ವೆನೆಜುವೆಲಾ ಕಾರಿತಾಸ್ ಅಧ್ಯಕ್ಷರು: ಗಾಯಾಳುಗಳ ಆರೈಕೆ ಮತ್ತು ಬದುಕುಳಿದವರ ಶೋಧವೇ ಮೊದಲ ಆದ್ಯತೆ
ಲೇಖಕರು: ಅಲಿನಾ ತುಫಾನಿ ಡಯಾಜ್
“ಈ ದೇಶಕ್ಕಾಗಿ, ಕಷ್ಟ ಅನುಭವಿಸುತ್ತಿರುವ ಎಲ್ಲರಿಗಾಗಿ ಹಾಗೂ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎಲ್ಲರಿಗಾಗಿ ಪ್ರತಿಯೊಬ್ಬರೂ ಪ್ರಾರ್ಥಿಸಬೇಕು ಎಂದು ನಾವು ವಿನಂತಿಸುತ್ತೇವೆ.” ಎಂದು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ವೆನೆಜುವೆಲಾ ಕಾರಿತಾಸ್ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷ ವಂ. ಜೋಸೆ ಲೂಯಿಸ್ ಅಜುವಾಜೆ ಅಯಾಲಾ ವಿನಂತಿಸಿದ್ದಾರೆ.
ಕಳೆದ ಬುಧವಾರ ಸಂಭವಿಸಿದ ಭೀಕರ ಭೂಕಂಪಗಳ ಪರಿಣಾಮಗಳನ್ನು ಅಂತರರಾಷ್ಟ್ರೀಯ ಸಮುದಾಯವು ಮರೆಯಬಾರದು ಎಂದು ಅವರು ಮನವಿ ಮಾಡಿದರು. ಅವಶೇಷಗಳಡಿ ಇನ್ನೂ ಸಿಲುಕಿರುವ ಸಾಧ್ಯತೆಯಿರುವವರನ್ನು ಪತ್ತೆಹಚ್ಚುವ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸುವ ಅಗತ್ಯವಿದೆ ಎಂದು ಅವರು ವಿಶೇಷವಾಗಿ ಒತ್ತಿ ಹೇಳಿದರು.
ಅನಂತರ ಸಂಭವಿಸುತ್ತಿರುವ ಅನೇಕ ಪ್ರಬಲ ಕಂಪನಗಳಿಂದ ಕುಸಿಯುವ ಅಪಾಯದಲ್ಲಿರುವ ಕಟ್ಟಡಗಳು ಮತ್ತು ಮೂಲಸೌಕರ್ಯಗಳನ್ನು ತಕ್ಷಣವೇ ಪರಿಶೀಲಿಸಬೇಕು. ಈ ದುರಂತದ ಪರಿಣಾಮಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಲು “ಸರ್ಕಾರಿ ಇಲಾಖೆಗಳು ಮತ್ತು ನಾಗರಿಕ ಸಮಾಜದ ನಡುವೆ ಸಮನ್ವಯದ ಪ್ರಯತ್ನ ಅಗತ್ಯ” ಎಂದು ಅವರು ಮನವಿ ಮಾಡಿದರು.
