ಜಗದ್ಗುರುಗಳ ಆದೇಶವಿಲ್ಲದೆ ಲೆಫೆಬ್ರಿಯನ್‌ಗಳಿಂದ ನಾಲ್ವರು ಹೊಸ ಧರ್ಮಾಧ್ಯಕ್ಷರ ದೀಕ್ಷಾಭಿಷೇಕ
ಲೇಖಕರು: ಸಾಲ್ವತೊರೆ ಚೆರ್‌ನೂಸಿಯೋ
ಜೂನ್ 29ರಂದು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಹೃದಯಸ್ಪರ್ಶಿ ಪತ್ರದ ಮೂಲಕ “ಪ್ರಭು ಯೇಸು ಕ್ರಿಸ್ತರ ಅವಿಭಜಿತ ವಸ್ತ್ರವನ್ನು ಹರಿಯಬೇಡಿ” ಎಂದು ಮಾಡಿದ ಮನವಿಯ ಹೊರತಾಗಿಯೂ, ವ್ಯಾಟಿಕನ್‌ನ ದೃಷ್ಟಿಯಲ್ಲಿ ಆ ಐಕ್ಯತೆಯ ವಸ್ತ್ರವು ಈಗ ಹರಿದಂತಾಗಿದೆ.
ಜುಲೈ 1ರ ಬುಧವಾರ ಬೆಳಿಗ್ಗೆ, ಸ್ವಿಟ್ಜರ್‌ಲ್ಯಾಂಡ್‌ನ ಎಕೋನ್‌ನಲ್ಲಿರುವ ಸಂತ ಹತ್ತನೆ ಪಿಯಸ್ ಯಾಜಕರ ಭ್ರಾತೃತ್ವ (FSSPX)ದ ಪ್ರಧಾನ ಕೇಂದ್ರದಲ್ಲಿ, ಮಾರ್ಸೆಲ್ ಲೆಫೆಬ್ರೆ ಅವರ ಅನುಯಾಯಿಗಳಾದ ಲೆಫೆಬ್ರಿಯನ್‌ಗಳು, ಪೂಜ್ಯ ಜಗದ್ಗುರುಗಳ ಅನುಮತಿಯಿಲ್ಲದೆ ನಾಲ್ವರು ಹೊಸ ಧರ್ಮಾಧ್ಯಕ್ಷರಿಗೆ ದೀಕ್ಷಾಭಿಷೇಕ ನೆರವೇರಿಸಿದರು.
ದೀಕ್ಷಾಭಿಷೇಕದ ವೇಳೆ ಕೇಳಲಾಗುವ “Habetis mandatum apostolicum?” (“ನಿಮ್ಮ ಬಳಿ ಪ್ರೇಷಿತೀಯ ಆದೇಶವಿದೆಯೇ?”) ಎಂಬ ಧಾರ್ಮಿಕ ಪ್ರಶ್ನೆಗೆ ಹೊಸ ಧರ್ಮಾಧ್ಯಕ್ಷರು ಸಮ್ಮತಿಯ ಉತ್ತರ ನೀಡಿದ್ದರೂ, ತಮ್ಮ ಸಭೆಯ ನಿರಂತರತೆ ಮತ್ತು ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ದೀಕ್ಷಾಭಿಷೇಕಗಳು ಅಗತ್ಯವೆಂದು ಅವರು ಸಮರ್ಥಿಸಿಕೊಂಡರು. ಆದರೆ, ಜಗದ್ಗುರುಗಳ ಅಧಿಕಾರ ಪೀಠವು ಇದನ್ನು ಧರ್ಮಸಭಾ ಐಕ್ಯತೆಯನ್ನು ಭಂಗಗೊಳಿಸುವ ಕೃತ್ಯವೆಂದು ಪರಿಗಣಿಸಿ, ಇಂತಹ ಕ್ರಮದಿಂದ ಹಿಂದೆ ಸರಿಯುವಂತೆ ಹಲವು ಬಾರಿ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಗಳನ್ನು ನಂಬಿಕೆಯ ಸಿದ್ಧಾಂತಗಳ ವಿಭಾಗದ ಪ್ರಧಾನ ಗುರು ವಿಕ್ಟರ್ ಮ್ಯಾನುಯೆಲ್ ಫೆರ್ನಾಂಡೇಸ್ ಹಾಗೂ ದೀಕ್ಷಾಭಿಷೇಕಕ್ಕೆ ಎರಡು ದಿನಗಳ ಮೊದಲು ಪತ್ರ ಬರೆದಿದ್ದ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ನೀಡಿದ್ದರು.
