ಲೆಬನಾನ್‌ನ ಕ್ರೈಸ್ತರಿಂದ ಸಹೋದರ ಎಸ್ತೆಫಾನ್ ಅವರ ಸ್ಮರಣೆ
ಲೇಖಕರು: ಜೋಸೆಫ್ ಟಲ್ಲೊಕ್ – ಕ್ಫಿಫಾನ್, ಲೆಬನಾನ್
2010ರಲ್ಲಿ ಪೂಜ್ಯ ಜಗದ್ಗುರು ಬೆನೆಡಿಕ್ಟ್ ಅವರಿಂದ ಧನ್ಯರೆಂದು ಘೋಷಿಸಲ್ಪಟ್ಟ ವಿನಮ್ರ ಲೆಬನಾನಿನ ಸಂನ್ಯಾಸಿ ಧನ್ಯ ಸಹೋದರ ಎಸ್ತೆಫಾನ್ ನೆಹ್ಮೆ ಅವರ ಧ್ಯೇಯವಾಕ್ಯ "ಅಲ್ಲಾಹ್ ಯಾರಾನಿ" – ಅಂದರೆ "ದೇವರು ನನ್ನನ್ನು ನೋಡುತ್ತಿದ್ದಾರೆ" ಎಂಬುದಾಗಿತ್ತು.
ಜೂನ್ 27ರ ಶನಿವಾರ, ಇದೇ ಧ್ಯೇಯವಾಕ್ಯವು ಲೆಬನಾನ್‌ನ ಪರ್ವತ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಿದ ಭಕ್ತರ ಕೈಯಲ್ಲಿದ್ದ ಬ್ಯಾನರ್‌ಗಳ ಮೇಲೆ ಅಚ್ಚಾಗಿತ್ತು. ಸಹೋದರ ಎಸ್ತೆಫಾನ್ ತಮ್ಮ ಜೀವನದ ಬಹುಭಾಗವನ್ನು ಕಳೆದ ಕ್ಫಿಫಾನ್ ಮಠದತ್ತ ಸಾಗಿದ ಈ ಮೆರವಣಿಗೆಯು, ಅವರ ಧನ್ಯಪದವಿ ಘೋಷಣೆಯ 16ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಶೀಘ್ರದಲ್ಲೇ ಅವರು ಸಂತರೆಂದು ಘೋಷಿಸಲ್ಪಡುವ ದಿನವನ್ನು ಭಕ್ತರು ನಿರೀಕ್ಷಿಸುತ್ತಿದ್ದಾರೆ.
“ಅವರು ಸಂತರಾಗಲೆಂದು ನಾವು ಪ್ರಾರ್ಥಿಸುತ್ತಿದ್ದೇವೆ,” ಎಂದು ಮಠದ ಮೇಲ್ವಿಚಾರಕರಾದ ವಂ. ಗುರು ಎಸ್ತೆಫಾನ್ ಫರಾ ಅವರು ವ್ಯಾಟಿಕನ್ ವಾರ್ತಾ ಸಂಸ್ಥೆಗೆ ತಿಳಿಸಿದರು. “ಸಹೋದರ ಎಸ್ತೆಫಾನ್ ಅನೇಕ ಅದ್ಭುತಗಳನ್ನು ನಡೆಸುತ್ತಿದ್ದಾರೆ.” 1938ರಲ್ಲಿ ನಿಧನರಾದ ಅವರು “ಇಂದಿಗೂ ನಮ್ಮೊಂದಿಗೇ ಜೀವಿಸುತ್ತಿದ್ದಾರೆ. ಈ ಭಕ್ತರ ಪ್ರಾರ್ಥನೆಯೇ ಅವರನ್ನು ಸಂತರನ್ನಾಗಿ ಮಾಡುತ್ತದೆ.”
ಮುಖ್ಯವಾಗಿ ಸ್ಥಳೀಯ ಕ್ರೈಸ್ತರಿಂದ ಕೂಡಿದ್ದ ಈ ಮೆರವಣಿಗೆಯಲ್ಲಿ ಕೆಲ ಮುಸ್ಲಿಮರೂ ಭಾಗವಹಿಸಿದ್ದರು. ಮಧ್ಯಾಹ್ನ ಲೆಬನಾನ್‌ನ ಉತ್ತರ ಭಾಗದ ಬತ್ರೂನ್ ನಗರದಿಂದ ಹೊರಟ ಅವರು, ಲೆಬನಾನ್‌ನ ಧ್ವಜಗಳು ಹಾಗೂ ಸಹೋದರ ಎಸ್ತೆಫಾನ್ ಅವರ ಚಿತ್ರಗಳನ್ನು ಹೊತ್ತು ಐದು ಗಂಟೆಗಳಿಗೂ ಹೆಚ್ಚು ಕಾಲ ಪರ್ವತದ ಮಾರ್ಗದಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರು. ಅವರು ಹಾದುಹೋದ ಪ್ರತಿಯೊಂದು ಗ್ರಾಮದಲ್ಲೂ ಹೊಸ ಭಕ್ತರು ಸೇರಿಕೊಂಡ ಪರಿಣಾಮ, ಕ್ಫಿಫಾನ್ ತಲುಪುವ ವೇಳೆಗೆ ಅವರ ಸಂಖ್ಯೆ ಸಾವಿರಕ್ಕೂ ಹೆಚ್ಚಾಗಿತ್ತು.
