ಉಕ್ರೇನ್‌ನ ಕೀವ್-ಪೆಚೆರ್ಸ್ಕ್ ಲಾವ್ರಾ ಆಶ್ರಮದ ಮೇಲೆ ಉದಯಿಸುತ್ತಿರುವ ಹುಣ್ಣಿಮೆಯ ಚಂದ್ರ ಉಕ್ರೇನ್‌ನ ಕೀವ್-ಪೆಚೆರ್ಸ್ಕ್ ಲಾವ್ರಾ ಆಶ್ರಮದ ಮೇಲೆ ಉದಯಿಸುತ್ತಿರುವ ಹುಣ್ಣಿಮೆಯ ಚಂದ್ರ 

ಉಕ್ರೇನ್‌ನ ಕೀವ್-ಪೆಚೆರ್ಸ್ಕ್ ಲಾವ್ರಾ ಆಶ್ರಮ: ನಂಬಿಕೆ ಮತ್ತು ಸಂಸ್ಕೃತಿಯ ಪರಂಪರೆ

ಉಕ್ರೇನ್‌ನ ಇತಿಹಾಸಕಾರ ದಿಮಿತ್ರೊ ಹೋರ್ಡಿಯೆಂಕೊ ಅವರ ಪ್ರಕಾರ, "ಕೀವ್-ಪೆಚೆರ್ಸ್ಕ್ ಲಾವ್ರಾ ಆಶ್ರಮವು ಉಕ್ರೇನ್‌ನ ಆಧ್ಯಾತ್ಮಿಕತೆಯ ಮಹಾನ್ ಕೇಂದ್ರಗಳಲ್ಲಿ ಒಂದಾಗಿದೆ. ಅದು ಕೇವಲ ಧರ್ಮಸಭೆಗೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೂ ಸೇರಿದೆ. ಕೀವ್-ಪೆಚೆರ್ಸ್ಕ್ ಲಾವ್ರಾ ಇಲ್ಲದೆ ಉಕ್ರೇನ್‌ನ ಇತಿಹಾಸವನ್ನಾಗಲಿ, ಅದರ ಸಂಸ್ಕೃತಿಯ ಇತಿಹಾಸವನ್ನಾಗಲಿ ಅರ್ಥಮಾಡಿಕೊಳ್ಳುವುದು ಅಸಾಧ್ಯ."

ಲೇಖಕರು: ಸ್ವೀತ್ಲಾನಾ ದುಖೊವಿಚ್

ಕೀವ್-ಪೆಚೆರ್ಸ್ಕ್ ಲಾವ್ರಾ ಉಕ್ರೇನ್‌ನ ಅತ್ಯಂತ ಪ್ರಾಚೀನ ಆಶ್ರಮ ಮಾತ್ರವಲ್ಲ, ಅದರ ಕ್ರೈಸ್ತ ಇತಿಹಾಸ ಮತ್ತು ಆಧ್ಯಾತ್ಮಿಕ ಗುರುತಿನ ಅತ್ಯಂತ ಪ್ರಮುಖ ಸಂಕೇತಗಳಲ್ಲಿ ಒಂದಾಗಿದೆ.

ವ್ಯಾಟಿಕನ್ ವಾರ್ತೆಗೆ ನೀಡಿದ ಸಂದರ್ಶನದಲ್ಲಿ, ಮಧ್ಯಕಾಲೀನ ಇತಿಹಾಸಕಾರ ಹಾಗೂ ಕೀವ್‌ನ ಸಂತ ಸೋಫಿಯಾ ರಾಷ್ಟ್ರೀಯ ಪವಿತ್ರ ಕ್ಷೇತ್ರ ಸಂಕೀರ್ಣದ ವೈಜ್ಞಾನಿಕ ನಿರ್ದೇಶಕರಾದ ದಿಮಿತ್ರೊ ಹೋರ್ಡಿಯೆಂಕೊ, ಲಾವ್ರಾದ ಉಗಮವನ್ನು ವಿವರಿಸುತ್ತಾರೆ. ಕೀವನ್ ರುಸ್‌ನ ದೇವರ ಸಮರ್ಪಿತ ಜೀವನದ ಸಂಪ್ರದಾಯವನ್ನು ರೂಪಿಸುವಲ್ಲಿ ಅದರ ಪಾತ್ರವನ್ನು ಅವರು ವಿವರಿಸುತ್ತಾರೆ. ಅಲ್ಲದೆ, ಅದರ ಶಾಶ್ವತ ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಮಹತ್ವದ ಜೊತೆಗೆ ಇಂದಿಗೂ ಆಶ್ರಮ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ವಿವರಿಸುತ್ತಾರೆ.

ಲಾವ್ರಾದ ಸಂಸ್ಥಾಪಕರಾದ ಸಂತ ಅಂತೋನಿ ಮತ್ತು ಸಂತ ಥಿಯೋಡೋಸಿಯಸ್

ಸಂಪ್ರದಾಯದ ಪ್ರಕಾರ, ಕೀವ್-ಪೆಚೆರ್ಸ್ಕ್ ಲಾವ್ರಾ ಆಶ್ರಮಕ್ಕೆ ಇಬ್ಬರು ಸಂಸ್ಥಾಪಕರಿದ್ದಾರೆ: ಗುಹೆಗಳ ಸಂತ ಅಂತೋನಿ ಮತ್ತು ಗುಹೆಗಳ ಸಂತ ಥಿಯೋಡೋಸಿಯಸ್ ("ಪೆಚೆರ್ಸ್ಕಿ" ಎಂದರೆ "ಗುಹೆಗಳ" ಎಂದು ಅರ್ಥ). "ಔಪಚಾರಿಕವಾಗಿ ನೋಡಿದರೆ ಸಂತ ಅಂತೋನಿಯವರೇ ಮೊದಲ ಸಂಸ್ಥಾಪಕರು. ಆದರೆ ಇಂದು ನಾವು ಕಾಣುವ ಆಶ್ರಮದ ರೂಪವು ಸಂತ ಥಿಯೋಡೋಸಿಯಸ್ ಅವರ ನೇತೃತ್ವದಲ್ಲಿ ರೂಪುಗೊಂಡಿತು," ಎಂದು ಇತಿಹಾಸಕಾರ ದಿಮಿತ್ರೊ ಹೋರ್ಡಿಯೆಂಕೊ ವಿವರಿಸುತ್ತಾರೆ.

