ಧನ್ಯ ಫ್ರಾನ್ಸಿಸ್ ಜೇವಿಯರ್ ಟ್ರೂಂಗ್ ಬು ದಿಯೆಪ್ ಅವರ ಧನ್ಯಪದವಿ ಘೋಷಣೆಯ ಪವಿತ್ರ ಬಲಿಪೂಜೆಯ ಅಧ್ಯಕ್ಷತೆ ವಹಿಸಿದ ಪ್ರಧಾನ ಗುರು ಲೂಯಿಸ್ ಆಂಟೋನಿಯೊ ಟಾಗ್ಲೆ ಧನ್ಯ ಫ್ರಾನ್ಸಿಸ್ ಜೇವಿಯರ್ ಟ್ರೂಂಗ್ ಬು ದಿಯೆಪ್ ಅವರ ಧನ್ಯಪದವಿ ಘೋಷಣೆಯ ಪವಿತ್ರ ಬಲಿಪೂಜೆಯ ಅಧ್ಯಕ್ಷತೆ ವಹಿಸಿದ ಪ್ರಧಾನ ಗುರು ಲೂಯಿಸ್ ಆಂಟೋನಿಯೊ ಟಾಗ್ಲೆ  (AFP or licensors)

ಪ್ರಧಾನ ಗುರು ಟ್ಯಾಗ್ಲೆ: ಗೊಂದಲದಲ್ಲಿರುವ ಜಗತ್ತಿಗೆ ಪ್ರಭು ಯೇಸು ಕ್ರಿಸ್ತರ ಸತ್ಯವನ್ನು ಕಂಡುಕೊಳ್ಳಲು ರಕ್ತಸಾಕ್ಷಿಗಳ ನೆರವು

ಶುಭಸಂದೇಶ ಪ್ರಚಾರದ ವಿಭಾಗದ ಉಪಪ್ರಧಾನಾಧಿಕಾರಿಯಾದ ಪ್ರಧಾನ ಗುರು ಲೂಯಿಸ್ ಅಂಟೋನಿಯೊ ಟಾಗ್ಲೆ, ತಮ್ಮ ಹಿಂಡಿಗಾಗಿ ತಮ್ಮ ಜೀವವನ್ನೇ ಅರ್ಪಿಸಿ, ದ್ವಿತೀಯ ಮಹಾಯುದ್ಧದ ಬಳಿಕ ಹುತಾತ್ಮರಾದ ವಿಯೆಟ್ನಾಂನ ಯಾಜಕರಾದ ಫ್ರಾನ್ಸಿಸ್ ಝೇವಿಯರ್ ಟ್ರೂಂಗ್ ಬೂ ದಿಯೆಪ್ ಅವರ ಧನ್ಯತಾ ಘೋಷಣೆಯ ಪವಿತ್ರ ಬಲಿಪೂಜೆಯ ಅಧ್ಯಕ್ಷತೆ ವಹಿಸಿದರು.