ಈ ಪರ್ವತ ಮಠದಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲಿ, ಸಹೋದರ ಎಸ್ತೆಫಾನ್ ಕೃಷಿ ಹಾಗೂ ಕಟ್ಟಡ ನಿರ್ಮಾಣದಂತಹ ದೈಹಿಕ ಶ್ರಮದ ಕಾರ್ಯಗಳಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರ ಸರಳತೆ ಮತ್ತು ವಿನಯಶೀಲತೆಗೆ ಅವರು ಹೆಸರುವಾಸಿಯಾಗಿದ್ದರು.
“ಸಹೋದರ ಎಸ್ತೆಫಾನ್ ಇಂದಿಗೂ ನಮ್ಮನ್ನು ದೈನಂದಿನ ಜೀವನದಲ್ಲಿ ಸರಳವಾಗಿ ಬದುಕಲು ಆಹ್ವಾನಿಸುತ್ತಾರೆ,” ಎಂದು ವಂ. ಗುರು ಫರಾ ಹೇಳಿದರು. “ಅವರ ಜೀವನವೆಂದರೆ ಪ್ರತಿದಿನ ಪ್ರಾರ್ಥನೆ, ಶ್ರಮ ಮತ್ತು ತಮ್ಮ ದೇವರ ಕರೆಯ ಕಡೆಗೆ ನಿಷ್ಠೆಯಿಂದ ಬದುಕುವುದಾಗಿತ್ತು.”
ಮೆರವಣಿಗೆಯ ಬಳಿಕ ನಡೆದ ಪವಿತ್ರ ಬಲಿಪೂಜೆಯ ಪ್ರಭೋದನೆಯಲ್ಲಿ, ಬತ್ರೂನ್‌ನ ಮರೋನೈಟ್ ಧರ್ಮಾಧ್ಯಕ್ಷರಾದ ಧರ್ಮಾಧ್ಯಕ್ಷ ಮುನೀರ್ ಖೈರಲ್ಲಾ ಅವರು ಸಹೋದರ ಎಸ್ತೆಫಾನ್ ಅವರ ಆಧ್ಯಾತ್ಮಿಕತೆಯನ್ನು ಸಂತ ಚಾರ್ಬೆಲ್ ಮಖ್ಲೂಫ್ ಅವರ ಆಧ್ಯಾತ್ಮಿಕತೆಯೊಂದಿಗೆ ಹೋಲಿಸಿದರು. ಅದು “ಪ್ರಾರ್ಥನೆ, ತಪಸ್ಸು ಮತ್ತು ಭೂಮಿಯನ್ನು ಉಳುಮೆ ಮಾಡುವ ಶ್ರಮದ ಮೂಲಕ ದೇವರೊಂದಿಗೆ ನೇರ ಸಂಬಂಧವನ್ನು ಬೆಳೆಸುವ ತಪಸ್ವಿ ಆಧ್ಯಾತ್ಮಿಕತೆ” ಎಂದು ಅವರು ವಿವರಿಸಿದರು.
“‘ದೇವರು ನನ್ನನ್ನು ನೋಡುತ್ತಿದ್ದಾರೆ’ ಎಂಬ ಧ್ಯೇಯವಾಕ್ಯವನ್ನು ತಮ್ಮ ಜೀವನದ ಆದರ್ಶವನ್ನಾಗಿ ಮಾಡಿಕೊಂಡಿದ್ದ ಸಹೋದರ ಎಸ್ತೆಫಾನ್, ತಮ್ಮ ಇಡೀ ಜೀವನವನ್ನು ಪ್ರಾರ್ಥನೆಯಲ್ಲಿ ಸ್ವರ್ಗದತ್ತ ದೃಷ್ಟಿ ನೆಟ್ಟು ಕಳೆದರು” ಎಂದು ಧರ್ಮಾಧ್ಯಕ್ಷರು ಹೇಳಿದರು.
ಇದೇ ಸಂದರ್ಭದಲ್ಲಿ ಇಸ್ರಾಯೇಲ್ ದಕ್ಷಿಣ ಲೆಬನಾನ್ ಮೇಲೆ ಮಾರಕ ದಾಳಿಗಳನ್ನು ಮುಂದುವರಿಸಿತ್ತು. ಈ ಮೆರವಣಿಗೆಯಲ್ಲಿ ಲೆಬನಾನ್‌ನಲ್ಲಿರುವ ಇಟಲಿಯ ದ್ವಿಪಕ್ಷೀಯ ಸೇನಾ ಕಾರ್ಯಾಚರಣೆ (MIBIL)ಯ ನಾಲ್ವರು ಇಟಾಲಿಯನ್ ಸೇನಾ ಅಧಿಕಾರಿಗಳೂ ಭಾಗವಹಿಸಿದ್ದರು. ಲೆಬನಾನ್ ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಉತ್ತೇಜಿಸಲು ಅವರು ನೀಡುತ್ತಿರುವ ಕೊಡುಗೆಗಾಗಿ ಧರ್ಮಾಧ್ಯಕ್ಷ ಖೈರಲ್ಲಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ನೂರಾರು ಭಕ್ತರು ವ್ಯಕ್ತಪಡಿಸಿದ ವಿಶ್ವಾಸವನ್ನು ಕುರಿತು ಮಾತನಾಡಿದ ವಂ. ಗುರು ಫರಾ, “ನಮಗೆ ಬೇಕಾಗಿರುವುದು ಶಾಂತಿ ಎಂಬುದನ್ನು ಇದು ಸಾರುತ್ತದೆ. ಸಂತರ ಸಂದೇಶವು ಯುದ್ಧಕ್ಕಾಗಿ ಅಲ್ಲ, ಶಾಂತಿಗಾಗಿ ಒಂದಾಗುವುದಾಗಿದೆ” ಎಂದು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).