವೇ ಈ ಯೋಜನೆಯ ಸಂಕೇತವಾಯಿತು — ಮುರಿದುಹೋಗಿರುವ ಜೀವನದಲ್ಲಿಯೂ ಹೊಸ ಬದುಕು ಸಾಧ್ಯವೆಂಬ ಸಂಕೇತ. ಇಂದು, ಎರಡು ದಶಕಗಳ ನಂತರವೂ, ವಂದನೀಯ ಫೆಲಿಸ್ಟರ್ ಅವರು ಅದೇ ಧೈರ್ಯ ಮತ್ತು ಸಮರ್ಪಣೆಯೊಂದಿಗೆ ಆ ಧ್ಯೇಯವನ್ನು ಮುಂದುವರಿಸುತ್ತಿದ್ದಾರೆ.

ಬೆಳವಣಿಗೆಯ ಕೇಂದ್ರ

“ಸ್ಕೆಟಿಂಪಿಲೋ ಕೇಂದ್ರ”ವು ಮಕ್ಕಳನ್ನು ಅವರ ಸಮುದಾಯಗಳಿಂದ ದೂರಪಡಿಸುವ ಬದಲು, ಅಸಹಾಯಕರಾದ ಕುಟುಂಬಗಳ ಮನೆಗಳವರೆಗೆ ತಲುಪುತ್ತಿದೆ. ವಿಶೇಷವಾಗಿ ಜರ್ಮನಿ ಮತ್ತು ಸ್ಪೇನ್ ದೇಶಗಳ ದಾನಿಗಳ ಸಹಾಯದಿಂದ, ಈ ಕೇಂದ್ರವು ಸುಮಾರು 120 ಮಕ್ಕಳ ಶಾಲಾ ಶುಲ್ಕವನ್ನು ಭರಿಸುತ್ತದೆ. ಜೊತೆಗೆ, ಮಾನಸಿಕ ಬೆಂಬಲವನ್ನು ಒದಗಿಸಿ, ಯಾವುದೇ ಮಗು ತನ್ನ ನೋವಿನಲ್ಲಿ ತಾನೊಬ್ಬಂಟಿ ಎಂದು ಅನುಭವಿಸದಂತೆ ನೋಡಿಕೊಳ್ಳುತ್ತದೆ.

ಈ ಸೇವೆಯ ಪರಿಣಾಮ ಸ್ಪಷ್ಟವಾಗಿ ಕಾಣಿಸುತ್ತಿದೆ.ಕೇಂದ್ರದ ಸಹಾಯದಿಂದ ವಿದ್ಯಾಭ್ಯಾಸ ಮಾಡಿದ ಇಬ್ಬರು ವಿದ್ಯಾರ್ಥಿಗಳು ಈಗ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ — ಒಬ್ಬರು ಸಮಾಜಸೇವೆಯನ್ನು ಮತ್ತು ಮತ್ತೊಬ್ಬರು ಅಭಿವೃದ್ಧಿ ಅಧ್ಯಯನವನ್ನು ಕಲಿಯುತ್ತಿದ್ದಾರೆ. ಇಂದು ಅವರು, ತಮ್ಮನ್ನು ಬೆಳೆಸಿದ ಇದೇ ಕೇಂದ್ರಕ್ಕೆ ಮರಳಿ ಬಂದು ಸೇವೆ ಸಲ್ಲಿಸುತ್ತಿದ್ದಾರೆ.

ಸಮುದಾಯಗಳನ್ನು ಪರಿವರ್ತಿಸುತ್ತಿರುವ ಕೌಶಲ್ಯಗಳು

“ಸ್ಕೆಟಿಂಪಿಲೋ ಕೇಂದ್ರ”ದ ಅತ್ಯಂತ ಗಮನಾರ್ಹ ಉಪಕ್ರಮವೆಂದರೆ ಅದರ ಪ್ರಾಯೋಗಿಕ ಕೌಶಲ್ಯ ತರಬೇತಿ ಕಾರ್ಯಕ್ರಮವಾಗಿದೆ. ಪ್ರತಿ ವರ್ಷ ಸುಮಾರು 60 ಯುವಜನರಿಗೆ ಹೊಲಿಗೆ, ಕೃಷಿ, ವಿದ್ಯುತ್ ವ್ಯವಸ್ಥೆಗಳು, ಕಟ್ಟಡ ನಿರ್ಮಾಣ ಮತ್ತು ಬೇಕರಿ ತರಬೇತಿಗಳನ್ನು ನೀಡಲಾಗುತ್ತದೆ.