ಲೇಖಕರು: ಇಸಬೆಲ್ಲಾ ಎಚ್. ಡಿ ಕಾರ್ವಾಲ್ಹೊ

2026ರ ಜುಲೈ 2ರಂದು ವಿಯೆಟ್ನಾಂನಲ್ಲಿ ನಡೆದ ವಂ. ಗುರು ಫ್ರಾನ್ಸಿಸ್ ಜೇವಿಯರ್ ಟ್ರೂಂಗ್ ಬು ದಿಯೆಪ್ ಅವರ ಧನ್ಯರ ಪದವಿ ಘೋಷಣೆಯ ಪವಿತ್ರ ಬಲಿಪೂಜೆಯ ಅಧ್ಯಕ್ಷತೆ ವಹಿಸಿದ ಶುಭಸಂದೇಶಪ್ರಚಾರ ವಿಭಾಗದ ಉಪಪ್ರಧಾನಾಧಿಕಾರಿಯಾದ ಪ್ರಧಾನ ಗುರು ಲೂಯಿಸ್ ಅಂಟೋನಿಯೊ ಟ್ಯಾಗ್ಲೆ, ತಮ್ಮ ಪ್ರಭೋದನೆಯಲ್ಲಿ, ವಂ. ಗುರು ದಿಯೆಪ್ ಅವರ ಸಾಕ್ಷಿಜೀವನ ಮತ್ತು ರಕ್ತಸಾಕ್ಷಿಮರಣವು ದಯಾಪ್ರೇಮದ ಮೂಲಕ ಹಾಗೂ ಇತರರ ದುಃಖವನ್ನು ಹಂಚಿಕೊಳ್ಳುವ ಮೂಲಕ ನಮ್ಮ ದೈನಂದಿನ ಜೀವನದಲ್ಲಿ ಪ್ರಭು ಯೇಸು ಕ್ರಿಸ್ತರ ಪ್ರೀತಿಯನ್ನು ಸಾರುವ ಅವರ ಕರೆಯನ್ನು ಸ್ವೀಕರಿಸುವಂತೆ ನಮಗೆ ಆಹ್ವಾನಿಸುತ್ತದೆ ಎಂದು ಹೇಳಿದರು.

ದಕ್ಷಿಣ ವಿಯೆಟ್ನಾಂನ ಟಕ್ ಸಾಯ್ ಧರ್ಮಕೇಂದ್ರದ ಧರ್ಮಗುರುಗಳಾಗಿದ್ದ ವಂ. ಗುರು ಫ್ರಾನ್ಸಿಸ್ ಜೇವಿಯರ್ ಟ್ರೂಂಗ್ ಬು ದಿಯೆಪ್, ತಮ್ಮ ಆರೈಕೆಗೆ ಒಪ್ಪಿಸಲ್ಪಟ್ಟಿದ್ದ ಭಕ್ತವಿಶ್ವಾಸಿಗಳ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು. ತಮ್ಮ ಮರಣದ ದಿನಗಳ ಮುನ್ನವೇ ಅಪಾಯದ ವಾತಾವರಣ ನಿರ್ಮಾಣವಾಗಿದ್ದರೂ ಅವರು ತಮ್ಮ ಹಿಂಡನ್ನು ತೊರೆಯಲು ನಿರಾಕರಿಸಿ, ಅವರಿಗಾಗಿ ತಮ್ಮ ಜೀವವನ್ನೇ ಅರ್ಪಿಸಿದರು.

1946ರಲ್ಲಿ, ದ್ವಿತೀಯ ಮಹಾಯುದ್ಧದ ನಂತರದ ಹಿಂಸಾತ್ಮಕ ಪರಿಸ್ಥಿತಿಯಲ್ಲಿ, ಜಪಾನಿನ ಸೇನೆಯಿಂದ ಪರಾರಿಯಾಗಿದ್ದ ಸಶಸ್ತ್ರ ಗುಂಪುಗಳು ಅವರನ್ನು ಇತರ 70 ಮಂದಿಯೊಂದಿಗೆ ಸೆರೆಹಿಡಿದು ಜೀವಂತವಾಗಿ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದವು. ಆಗ ವಂ. ಗುರು ದಿಯೆಪ್, ಉಳಿದವರ ಬಿಡುಗಡೆಗಾಗಿ ತಮ್ಮನ್ನೇ ಆ ಸಶಸ್ತ್ರ ಗುಂಪಿಗೆ ಒಪ್ಪಿಸಿದರು. ಉಳಿದ ಎಲ್ಲರನ್ನು ಬಿಡುಗಡೆ ಮಾಡಲಾಯಿತು. ನಂತರ ಅವರ ವಿರೂಪಗೊಂಡ ಮೃತದೇಹವು ಒಂದು ಕೊಳದಲ್ಲಿ ಪತ್ತೆಯಾಯಿತು.

