ಪಪುವಾ ನ್ಯೂಗಿನಿಯಾದ ವಯೋವೃದ್ಧ ಮಿಷನರಿಗಳು (© ವಂ. ಗುರು ಕ್ರಿಸ್ಟಿಯನ್ ಸೀಲಾಂಡ್ ಅವರ ಛಾಯಾಚಿತ್ರ) ಪಪುವಾ ನ್ಯೂಗಿನಿಯಾದ ವಯೋವೃದ್ಧ ಮಿಷನರಿಗಳು (© ವಂ. ಗುರು ಕ್ರಿಸ್ಟಿಯನ್ ಸೀಲಾಂಡ್ ಅವರ ಛಾಯಾಚಿತ್ರ)  (©Photo by Fr. Christian Sieland)

ಪಪುವಾ ನ್ಯೂಗಿನಿಯಾದ ವಯೋವೃದ್ಧ ಮಿಷನರಿಗಳ ಪರಂಪರೆ

ಐದು ದಶಕಗಳಿಗೂ ಹೆಚ್ಚು ಕಾಲ ಪಪುವಾ ನ್ಯೂಗಿನಿಯಾದಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ ಯುರೋಪಿಗೆ ಮರಳಿರುವ ವಯೋವೃದ್ಧ ಮಿಷನರಿಗಳು ತಮ್ಮ ನಂಬಿಕೆ, ತ್ಯಾಗ ಮತ್ತು ಪಪುವಾ ನ್ಯೂಗಿನಿಯಾದ ಜನರ ಮೇಲಿನ ಅಚಲ ಪ್ರೀತಿಯ ಅಸಾಧಾರಣ ಕಥೆಯನ್ನು ಇಂದಿಗೂ ಹೇಳುತ್ತಲೇ ಇದ್ದಾರೆ. ಪಪುವಾ ನ್ಯೂಗಿನಿಯಾದ ಜಗದ್ಗುರುಗಳ ಧರ್ಮಪ್ರಚಾರ ಸಂಘಗಳ ರಾಷ್ಟ್ರೀಯ ನಿರ್ದೇಶಕರಾದ ವಂ. ಗುರು ಕ್ರಿಸ್ಟಿಯನ್ ಸೀಲಾಂಡ್ ಅವರನ್ನು ಭೇಟಿ ಮಾಡಿದ ಬಳಿಕ, ಅವರ ವಿನಯ, ಸಮರ್ಪಣೆ ಹಾಗೂ ದಶಕಗಳ ಸೇವೆಯ ಅವಧಿಯಲ್ಲಿ ಸ್ಥಳೀಯ ಸಂಸ್ಕೃತಿಯೊಂದಿಗೆ ಶುಭಸಂದೇಶವನ್ನು ಸಂಯೋಜಿಸಿದ ಅವರ ಬದ್ಧತೆ ಇಂದಿನ ಧರ್ಮಸಭೆಗೆ ಶಾಶ್ವತ ಪ್ರೇರಣೆಯಾಗಿದೆ ಎಂದು ಹಂಚಿಕೊಂಡಿದ್ದಾರೆ.

ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೋ, CPS 

ಐದು ದಶಕಗಳಿಗೂ ಹೆಚ್ಚು ಕಾಲ ತಮ್ಮ ಜೀವನವನ್ನು ಸಂಪೂರ್ಣ ಸಮರ್ಪಣೆಯೊಂದಿಗೆ ಪಪುವಾ ನ್ಯೂಗಿನಿಯಾದ ಸೇವಾ ಕಾರ್ಯಕ್ಕೆ ಅರ್ಪಿಸಿದ ಅನೇಕ ಮಿಷನರಿಗಳಿಗೆ, ಸಕ್ರಿಯ ಸೇವೆಯಿಂದ ನಿವೃತ್ತಿಯಾಗಿರುವುದು ಅವರ ಮಿಷನರಿ ಮನೋಭಾವವನ್ನು ಅಳಿಸಿಹಾಕಿಲ್ಲ. ವಯಸ್ಸು ಹಾಗೂ ಆರೋಗ್ಯದ ಸಮಸ್ಯೆಗಳ ಕಾರಣದಿಂದ ಅವರು ತಮ್ಮ ಯುರೋಪಿನ ತಾಯ್ನಾಡುಗಳಿಗೆ ಹಿಂದಿರುಗಬೇಕಾದರೂ, ಅವರ ಹೃದಯಗಳು ತಾವು ಸೇವೆ ಸಲ್ಲಿಸಿದ ಸಮುದಾಯಗಳಲ್ಲಿಯೇ ನೆಲೆಸಿವೆ. ಇವರಲ್ಲಿ ಅನೇಕರು ತಮ್ಮ ಮಿಷನ್ ನೆಲದಲ್ಲೇ ಉಳಿದು, ಅದೇ ಮಣ್ಣಿನಲ್ಲಿ ಸಮಾಧಿಯಾಗಬೇಕೆಂಬ ಬಯಕೆಯನ್ನು ಹೊಂದಿದ್ದರು.

800ಕ್ಕೂ ಹೆಚ್ಚು ಭಾಷೆಗಳು ಹಾಗೂ ವೈವಿಧ್ಯಮಯ ಸಂಸ್ಕೃತಿಗಳಿಂದ ಕೂಡಿರುವ ಪಪುವಾ ನ್ಯೂಗಿನಿಯಾದ ಅನೇಕ ದೂರದ ಪ್ರದೇಶಗಳು ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಮತ್ತು ಸರ್ಕಾರಿ ಸೇವೆಗಳ ಕೊರತೆಯನ್ನು ಎದುರಿಸುತ್ತಿವೆ. ಇಂತಹ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಮುದಾಯದ ಬೆಂಬಲ ಒದಗಿಸುವ ಪ್ರಮುಖ ಶಕ್ತಿಯಾಗಿ ಧರ್ಮಸಭೆ ಹಾಗೂ ಮಿಷನರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ.

ಕೊನೆಗಾಣದ ಸೇವೆ

ಇತ್ತೀಚೆಗೆ ಪಪುವಾ ನ್ಯೂಗಿನಿಯಾದ ಜಗದ್ಗುರುಗಳ ಧರ್ಮಪ್ರಚಾರ ಸಂಘಗಳ ರಾಷ್ಟ್ರೀಯ ನಿರ್ದೇಶಕರಾದ ವಂ. ಗುರು ಕ್ರಿಸ್ಟಿಯನ್ ಸೀಲಾಂಡ್, ನೆದರ್ಲ್ಯಾಂಡ್ಸ್ ಮತ್ತು ಜರ್ಮನಿಯ ನಿವೃತ್ತಿ ಗೃಹಗಳಲ್ಲಿ ವಾಸಿಸುತ್ತಿರುವ ಡಿವೈನ್ ವರ್ಡ್ ಸಭೆ (SVD) ಹಾಗೂ ಪವಿತ್ರಾತ್ಮನ ಸೇವಕಿಯರಾದ ಮಿಷನರಿ ಸಹೋದರಿಯರ (SSpS) ಸದಸ್ಯರನ್ನು ಭೇಟಿ ಮಾಡಿದರು.