ಕೀವ್‌ನ ಉತ್ತರಕ್ಕೆ ಸುಮಾರು 200 ಕಿಲೋಮೀಟರ್ (124 ಮೈಲು) ದೂರದಲ್ಲಿರುವ ಲಿಯುಬೆಚ್ ಎಂಬ ಊರಿನವರಾದ ಸಂತ ಅಂತೋನಿ, ಅಥೋಸ್ ಪರ್ವತದಲ್ಲಿ ತಮ್ಮ ಆಧ್ಯಾತ್ಮಿಕ ತರಬೇತಿಯನ್ನು ಪಡೆದರು. ಅಲ್ಲಿಯೇ ಕೀವನ್ ರುಸ್‌ನಲ್ಲಿ ದೇವರ ಸಮರ್ಪಿತ ಜೀವನದ ಮಾರ್ಗವನ್ನು ಹರಡಲು ಅವರು ಆಶೀರ್ವದಿಸಲ್ಪಟ್ಟರು. ಕೀವ್‌ಗೆ ಹಿಂದಿರುಗಿದ ನಂತರ, ಆಗ ನಗರದ ಹೊರಭಾಗದಲ್ಲಿದ್ದ ಪೆಚೆರ್ಸ್ಕ್‌ನ ಗುಹೆಗಳಲ್ಲಿ ಅವರು ನೆಲೆಸಿದರು.

"ಸಂಪ್ರದಾಯದ ಪ್ರಕಾರ ಅವರು ಅಥೋಸ್‌ನ ದೇವರ ಸಮರ್ಪಿತ ಜೀವನದ ಪರಂಪರೆಯನ್ನು ಇಲ್ಲಿಗೆ ತಂದರು. ಆದರೆ ಆ ಗುಹೆಗಳು ಆಗಲೇ ಅಸ್ತಿತ್ವದಲ್ಲಿದ್ದವು. ನಂತರ ಕೀವ್‌ನ ಮಹಾಧರ್ಮಾಧ್ಯಕ್ಷರಾದ ಗುರು ಹಿಲಾರಿಯನ್ ಕೂಡ ಅಲ್ಲಿಯೇ ವಾಸಿಸಿದ್ದರು," ಎಂದು ಹೋರ್ಡಿಯೆಂಕೊ ತಿಳಿಸುತ್ತಾರೆ. ಮೊದಲ ಸನ್ಯಾಸಿಗಳು ಸಂತ ಅಂತೋನಿಯವರ ಸುತ್ತ ಸೇರಿಕೊಂಡರು. ಆದರೆ ಏಕಾಂತ ತಪೋಮಯ ಜೀವನಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಈ ಸಂತರು ನಂತರ ಚೆರ್ನಿಹಿವ್ ಸಮೀಪಕ್ಕೆ ತೆರಳಿ, ಅಲ್ಲಿ ಮತ್ತೊಂದು ದೇವರ ಸನ್ಯಾಸಿ ಸಮುದಾಯವನ್ನು ಸ್ಥಾಪಿಸಿದರು. ಆಶ್ರಮಕ್ಕೆ ಸ್ಥಿರವಾದ ರಚನೆ ಮತ್ತು ಸಾಮೂಹಿಕ ಜೀವನದ ನಿಯಮವನ್ನು ನೀಡಿದವರು ಸಂತ ಥಿಯೋಡೋಸಿಯಸ್.

ಹೋರ್ಡಿಯೆಂಕೊ ಮತ್ತೊಂದು ಮಹತ್ವದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಆರಂಭದಲ್ಲಿ ರಾಜಕುಮಾರ ಸ್ವಿಯಾತೋಸ್ಲಾವ್ ಯಾರೊಸ್ಲಾವಿಚ್ ಅವರೊಂದಿಗೆ ಉಂಟಾದ ಭಿನ್ನಾಭಿಪ್ರಾಯದ ಬಳಿಕ, ಸಂತ ಥಿಯೋಡೋಸಿಯಸ್ ರಾಜನೊಂದಿಗೆ ಮರುಸಂಧಾನ ಮಾಡಿಕೊಂಡರು. ಆಗ ರಾಜಕುಮಾರರು ಸ್ವರ್ಗಾರೋಹಣ ಪ್ರಧಾನ ದೇವಾಲಯದ ನಿರ್ಮಾಣಕ್ಕಾಗಿ 100 ಹ್ರಿವ್ನಿಯಾ (ಇಂದಿನ ಮೌಲ್ಯದಲ್ಲಿ ಸುಮಾರು €1.97) ದೇಣಿಗೆಯಾಗಿ ನೀಡಿದರು. "ಸಂತ ಥಿಯೋಡೋಸಿಯಸ್ ಸ್ವತಃ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿ, ಪ್ರಧಾನ ದೇವಾಲಯದ ಅಡಿಪಾಯಕ್ಕಾಗಿ ಉತ್ಖನನ ಕಾರ್ಯವನ್ನು ತಮ್ಮ ಕೈಯಾರೆ ಆರಂಭಿಸಿದರು," ಎಂದು ಹೋರ್ಡಿಯೆಂಕೊ ಹೇಳುತ್ತಾರೆ.

ಇತಿಹಾಸಕಾರರ ಪ್ರಕಾರ, ಸಂತ ಥಿಯೋಡೋಸಿಯಸ್ ಅವರ ನಾಯಕತ್ವದಲ್ಲಿಯೇ ಕೀವ್‌ನ ಗುಹೆಗಳ ಆಶ್ರಮ ಪ್ರಮುಖ ಸನ್ಯಾಸಿ ಸಮುದಾಯವಾಗಿ ಬೆಳೆಯಿತು. ನಂತರ ಪೂರ್ವ ಕ್ರೈಸ್ತ ಸಂಪ್ರದಾಯದಲ್ಲಿ ಅತ್ಯಂತ ಪ್ರಮುಖ ಆಶ್ರಮಗಳಿಗೆ ಮಾತ್ರ ಮೀಸಲಾಗಿರುವ "ಲಾವ್ರಾ" ಎಂಬ ಗೌರವ ಬಿರುದನ್ನು ಅದು ಪಡೆಯಿತು.