ರಿಕ್ಟರ್ ಮಾಪಕದಲ್ಲಿ 7.2 ಮತ್ತು 7.5 ತೀವ್ರತೆಯ ಎರಡು ಭೂಕಂಪಗಳು ಮಧ್ಯ ಹಾಗೂ ಈಶಾನ್ಯ ವೆನೆಜುವೆಲಾವನ್ನು ಅಪ್ಪಳಿಸಿ ಸುಮಾರು ಮೂರು ದಿನಗಳಾಗಿವೆ. ಅಧಿಕೃತ ಮಾಹಿತಿಯ ಪ್ರಕಾರ, ಕನಿಷ್ಠ 920 ಮಂದಿ ಮೃತಪಟ್ಟಿದ್ದು, 3,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಹಾಗೂ 50,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ತುರ್ತು ಪರಿಸ್ಥಿತಿ ನಿರ್ವಹಣೆಯಲ್ಲಿ ಪರಿಣತಿ ಹೊಂದಿರುವ ಹಲವಾರು ಸರ್ಕಾರೇತರ ಸಂಸ್ಥೆಗಳ ಪ್ರಕಾರ, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ವೆನೆಜುವೆಲಾ ಸರ್ಕಾರವು ರಾಜಧಾನಿ ಜಿಲ್ಲೆ ಹಾಗೂ ಲಾ ಗ್ವೈರಾ, ಫಾಲ್ಕೋನ್, ಕಾರಬೊಬೊ, ಯಾರಾಕುಯ್, ಅರಗುವಾ, ಮಿರಾಂಡಾ, ಟ್ರುಜಿಲ್ಲೊ ಮತ್ತು ಲಾರಾ ರಾಜ್ಯಗಳಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಆದರೆ ರಾಜಧಾನಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ, ದೇಶದ ಪ್ರಮುಖ ಬಂದರು ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿರುವ ಲಾ ಗ್ವೈರಾ ಪ್ರದೇಶದಲ್ಲಿ ಅತ್ಯಂತ ಭಾರೀ ಹಾನಿ ಸಂಭವಿಸಿದೆ.
ನಾಪತ್ತೆಯಾದವರ ಕುರಿತು ಆತಂಕ
ಭೂಕಂಪದಿಂದ ನೇರವಾಗಿ ಬಾಧಿತವಾಗದ ಮರಕೈಬೊ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಅಜುವಾಜೆ ಅವರು, ವಿಶೇಷವಾಗಿ ತೀವ್ರ ಹಾನಿಗೊಳಗಾದ ಪ್ರದೇಶಗಳು, ಕಾರಾಕಾಸ್‌ನ ಕೆಲವು ಭಾಗಗಳು ಹಾಗೂ ವೆನೆಜುವೆಲಾದ ಮಧ್ಯ ಕರಾವಳಿ ಪ್ರದೇಶಗಳಲ್ಲಿ ಸಂಭವಿಸಿರುವ ಮಾನವೀಯ ಮತ್ತು ಭೌತಿಕ ಹಾನಿಯ ಸಂಪೂರ್ಣ ಪ್ರಮಾಣವನ್ನು ಅಧಿಕಾರಿಗಳು ಇನ್ನೂ ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಪ್ರದೇಶಗಳಲ್ಲಿಯೇ ವಿನಾಶವೂ ಹಾಗೂ ಭೂಕಂಪದ ತೀವ್ರತೆಯೂ ಅತ್ಯಧಿಕವಾಗಿತ್ತು. “ಅನೇಕ ಜನರು ಇನ್ನೂ ನಾಪತ್ತೆಯಾಗಿದ್ದು, ಹಲವಾರು ಕಟ್ಟಡಗಳ ಅವಶೇಷಗಳಡಿ ಅವರು ಸಿಲುಕಿರುವ ಸಾಧ್ಯತೆಯಿದೆ.” ವಸತಿ ಕಟ್ಟಡಗಳು ಮಾತ್ರವಲ್ಲದೆ, ಹೋಟೆಲ್‌ಗಳು, ಮನರಂಜನಾ ಕೇಂದ್ರಗಳು ಹಾಗೂ ವಾಣಿಜ್ಯ ಕಟ್ಟಡಗಳೂ ಕುಸಿದಿವೆ .' “ವಿಶೇಷವಾಗಿ ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆಹಚ್ಚುವ ಕಾರ್ಯಕ್ಕೆ ಆದ್ಯತೆ ನೀಡುತ್ತಾ ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತಿದ್ದಾರೆ” ಎಂದು ಹೇಳಿದರು.