ಫೀಡೆಸ್ ಸುದ್ದಿಸಂಸ್ಥೆಯ ಪ್ರಕಾರ, ಅವರು ಭೇಟಿಯಾದ ಹೆಚ್ಚಿನ ಮಿಷನರಿಗಳು ಈಗ 80ರ ದಶಕದ ಕೊನೆಯ ಭಾಗ ಅಥವಾ 90ರ ದಶಕದ ಆರಂಭದ ವಯಸ್ಸಿನವರು. ಅವರಲ್ಲಿ ಸುಮಾರು 60 ವರ್ಷಗಳ ಕಾಲ ಪಪುವಾ ನ್ಯೂಗಿನಿಯಾದ ಧರ್ಮಸಭೆಗೆ ಸೇವೆ ಸಲ್ಲಿಸಿದ ನಿವೃತ್ತ ಧರ್ಮಾಧ್ಯಕ್ಷರಾದ ಪೂಜ್ಯ ಹೆಂಕ್ ಟೆ ಮಾರ್‌ಸೆನ್, SVD ಅವರೂ ಸೇರಿದ್ದಾರೆ. 1896ರಲ್ಲಿ ಮಡಾಂಗ್‌ಗೆ ಆಗಮಿಸಿದ SVD ಮಿಷನರಿಗಳು, ಪಪುವಾ ನ್ಯೂಗಿನಿಯಾದಲ್ಲಿ ಶುಭಸಂದೇಶವನ್ನು ಸಾರುವ ಕಾರ್ಯಕ್ಕೆ ಭದ್ರ ಅಡಿಪಾಯ ಹಾಕಿದ್ದರು.

"SVD ಮಿಷನರಿಗಳ ಬಗ್ಗೆ ನನ್ನನ್ನು ಹೆಚ್ಚು ಸ್ಪರ್ಶಿಸಿದ ಸಂಗತಿ ಎಂದರೆ, ಅವರಲ್ಲಿ ಯಾರೂ ಮಿಷನರಿಗಳಾಗಿದ್ದಕ್ಕಾಗಿ ಎಂದಿಗೂ ವಿಷಾದ ವ್ಯಕ್ತಪಡಿಸಲಿಲ್ಲ. ಮತ್ತೊಮ್ಮೆ ಅವಕಾಶ ಸಿಕ್ಕರೂ ಅವರು ಇದೇ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದರು," ಎಂದು ವಂ. ಗುರು ಸೀಲಾಂಡ್ ನೆನಪಿಸಿಕೊಳ್ಳುತ್ತಾರೆ.

ಧರ್ಮಸಭೆ ಮತ್ತು ರಾಷ್ಟ್ರದ ನಿರ್ಮಾತೃಗಳು

ಈ ಮಿಷನರಿಗಳು ಪಪುವಾ ನ್ಯೂಗಿನಿಯಾವನ್ನು ಕೃತಜ್ಞತೆ ಮತ್ತು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ; ಸೇವೆಯ ಆರಂಭದ ಕಷ್ಟಗಳನ್ನು ಅಲ್ಲ. ಅವರ ಸಂಭಾಷಣೆಗಳು ಅವರು ಜೊತೆಯಾಗಿ ನಡೆದ ಜನರು, ಬೆಳೆಸಿದ ಸ್ನೇಹಗಳು ಮತ್ತು ಕಟ್ಟಿದ ನಂಬಿಕೆಯ ಸಮುದಾಯಗಳ ನೆನಪುಗಳಿಂದ ತುಂಬಿವೆ.