ಈ ಯುವಜನರು ತಮ್ಮ ಗ್ರಾಮಗಳಲ್ಲಿ ಬದಲಾವಣೆಯ ಹರಿಕಾರರಾಗುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಲಿಯುತ್ತಿರುವವರು ಅಸಹಾಯಕ ಕುಟುಂಬಗಳಿಗಾಗಿ ಮನೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತಾರೆ. ವಿದ್ಯುತ್ ತರಬೇತಿ ಪಡೆಯುತ್ತಿರುವವರು ಗ್ರಾಮೀಣ ಶಾಲೆಗಳು ಮತ್ತು ಮನೆಗಳಲ್ಲಿ ಸೌರಶಕ್ತಿ ವ್ಯವಸ್ಥೆಗಳನ್ನು ಅಳವಡಿಸುತ್ತಿದ್ದಾರೆ.

“ಸ್ಕೆಟಿಂಪಿಲೋ ಕೇಂದ್ರ”ದಲ್ಲಿ ತರಬೇತಿ ಪಡೆದ ಕೆಲವರು ಈಗ ಜಿಂಬಾಬ್ವೆಯ ರಾಷ್ಟ್ರೀಯ ವಿದ್ಯುತ್ ಪ್ರಾಧಿಕಾರ ಸೇರಿದಂತೆ ಹಲವು ರಾಷ್ಟ್ರೀಯ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಹೀಗೆ, ಅವರು ತಮ್ಮ ಭವಿಷ್ಯವನ್ನಷ್ಟೇ ಅಲ್ಲ, ತಮ್ಮ ಸಮುದಾಯಗಳ ಭವಿಷ್ಯವನ್ನೂ ನಿರ್ಮಿಸುತ್ತಿದ್ದಾರೆ.

ವಿಶ್ವಾಸ ಮತ್ತು ಅಚಲ ಪರಿಶ್ರಮ

ಆರ್ಥಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಇಂತಹ ಧ್ಯೇಯಸೇವೆಯನ್ನು ಮುಂದುವರಿಸುವುದು ಸುಲಭದ ಕೆಲಸವಲ್ಲ. ನೀರಿನ ಕೊರತೆ ಇದೆ. ಧನಸಹಾಯ ಯಾವಾಗಲೂ ಅನಿಶ್ಚಿತವಾಗಿರುತ್ತದೆ. ಕೇಂದ್ರವು ಪ್ರತಿ ತಿಂಗಳು ನೀಡಲು ಸಾಧ್ಯವಾಗುವ ಆಹಾರ ಸಹಾಯದಿಂದ ದೊಡ್ಡ ಕುಟುಂಬಗಳು ಕೆಲವೇ ದಿನಗಳು ಜೀವನ ಸಾಗಿಸಬಲ್ಲವು.

ಆದರೂ, ಈ ಎಲ್ಲ ಸವಾಲುಗಳ ಮಧ್ಯೆಯೂ ಸಹೋದರಿ ಫೆಲಿಸ್ಟರ್ ಅವರು ದೇವರ ಕೈಚಳಕವನ್ನು ಕಾಣುತ್ತಾರೆ. “ಕೆಲವೊಮ್ಮೆ ನಾವು ಮುಂದೆ ಸಾಗಲು ಸಾಧ್ಯವಿಲ್ಲವೆಂದು ಅನಿಸುತ್ತದೆ — ವೇತನವಿರುವುದಿಲ್ಲ, ಧನಸಹಾಯವಿರುವುದಿಲ್ಲ, ಹಂಚಲು ಆಹಾರವೂ ಇರುವುದಿಲ್ಲ, ಆದರೆ ಪ್ರಾರ್ಥನೆಯೇ ನಮ್ಮನ್ನು ಸ್ಥಿರವಾಗಿ ನಿಲ್ಲಿಸುತ್ತದೆ. ದೇವರ ಮೇಲಿನ ಭರವಸೆಯೇ ನಮ್ಮನ್ನು ಮುಂದೆ ಸಾಗಿಸುತ್ತದೆ.”

