‘ಲಿಮೆಸ್ ಸಂವಾದ ಮತ್ತು ಶಾಂತಿ ಪ್ರಶಸ್ತಿ’ ಸ್ವೀಕರಿಸಿದ  ಪ್ರಧಾನ ಗುರು ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ. ‘ಲಿಮೆಸ್ ಸಂವಾದ ಮತ್ತು ಶಾಂತಿ ಪ್ರಶಸ್ತಿ’ ಸ್ವೀಕರಿಸಿದ ಪ್ರಧಾನ ಗುರು ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ. 

ಪ್ರಧಾನ ಗುರು ಪಿಜ್ಜಬಲ್ಲಾ: "ಗಾಜಾ ಒಂದು ಮಹಾ ದುರಂತ; ಪವಿತ್ರ ಭೂಮಿಯನ್ನು ಏಕಾಂಗಿಯಾಗಿ ಬಿಡಬೇಡಿ"

ಇಟಲಿಯ ಭೂರಾಜಕೀಯ ನಿಯತಕಾಲಿಕ ಲಿಮೆಸ್ ನೀಡುವ "ಲಿಮೆಸ್ ಸಂವಾದ ಮತ್ತು ಶಾಂತಿ ಪ್ರಶಸ್ತಿ"ಯನ್ನು ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಪ್ರಧಾನ ಗುರು ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಗಾಜಾ ಪಟ್ಟಿಗೆ ತಾವು ಇತ್ತೀಚೆಗೆ ನೀಡಿದ ಭೇಟಿಯ ಕುರಿತು ಮಾತನಾಡುತ್ತಾ "ಚಿತ್ರಗಳು ತಿಳಿಸದಿರುವ ಒಂದು ವಿಷಯವೆಂದರೆ ಅಲ್ಲಿನ ದುರ್ವಾಸನೆ. ಈಗಿನ ಅತ್ಯಂತ ಭೀಕರ ಶಾಪಗಳಲ್ಲಿ ಒಂದಾದ ಇಲಿಗಳು ಜನರನ್ನು ಕಚ್ಚುತ್ತಿವೆ. ಅವು ವಿಶೇಷವಾಗಿ ಮಕ್ಕಳನ್ನೇ ಕಚ್ಚುತ್ತವೆ. ಗಾಜಾದಲ್ಲಿ ಮಕ್ಕಳು ಎಲ್ಲೆಡೆ ಕಾಣಿಸುತ್ತಾರೆ" ಎಂದುಹೇಳಿದರು

ಲೇಖಕರು: ಗುಗ್ಲಿಯೆಲ್ಮೊ ಗಲ್ಲೋನೆ

"ನಮ್ಮಂತೆ ಯೋಚಿಸದವರ ಬಗ್ಗೆಯೂ ಸಹಾನುಭೂತಿ ಹೊಂದುವ ಅಗತ್ಯವಿದೆ," ಎಂದು ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಪ್ರಧಾನ ಗುರು ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ ಹೇಳಿದರು. ಇಟಲಿಯ ಬರ್ಗಾಮೊ ನಗರದಲ್ಲಿ ಜೂನ್ 29ರ ಸೋಮವಾರ ನಡೆದ ಸಮಾರಂಭದಲ್ಲಿ ಇಟಲಿಯ ಭೂರಾಜಕೀಯ ನಿಯತಕಾಲಿಕ ಲಿಮೆಸ್ ಪ್ರದಾನ ಮಾಡಿದ "ಲಿಮೆಸ್ ಸಂವಾದ ಮತ್ತು ಶಾಂತಿ ಪ್ರಶಸ್ತಿ"ಯನ್ನು ಸ್ವೀಕರಿಸಿದ ಬಳಿಕ ಅವರು ಈ ಮಾತುಗಳನ್ನಾಡಿದರು.