"ಧನ್ಯ ಫ್ರಾನ್ಸಿಸ್ ಜೇವಿಯರ್ ಟ್ರೂಂಗ್ ಬು ದಿಯೆಪ್ ಅವರು ಬಡವರ ಕಡೆಗೆ ಪ್ರಭು ಯೇಸು ಕ್ರಿಸ್ತರ ದಯಾಪ್ರೇಮ ಮತ್ತು ನ್ಯಾಯವನ್ನು, ಕ್ರೈಸ್ತರಲ್ಲದವರನ್ನೂ ಅಪ್ಪಿಕೊಳ್ಳುವ ಅವರ ಪ್ರೀತಿಯನ್ನು ಹಾಗೂ ತೋಳಗಳು, ಕಳ್ಳರು ಮತ್ತು ದರೋಡೆಕೋರರ ಬಾಯಿಗೆ ತನ್ನ ಹಿಂಡನ್ನು ಬಿಟ್ಟುಹೋಗದ ಒಳ್ಳೆಯ ಕುರುಬನಾದ ಪ್ರಭು ಯೇಸು ಕ್ರಿಸ್ತರ ನಿಷ್ಠೆಯನ್ನು ಪ್ರಕಟಿಸುವುದರಲ್ಲಿ ಎಂದಿಗೂ ಹಿಂದೆ ಸರಿಯಲಿಲ್ಲ" ಎಂದು ಪ್ರಧಾನ ಗುರು ಟ್ಯಾಗ್ಲೆ ತಮ್ಮ ಪ್ರಭೋದನೆಯಲ್ಲಿ ಹೇಳಿದರು.

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ವಿಶೇಷ ಪ್ರತಿನಿಧಿಯಾಗಿ ಪ್ರಧಾನ ಗುರು ಟ್ಯಾಗ್ಲೆ ಈ ಧನ್ಯಪದವಿ ಘೋಷಣೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಮಾರಂಭವು ದಕ್ಷಿಣ ಕಾ ಮೌ ಪ್ರಾಂತ್ಯದ ಟಕ್ ಸಾಯ್ ಯಾತ್ರಾ ಕೇಂದ್ರದಲ್ಲಿ, ಅಲ್ಲಿ ವಂ. ಗುರು ಡಿಯೆಪ್ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದೆ, ನಡೆಯಿತು.

ಜಗತ್ತಿಗೆ ಸತ್ಯದ ಸಾಕ್ಷಿಗಳ ಅಗತ್ಯವಿದೆ

ತಮ್ಮ ಪ್ರಭೋದನೆಯಲ್ಲಿ ಪ್ರಧಾನ ಗುರು ಟ್ಯಾಗ್ಲೆ, ರಕ್ತಸಾಕ್ಷಿಯಾಗುವುದೆಂದರೆ "ಅತ್ಯುನ್ನತ ಧರ್ಮಪ್ರಚಾರಕ"ನಾಗುವುದಾಗಿದೆ ಎಂದು ಹೇಳಿದರು. ಏಕೆಂದರೆ  ಪ್ರಭು ಯೇಸು ಕ್ರಿಸ್ತರಿಗೆ ಸಾಕ್ಷಿಯಾಗುವುದಲ್ಲದೆ, ಅವರಿಗಾಗಿ ತಮ್ಮ ಜೀವವನ್ನೂ ಅರ್ಪಿಸುವ ಮೂಲಕ ಅವರ ಸತ್ಯವನ್ನು ಸಾರುತ್ತಾರೆ.