ದೇವಮಾತೆಯ ರಕ್ಷಣೆಯ ನೆರಳಿನಲ್ಲಿ

ಒಂದು ಪ್ರಾಚೀನ ಸಂಪ್ರದಾಯವು ಸ್ವರ್ಗಾರೋಹಣ ಪ್ರಧಾನ ದೇವಾಲಯವನ್ನು ಕನ್ಯಾ ಮರಿಯಮ್ಮನವರ ವಿಶೇಷ ರಕ್ಷಣೆಯೊಂದಿಗೆ ಜೋಡಿಸುತ್ತದೆ. "ದಂತಕಥೆಯ ಪ್ರಕಾರ, ಕಾನ್‌ಸ್ಟಾಂಟಿನೋಪಲ್‌ನ ಬ್ಲಾಕೆರ್ನೆ ದೇವಾಲಯದಲ್ಲಿ ಗ್ರೀಕ್ ಮುಖ್ಯ ಶಿಲ್ಪಿಗಳಿಗೆ ದೇವಮಾತೆಯು ದರ್ಶನ ನೀಡಿ, ಕೀವ್ ಬೆಟ್ಟಗಳ ಮೇಲೆ ತಮ್ಮ ವಾಸಸ್ಥಾನವನ್ನು ಸ್ಥಾಪಿಸಲು ಬಯಸುವುದಾಗಿ ತಿಳಿಸಿದರು," ಎಂದು ಹೋರ್ಡಿಯೆಂಕೊ ವಿವರಿಸುತ್ತಾರೆ.

ಆಶ್ರಮವನ್ನು ನಿರ್ಮಿಸಬೇಕಾದ ಸ್ಥಳವನ್ನು ಸ್ವತಃ ಪವಿತ್ರ ಕನ್ಯಾ ಮರಿಯಮ್ಮನವರೇ ಸೂಚಿಸಿದರೆಂದು ಹೇಳಲಾಗುತ್ತದೆ. ಆ ಮೂಲಕ ಆ ಸ್ಥಳವನ್ನು ತಮ್ಮ ಪರಲೋಕಾರೋಹಣಕ್ಕೆ ಸಮರ್ಪಿತ ಪವಿತ್ರ ಕ್ಷೇತ್ರವನ್ನಾಗಿ ಮಾಡಿದರು. ದೇವಮಾತೆಯೇ ವೈಯಕ್ತಿಕವಾಗಿ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ನಂಬಿಕೆಯು ಅದರ ಆಧ್ಯಾತ್ಮಿಕ ಮಹತ್ವವನ್ನು ಮತ್ತಷ್ಟು ಬಲಪಡಿಸಿತು. ಜೊತೆಗೆ ಕೀವ್-ಪೆಚೆರ್ಸ್ಕ್ ಲಾವ್ರಾವನ್ನು ಕೀವ್ ಮಹಾಧರ್ಮಕ್ಷೇತ್ರದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿ ಸ್ಥಾಪಿಸಲು ನೆರವಾಯಿತು. "ಈ ಆಶ್ರಮದ ಕಾರಣದಿಂದಲೇ ಸ್ವರ್ಗಾರೋಹಣ ಹಬ್ಬವು ಕೀವನ್ ರುಸ್ ಧರ್ಮಸಭೆಯ ಪ್ರಮುಖ ಮರಿಯಮ್ಮನವರ ಹಬ್ಬವಾಯಿತು," ಎಂದು ಹೋರ್ಡಿಯೆಂಕೊ ಅಭಿಪ್ರಾಯಪಡುತ್ತಾರೆ.

ವೈಭವ ಮತ್ತು ಸಂಕಷ್ಟಗಳ ನಡುವಿನ ಲಾವ್ರಾ

ಹನ್ನೊಂದನೇ ಶತಮಾನದ ಉತ್ತರಾರ್ಧದಿಂದ ಕೀವ್ ಮಹಾಧರ್ಮಕ್ಷೇತ್ರದ ಅನೇಕ ಧರ್ಮಾಧ್ಯಕ್ಷರು ಈ ಲಾವ್ರಾದಿಂದ ಬಂದರು. ಇದರಿಂದ ಅದು ಕೀವನ್ ರುಸ್‌ನ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿ ಬೆಳೆಯಿತು. "ಇತರ ಅನೇಕ ಆಶ್ರಮಗಳಂತೆ ಇದು ನೇರವಾಗಿ ರಾಜಮನೆತನದ ಆಶ್ರಯವನ್ನು ಅವಲಂಬಿಸಿರಲಿಲ್ಲ," ಎಂದು ಹೋರ್ಡಿಯೆಂಕೊ ಸೂಚಿಸುತ್ತಾರೆ.

ಮಧ್ಯಯುಗದಲ್ಲಿಯೇ ಈ ಆಶ್ರಮವು ಯಾತ್ರಿಕರನ್ನು ಆಕರ್ಷಿಸಲು ಆರಂಭಿಸಿತ್ತು. ನಂತರದ ಶತಮಾನಗಳಲ್ಲಿ ಇದು ಪೂರ್ವ ಯುರೋಪಿನ ಅತ್ಯಂತ ಪ್ರಮುಖ ಭಕ್ತಿಕೇಂದ್ರಗಳಲ್ಲಿ ಒಂದಾಗಿ ಬೆಳೆಯಿತು. ತನ್ನ ಇತಿಹಾಸದುದ್ದಕ್ಕೂ ಕೀವ್-ಪೆಚೆರ್ಸ್ಕ್ ಲಾವ್ರಾ ಅನೇಕ ಬಾರಿ ದಾಳಿ ಮತ್ತು ಲೂಟಿಗೆ ಒಳಗಾಯಿತು. ದಾಖಲಾಗಿರುವ ಮೊದಲ ದಾಳಿ ಕ್ರಿ.ಶ. 1096ರಲ್ಲಿ ನಡೆಯಿತು. ಆಗ ಕುಮಾನ್ ಜನಾಂಗದವರು ಆಶ್ರಮಕ್ಕೆ ಬೆಂಕಿ ಹಚ್ಚಿ, ಅದನ್ನು ಲೂಟಿ ಮಾಡಿ, ಹಲವಾರು ದೇವರ ಸಮರ್ಪಿತರನ್ನು ಬಂಧಿಗಳನ್ನಾಗಿ ಕೊಂಡೊಯ್ದರು.