"ಗಾಜಾ ಒಂದು ಮಹಾ ದುರಂತ," ಎಂದು ಪ್ರಧಾನ ಗುರು ಅವರು ಲಿಮೆಸ್ ನಿಯತಕಾಲಿಕೆಯ ಪ್ರಧಾನ ಸಂಪಾದಕರಾದ ಲೂಸಿಯೊ ಕರಚ್ಚಿಯೋಲೊ ಅವರೊಂದಿಗಿನ ಸಂವಾದದಲ್ಲಿ ಒತ್ತಿ ಹೇಳಿದರು. ಕಳೆದ ವಾರ, ಜೂನ್ 22 ಮತ್ತು 23ರಂದು, ಜೆರುಸಲೇಮಿನ ಗ್ರೀಕ್ ಆರ್ಥೊಡಾಕ್ಸ್ ಪ್ರಧಾನ ಧರ್ಮಕೇಂದ್ರದ ಧರ್ಮಾಧ್ಯಕ್ಷರಾದ ಮೂರನೇ ಥಿಯೋಫಿಲೊಸ್ ಅವರೊಂದಿಗೆ ಗಾಜಾ ಪಟ್ಟಿಗೆ ನೀಡಿದ ತಮ್ಮ ಭೇಟಿಯ ಕುರಿತು"ನಗರಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಅವುಗಳನ್ನು ಸಮತಟ್ಟುಗೊಳಿಸಿ ಸಂಪೂರ್ಣವಾಗಿ ನಾಶಮಾಡಲಾಗಿದೆ. ರಫಾ ಎಂಬ ನಗರವೇ ಈಗ ಅಸ್ತಿತ್ವದಲ್ಲಿಲ್ಲ. ತಾತ್ಕಾಲಿಕ ರಸ್ತೆಗಳಲ್ಲಿ, ಡೇರೆಗಳ ನಡುವೆ ಹಾಗೂ ಕೊಳಚೆ ನೀರು ಹರಿಯುವ ಪ್ರದೇಶಗಳ ಮೂಲಕ ಸಂಚರಿಸುವಾಗ ಕಾಣುವ ದೃಶ್ಯ ನನ್ನನ್ನು ಅತ್ಯಂತ ತಲ್ಲಣಗೊಳಿಸುತ್ತದೆ. ಇದೇ ಪರಿಸ್ಥಿತಿಯಲ್ಲಿ ಗಾಜಾದ ಜನರು ಬದುಕುತ್ತಿದ್ದಾರೆ," ಎಂದು ವಿವರಿಸಿದರು.

"ಚಿತ್ರಗಳು ತಿಳಿಸದಿರುವ ಒಂದು ವಿಷಯವೆಂದರೆ ಅಲ್ಲಿನ ದುರ್ವಾಸನೆ. ಈಗಿನ ಅತ್ಯಂತ ಭೀಕರ ಶಾಪಗಳಲ್ಲಿ ಒಂದಾದ ಇಲಿಗಳು ಜನರನ್ನು ಕಚ್ಚುತ್ತಿವೆ. ಅವು ವಿಶೇಷವಾಗಿ ಮಕ್ಕಳನ್ನೇ ಕಚ್ಚುತ್ತವೆ. ಗಾಜಾದಲ್ಲಿ ಮಕ್ಕಳು ಎಲ್ಲೆಡೆ ಕಾಣಿಸುತ್ತಾರೆ. ಆದರೆ ಅವರು ಶಾಲೆಗೆ ಹೋಗುವ ಬದಲು ಕೊಳಚೆ ನೀರಿನ ಕಾಲುವೆಗಳ ಪಕ್ಕದಲ್ಲಿ, ಕೊಳಕಾದ ವಾತಾವರಣದಲ್ಲಿ ಆಟವಾಡುತ್ತಿರುವುದನ್ನು ನೀವು ಕಾಣಬಹುದು," ಎಂದು ದುರ್ದೈವ ಪರಿಸ್ಥಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಸುಧಾರಣೆಯ ಯಾವುದೇ ಲಕ್ಷಣಗಳಿಲ್ಲ