ಎಕೋನ್‌ನಲ್ಲಿ ನಡೆದ ದೀಕ್ಷಾಭಿಷೇಕ ಸಮಾರಂಭ
FSSPX ಸೆಮಿನರಿಯ ಪಕ್ಕದಲ್ಲಿದ್ದ ಬೃಹತ್ ಬಿಳಿ ಗುಡಾರದಲ್ಲಿ ಬೆಳಿಗ್ಗೆ 9 ಗಂಟೆಗೆ ಆರಂಭವಾದ ಈ ಸಮಾರಂಭದಲ್ಲಿ 1,000ಕ್ಕೂ ಹೆಚ್ಚು ಯಾಜಕರು, ದೇವರಿಗೆ ಸಮರ್ಪಿತ ಪುರುಷರು ಮತ್ತು ಮಹಿಳೆಯರು ಹಾಗೂ ಸುಮಾರು 15,000 ಭಕ್ತರು ಭಾಗವಹಿಸಿದರು. ಸಭೆಯ ಅಧಿಕೃತ ಜಾಲತಾಣದ ಮೂಲಕ ಈ ಕಾರ್ಯಕ್ರಮವನ್ನು ಆರು ಭಾಷೆಗಳಲ್ಲಿ ನೇರಪ್ರಸಾರ ಮಾಡಲಾಯಿತು. ಕಳೆದ ಕೆಲವು ದಿನಗಳಿಂದ ಇದೇ ಜಾಲತಾಣದಲ್ಲಿ ಸಮಾರಂಭದ ಕ್ಷಣಗಣನೆಯ ಜೊತೆಗೆ ಸ್ಮರಣಿಕಾ ವಸ್ತುಗಳು ಮತ್ತು ಸಂಬಂಧಿತ ಕಾರ್ಯಕ್ರಮಗಳ ಮಾಹಿತಿಯೂ ಪ್ರಕಟವಾಗುತ್ತಿತ್ತು.
ದೀಕ್ಷಾಭಿಷೇಕ ಪಡೆದ ನಾಲ್ವರು ಹೊಸ ಧರ್ಮಾಧ್ಯಕ್ಷರು:
- ಪಾಸ್ಕಲ್ ಶ್ರೈಬರ್ – 53 ವರ್ಷದ ಸ್ವಿಸ್ ಯಾಜಕ; 1998ರಲ್ಲಿ ಎಕೋನ್‌ನಲ್ಲಿ ಯಾಜಕರಾದವರು.
- ಮೈಕೆಲ್ ಗೋಲ್ಡೇಡ್ – ಅಮೆರಿಕದ ಉತ್ತರ ಡಕೋಟಾದಲ್ಲಿ ಜನಿಸಿ, ಕಾನ್ಸಾಸ್‌ನಲ್ಲಿ ಬೆಳೆದವರು.
- ಮಿಶೆಲ್ ಪೊಯ್ನ್ಸಿನೆ ದೆ ಸಿವ್ರಿ – 42 ವರ್ಷದ ಫ್ರೆಂಚ್ ಯಾಜಕ.
- ಮಾರ್ಕ್ ಹಪ್ಪಿಯರ್ – 36 ವರ್ಷದ ಫ್ರೆಂಚ್ ಯಾಜಕ.