"ಆದಾಗ್ಯೂ, ಮಂಗೋಲರು ಈ ಆಶ್ರಮವನ್ನು ಸಂಪೂರ್ಣವಾಗಿ ನಾಶಪಡಿಸಿದರು ಎಂಬ ಅಭಿಪ್ರಾಯಕ್ಕೆ ಉಳಿದಿರುವ ಐತಿಹಾಸಿಕ ದಾಖಲೆಗಳು ಸಾಕಷ್ಟು ಬೆಂಬಲ ನೀಡುವುದಿಲ್ಲ," ಎಂದು ಹೋರ್ಡಿಯೆಂಕೊ ಹೇಳುತ್ತಾರೆ.

ಕ್ರೈಸ್ತ ಸಂಸ್ಕೃತಿಯ ಕೇಂದ್ರ

ಸನ್ಯಾಸಿಗಳ ಸಮುದಾಯವಾಗಿ ತನ್ನ ಪಾತ್ರವನ್ನು ಮೀರಿ, ಕೀವ್-ಪೆಚೆರ್ಸ್ಕ್ ಲಾವ್ರಾ ಕೀವನ್ ರುಸ್‌ನ ಕ್ರೈಸ್ತ ಸಂಸ್ಕೃತಿಯ ಪ್ರಮುಖ ತೊಟ್ಟಿಲುಗಳಲ್ಲಿ ಒಂದಾಯಿತು. "ಲಾವ್ರಾದ ಮಧ್ಯಯುಗೀನ ಲೇಖಕರಲ್ಲಿ ಅತ್ಯಂತ ಪ್ರಮುಖ ವ್ಯಕ್ತಿ ಸಂಪ್ರದಾಯದ ಪ್ರಕಾರ 'ಇತಿಹಾಸಕಾರ' ಎಂದು ಕರೆಯಲ್ಪಡುವ ನೆಸ್ಟರ್,ಆದರೆ ಪ್ರಸಿದ್ಧ 'ಪ್ರೈಮರಿ ಕ್ರಾನಿಕಲ್' ಅನ್ನು ಅವರು ಬರೆದರು ಅಥವಾ ಅದು ಈ ಆಶ್ರಮದಲ್ಲೇ ರಚನೆಯಾಯಿತು ಎಂಬುದನ್ನು ನಾನು ನಂಬುವುದಿಲ್ಲ. ಆದರೆ ಅದರ ಕರ್ತೃ ಆಶ್ರಮದ ದಾಖಲೆಗಳು ಮತ್ತು ಬರಹಗಳನ್ನು ಆಧರಿಸಿದ್ದಿರಬಹುದು” ಎಂದು ಹೋರ್ಡಿಯೆಂಕೊ ಹೇಳುತ್ತಾರೆ.  ಆದಾಗ್ಯೂ, 'ಸಂತ ಥಿಯೋಡೋಸಿಯಸ್ ಅವರ ಜೀವನಚರಿತ್ರೆ' ಹಾಗೂ 'ಸಂತ ಬೋರಿಸ್ ಮತ್ತು ಸಂತ ಹ್ಲಿಬ್ ಅವರ ಜೀವನಚರಿತ್ರೆಗಳನ್ನು' ನೆಸ್ಟರ್ ರಚಿಸಿದ್ದಾರೆ ಎಂಬುದು ಖಚಿತವಾಗಿದೆ. ಇದಲ್ಲದೆ, ಕೀವ್-ಪೆಚೆರ್ಸ್ಕ್ ಲಾವ್ರಾ 'ಕೀವ್-ಪೆಚೆರ್ಸ್ಕ್ ಪಟೆರಿಕೊನ್' ಎಂಬ ಸಂತರು ಹಾಗೂ ಆಧ್ಯಾತ್ಮಿಕ ಘಟನೆಗಳ ಸಂಕಲನದ ಜನ್ಮಸ್ಥಳವೂ ಆಗಿತ್ತು. ಈ ಕೃತಿ ಪೂರ್ವ ಯುರೋಪಿನಲ್ಲಿ ಅತ್ಯಂತ ವ್ಯಾಪಕವಾಗಿ ಓದಲ್ಪಟ್ಟ ಧಾರ್ಮಿಕ ಕೃತಿಗಳಲ್ಲಿ ಒಂದಾಗಿ, ಆಶ್ರಮದ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿತು.

ಅತ್ಯುನ್ನತ ಗೌರವ ಪಡೆದ ಸನ್ಯಾಸಿಗಳ ಸಮುದಾಯ

ಮಧ್ಯಯುಗದಲ್ಲಿ ಅಲ್ಲಿ ಎಷ್ಟು ಸನ್ಯಾಸಿಗಳು ವಾಸಿಸುತ್ತಿದ್ದರು ಎಂಬುದಕ್ಕೆ ನಿಖರ ದಾಖಲೆಗಳಿಲ್ಲ. "ಆರಂಭದಲ್ಲಿ ಈ ಸಮುದಾಯದಲ್ಲಿ ಬಹುಶಃ ಇಪ್ಪತ್ತಕ್ಕೂ ಕಡಿಮೆ ಸನ್ಯಾಸಿಗಳು ಇದ್ದಿರಬಹುದು," ಎಂದು ಹೋರ್ಡಿಯೆಂಕೊ ವಿವರಿಸುತ್ತಾರೆ. ಈ ಸಮುದಾಯದ ಸದಸ್ಯರಲ್ಲಿ ಹೆಚ್ಚಿನವರು ಕೀವನ್ ರುಸ್‌ನ ಗಣ್ಯ ಕುಟುಂಬಗಳಿಂದ ಬಂದವರಾಗಿದ್ದರು. ರಾಜಕುಮಾರರು, ಬೊಯಾರ್‌ಗಳು (ರಾಜನಿಗೆ ಸೇವೆ ಸಲ್ಲಿಸುತ್ತಿದ್ದ ಶ್ರೀಮಂತ ವರ್ಗದವರು) ಮತ್ತು ಪ್ರಭಾವಿ ಕುಟುಂಬಗಳ ಸದಸ್ಯರು ಇವರಲ್ಲಿ ಸೇರಿದ್ದರು. ಅವರಲ್ಲಿ ರಾಜಕುಮಾರ ಮೈಕೋಲಾ ಸ್ವಿಯಾತೋಶಾ ಕೂಡ ಒಬ್ಬರಾಗಿದ್ದರು. ಸಂತ ಥಿಯೋಡೋಸಿಯಸ್ ಅವರೂ ಸಹ ಬೊಯಾರ್ ಕುಟುಂಬದವರಾಗಿದ್ದರು. ಶತಮಾನಗಳು ಕಳೆದಂತೆ, ಕೀವ್-ಪೆಚೆರ್ಸ್ಕ್ ಲಾವ್ರಾ ಉಕ್ರೇನ್‌ನ ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿ ಬೆಳೆಯಿತು.