ವಂ. ಗುರು ಸೀಲಾಂಡ್ ಅವರ ಪ್ರಕಾರ, ಅವರ ಕೊಡುಗೆ ಕೇವಲ ಸುವಾರ್ತೆ ಸಾರುವ ಕಾರ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಶುಭಸಂದೇಶವನ್ನು ಸಾರುವುದರ ಜೊತೆಗೆ ಅವರು ಶಾಲೆಗಳು, ಆಸ್ಪತ್ರೆಗಳು, ಧರ್ಮಕೇಂದ್ರಗಳು ಮತ್ತು ಸಾಮಾಜಿಕ ಸಂಸ್ಥೆಗಳ ಅಡಿಪಾಯ ಹಾಕಿದರು. ಇವು ಆಧುನಿಕ ಪಪುವಾ ನ್ಯೂಗಿನಿಯಾದ ನಿರ್ಮಾಣಕ್ಕೆ ಮಹತ್ತರ ಕೊಡುಗೆ ನೀಡಿವೆ. ಇಷ್ಟೆಲ್ಲ ಸಾಧನೆಗಳಿದ್ದರೂ ಅವರ ವಿನಯ ಮಾದರಿಯಾಗಿದೆ. "ಅವರು ಮಾಡಿದ ಕಾರ್ಯಗಳ ಬಗ್ಗೆ ಎಂದಿಗೂ ಹೆಮ್ಮೆಪಡಲಿಲ್ಲ; ಏಕೆಂದರೆ ಅವರು ಮಾಡಿದ ಪ್ರತಿಯೊಂದೂ ದೇವರ ಮಹಿಮೆಗಾಗಿ ಆಗಿತ್ತು," ಎಂದು ವಂ. ಗುರು ಸೀಲಾಂಡ್ ಹೇಳಿದ್ದಾರೆ.

ಸಂಸ್ಕೃತಿಯ ಮೂಲಕ ಶುಭಸಂದೇಶವನ್ನು ಕಲಿಯುವುದು

ಮೊದಲ ತಲೆಮಾರಿನ ಮಿಷನರಿಗಳು ಸ್ಥಳೀಯ ಸಂಸ್ಕೃತಿಯಲ್ಲಿ ಸಂಪೂರ್ಣವಾಗಿ ಬೆರೆತುಹೋದರು. 1950 ಮತ್ತು 1960ರ ದಶಕಗಳಲ್ಲಿ ಆಗಮಿಸಿದ ಅವರು ಸ್ಥಳೀಯ ಭಾಷೆಗಳನ್ನು ಕಲಿತರು, ಜನರ ನಡುವೆ ವಾಸಿಸಿದರು, ಅವರ ಜೀವನಶೈಲಿಯನ್ನು ಅಳವಡಿಸಿಕೊಂಡರು ಮತ್ತು ಶುಭಸಂದೇಶವನ್ನು ಸಾರುವ ಮೊದಲು ಅವರ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು.

"ಅವರು ಸ್ಥಳೀಯ ಸಂಪ್ರದಾಯಗಳನ್ನು ತಿರಸ್ಕರಿಸಲಿಲ್ಲ; ಬದಲಾಗಿ ಅವುಗಳಲ್ಲಿದ್ದ ಶುಭಸಂದೇಶದ ಮೌಲ್ಯಗಳನ್ನು ಗುರುತಿಸಿದರು. ಶುಭಸಂದೇಶಕ್ಕೆ ಹೊಂದಿಕೆಯಾಗುವ ಸಂಸ್ಕೃತಿಯ ಅಂಶಗಳನ್ನು ಮತ್ತು ನಂಬಿಕೆಯ ಬೆಳಕಿನಲ್ಲಿ ಪರಿವರ್ತನೆಗೊಳ್ಳಬೇಕಾದ ಅಂಶಗಳನ್ನು ವಿವೇಚನೆಯಿಂದ ಬೇರ್ಪಡಿಸಿದರು," ಎಂದು ವಂ. ಗುರು ಸೀಲಾಂಡ್ ತಿಳಿಸಿದ್ದಾರೆ. ಕೆಲವು ಮಿಷನರಿಗಳು, ಈವರೆಗೆ ಕೇವಲ ಮೌಖಿಕ ರೂಪದಲ್ಲಿದ್ದ ಭಾಷೆಗಳಿಗಾಗಿ ಶಬ್ದಕೋಶಗಳು ಮತ್ತು ವ್ಯಾಕರಣ ಪುಸ್ತಕಗಳನ್ನು ರಚಿಸಿ, ಅಮೂಲ್ಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿದರು.