"ನಿಜವಾದ ರಕ್ತಸಾಕ್ಷಿ ಗೊಂದಲದಲ್ಲಿರುವ ಜಗತ್ತಿಗೆ ಪ್ರಭು ಯೇಸು ಕ್ರಿಸ್ತರ ಸತ್ಯವನ್ನು ಕಂಡುಕೊಳ್ಳಲು ನೆರವಾಗುತ್ತಾರೆ. ಜಗತ್ತಿಗೆ ನಿಜವಾದ ರಕ್ತಸಾಕ್ಷಿಗಳು ಮತ್ತು ಸತ್ಯದ ಸಾಕ್ಷಿಗಳು ಬೇಕಾಗಿದ್ದಾರೆ. ಸುಳ್ಳು, ದ್ವೇಷ, ವಿಭಜನೆ ಮತ್ತು ಹಿಂಸೆಯ ಸಂದೇಶವಾಹಕರ ಸಂಖ್ಯೆಯನ್ನು ನಾವು ಹೆಚ್ಚಿಸಬಾರದು" ಎಂದು ಪ್ರಧಾನ ಗುರು ಟ್ಯಾಗ್ಲೆ ಹೇಳಿದರು.

ಧನ್ಯ ದಿಯೆಪ್ ಅವರು ಪ್ರಭು ಯೇಸು ಕ್ರಿಸ್ತರ ಬೆಳಕನ್ನು ನಂದಿಸಲು ಪ್ರಯತ್ನಿಸಿದವರ ನಡುವೆಯೂ ಅದನ್ನು ಧೈರ್ಯದಿಂದ ಬೆಳಗಿಸುತ್ತಲೇ ಇದ್ದರು. ಅವರ ಸಾಕ್ಷಿಜೀವನವು ನಮ್ಮ ಜೀವನದಲ್ಲಿಯೂ ಅದೇ ರೀತಿಯಾಗಿ ಬದುಕುವಂತೆ ಕರೆಯುತ್ತದೆ ಎಂದು ಹೇಳಿದರು.

"ನಾವು ಯಾವುದನ್ನು ಆಯ್ಕೆ ಮಾಡುತ್ತೇವೆ? ಸುಳ್ಳು ಸುದ್ದಿಗಳನ್ನು ಹರಡುವುದನ್ನೋ ಅಥವಾ ಪ್ರಭು ಯೇಸು ಕ್ರಿಸ್ತರ ಬೋಧನೆಗಳನ್ನು ಸಾರುವುದನ್ನೋ? ಇತ್ತೀಚಿನ ಫ್ಯಾಷನ್‌ಗೆ ತಕ್ಕಂತೆ ಬದುಕುವುದನ್ನೋ ಅಥವಾ ಪ್ರಭು ಯೇಸು ಕ್ರಿಸ್ತರ ದಯಾಪ್ರೇಮ ಮತ್ತು ಸರಳತೆಯಂತೆ ಬದುಕುವುದನ್ನೋ? ಲೋಕದ ಸಾಧನೆಗಳ ಬಗ್ಗೆ ಹೆಮ್ಮೆಪಡುವುದನ್ನೋ ಅಥವಾ ಪ್ರಭು ಯೇಸು ಕ್ರಿಸ್ತರ ಬಗ್ಗೆ ಹೆಮ್ಮೆಪಡುವುದನ್ನೋ?" ಎಂದು ಪ್ರಧಾನ ಗುರು ಟ್ಯಾಗ್ಲೆ ಪ್ರಶ್ನಿಸಿದರು.