ಹದಿನೇಳನೇ ಶತಮಾನದಲ್ಲಿ ಮಹಾಧರ್ಮಾಧ್ಯಕ್ಷ ಪೆಟ್ರೊ ಮೊಹಿಲಾ ಅವರ ನೇತೃತ್ವದಲ್ಲಿ ಮತ್ತು ನಂತರ ಹೆಟ್ಮನ್ ಇವಾನ್ ಮಝೆಪಾ ಅವರ ಬೆಂಬಲದೊಂದಿಗೆ ಇದು ಮತ್ತೊಮ್ಮೆ ಉನ್ನತಿಯ ಕಾಲವನ್ನು ಕಂಡಿತು. ಆಶ್ರಮವು ವಿಶಾಲ ಭೂಮಿಯನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡಿತು. ಕೀವ್ ಮಹಾಧರ್ಮಕ್ಷೇತ್ರದ ಪ್ರದೇಶಗಳು ವಿವಿಧ ರಾಷ್ಟ್ರಗಳ ನಡುವೆ ವಿಭಜನೆಯಾದ ನಂತರವೂ ತನ್ನ ಆಸ್ತಿಗಳನ್ನು ಉಳಿಸಿಕೊಂಡಿತು.

ಮಾಸ್ಕೋದ ಪ್ರಭಾವದ ಅಡಿಯಲ್ಲಿ ಲಾವ್ರಾ

ಹೋರ್ಡಿಯೆಂಕೊ ಅವರ ಪ್ರಕಾರ, ಕೀವ್-ಪೆಚೆರ್ಸ್ಕ್ ಲಾವ್ರಾದ ಇತಿಹಾಸದಲ್ಲಿ ಮಹತ್ವದ ತಿರುವು 1686ರಲ್ಲಿ ಸಂಭವಿಸಿತು. ಆಗ ಕೀವ್ ಮಹಾಧರ್ಮಕ್ಷೇತ್ರದ ಮೇಲೆ ಮಾಸ್ಕೋ ನಿಯಂತ್ರಣ ಸಾಧಿಸಿತು. ಕಾನ್‌ಸ್ಟಾಂಟಿನೋಪಲ್‌ನ ಸರ್ವಧರ್ಮಾಧ್ಯಕ್ಷರ ದಾಖಲೆಗಳು ಧಾರ್ಮಿಕ ಅಧಿಕಾರವನ್ನು ಶಾಶ್ವತವಾಗಿ ಮಾಸ್ಕೋಗೆ ವರ್ಗಾಯಿಸಲಾಯಿತು ಎಂಬುದನ್ನು ದೃಢೀಕರಿಸುವುದಿಲ್ಲ ಎಂದು ಇತಿಹಾಸಕಾರರು ವಾದಿಸುತ್ತಾರೆ. ಯುದ್ಧದ ಸಂದರ್ಭಗಳಲ್ಲಿ ಅಥವಾ ಕಾನ್‌ಸ್ಟಾಂಟಿನೋಪಲ್‌ನೊಂದಿಗೆ ಸಂಪರ್ಕ ಸಾಧ್ಯವಾಗದ ಸಂದರ್ಭಗಳಲ್ಲಿ ಮಾತ್ರ ಆಡಳಿತಾತ್ಮಕ ಅಧಿಕಾರವನ್ನು ತಾತ್ಕಾಲಿಕವಾಗಿ ಮಾಸ್ಕೋದ ಸರ್ವಧರ್ಮಾಧ್ಯಕ್ಷರಿಗೆ ವಹಿಸಲಾಗಿತ್ತು ಎಂದು ಅವರು ಹೇಳುತ್ತಾರೆ.

"ನಂತರದ ವರ್ಷಗಳಲ್ಲಿ ಮಾಸ್ಕೋ ಕ್ರಮೇಣ ಕೀವ್ ಧರ್ಮಸಭೆಯ ಮೇಲೆ ತನ್ನ ಪ್ರಭಾವವನ್ನು ವಿಸ್ತರಿಸಿತು," ಎಂದು ಅವರು ಹೇಳುತ್ತಾರೆ. ಆದಾಗ್ಯೂ, ಆಶ್ರಮದ ಆಸ್ತಿಗಳನ್ನು ರಾಷ್ಟ್ರೀಕರಣ ಮಾಡುವವರೆಗೆ, ಅಂದರೆ ಸುಮಾರು ಒಂದು ಶತಮಾನದ ಕಾಲ, ಲಾವ್ರಾದ ಆಂತರಿಕ ಜೀವನದಲ್ಲಿ ನೇರ ಹಸ್ತಕ್ಷೇಪವಾಗಲಿಲ್ಲ ಎಂದು ಹೋರ್ಡಿಯೆಂಕೊ ಸೂಚಿಸುತ್ತಾರೆ. ಆರಂಭಿಕ ಹಸ್ತಕ್ಷೇಪಗಳು ಮುಖ್ಯವಾಗಿ ಆಶ್ರಮದ ಪ್ರಕಟಣಾ ಚಟುವಟಿಕೆಗಳಿಗೆ ಸಂಬಂಧಿಸಿದ್ದವು. ಆ ಕಾಲದಲ್ಲಿ ಉಕ್ರೇನ್‌ನಲ್ಲೇ ಅತ್ಯಂತ ಪ್ರಮುಖವಾಗಿದ್ದ ಅದರ ಮುದ್ರಣಾಲಯವನ್ನು ಪವಿತ್ರ ಸಿನೋಡ್ ನಿಯಂತ್ರಣಕ್ಕೆ ಒಳಪಡಿಸಿ, ಭಾಷೆ ಮತ್ತು ಧರ್ಮಶಾಸ್ತ್ರೀಯ ವಿಷಯಗಳನ್ನು ರಷ್ಯನ್ ಧಾರ್ಮಿಕ ಸಂಪ್ರದಾಯಕ್ಕೆ ಹೊಂದುವಂತೆ ತಿದ್ದಲಾಯಿತು.