ಸರಳತೆ ಮತ್ತು ವಿನಯ ಸೇವೆ

ಈ ಮಿಷನರಿಗಳು ರಸ್ತೆಗಳಿಲ್ಲದ, ಆಧುನಿಕ ಸೌಲಭ್ಯಗಳಿಲ್ಲದ ಹಾಗೂ ಮೂಲಭೂತ ಸೌಕರ್ಯಗಳಿಲ್ಲದ ದೂರದ ಗ್ರಾಮಗಳಲ್ಲಿ ತಾಳ್ಮೆ ಮತ್ತು ಸರಳತೆಯಿಂದ ಸೇವೆ ಸಲ್ಲಿಸಿದರು. ಸ್ಥಳೀಯ ಸಮುದಾಯದೊಂದಿಗೆ ಬೆರೆತು ಬದುಕಿದ ಅನುಭವವು ಭೌತಿಕ ಸಂಪತ್ತೇ ಮಾನವ ಜೀವನದ ಪೂರ್ಣತೆಯನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಅವರಿಗೆ ಕಲಿಸಿತು.

"ಕ್ರೈಸ್ತ ಧರ್ಮ ಬರುವುದಕ್ಕೂ ಮುನ್ನವೇ ಶುಭಸಂದೇಶದ ಅನೇಕ ಮೌಲ್ಯಗಳನ್ನು ಬದುಕುತ್ತಿದ್ದ, ತಮ್ಮ ಭೂಮಿ, ಸಂಸ್ಕೃತಿ ಮತ್ತು ಸಮುದಾಯ ಜೀವನದೊಂದಿಗೆ ಆಳವಾಗಿ ಬೆಸೆದುಕೊಂಡಿದ್ದ ಜನರನ್ನು ಅವರು ಕಂಡರು," ಎಂದು ವಂ. ಗುರು ಸೀಲಾಂಡ್ ಹೇಳಿದ್ದಾರೆ. ಈ ಅನುಭವವನ್ನು ಅವರು "ನ್ಯೂಗಿನಿಯಾ ವೈರಸ್‌ಗೆ ತುತ್ತಾಗುವುದು" ಎಂದು ವಿವರಿಸುತ್ತಾರೆ. ಅಂದರೆ, ಜನರ ಮೇಲಿನ ಆಳವಾದ ಪ್ರೀತಿ ಮಿಷನರಿಯ ಹೃದಯವನ್ನು ಶಾಶ್ವತವಾಗಿ ಬದಲಾಯಿಸುತ್ತದೆ.

ಭವಿಷ್ಯದ ಮಿಷನರಿಗಳಿಗೆ ಪರಂಪರೆ

"ಈ ವಯೋವೃದ್ಧ ಮಿಷನರಿಗಳ ಸಾಕ್ಷ್ಯ ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. ಏಕೆಂದರೆ ಧರ್ಮಸಭೆ ಕ್ರಮೇಣ ಸ್ಥಳೀಯ ನಾಯಕತ್ವವನ್ನು ಹೆಚ್ಚು ಅವಲಂಬಿಸುತ್ತಿದೆ," ಎಂದು ವಂ. ಗುರು ಸೀಲಾಂಡ್ ಅಭಿಪ್ರಾಯಪಟ್ಟರು . "ಇಂದಿನ ಹೊಸ ತಲೆಮಾರಿನ ಅನೇಕ ಮಿಷನರಿಗಳಲ್ಲಿ ಆರಂಭಿಕ ಮಿಷನರಿಗಳ ಆತ್ಮಸ್ವರೂಪವು ಕೆಲವೊಮ್ಮೆ ಕಾಣೆಯಾಗಿರುವಂತೆ ನನಗೆ ಅನಿಸುತ್ತದೆ. ಏಕೆಂದರೆ ಅಗತ್ಯವಾದ ಮೂಲಭೂತ ಕಾರ್ಯಗಳ ಬಹುಪಾಲು ಈಗಾಗಲೇ ಪೂರ್ಣಗೊಂಡಿವೆ," ಎಂದು  ಹೇಳಿದರು.