ಪ್ರಭು ಯೇಸು ಕ್ರಿಸ್ತರ ಕರೆಯನ್ನು ಸ್ವೀಕರಿಸಿ

"ನಿಜವಾದ ಶಿಷ್ಯನು ಪ್ರಭು ಯೇಸು ಕ್ರಿಸ್ತರನ್ನು ಆಳವಾಗಿ ಪ್ರೀತಿಸುತ್ತಾನೆ, ಅವರೊಂದಿಗೆ ಉಳಿಯುತ್ತಾನೆ ಮತ್ತು ಅವರ ಹಿಂಸೆಗಳಲ್ಲಿಯೂ ಪಾಲುಗಾರನಾಗುತ್ತಾನೆ.” ವಂ. ಗುರು ದಿಯೆಪ್ ಅವರ ಜೀವನವೇ ಇದಕ್ಕೆ ಸಾಕ್ಷಿಯಾಗಿದೆ. ಈ ನೂತನ ಧನ್ಯರು "ಪ್ರಭು ಯೇಸು ಕ್ರಿಸ್ತರ ಕರೆಯನ್ನು ಸ್ವೀಕರಿಸಲು, ಅವರನ್ನು ಆರಿಸಿಕೊಳ್ಳಲು, ಅವರ ವಾಕ್ಯಗಳಿಗೆ ಅಂಟಿಕೊಳ್ಳಲು ಹಾಗೂ ನಮ್ಮ ದೈನಂದಿನ ಜೀವನದಲ್ಲಿ ಅವರ ನಾಮವನ್ನು ಸಾರಲು" ನಮ್ಮನ್ನು ಆಹ್ವಾನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಮತ್ತೊಮ್ಮೆ ಅವರು ಪ್ರಶ್ನಿಸಿದರು: "ನಾವು ಯಾವುದನ್ನು ಆಯ್ಕೆ ಮಾಡುತ್ತೇವೆ? ಭ್ರಷ್ಟಾಚಾರದ ಮೂಲಕ ಶ್ರೀಮಂತರಾಗುವುದನ್ನೋ ಅಥವಾ ಬಡವರಾಗಿದ್ದರೂ ಪ್ರಾಮಾಣಿಕರಾಗಿ ಉಳಿಯುವುದನ್ನೋ? ಅಗತ್ಯವಿಲ್ಲದ ಆಸ್ತಿಯನ್ನು ಕೂಡಿಸಿಡುವುದನ್ನೋ ಅಥವಾ ಅದನ್ನು ಬಡವರು ಮತ್ತು ಅಗತ್ಯವಂತರೊಂದಿಗೆ ಹಂಚಿಕೊಳ್ಳುವುದನ್ನೋ? ಸ್ವಂತ ಸುರಕ್ಷತೆ ಮತ್ತು ಸೌಕರ್ಯವನ್ನು ಹುಡುಕುವುದನ್ನೋ ಅಥವಾ ಇತರರ ದುಃಖವನ್ನು ಅಪ್ಪಿಕೊಳ್ಳುವುದನ್ನೋ?"

ಪ್ರಭು ಯೇಸು ಕ್ರಿಸ್ತರಲ್ಲಿ ನಿಮ್ಮ ನಿರೀಕ್ಷೆಯಿರಲಿ

ಕೊನೆಯಲ್ಲಿ, ರಕ್ತಸಾಕ್ಷಿಗೆ ಪ್ರಭು ಯೇಸು ಕ್ರಿಸ್ತರೊಂದಿಗಿನ ಸಂಬಂಧವು ವಿಶೇಷವಾಗಿ ಹಿಂಸೆಯ ಸಮಯದಲ್ಲಿ ಅವರ ಪುನರುತ್ಥಾನದ ಮೇಲಿನ ಭರವಸೆಯಿಂದ ಬಲಗೊಳ್ಳುತ್ತದೆ ಎಂದು ಪ್ರಧಾನ ಗುರು ಟ್ಯಾಗ್ಲೆ ಹೇಳಿದರು.

