ಸಾರ್ವಜನಿಕ ಭೇಟಿಯಲ್ಲಿ ಪೋಪ್: ಪ್ರತಿದಿನದ ಪಾಸ್ಖಕ್ಕೆ ಸಿದ್ಧರಾಗಿರಿ
ವರದಿ: ವ್ಯಾಟಿಕನ್ ನ್ಯೂಸ್
ಬುಧವಾರದ ಸಾರ್ವಜನಿಕ ಭೇಟಿಯಲ್ಲಿ ಪೋಪ್ ಲಿಯೋ ಅವರು ಸಿದ್ಧರಾಗಿರಿ ಎಂಬ ಪದದ ಕುರಿತು ಚಿಂತನೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಬಲಿಪೂಜೆಗಾಗಿ ನಾವು ಯಾವ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಅವರು ತಿಳಿ ಹೇಳಿದ್ದಾರೆ. ಪ್ರಭುವಿನ ಪೂಜ್ಯ ಪಾಡು, ಮರಣ ಹಾಗೂ ಪುನರುತ್ಥಾನದ ಕುರಿತು ಪೋಪ್ ಲಿಯೋ ಅವರು ಚಿಂತನೆಯನ್ನು ವ್ಯಕ್ತಪಡಿಸಿದ್ದಾರೆ.
ಸಿದ್ಧತೆಯ ಕುರಿತು ಮಾತನಾಡಿರುವ ಅವರು ಆಧ್ಯಾತ್ಮಿಕವಾಗಿ ನಾವೆಲ್ಲರೂ ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. ವಿಶೇಷವಾಗಿ ಬಲಿಪೂಜೆಯ ಸಂದರ್ಭದಲ್ಲಿ ನಾವೆಲ್ಲರೂ ಪ್ರಭುವನ್ನು ಎದುರುಗೊಳ್ಳಲು ಅತ್ಯಂತ ಜತನದಿಂದ ನಮ್ಮನ್ನು ನಾವೇ ಸಿದ್ಧಪಡಿಸಿಕೊಳ್ಳಬೇಕು ಎಂದು ಪೋಪ್ ಲಿಯೋ ಅವರು ಹೇಳಿದರು.
ಇದೇ ವೇಳೆ ಅವರು ಶುಭಸಂದೇಶದ ವೃತ್ತಾಂತವನ್ನು ಉದಾಹರಣೆಯಾಗಿ ನೀಡಿದರು.
ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ನಾವೆಲ್ಲರೂ ಸಿದ್ಧರಾಗಬೇಕು. ನಾವು ಸಿದ್ಧತೆಯನ್ನು ಮಾಡಿಕೊಳ್ಳುವುದರಿಂದ ನಮ್ಮನ್ನು ತಡೆಯುತ್ತಿರುವ ಅಂಶಗಳನ್ನು ನಾವು ಬಿಟ್ಟುಬಿಡಬೇಕು ಎಂದು ಅವರು ಹೇಳಿದರು.
ನಾವೆಲ್ಲರೂ ಪ್ರಭುವಿನ ಭೋಜನಕ್ಕೆ ಕರೆಯನ್ನು ಹೊಂದಿದ್ದೇವೆ. ಆದುದರಿಂದ, ಆ ಭೋಜನದಲ್ಲಿ ನಾವೆಲ್ಲರೂ ಪಾಲ್ಗೊಳ್ಳಲು ಈಗಾಗಲೇ ನಾವು ಸಿದ್ಧರಿರಬೇಕು ಎಂದು ಭಕ್ತಾಧಿಗಳಿಗೆ ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದ್ದಾರೆ.