"ಕೀವ್‌ನ ಕ್ರೈಸ್ತಧರ್ಮವು ಯುರೋಪಿನ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದು, ತನ್ನದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿತ್ತು," ಎಂದು ಹೋರ್ಡಿಯೆಂಕೊ ವಿವರಿಸುತ್ತಾರೆ. ಹದಿನೆಂಟನೇ ಶತಮಾನದ ಉತ್ತರಾರ್ಧದಿಂದ ಹತ್ತೊಂಬತ್ತನೇ ಶತಮಾನದ ಆರಂಭದವರೆಗೆ ಈ ಪ್ರಕ್ರಿಯೆ ಇನ್ನಷ್ಟು ತೀವ್ರಗೊಂಡಿತು. ಕೀವ್‌ನ ಮಹಾಧರ್ಮಾಧ್ಯಕ್ಷರಾಗಿ ಹೆಚ್ಚಾಗಿ ರಷ್ಯಾದ ಮೂಲದ ಧರ್ಮಾಧ್ಯಕ್ಷರನ್ನು ನೇಮಿಸಲಾಯಿತು. ಮಾಸ್ಕೋದ ಧಾರ್ಮಿಕ ನೀತಿಗಳಿಗೆ ನಿಷ್ಠರಾಗಿದ್ದ ಸನ್ಯಾಸಿಗಳನ್ನು ಲಾವ್ರಾಕ್ಕೆ ಕಳುಹಿಸಲಾಯಿತು. "ಈ ರೀತಿಯಾಗಿ ಈ ಆಶ್ರಮವು ಕ್ರಮೇಣ ರಷ್ಯನ್ ಆರ್ಥೊಡಾಕ್ಸ್ ಧರ್ಮಸಭೆಯ ಪ್ರಮುಖ ಭದ್ರಕೋಟೆಗಳಲ್ಲಿ ಒಂದಾಗಿ ರೂಪುಗೊಂಡಿತು," ಎಂದು ಇತಿಹಾಸಕಾರರು ತೀರ್ಮಾನಿಸುತ್ತಾರೆ.

ಕಲೆ, ಪಾವಿತ್ರ್ಯ ಮತ್ತು ಯಾತ್ರೆ

ಶತಮಾನಗಳ ಅವಧಿಯಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದ್ದರೂ, ಕೀವ್-ಪೆಚೆರ್ಸ್ಕ್ ಲಾವ್ರಾ ಉಕ್ರೇನ್‌ನ ಪವಿತ್ರ ಕಲೆಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿಯೇ ಉಳಿಯಿತು. "ಇದರ ಐಕಾನ್ ಚಿತ್ರಕಲೆಯ ಶಾಲೆಯು ದೇಶದಲ್ಲೇ ಅತ್ಯಂತ ಪ್ರಮುಖವಾಗಿತ್ತು," ಎಂದು ಹೋರ್ಡಿಯೆಂಕೊ ನೆನಪಿಸಿಕೊಳ್ಳುತ್ತಾರೆ. ಅದರ ಶ್ರೇಷ್ಠ ಕಲಾವಿದರಲ್ಲಿ ಗುಹೆಗಳ ಅಲಿಪಿಯಸ್ ಪ್ರಮುಖರು. ಅವರನ್ನು ಕೀವನ್ ರುಸ್‌ನ ಮೊದಲ ಪ್ರಸಿದ್ಧ ಐಕಾನ್ ಚಿತ್ರಕಾರರೆಂದು ಪರಿಗಣಿಸಲಾಗುತ್ತದೆ.

ಆಧುನಿಕ ಯುಗದಲ್ಲಿಯೂ ಲಾವ್ರಾ ಉಕ್ರೇನಿಯನ್ ಬರೋಕ್ ಕಲೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿತು. ಆದರೆ ಹತ್ತೊಂಬತ್ತನೇ ಶತಮಾನದ ವೇಳೆಗೆ ಪವಿತ್ರ ಕಲೆಯು ಕ್ರಮೇಣ ರಷ್ಯನ್ ಧರ್ಮಸಭೆಯ ಸಿನೋಡ್‌ನ ಮಾನದಂಡಗಳಿಗೆ ಹೊಂದಿಕೊಳ್ಳುವಂತಾಯಿತು. "ಆದಾಗ್ಯೂ ಲಾವ್ರಾದ ಪಾವಿತ್ರ್ಯ ಮಾತ್ರ ಬದಲಾಗಲಿಲ್ಲ," ಎಂದು ಹೋರ್ಡಿಯೆಂಕೊ ಒತ್ತಿ ಹೇಳುತ್ತಾರೆ.