ಕದನ ವಿರಾಮ ಜಾರಿಯಾದ ನಂತರವೂ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯ ಲಕ್ಷಣಗಳು ಕಾಣಿಸುತ್ತಿಲ್ಲ."ಈಗ ಸ್ವಲ್ಪ ಪ್ರಮಾಣದ ಆಹಾರ ಸಾಮಗ್ರಿಗಳು ಮಾತ್ರ ಒಳಬರಲು ಸಾಧ್ಯವಾಗುತ್ತಿದೆ. ಆದರೆ ಉಳಿದ ಬಹುತೇಕ ಎಲ್ಲ ವಸ್ತುಗಳಿಗೂ ಇನ್ನೂ ನಿರ್ಬಂಧವಿದೆ. ದ್ವಿ-ಬಳಕೆಯ (Dual-use) ವಸ್ತುಗಳಿಗೆ ಅನುಮತಿ ಇಲ್ಲ. ಅವರ ಪ್ರಕಾರ ಶಾಲೆಯ ಮೇಜುಗಳು, ಪೆನ್ಸಿಲ್‌ಗಳು, ನೋಟ್‌ಪುಸ್ತಕಗಳು, ಕಿಟಕಿಗಳಿಗೆ ಬೇಕಾದ ಗಾಜು ಕೂಡ ದ್ವಿ-ಬಳಕೆಯ ವಸ್ತುಗಳಾಗಿವೆ. ನಾವು ಶಾಲೆಗಳನ್ನು ಪುನರಾರಂಭಿಸಲು ಬಯಸುತ್ತೇವೆ. ಆದರೆ ಅದಕ್ಕಾಗಿ ಬೇಕಾದ ಎಲ್ಲವೂ ನಮ್ಮಲ್ಲಿ ಇಲ್ಲ. ಇಲ್ಲಿ-ಅಲ್ಲಿ ದೊರೆಯುವ ಸಾಮಗ್ರಿಗಳನ್ನು ಮರುಬಳಕೆ ಮಾಡಿಕೊಂಡು ಹೇಗೋ ನಿರ್ವಹಿಸುತ್ತಿದ್ದೇವೆ" ಎಂದು ಪರಿಸ್ಥಿತಿಯನ್ನು ವಿವರಿಸಿದರು.

"ಈ ಸಮಯದಲ್ಲಿ ಅತ್ಯಂತ ಅಗತ್ಯವಿರುವುದು ಮಕ್ಕಳು ಹಾಗೂ ತಾಯಂದಿರು ಅನುಭವಿಸಿರುವ ಮಾನಸಿಕ ಆಘಾತಕ್ಕೆ ಚಿಕಿತ್ಸೆ ನೀಡಬಲ್ಲ ತರಬೇತಿ ಪಡೆದ ಸಿಬ್ಬಂದಿ ಎಂದು ಆರೋಗ್ಯ ಕಾರ್ಯಕರ್ತರು ನನಗೆ ತಿಳಿಸಿದ್ದಾರೆ" ಎಂದು ಅವರು ಒತ್ತಿ ಹೇಳಿದರು.

ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಾ,"ಇದು ಅತ್ಯಂತ ಸೂಕ್ಷ್ಮತೆಯಿಂದ ನಿರ್ವಹಿಸಬೇಕಾದ ವಿಷಯ. ರಾಜತಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ ಅದು ಸಾಕಾಗುವುದಿಲ್ಲ. ಇದನ್ನು ನಾನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಅವರು ಹೇಳಿದರು.