ಇಂದಿನ ಮಿಷನರಿಗಳು ಆ ಮೊದಲ ತಲೆಮಾರಿನ ಮಿಷನರಿಗಳು ಹಾಕಿದ ಭದ್ರ ಅಡಿಪಾಯದ ಮೇಲೆ ತಮ್ಮ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ಆದರೆ ಮೊದಲ ಮಿಷನರಿಗಳಲ್ಲಿದ್ದ ಉತ್ಸಾಹ ಮತ್ತು ಶಕ್ತಿ ನಿಜಕ್ಕೂ ವಿಶಿಷ್ಟವಾಗಿತ್ತು.

ಯುವ ಮಿಷನರಿಗಳು ಮತ್ತು ಯಾಜಕರು ಪ್ರತಿಯೊಂದು ಸಂಸ್ಕೃತಿಯನ್ನು ಮುಕ್ತ ಮನಸ್ಸಿನಿಂದ, ಗೌರವದಿಂದ ಹಾಗೂ ಕಲಿಯುವ ಮನೋಭಾವದಿಂದ ಸಮೀಪಿಸಬೇಕು ಎಂದು ಅವರು ಪ್ರೋತ್ಸಾಹಿಸಿದರು. ನಿಜವಾದ ಸುವಾರ್ತಾ ಕಾರ್ಯವು ತನ್ನದೇ ಸಂಸ್ಕೃತಿಯನ್ನು ಇತರರ ಮೇಲೆ ಹೇರಿಕೆಯಿಂದ ಆರಂಭವಾಗುವುದಿಲ್ಲ; ಬದಲಾಗಿ ಜನರ ಜೀವನದಲ್ಲಿ ದೇವರು ಈಗಾಗಲೇ ಕಾರ್ಯನಿರ್ವಹಿಸುತ್ತಿರುವುದನ್ನು ಕಂಡುಕೊಳ್ಳುವುದರಿಂದ ಆರಂಭವಾಗುತ್ತದೆ.

ವಂ. ಗುರು ಸೀಲಾಂಡ್ ಅವರ ಪ್ರಕಾರ, ಈ ನಿವೃತ್ತ ಮಿಷನರಿಗಳ ಜೀವನವು, ಮಿಷನರಿಯ ಶ್ರೇಷ್ಠ ಪರಂಪರೆ ಕಟ್ಟಡಗಳಲ್ಲಾಗಲಿ ಅಂಕಿಅಂಶಗಳಲ್ಲಾಗಲಿ ಅಳೆಯಲಾಗುವುದಿಲ್ಲ ಎಂಬುದನ್ನು ನೆನಪಿಸುತ್ತದೆ. ಅದು ವಿನಯಪೂರ್ವಕ ಸೇವೆ, ನಿರಂತರ ಪ್ರೀತಿ ಹಾಗೂ ಪ್ರಾಮಾಣಿಕವಾಗಿ ಬದುಕಿದ ಶುಭಸಂದೇಶದ ಜೀವನಗಳಲ್ಲಿ ವ್ಯಕ್ತವಾಗುತ್ತದೆ. ಅವರ ಸಾಕ್ಷ್ಯವು ಗೌರವ, ಸಂಸ್ಕೃತಿಯೊಡನೆ ಹೊಂದಾಣಿಕೆ ಮತ್ತು ದೇವರ ಜನರಿಗಾಗಿ ನಿಸ್ವಾರ್ಥ ಸಮರ್ಪಣೆಯಿಂದ ಕೂಡಿದ ಸೇವಾ ಜೀವನವನ್ನು ಅಪ್ಪಿಕೊಳ್ಳಲು ಧರ್ಮಸಭೆಯನ್ನು ಇಂದಿಗೂ ಪ್ರೇರೇಪಿಸುತ್ತಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

09 ಜುಲೈ 2026, 20:09