ಅವರ ನಂಬಿಕೆ ಸರಳವಾದರೂ ಆಳವಾದದ್ದು: “ಜೀವನವನ್ನು ಆರಿಸಿಕೊಳ್ಳುವವರಿಗಾಗಿ ದೇವರು ಯಾವಾಗಲೂ ಒಂದು ದಾರಿಯನ್ನು ತೆರೆದಿಡುತ್ತಾರೆ.”

ಶಾಂತವಾದ ಸ್ಥಳ, ಆದರೆ ಆಳವಾದ ಪ್ರಭಾವ

ಜಿಂಬಾಬ್ವೆಯ ಕಠಿಣ ಆರ್ಥಿಕ ಪರಿಸ್ಥಿತಿ ಮತ್ತು ಅಂತರರಾಷ್ಟ್ರೀಯ ದಾನಿಗಳಿಂದ ಕಡಿಮೆಯಾಗುತ್ತಿರುವ ಧನಸಹಾಯದ ಹಿನ್ನೆಲೆದಲ್ಲಿ, ಅಲ್ಲಿನ ಜನರನ್ನು ಸಬಲಗೊಳಿಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಅವರು ಸ್ವಾವಲಂಬಿಗಳಾಗುವಂತೆ ಮಾಡಲು ಧರ್ಮಭಗಿನಿಯರು ಪ್ರಯತ್ನಿಸುತ್ತಿದ್ದಾರೆ.

ತಮ್ಮ ಮಾನವೀಯ ಸೇವಾ ಕಾರ್ಯಗಳಿಗೆ ಬೆಂಬಲವಾಗಿ, “ಸ್ಕೆಟಿಂಪಿಲೋ ಕೇಂದ್ರ”ವು ಕೆಲವು ಅತಿಥಿ ಕೊಠಡಿಗಳು, ಒಂದು ಸಭಾಂಗಣ ಮತ್ತು ಸಣ್ಣ ಆಹಾರ ಸೇವಾ ವ್ಯವಸ್ಥೆಯನ್ನು ನಡೆಸುತ್ತಿದೆ. ಈ ಸೌಲಭ್ಯಗಳಿಂದ ದೊರೆಯುವ ಆದಾಯವು ಸಿಬ್ಬಂದಿಯ ವೇತನವನ್ನು ಭರಿಸುವುದರ ಜೊತೆಗೆ, ಈ ಧ್ಯೇಯಸೇವೆಯನ್ನು ಮುಂದುವರಿಸಲು ಸಹಾಯ ಮಾಡುತ್ತಿದೆ.

ಆದರೂ, ಸವಾಲುಗಳು ಇನ್ನೂ ಉಳಿದಿವೆ. ಕೇಂದ್ರದ ಕಟ್ಟಡಗಳು ಸರಳವಾಗಿದ್ದರೂ ಹಳೆಯವುಗಳಾಗಿವೆ. ಅವುಗಳಲ್ಲಿ ಕೆಲವು 1998ರಲ್ಲಿ ಕೇಂದ್ರ ಆರಂಭವಾದ ಕಾಲದವುಗಳೇ ಆಗಿದ್ದು, ಈಗ ನವೀಕರಣದ ಅಗತ್ಯವಿದೆ.

ಈ ಪ್ರದೇಶದಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಅನೇಕ ಹೊಸ ಕೇಂದ್ರಗಳು ಉದಯಿಸಿದ್ದರೂ, “ಸ್ಕೆಟಿಂಪಿಲೋ” ತನ್ನ ಶಾಂತಿ, ಸೇವಾ ಮನೋಭಾವ ಮತ್ತು ಆತಿಥ್ಯಕ್ಕಾಗಿ ಜನರ ಮೆಚ್ಚುಗೆಯನ್ನು ಇನ್ನೂ ಉಳಿಸಿಕೊಂಡಿದೆ.