ಮಹಾಧರ್ಮಾಧ್ಯಕ್ಷ ಪೆಟ್ರೊ ಮೊಹಿಲಾ ಗುಹೆಗಳಲ್ಲಿ ಸಮಾಧಿಯಾಗಿದ್ದ ದೇವರ ಸಮರ್ಪಿತರನ್ನು ಸಂತರೆಂದು ಘೋಷಿಸಿದ ನಂತರ, ಈ ಆಶ್ರಮವು ಇನ್ನಷ್ಟು ಪ್ರಮುಖ ಯಾತ್ರಾ ಕೇಂದ್ರವಾಯಿತು. ಸಮಕಾಲೀನ ದಾಖಲೆಗಳ ಪ್ರಕಾರ, ಆರ್ಥೊಡಾಕ್ಸ್ ವಿಶ್ವಾಸಿಗಳು ಮಾತ್ರವಲ್ಲದೆ ಪೋಲಿಷ್-ಲಿಥುವೇನಿಯನ್ ಕಾಮನ್‌ವೆಲ್ತ್ ಪ್ರದೇಶದ ಕಥೋಲಿಕರೂ ಸಹ ಇಲ್ಲಿನ ಪವಿತ್ರ ಅವಶೇಷಗಳನ್ನು ಗೌರವಿಸಲು ಬರುತ್ತಿದ್ದರು. ಇದರಿಂದ ಆರ್ಥೊಡಾಕ್ಸ್ ಲೋಕದಾಚೆಯೂ ಆಶ್ರಮದ ಖ್ಯಾತಿ ಹರಡಿತ್ತು ಎಂಬುದು ಸ್ಪಷ್ಟವಾಗುತ್ತದೆ.

ಸೋವಿಯತ್ ಆಡಳಿತ ಆರಂಭವಾದ ನಂತರ ಕೀವ್-ಪೆಚೆರ್ಸ್ಕ್ ಲಾವ್ರಾದ ಸನ್ಯಾಸಿಗಳ ಜೀವನವು ಬಹುತೇಕ ಸಂಪೂರ್ಣವಾಗಿ ನಿಗ್ರಹಿಸಲ್ಪಟ್ಟಿತು. 1921 ಮತ್ತು 1923ರ ನಡುವೆ ಸೋವಿಯತ್ ಅಧಿಕಾರಿಗಳು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯದಾದ್ಯಂತ ಧರ್ಮಸಭೆಯ ಆಸ್ತಿಗಳನ್ನು ವಶಪಡಿಸಿಕೊಳ್ಳುವ ವ್ಯಾಪಕ ಅಭಿಯಾನ ಆರಂಭಿಸಿದರು. ಲಾವ್ರಾವನ್ನೂ ಲೂಟಿ ಮಾಡಲಾಯಿತು. "ಡಜನ್‌ಗಟ್ಟಲೆ ಕಿಲೋಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಯಿತು. ಅವುಗಳಲ್ಲಿ ಹೆಚ್ಚಿನವು ಉಕ್ರೇನಿಯನ್ ಬರೋಕ್ ಕಾಲದ ಧಾರ್ಮಿಕ ಆರಾಧನಾ ವಸ್ತುಗಳಾಗಿದ್ದವು," ಎಂದು ಹೋರ್ಡಿಯೆಂಕೊ ಹೇಳುತ್ತಾರೆ. ಈ ಕಾರ್ಯಾಚರಣೆಯನ್ನು ಬರಪೀಡಿತ ಜನರಿಗೆ ನೆರವು ನೀಡುವ ಉದ್ದೇಶದಿಂದ ಎಂದು ಅಧಿಕೃತವಾಗಿ ಹೇಳಲಾಗಿತ್ತು. "ಆದರೆ ವಾಸ್ತವದಲ್ಲಿ ಅದು ಉಕ್ರೇನ್‌ನ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಅಂಶಗಳನ್ನು ವ್ಯವಸ್ಥಿತವಾಗಿ ನಾಶಪಡಿಸಿ ತೆಗೆದುಹಾಕುವ ನೆಪವಾಗಿತ್ತು," ಎಂದು ಇತಿಹಾಸಕಾರರು ಸೇರಿಸುತ್ತಾರೆ. ಆದಾಗ್ಯೂ, ಕೀವ್‌ನ ವಿದ್ವಾಂಸರು ಮತ್ತು ವಸ್ತುಸಂಗ್ರಹಾಲಯ ತಜ್ಞರ ಪ್ರಯತ್ನದಿಂದ ಈ ಸಂಕೀರ್ಣವು ನೆಲಸಮವಾಗುವುದರಿಂದ ಪಾರಾಯಿತು. ಅವರು ಅದನ್ನು ಪ್ರಮುಖ ವಸ್ತುಸಂಗ್ರಹಾಲಯ ಸಂಕೀರ್ಣವನ್ನಾಗಿ ಪರಿವರ್ತಿಸಿದರು.

1943ರಲ್ಲಿ ಸ್ಟಾಲಿನ್ ರಷ್ಯನ್ ಆರ್ಥೊಡಾಕ್ಸ್ ಧರ್ಮಸಭೆಯನ್ನು ಮರುಸ್ಥಾಪಿಸಿದ ನಂತರ, ಲಾವ್ರಾದ ಒಂದು ಭಾಗದಲ್ಲಿ ಸನ್ಯಾಸಿಗಳ ಜೀವನ ಪುನರಾರಂಭವಾಯಿತು. ಮೇಲಿನ ಲಾವ್ರಾ ಮಾತ್ರ ವಸ್ತುಸಂಗ್ರಹಾಲಯ ಸಂಸ್ಥೆಗಳ ಅಧೀನದಲ್ಲಿಯೇ ಉಳಿಯಿತು.

ಇತ್ತೀಚಿನ ದಾಳಿಯಿಂದ ಉಂಟಾದ ಹಾನಿ

2026ರ ಜೂನ್ 14 ಮತ್ತು 15ರ ರಾತ್ರಿ, ಯುನೆಸ್ಕೋ ವಿಶ್ವ ಪರಂಪರೆ ತಾಣ ಪಟ್ಟಿಯಲ್ಲಿರುವ ಕೀವ್-ಪೆಚೆರ್ಸ್ಕ್ ಲಾವ್ರಾ ರಷ್ಯಾದ ದಾಳಿಗೆ ಗುರಿಯಾಯಿತು. ಪರಲೋಕಾರೋಹಣ ಪ್ರಧಾನ ದೇವಾಲಯದ ಮೇಲ್ಛಾವಣಿಗೆ ಹಾನಿಯಾಯಿತು. ಆದರೆ ಅದನ್ನು ಶೀಘ್ರದಲ್ಲೇ ದುರಸ್ತಿ ಮಾಡಲಾಯಿತು. ಐಕಾನೊಸ್ಟಾಸಿಸ್‌ನಲ್ಲಿದ್ದ ಐತಿಹಾಸಿಕ ಪವಿತ್ರ ಚಿತ್ರಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಅದೇ ದಿನ ಉಕ್ರೇನ್‌ನ ಇತರ ವಸ್ತುಸಂಗ್ರಹಾಲಯಗಳಿಗೂ ಹಾನಿಯಾಯಿತು ಎಂದು ಹೋರ್ಡಿಯೆಂಕೊ ಹೇಳುತ್ತಾರೆ. ಈ ದಾಳಿಗಳು ಕೇವಲ ಕಟ್ಟಡಗಳ ಮೇಲೆ ಮಾತ್ರವಲ್ಲ, ಉಕ್ರೇನ್‌ನ ಸಾಂಸ್ಕೃತಿಕ ಪರಂಪರೆಯ ಮೇಲೆಯೂ ನಡೆಸಲ್ಪಟ್ಟವು ಎಂಬುದು ಅವರ ಅಭಿಪ್ರಾಯ.