ಈ ಮಧ್ಯೆ, ಗಾಜಾ ಪಟ್ಟಿಯ ಜನನಿಬಿಡ ಪ್ರದೇಶವೊಂದರಲ್ಲಿ ಸ್ಥಳಾಂತರಗೊಂಡಿದ್ದ ಪ್ಯಾಲೆಸ್ತೀನಿ ಕುಟುಂಬಗಳು ಆಶ್ರಯ ಪಡೆದಿದ್ದ ಡಜನ್‌ಗಟ್ಟಲೆ ಡೇರೆಗಳನ್ನು ಇಸ್ರಾಯೇಲ್ ವೈಮಾನಿಕ ದಾಳಿ ಧ್ವಂಸಗೊಳಿಸಿರುವ ದೃಶ್ಯಗಳು ಹೊರಬಿದ್ದಿವೆ. ಮಹಿಳೆಯರು, ಮಕ್ಕಳು ಹಾಗೂ ವಿಶೇಷಚೇತನರು ರಾತ್ರಿ ಪೂರ್ತಿ ಬಯಲಿನಲ್ಲೇ ಉಳಿಯುವಂತಾಯಿತು. ಮಧ್ಯ ಹಾಗೂ ದಕ್ಷಿಣ ಗಾಜಾದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಖಾನ್ ಯೂನಿಸ್‌ನ ಉತ್ತರ ಭಾಗದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಇನ್ನಿಬ್ಬರು ಮೃತಪಟ್ಟಿದ್ದಾರೆ.

ಆಕ್ರಮಿತ ಪ್ರದೇಶಗಳ ಪರಿಸ್ಥಿತಿ

ಪ್ಯಾಲೆಸ್ತೀನ್ ರಾಜ್ಯದ ಪಶ್ಚಿಮ ದಂಡೆಯಲ್ಲಿಯೂ ಪರಿಸ್ಥಿತಿ ಅಷ್ಟೇ ಭೀಕರವಾಗಿದೆ. "ಅಲ್ಲಿ ಕಾನೂನಿನ ಆಡಳಿತವೇ ಇಲ್ಲ," ಎಂದು ಪ್ರಧಾನ ಗುರು ಪಿಜ್ಜಬಲ್ಲಾ  ಹೇಳಿದರು. "ಕಾನೂನು ಜಾರಿಯಾಗುವುದೇ ಇಲ್ಲ. ಜಾರಿಯಾದರೂ ಅದು ಪ್ಯಾಲೆಸ್ತೀನಿಯರಿಗಾಗಿ ಅಲ್ಲ. ಇಸ್ರಾಯೇಲಿ ವಸಾಹತುಗಾರರಿಗೆ ಏನು ಬೇಕಾದರೂ ಮಾಡಲು ಅವಕಾಶವಿದೆ. ಅವರು ಎಲ್ಲೆಡೆ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸುತ್ತಾರೆ, ಮರಗಳನ್ನು ಕಡಿಯುತ್ತಾರೆ ಹಾಗೂ ಜನರು ತಮ್ಮ ಭೂಮಿಯನ್ನು ಕೃಷಿ ಮಾಡದಂತೆ ತಡೆಯುತ್ತಾರೆ. ಹಲ್ಲೆಗಳು, ಕಳ್ಳತನಗಳು ಹಾಗೂ ಅವಮಾನಗಳು ದೈನಂದಿನ ಘಟನೆಗಳಾಗಿವೆ." ಈ ಘಟನೆಗಳಿಗೆ ಶಿಕ್ಷೆಯಾಗದ ಕಾರಣ ಅವು ನಿರಂತರವಾಗಿ ನಡೆಯುತ್ತಿವೆ. "ವಸಾಹತುಗಾರರನ್ನು ತಡೆಯಲು ನಾವು ಆಗಾಗ ಇಸ್ರಾಯೇಲಿ ಸೇನೆಗೆ (IDF) ಕರೆ ಮಾಡುತ್ತೇವೆ. ಆದರೆ ಅವರು ಬರುವಷ್ಟರಲ್ಲಿ ವಸಾಹತುಗಾರರು ಅಲ್ಲಿಂದ ತೆರಳಿರುತ್ತಾರೆ. ಯಾರೋ ಅವರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದಂತಿರುತ್ತದೆ. ಕೊನೆಗೆ ಇಸ್ರಾಯೇಲಿ ಸೇನೆ ನಮ್ಮ ಮೇಲೆಯೇ ತನ್ನ ಆಕ್ರೋಶ ತೋರಿಸುತ್ತದೆ" ಎಂದು ಅವರು ಹೇಳಿದರು.