ದೀಕ್ಷಾಭಿಷೇಕವನ್ನು ಧರ್ಮಾಧ್ಯಕ್ಷ ಅಲ್ಫೋನ್ಸೊ ದೆ ಗಲಾರೆತ್ತಾ ನೆರವೇರಿಸಿದರೆ, ಧರ್ಮಾಧ್ಯಕ್ಷ ಬೆರ್ನಾರ್ಡ್ ಫೆಲ್ಲೇ ಸಹದೀಕ್ಷಾಭಿಷೇಕಕರಾಗಿ ಕಾರ್ಯನಿರ್ವಹಿಸಿದರು. 1988ರ ಜೂನ್ 30ರಂದು ಮಾರ್ಸೆಲ್ ಲೆಫೆಬ್ರೆ ಅವರು ಜಗದ್ಗುರುಗಳ ಅನುಮತಿಯಿಲ್ಲದೆ ದೀಕ್ಷಾಭಿಷೇಕ ನೀಡಿದ್ದ ನಾಲ್ವರು ಧರ್ಮಾಧ್ಯಕ್ಷರಲ್ಲಿ ಈಗ ಜೀವಂತವಾಗಿರುವ ಇಬ್ಬರು ಇವರೇ. ಕಥೋಲಿಕ ಧರ್ಮಸಭೆಯ ನಿಯಮಗಳ ಪ್ರಕಾರ, ಪೂಜ್ಯ ಜಗದ್ಗುರುಗಳ ಅನುಮತಿಯಿಲ್ಲದೆ ಧರ್ಮಾಧ್ಯಕ್ಷರಿಗೆ ದೀಕ್ಷಾಭಿಷೇಕ ನೀಡುವುದು ಸ್ವಯಂಬಹಿಷ್ಕಾರ (latae sententiae excommunication)ಕ್ಕೆ ಕಾರಣವಾಗುತ್ತದೆ.
ಶ್ರೇಷ್ಠಾಧಿಕಾರಿ ಪಾಗ್ಲಿಯಾರಾನಿಯವರ ಹೇಳಿಕೆ
ಪವಿತ್ರ ಬಲಿಪೂಜೆಯ ಆರಂಭದಲ್ಲಿ, ಸಂತ ಹತ್ತನೆ ಪಿಯಸ್ ಯಾಜಕರ ಭ್ರಾತೃತ್ವದ ಶ್ರೇಷ್ಠಾಧಿಕಾರಿ ವಂ. ಗುರು ದಾವಿದೆ ಪಾಗ್ಲಿಯಾರಾನಿ ಸಂಕ್ಷಿಪ್ತ ಭಾಷಣ ಮಾಡಿದರು. “ಧರ್ಮಸಭೆಯನ್ನು ಉಳಿಸುವುದಕ್ಕಾಗಿ ಯಾವ ಬೆಲೆಯನ್ನಾದರೂ ತೆರಲು ನಾವು ಸಿದ್ಧರಾಗಿದ್ದೇವೆ” ಎಂದು ಅವರು ಹೇಳಿದರು. ಅವರ ಪ್ರಕಾರ, “ಈ ಯಾಜಕರಿಗೆ ಧರ್ಮಾಧ್ಯಕ್ಷತ್ವದ ಅನುಗ್ರಹವನ್ನು ಹಸ್ತಾಂತರಿಸುವುದು ಅತ್ಯಂತ ಗಂಭೀರ ಕರ್ತವ್ಯವಾಗಿದೆ.” “ಈ ಕಾರ್ಯಕ್ಕಾಗಿ ವಿಧಿಸಲಾಗುವ ಯಾವುದೇ ಶಿಕ್ಷೆಗಳು ಅಥವಾ ದಂಡನೆಗಳಿಗೆ ಯಾವುದೇ ಮೌಲ್ಯವಿಲ್ಲವೆಂದು ನಾವು ಪರಿಗಣಿಸುತ್ತೇವೆ” ಎಂದು ಅವರು ಸೇರಿಸಿದರು.
ಲೆಫೆಬ್ರಿಯನ್‌ಗಳ ಪಾಲಿಗೆ, “ಇದು ಐತಿಹಾಸಿಕ ದಿನ” ಹಾಗೂ “ಸಂಭ್ರಮದ ದಿನ” ಎಂದು ಪಾಗ್ಲಿಯಾರಾನಿ ಹೇಳಿದರು. ಆದರೆ ವಿಶ್ವವ್ಯಾಪಿ ಧರ್ಮಸಭೆಯ ದೃಷ್ಟಿಯಲ್ಲಿ, ವ್ಯಾಟಿಕನ್‌ನ ಮೌಲ್ಯಮಾಪನದ ಪ್ರಕಾರ, ಇದು ವಿಭಜನೆಯ ಹಳೆಯ ಗಾಯವನ್ನು ಮತ್ತೊಮ್ಮೆ ತೆರೆಯುವ ದಿನವಾಗಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).