ಸಾವಿರಾರು ಜನರು ಸ್ಥಳಾಂತರ
“ಅನಂತರ ಸಂಭವಿಸಬಹುದಾದ ಭೂಕಂಪಗಳಿಂದ ಈಗಾಗಲೇ ತೀವ್ರವಾಗಿ ಹಾನಿಗೊಳಗಾಗಿರುವ ಕಟ್ಟಡಗಳು ಮತ್ತು ಮೂಲಸೌಕರ್ಯಗಳು ಮತ್ತಷ್ಟು ಕುಸಿಯುವ ಭಯದಿಂದ ಸಾವಿರಾರು ಜನರು ಸಾರ್ವಜನಿಕ ಮೈದಾನಗಳು ಮತ್ತು ತೆರೆದ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ” ಎಂದು ಮಹಾಧರ್ಮಾಧ್ಯಕ್ಷ ವಂ. ಅಜುವಾಜೆ ದೃಢಪಡಿಸಿದರು. ಈಗಾಗಲೇ ಒತ್ತಡದಲ್ಲಿದ್ದ ವಿದ್ಯುತ್ ಜಾಲ ಹಾಗೂ ಕುಡಿಯುವ ನೀರಿನ ವಿತರಣಾ ವ್ಯವಸ್ಥೆಗಳು ಕೆಲವು ಪ್ರದೇಶಗಳಲ್ಲಿ ಸಂಪೂರ್ಣ ಕುಸಿದಿರುವುದರ ಬಗ್ಗೆಯೂ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ಈ ನಡುವೆ, ದೇಶದಾದ್ಯಂತದ ಧರ್ಮಕ್ಷೇತ್ರಗಳು ಕಾರಿತಾಸ್ ಜಾಲ ಮತ್ತು ಇತರ ಸಂಘಟನೆಗಳ ಮೂಲಕ ಪರಿಹಾರ ಸಾಮಗ್ರಿಗಳ ಸಂಗ್ರಹ ಕೇಂದ್ರಗಳನ್ನು ಆರಂಭಿಸಿವೆ. ತಮ್ಮ ಮನೆಗಳನ್ನು ಕಳೆದುಕೊಂಡವರಿಗೆ ಆಶ್ರಯ ಕಲ್ಪಿಸುವ ವ್ಯವಸ್ಥೆಗಳನ್ನೂ ಮಾಡಲಾಗುತ್ತಿದೆ. “ಈ ಪರಿಸ್ಥಿತಿ ದೀರ್ಘಕಾಲ ಮುಂದುವರಿಯಲಿದೆ” ಎಂದು ವೆನೆಜುವೆಲಾ ಕಾರಿತಾಸ್ ಅಧ್ಯಕ್ಷರು ಹೇಳಿದರು. ಲಾ ಗ್ವೈರಾ ರಾಜ್ಯದಲ್ಲಿಯೇ 70,000ಕ್ಕೂ ಹೆಚ್ಚು ಕುಟುಂಬಗಳು ಮನೆ ಕಳೆದುಕೊಂಡಿವೆ ಎಂದು ಅಂದಾಜಿಸಲಾಗಿದೆ.
ತೀವ್ರ ಒತ್ತಡದಲ್ಲಿರುವ ಆಸ್ಪತ್ರೆಗಳು
ಹಾನಿಗೊಳಗಾದ ಹಲವಾರು ಆಸ್ಪತ್ರೆಗಳ ಗಂಭೀರ ಪರಿಸ್ಥಿತಿಯ ಬಗ್ಗೆಯೂ ಮಹಾಧರ್ಮಾಧ್ಯಕ್ಷರು ಗಮನ ಸೆಳೆದರು. “ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ತಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದಾರೆ. ವಿಶೇಷವಾಗಿ ಗಾಯಾಳುಗಳ ಆರೈಕೆ ಹಾಗೂ ಈ ಎರಡು ಏಕಕಾಲದ ಭೂಕಂಪಗಳಿಂದ ದೈಹಿಕ ಮತ್ತು ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿ ಬರುತ್ತಿರುವ ಅಸಂಖ್ಯಾತ ಜನರ ಸೇವೆಯಲ್ಲಿ ಅವರು ನಿರತರಾಗಿದ್ದಾರೆ.'