ಸಂವಾದ ಮತ್ತು ಶಾಂತಿಗಾಗಿ ಪ್ರಯತ್ನ

ಗಾಜಾ ಸಂಪೂರ್ಣ ಅವಶೇಷವಾಗಿ ಮಾರ್ಪಟ್ಟಿರುವುದು, ಮಕ್ಕಳು ಕೊಳಚೆ ನೀರಿನ ಪಕ್ಕದಲ್ಲಿ ಆಟವಾಡುತ್ತಾ ಇಲಿಗಳ ಕಡಿತಕ್ಕೆ ಒಳಗಾಗುತ್ತಿರುವುದು ಹಾಗೂ ಪಶ್ಚಿಮ ದಂಡೆಯಲ್ಲಿ ವಸಾಹತುಗಾರರ ಹಿಂಸಾಚಾರ ನಡೆಯುತ್ತಿರುವ ಚಿತ್ರಣಗಳ ನಡುವೆಯೂ ಪ್ರಧಾನ ಗುರು ಪಿಜ್ಜಬಲ್ಲಾ ಸಂವಾದದ ಮಹತ್ವವನ್ನು ಒತ್ತಿ ಹೇಳಿದರು.

"ಅಕ್ಟೋಬರ್ 7ರ ಘಟನೆ ಯೆಹೂದ್ಯರು ಮತ್ತು  ಇಸ್ರಾಯೇಲರ ಮನಸ್ಸಿನಲ್ಲಿ ಇನ್ನೂ ಆಳವಾಗಿ ಉಳಿದಿದೆ. ಆ ದಿನದ ಬಳಿಕ ಇದ್ದ ಎಲ್ಲ ನಿಯಂತ್ರಣಗಳು ಕಳೆದುಹೋಗಿವೆ" ಎಂದು ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರು ಹೇಳಿದರು.

ಇಂದಿನ ಇಸ್ರಾಯೇಲ್ "ವಿವಿಧ ಪ್ರವೃತ್ತಿಗಳ ಮಿಶ್ರಣ" ಎಂದು ಒಪ್ಪಿಕೊಂಡ ಅವರು, "ಎಲ್ಲ ರೀತಿಯ ಜನರು ಇದ್ದಾರೆ. ಆದರೆ ವಿಷಾದ ಏನೆಂದರೆ, ಅತ್ಯಂತ ಕಠಿಣ ನಿಲುವು ಹೊಂದಿರುವವರು ಧಾರ್ಮಿಕ ಸೇನಾ ಗುಂಪುಗಳೇ" ಎಂದರು. "ಅವರೊಂದಿಗೆ ಸ್ಪಷ್ಟ ಮತ್ತು ಶಾಂತ ಸಂಬಂಧವನ್ನು ಉಳಿಸಿಕೊಳ್ಳುವುದು ಅತ್ಯಂತ ಕಷ್ಟ. ಯೆಹೂದಿ ಸಮುದಾಯದ ಅತ್ಯಂತ ಉಗ್ರಪಂಥೀಯರು ಇನ್ನೂ ಬಹುಸಂಖ್ಯಾತರಾಗಿಲ್ಲ. ಆದರೆ ಅವರಿಗೆ ಬೆಂಬಲ ಹೆಚ್ಚುತ್ತಿದೆ. ರಾಜಕೀಯವಾಗಿಯೂ ಅವರು ಹೆಚ್ಚು ಪ್ರಭಾವಶಾಲಿಗಳಾಗುತ್ತಿದ್ದಾರೆ. ಇದರ ಪರಿಣಾಮ ಇಸ್ರಾಯೇಲಿ ಸಮಾಜದೊಳಗೆಯೇ ವಿಭಜನೆ ಉಂಟುಮಾಡುತ್ತಿದೆ" ಎಂದು ಅವರು ಹೇಳಿದರು.