“ಇದು ಆರೈಕೆಯ ಸ್ಥಳವೆಂದು ಜನರಿಗೆ ತಿಳಿದಿದೆ,” ಎಂದು ಸಹೋದರಿ ಫೆಲಿಸ್ಟರ್ ವಿವರಿಸುತ್ತಾರೆ. “ಅವರು ಇಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ಭಾವನೆಯಿಂದಲೇ ಬರುತ್ತಾರೆ.”

ಸದಾ ನೆಲೆಗೊಂಡಿರುವ ಧ್ಯೇಯ

ಪ್ರಸ್ತುತ, ಸಹೋದರಿ ಫೆಲಿಸ್ಟರ್ ಅವರೇ ಕೇಂದ್ರದಲ್ಲಿ ಪೂರ್ಣಕಾಲಿಕವಾಗಿ ಸೇವೆ ಸಲ್ಲಿಸುತ್ತಿರುವ ಏಕೈಕ ಧರ್ಮಭಗಿನಿಯಾಗಿದ್ದಾರೆ. ಅವರ ಸಮುದಾಯ ಚಿಕ್ಕದಾಗಿದ್ದರೂ, ಅವರ ದೃಢನಿಶ್ಚಯ ಅಪಾರವಾಗಿದೆ. ಒಂದು ದಿನ “ಸ್ಕೆಟಿಂಪಿಲೋ” ಯುವಜನರಿಗೆ ಅತ್ಯಂತ ಅಗತ್ಯವಾಗಿರುವ ವೃತ್ತಿಪರ ತರಬೇತಿ ಕೇಂದ್ರವಾಗಿ ಬೆಳೆಯಬಹುದು ಎಂಬ ವಿಶ್ವಾಸವನ್ನು ಅವರು ಹೊಂದಿದ್ದಾರೆ.

“ ಧರ್ಮಭಗಿನಿಯರಾಗಿ ನಾವು ಸೇವೆ ಸಲ್ಲಿಸುವ ಜನರೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ; ಈ ಸೇವೆಯನ್ನು ದೇವರಿಗೆ ಸಮರ್ಪಣೆಯಾಗಿ ಅರ್ಪಿಸುತ್ತೇವೆ,” ಎಂದು ಸಹೋದರಿ ಫೆಲಿಸ್ಟರ್ ಕೃತಜ್ಞತೆಯಿಂದ ಹೇಳುತ್ತಾರೆ.

“ನಾವು ಸಹಾಯ ಮಾಡುತ್ತಿರುವ ಕುಟುಂಬಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ನಾವು ನೀಡುವ ಸ್ವಲ್ಪ ಸಹಾಯವನ್ನೂ ನೀವು ಮೆಚ್ಚುತ್ತೀರಿ. ನಿಮ್ಮ ಕೃತಜ್ಞತೆಯೇ ನಮಗೆ ಶಕ್ತಿಯನ್ನು ನೀಡುತ್ತದೆ. ಮತ್ತು ನಮ್ಮ ದಾನಿಗಳಿಗೆ — ನೀವಿಲ್ಲದೆ ನಾವು ನಿಲ್ಲಲು ಸಾಧ್ಯವಿಲ್ಲ. ದೇವರು ನಿಮ್ಮನ್ನು ಸಮೃದ್ಧವಾಗಿ ಆಶೀರ್ವದಿಸಲಿ.”

“ಸ್ಕೆಟಿಂಪಿಲೋ” ಕೇಂದ್ರದ ಕಾರ್ಯಗಳು ಜರ್ಮನ್ ಫ್ರೆಂಡ್ಸ್ ಮತ್ತು ಮಾನೂಸ್ ಯುನಿಟಾಸ್ ಮೊದಲಾದ ಸಹಭಾಗಿಗಳ ಉದಾರತೆಯ ಮೇಲೆ ಅವಲಂಬಿತವಾಗಿವೆ. ಅವರ ಬೆಂಬಲದ ಮೂಲಕವೇ CPS ಧರ್ಮಭಗಿನಿಯರು ಅಸಹಾಯಕರಿಗೆ ಜೀವನ, ಶಿಕ್ಷಣ ಮತ್ತು ಮಾನವ ಘನತೆಯನ್ನು ತಲುಪಿಸುವ ತಮ್ಮ ಸೇವೆಯನ್ನು ಮುಂದುವರಿಸುತ್ತಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

18 ಮೇ 2026, 20:00