ತಕ್ಷಣದ ಆದ್ಯತೆಗಳ ಕುರಿತು ಅವರು ವಿವರಿಸುತ್ತಾ, ಗಾಯಾಳುಗಳ ಆರೈಕೆ, ಬದುಕುಳಿದಿರುವ ಸಾಧ್ಯತೆಯಿರುವವರಿಗಾಗಿ ಶೋಧ ಕಾರ್ಯ ಮುಂದುವರಿಸುವುದು, ಅನಂತರದ ಕಂಪನಗಳಿಗೆ ತುತ್ತಾಗಬಹುದಾದ ಮೂಲಸೌಕರ್ಯಗಳನ್ನು ಪರಿಶೀಲಿಸುವುದು ಹಾಗೂ ಸರ್ಕಾರಿ ಇಲಾಖೆಗಳು ಮತ್ತು ನಾಗರಿಕ ಸಮಾಜದ ನಡುವೆ ಸಮನ್ವಯ ಸಾಧಿಸಿ “ಈ ದುರಂತದ ಪರಿಣಾಮಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವುದು ಅತ್ಯಗತ್ಯ."
“ಕಾರಿತಾಸ್ ವೆನೆಜುವೆಲಾ ಮುಂಜಾನೆಯ ಮೊದಲ ಗಂಟೆಗಳಿಂದಲೇ, ವಿಶೇಷವಾಗಿ ತೀವ್ರ ಹಾನಿಗೊಳಗಾದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವುದೇ ಮೊದಲ ಗುರಿಯಾಗಿದ್ದು, ಬಂಧು-ಬಳಗ ಮತ್ತು ಸ್ನೇಹಿತರು ನೀಡಿದ ಮಾಹಿತಿಯ ಆಧಾರದ ಮೇಲೆ ನಾಪತ್ತೆಯಾದವರನ್ನೂ ಹುಡುಕಲಾಗುತ್ತಿದೆ” ಎಂದು ತಿಳಿಸಿದರು.
ದುರಂತದ ಮಾನಸಿಕ ಪರಿಣಾಮ
ಮುಂದಿನ ದಿನಗಳಲ್ಲಿಯೂ ವಿವಿಧ ತೀವ್ರತೆಯ ಅನಂತರದ ಭೂಕಂಪಗಳು ಸಂಭವಿಸುವ ಸಾಧ್ಯತೆಯಿಂದ ಉಂಟಾಗಿರುವ ಆತಂಕ, ಅನಿಶ್ಚಿತತೆ ಹಾಗೂ ಮಾನಸಿಕ ಒತ್ತಡವು ಕಾರಿತಾಸ್ ವೆನೆಜುವೆಲಾದ ಮತ್ತೊಂದು ಪ್ರಮುಖ ಆದ್ಯತೆಯಾಗಿದೆ. “ಕಾರಿತಾಸ್ ಹಾಗೂ ಕಥೋಲಿಕ ಧರ್ಮಸಭೆಯಾಗಿ, ಪ್ರತಿಯೊಬ್ಬರಿಗೂ ಸಾಧ್ಯವಾದಷ್ಟು ನೆರವಾಗಲು ನಾವು ಪ್ರಯತ್ನಿಸುತ್ತಿದ್ದೇವೆ. ಅವರು ಭರವಸೆಯನ್ನು ಕಂಡುಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಜನರ ಬದುಕಿನಲ್ಲಿ ಅನಿಶ್ಚಿತತೆ ಮತ್ತು ಅನೇಕ ದುಷ್ಪರಿಣಾಮಗಳನ್ನು ಉಂಟುಮಾಡುವ ಈ ಮಾನಸಿಕ ಹಾಗೂ ಭಾವನಾತ್ಮಕ ಸಂಕಷ್ಟವನ್ನು ಅವರು ಜಯಿಸಬೇಕು” ಎಂದು ಮಹಾಧರ್ಮಾಧ್ಯಕ್ಷ ಅಜುವಾಜೆ ಹೇಳಿದರು.