ಬದಲಾಗುತ್ತಿರುವ ಇಸ್ರಾಯೇಲ್

ಲಿಮೆಸ್ ನಿಯತಕಾಲಿಕೆಯ ಪ್ರಧಾನ ಸಂಪಾದಕರಾದ ಲೂಸಿಯೊ ಕರಚ್ಚಿಯೋಲೊ ಅವರು ಇಸ್ರಾಯೇಲಿ ಸಮಾಜವು "ಪಂಗಡಗಳಾಗಿ" ವಿಭಜನೆಯಾಗಿರುವ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. 2015ರಲ್ಲಿ  ಇಸ್ರಾಯೇಲಿನ ಮಾಜಿ ರಾಷ್ಟ್ರಪತಿ ರೂವೆನ್ ರಿವ್ಲಿನ್ ಮಂಡಿಸಿದ್ದ ಈ ಪರಿಕಲ್ಪನೆಯು ಸಮಾಜವು ನಾಲ್ಕು ಪ್ರಮುಖ ಜನಸಮೂಹಗಳಾಗಿ ವಿಭಜನೆಯಾಗಿ, ಪ್ರತ್ಯೇಕ ಶಿಕ್ಷಣ ವ್ಯವಸ್ಥೆ ಹಾಗೂ ವಿಭಿನ್ನ ಜೀವನಶೈಲಿಗಳೊಂದಿಗೆ ಸಮಾನಾಂತರವಾಗಿ ಬದುಕುತ್ತಿರುವುದನ್ನು ವಿವರಿಸುತ್ತದೆ. ಅವುಗಳೆಂದರೆ: ಜಾತ್ಯತೀತ ಜಯೋನಿಸ್ಟರು, ಧಾರ್ಮಿಕ ರಾಷ್ಟ್ರೀಯವಾದಿ ಯೆಹೂದ್ಯರು, ಅತಿ ಸಂಪ್ರದಾಯವಾದಿ ಯೆಹೂದ್ಯರು (ಹರೆದಿಗಳು) ಮತ್ತು ಅರಬ್ ಇಸ್ರಾಯೇಲರು.

ಈ ವಿಭಜನೆಯ ಜೊತೆಗೆ, ಇಸ್ರಾಯೇಲ್ ರಾಷ್ಟ್ರವನ್ನೇ ಮಾನ್ಯ ಮಾಡದ ಹರೆದಿ ಜನಸಂಖ್ಯೆಯು ಹೆಚ್ಚುತ್ತಿರುವ ಜನಸಂಖ್ಯಾ ಪ್ರವೃತ್ತಿಯೂ ಸೇರಿ, "ಇಸ್ರಾಯೇಲಿ ಸಮಾಜದಲ್ಲಿ ಅನಿಶ್ಚಿತತೆಯನ್ನು ಹೆಚ್ಚಿಸುತ್ತಿದೆ. ಅದೇ ವೇಳೆ ಇಸ್ರಾಯೇಲ್ ತನ್ನ ಸುತ್ತಲೂ ಅರಬ್ ರಾಷ್ಟ್ರಗಳಿವೆ ಎಂಬ ಭಾವನೆಯಲ್ಲಿಯೇ ಬದುಕುತ್ತಿದೆ. ಇದೂ ಸಹ ಅದರ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತದೆ" ಎಂದು ಪ್ರಧಾನ ಗುರು ವಿವರಿಸಿದರು.