ಉಕ್ರೇನ್‌ನ ಆಧ್ಯಾತ್ಮಿಕ ಹೃದಯಗಳಲ್ಲಿ ಒಂದು

ದಿಮಿತ್ರೊ ಹೋರ್ಡಿಯೆಂಕೊ ಅವರ ದೃಷ್ಟಿಯಲ್ಲಿ, ಕೀವ್-ಪೆಚೆರ್ಸ್ಕ್ ಲಾವ್ರಾ ಉಕ್ರೇನ್‌ನ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಗುರುತಿನ ಪ್ರಮುಖ ಸಂಕೇತಗಳಲ್ಲಿ ಒಂದಾಗಿಯೇ ಉಳಿದಿದೆ. 1941ರಲ್ಲಿ ಜರ್ಮನ್ ಸೇನೆಯ ಮುನ್ನಡೆಯ ಸಂದರ್ಭದಲ್ಲಿ ಸೋವಿಯತ್ ಸೇನೆ ಕೀವ್‌ನಿಂದ ಹಿಂತಿರುಗಿದಾಗ ಸ್ವರ್ಗಾರೋಹಣ ಪ್ರಧಾನ ದೇವಾಲಯ ನಾಶವಾಯಿತು. ಆಗ ಚಲನಚಿತ್ರ ನಿರ್ದೇಶಕ ಒಲೆಕ್ಸಾಂಡರ್ ದೋವ್ಜೆಂಕೊ ಬರೆದ ಮಾತುಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ. "ರಾಜಧಾನಿಯ ಹೃದಯವನ್ನೇ ಕಿತ್ತುಹಾಕಿದಂತಾಯಿತು" ಎಂದು ಅವರು ಬರೆದಿದ್ದರು.

"ಲಾವ್ರಾ ಕೇವಲ ಒಂದು ಆಶ್ರಮವಲ್ಲ," ಎಂದು ಹೋರ್ಡಿಯೆಂಕೊ ಹೇಳುತ್ತಾರೆ. "ಇದು ಉಕ್ರೇನ್‌ನ ಆಧ್ಯಾತ್ಮಿಕತೆಯ ಮಹಾನ್ ಕೇಂದ್ರಗಳಲ್ಲಿ ಒಂದಾಗಿದೆ. ಇದು ಕೇವಲ ಧರ್ಮಸಭೆಗೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೂ ಸೇರಿದೆ. ಶತಮಾನಗಳ ಕಾಲ, ಉಕ್ರೇನಿಯನ್ನರಿಗೆ ತಮ್ಮದೇ ಆದ ಸ್ವತಂತ್ರ ರಾಷ್ಟ್ರವಿಲ್ಲದಿದ್ದ ಸಂದರ್ಭದಲ್ಲಿಯೂ, ದೇಶದ ನಂಬಿಕೆ, ಸಂಸ್ಕೃತಿ ಮತ್ತು ಐತಿಹಾಸಿಕ ಸ್ಮೃತಿಯನ್ನು ಸಂರಕ್ಷಿಸಿ ಮುಂದಿನ ತಲೆಮಾರುಗಳಿಗೆ ಹಸ್ತಾಂತರಿಸಿದ ಸ್ಥಳ ಇದಾಗಿದೆ." ಈ ಆಶ್ರಮದಿಂದ ಸಾಹಿತ್ಯ ಕೃತಿಗಳು, ಕಲಾ ಶಾಲೆಗಳು ಮತ್ತು ಕೀವ್ ಮಹಾಧರ್ಮಕ್ಷೇತ್ರದ ಧಾರ್ಮಿಕ ಜೀವನದ ಮಹತ್ವದ ಭಾಗವು ಹೊರಹೊಮ್ಮಿತು. "ಕೀವ್-ಪೆಚೆರ್ಸ್ಕ್ ಲಾವ್ರಾವನ್ನು ಅರಿಯದೆ ಉಕ್ರೇನ್‌ನ ಇತಿಹಾಸವನ್ನಾಗಲಿ, ಅದರ ಸಂಸ್ಕೃತಿಯ ಇತಿಹಾಸವನ್ನಾಗಲಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ," ಎಂದು ಹೇಳಿದರು.

ಆದ್ದರಿಂದಲೇ, ಈ ಆಶ್ರಮಕ್ಕೆ ಉಂಟಾಗುವ ಪ್ರತಿಯೊಂದು ಹಾನಿಯೂ ಕೇವಲ ಒಂದು ಸ್ಮಾರಕಕ್ಕೆ ಉಂಟಾಗುವ ಹಾನಿಯಲ್ಲ; ಅದು ಉಕ್ರೇನಿಯನ್ ಜನರ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಸ್ಮೃತಿಯ ಅವಿಭಾಜ್ಯ ಅಂಗಕ್ಕೆ ಉಂಟಾಗುವ ಗಾಯವಾಗಿದೆ ಎಂದು ಇತಿಹಾಸಕಾರರು ತೀರ್ಮಾನಿಸುತ್ತಾರೆ. "ಈ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೂ ನಾವು ಸಂರಕ್ಷಿಸಿ ಉಳಿಸುತ್ತೇವೆ ಎಂಬ ದೃಢ ವಿಶ್ವಾಸ ನನಗಿದೆ," ಎಂದು ಅವರು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

07 ಜುಲೈ 2026, 23:41