ಸಹಾಯಕ್ಕಾಗಿ ಮನವಿ
ವೆನೆಜುವೆಲಾ ಕಾರಿತಾಸ್ ಅಧ್ಯಕ್ಷರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಹಣಕಾಸಿನ ನೆರವು ನೀಡುವಂತೆ ಹಾಗೂ ದೀರ್ಘಕಾಲ ಕೆಡದ ಆಹಾರ ಪದಾರ್ಥಗಳು, ಔಷಧಿಗಳು, ಪ್ರಥಮ ಚಿಕಿತ್ಸಾ ಸಾಮಗ್ರಿಗಳು ಮತ್ತು ಈ ದುರಂತವನ್ನು ಎದುರಿಸಲು ನೆರವಾಗುವ ಇತರ ಎಲ್ಲ ಸಂಪನ್ಮೂಲಗಳನ್ನು ಒದಗಿಸುವಂತೆ ಮನವಿ ಮಾಡಿದರು.
“ನಾವು ಇದೇ ಕಾರ್ಯದಲ್ಲಿ ನಿರತರಾಗಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ನಾಗರಿಕ ಸಮಾಜ, ಖಾಸಗಿ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳು ಒಗ್ಗೂಡಿ, ನಮ್ಮ ದೇಶ ಎದುರಿಸುತ್ತಿರುವ ಈ ಸಂಕಷ್ಟವನ್ನು ನಿವಾರಿಸಲು ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಬೇಕು ಎಂದು ನಾವು ಪ್ರೋತ್ಸಾಹಿಸುತ್ತಿದ್ದೇವೆ” ಎಂದು ಅವರು ಹೇಳಿದರು.
ವೆನೆಜುವೆಲಾಗಾಗಿ ಪ್ರಾರ್ಥನೆ
ಈ ಕಠಿಣ ಸಮಯದಲ್ಲಿ ವೆನೆಜುವೆಲಾ ಜನರೊಂದಿಗೆ ಐಕ್ಯತೆ ವ್ಯಕ್ತಪಡಿಸಿ, ಕ್ರೈಸ್ತ ಕರುಣೆ ಮತ್ತು ಪ್ರೀತಿಯನ್ನು ತೋರಿದ ಅನೇಕ ಸಂಸ್ಥೆಗಳು ಹಾಗೂ ರಾಷ್ಟ್ರಗಳಿಗೆ ಮಹಾಧರ್ಮಾಧ್ಯಕ್ಷ ಅಜುವಾಜೆ ಕೃತಜ್ಞತೆ ಸಲ್ಲಿಸಿ, “ಈ ದೇಶಕ್ಕಾಗಿ, ಕಷ್ಟ ಅನುಭವಿಸುತ್ತಿರುವ ಎಲ್ಲರಿಗಾಗಿ ಹಾಗೂ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎಲ್ಲರಿಗಾಗಿ ಪ್ರತಿಯೊಬ್ಬರೂ ಪ್ರಾರ್ಥಿಸಬೇಕು ಎಂದು ನಾವು ವಿನಂತಿಸುತ್ತೇವೆ. ವಿಶೇಷವಾಗಿ ಅವಶೇಷಗಳಡಿ ಶೋಧ ಕಾರ್ಯದಲ್ಲಿ ತೊಡಗಿರುವವರಿಗೆ ಪ್ರಭು ಶಕ್ತಿ ಮತ್ತು ಧೈರ್ಯವನ್ನು ನೀಡಲಿ; ಅವರು ಇನ್ನೂ ಹೆಚ್ಚಿನ ಜನರ ಹಿತಕ್ಕಾಗಿ ತಮ್ಮ ಸೇವೆಯನ್ನು ಮುಂದುವರಿಸಲಿ” ಎಂದು ಹಾರೈಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).