ಜೆರುಸಲೇಮೂ ಸಹ ಬದಲಾಗುತ್ತಿದೆ ಎಂದು ಅವರು ಹೇಳಿದರು. "ಜನಸಂಖ್ಯೆ, ಭೌಗೋಳಿಕ ವಿನ್ಯಾಸ ಮಾತ್ರವಲ್ಲ, ಅದರ ಆಂತರಿಕ ಹಾಗೂ ಮಾನಸಿಕ ಗಡಿಗಳೂ ಬದಲಾಗುತ್ತಿವೆ. ಜನರು ನಗರವನ್ನು ಅನುಭವಿಸುವ ವಿಧಾನವೂ ಬದಲಾಗುತ್ತಿದೆ. ಇತ್ತೀಚಿನವರೆಗೂ ಜೆರುಸಲೇಮಿನ ಹಳೆಯ ನಗರದಲ್ಲಿ ಮುಖ್ಯವಾಗಿ ಅರಬ್ಬರು ವಾಸಿಸುತ್ತಿದ್ದರು. ಈಗ ಎಲ್ಲೆಡೆ ಯೆಹೂದ್ಯರನ್ನು, ಅದರಲ್ಲೂ ಧಾರ್ಮಿಕ ಯೆಹೂದ್ಯರನ್ನು ಕಾಣುವುದು ಸಾಮಾನ್ಯವಾಗಿದೆ. ಅರಬ್ ಜನಸಂಖ್ಯೆಯ ಬೆಳವಣಿಗೆ ನಿಧಾನಗೊಂಡಿದ್ದು, ಕ್ರೈಸ್ತ ಸಮುದಾಯವು ಕುಗ್ಗುತ್ತಿದೆ "ಘರ್ಷಣೆಗಳು ಹೆಚ್ಚಾಗುತ್ತಿರುವುದಕ್ಕೂ ಇದೇ ಕಾರಣ. ಜನರು ಪರಸ್ಪರ ಹೆಚ್ಚು ಭೇಟಿಯಾಗುತ್ತಿದ್ದಾರೆ ಹಾಗೂ ಸಂಪರ್ಕಕ್ಕೆ ಬರುತ್ತಿದ್ದಾರೆ" ಎಂದು ಪ್ರಧಾನ ಗುರು ಹೇಳಿದರು.

"ಈಗ ನಾವು ಪ್ರತ್ಯೇಕ ಪ್ರಪಂಚಗಳಲ್ಲಿ ಬದುಕುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಜೆರುಸಲೇಮಿನ ಅರಬ್ ಸಮುದಾಯವು ಗಾಜಾ ಹಾಗೂ ಪಶ್ಚಿಮ ದಂಡೆಯ ರಾಜಕೀಯ ಬೆಳವಣಿಗೆಗಳಲ್ಲಿ ಹೆಚ್ಚು ಭಾಗವಹಿಸಿಲ್ಲ. ಅದು ಒಗ್ಗಟ್ಟಿನ ಕೊರತೆಯಿಂದಲ್ಲ. ಕಠಿಣ ಸೇನಾ ನಿಯಂತ್ರಣ ಮತ್ತು ಜೆರುಸಲೇಮಿನ ವಿಶಿಷ್ಟ ಸ್ವರೂಪವನ್ನು ಉಳಿಸಿಕೊಳ್ಳುವ ಉದ್ದೇಶದಿಂದ. ಏಕೆಂದರೆ ಎಲ್ಲದರ ಕೇಂದ್ರಬಿಂದು ಜೆರುಸಲೇಮೇ ಆಗಿದೆ."