"ಧನ್ಯ ಫ್ರಾನ್ಸಿಸ್ ಜೇವಿಯರ್ ಅವರು ನಮ್ಮ ನಿರೀಕ್ಷೆಯನ್ನು ಪ್ರಭು ಯೇಸು ಕ್ರಿಸ್ತರಲ್ಲಿ ಹಾಗೂ ಅವರ ರಾಜ್ಯದಲ್ಲಿ ಮಾತ್ರ ಇರಿಸುವಂತೆ ನಮಗೆ ಆಹ್ವಾನಿಸುತ್ತಿದ್ದಾರೆ. ಇಂತಹ ನಿರೀಕ್ಷೆಯೇ ಈ ಲೋಕದ ಕ್ಷಣಿಕ ಸಂಪತ್ತಲ್ಲ, ಬದಲಾಗಿ ಭೂಮಿಯ ಮೇಲಿನ ನಮ್ಮ ಜೀವನ ಮತ್ತು ಧರ್ಮಪ್ರಚಾರದ ಕಾರ್ಯಕ್ಕೆ ಅರ್ಥ ಮತ್ತು ಬಲವನ್ನು ನೀಡುತ್ತದೆ" ಎಂದು ಅವರು ಹೇಳಿದರು.

ಅವರು ಮತ್ತೊಮ್ಮೆ ಪ್ರಶ್ನಿಸಿದರು: "ನಾವು ಯಾವುದನ್ನು ಆಯ್ಕೆ ಮಾಡುತ್ತೇವೆ? ಈ ಲೋಕದ ಸಂಪತ್ತಿನ ಮೇಲೆಯೇ ಭರವಸೆಯಿಡುವುದನ್ನೋ ಅಥವಾ ಪ್ರಭು ಯೇಸು ಕ್ರಿಸ್ತರ ರಾಜ್ಯದ ಶಾಶ್ವತ ಸಂಪತ್ತಿನ ಮೇಲೆಯೋ? ಖ್ಯಾತಿ, ಸಾಮಾಜಿಕ ಜಾಲತಾಣಗಳಲ್ಲಿನ ಅನುಯಾಯಿಗಳು ಮತ್ತು 'ಲೈಕ್'ಗಳ ಮೇಲೆಯೋ ಅಥವಾ 'ನಾನು ಯಾವಾಗಲೂ ನಿಮ್ಮೊಂದಿಗಿದ್ದೇನೆ' ಎಂಬ ಪ್ರಭು ಯೇಸು ಕ್ರಿಸ್ತರ ವಾಗ್ದಾನದ ಮೇಲೆಯೋ? ಯುದ್ಧದ ಆಯುಧಗಳ ಮೇಲೆಯೋ ಅಥವಾ ಪ್ರಭು ಯೇಸು ಕ್ರಿಸ್ತರು ನೀಡುವ ಶಾಂತಿಯ ವರದ ಮೇಲೆಯೋ?"

ಕನ್ಯಾ ಮರಿಯಮ್ಮನವರ ಹಾಗೂ ಧನ್ಯ ಫ್ರಾನ್ಸಿಸ್ ಜೇವಿಯರ್ ಟ್ರೂಂಗ್ ಬು ದಿಯೆಪ್ ಅವರ ಮಧ್ಯಸ್ಥಿಕೆಯನ್ನು ಬೇಡುತ್ತಾ ಪ್ರಧಾನ ಗುರು ಟ್ಯಾಗ್ಲೆ ತಮ್ಮ ಪ್ರವಾದನೆಯನ್ನು ಮುಕ್ತಾಯಗೊಳಿಸಿದರು. ಅವರು ಮತ್ತಾಯನ ಶುಭಸಂದೇಶದ ಈ ವಾಕ್ಯವನ್ನು ಉಲ್ಲೇಖಿಸಿದರು: "ಶಾಂತಿಗಾಗಿ ಶ್ರಮಿಸುವವರು ಧನ್ಯರು; ಅವರು ದೇವರ ಮಕ್ಕಳಾಗುವರು. ನ್ಯಾಯಕ್ಕಾಗಿ ಹಿಂಸೆಯನ್ನು ಅನುಭವಿಸುವವರು ಧನ್ಯರು; ಏಕೆಂದರೆ ಪರಲೋಕ ರಾಜ್ಯವು ಅವರದೇ ಆಗಿದೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

02 ಜುಲೈ 2026, 10:08