“ ನಾವು ಆ ಭೂಮಿಗೆ ಸೇರಿದವರು"

"ನಾವು ಹಿಂಸಾತ್ಮಕ ಹಾಗೂ ಬಹಿಷ್ಕಾರ ಮನೋಭಾವದ ನಡುವೆ ಹಲವು ವರ್ಷಗಳನ್ನು ಕಳೆದಿದ್ದೇವೆ. ಆರಂಭದಲ್ಲಿ ನಿರ್ಲಕ್ಷಿಸಲ್ಪಟ್ಟ ಆಲೋಚನೆಗಳು ಕ್ರಮೇಣ ವ್ಯಾಪಕವಾಗಿ ಹರಡಿವೆ" ಎಂದು ಅವರು ಹೇಳಿದರು. ಇಂದಿನ ಸಂಘರ್ಷಗಳ ಆಳವಾದ ಮೂಲಗಳಲ್ಲಿ ಒಂದಾಗಿದೆ "ಭಾಷೆಯ ಬಿಕ್ಕಟ್ಟು" ಎಂಬ  ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಮಾತನ್ನು ಅವರು ಪ್ರತಿಧ್ವನಿಸಿದರು. ಈ ಕಾರಣದಿಂದಲೇ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರ ಮನವಿ ಮುಖ್ಯವಾಗಿ ಸಾರ್ವಜನಿಕ ಅಭಿಪ್ರಾಯ ಹಾಗೂ ಮಾಧ್ಯಮಗಳ ಕಡೆಗೆ ತಿರುಗಿತು.

"ಜನರಿಗೆ ಅರ್ಥಮಾಡಿಕೊಳ್ಳಲು ನೆರವಾಗುವ ಪತ್ರಿಕೋದ್ಯಮ ಅತ್ಯಂತ ಮುಖ್ಯ. ಈ ವಿಷಯವನ್ನು ನಿರಂತರವಾಗಿ ಚರ್ಚಿಸುತ್ತಿರಿ. ಕ್ಷಣಿಕ ಆಸಕ್ತಿಗಳಿಗೆ ಬಲಿಯಾಗಬೇಡಿ. ಪತ್ರಿಕೆಗಳು ಸ್ವಲ್ಪ ಸಮಯ ಬರೆಯುತ್ತವೆ, ನಂತರ ಮರೆತುಬಿಡುತ್ತವೆ. ಆ ಭೂಮಿ ನಮಗೆ ಸೇರಿದ್ದಲ್ಲ; ಬದಲಾಗಿ ನಾವು ಆ ಭೂಮಿಗೆ ಸೇರಿದವರು.

"ಇಸ್ರಾಯೇಲರು ನಮ್ಮನ್ನು ಕೇಳುತ್ತಾರೆ: 'ನೀವು ದಕ್ಷಿಣ ಸುಡಾನ್ ಬಗ್ಗೆ ಏಕೆ ಮಾತನಾಡುವುದಿಲ್ಲ?' ಅದಕ್ಕೆ ಉತ್ತರ ಸರಳ. ದಕ್ಷಿಣ ಸುಡಾನ್‌ನೊಂದಿಗೆ ನಮಗಿರುವ ಸಂಬಂಧ ಮತ್ತು ಈ ಪವಿತ್ರ ಭೂಮಿಯೊಂದಿಗೆ ನಮಗಿರುವ ಸಂಬಂಧ ಒಂದೇ ಅಲ್ಲ" ಎಂದು ಪ್ರಧಾನ ಗುರು ಪಿಜ್ಜಬಲ್ಲಾ ಹೇಳಿದರು.

"ಜನರನ್ನು ಏಕಾಂಗಿಗಳನ್ನಾಗಿ ಮಾಡಬಾರದು. ಸಹಾನುಭೂತಿ, ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಹಾಗೂ ಸಂವಾದದ ಅಗತ್ಯವಿದೆ. ಹೊಸ ಗೋಡೆಗಳನ್ನು ಕಟ್ಟಬೇಡಿ. ನಾವು ಬಿದ್ದಿರುವ ಈ ಬಾವಿಯಿಂದ ಮೇಲಕ್ಕೆ ಬರಲು ನಮಗೆ ನೆರವಾಗಿ; ಅದರೊಳಗೇ ನಮ್ಮನ್ನು ಸಿಲುಕಿಸಬೇಡಿ" ಎಂದು ಅವರು ಮನವಿ ಮಾಡಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

01 ಜುಲೈ 2026, 10:05