ಸಂತರ ಪದವಿಗೇರಿಸುವಿಕೆ ಬಲಿಪೂಜೆಯಲ್ಲಿ ಪೋಪ್: ಕ್ರಿಸ್ತರಲ್ಲಿನ ವಿಶ್ವಾಸವು ಸದಾ ಪ್ರಜ್ವಲಿಸಲು ಸಂತರು ನೆರವಾಗುತ್ತಾರೆ
ವರದಿ: ವ್ಯಾಟಿಕನ್ ನ್ಯೂಸ್
7 ನೂತನ ಪುನೀತರನ್ನು ಸಂತರ ಪದವಿಗೇರಿಸುವ ಬಲಿಪೂಜೆಯನ್ನು ಪೋಪ್ ಲಿಯೋ XIV ಅವರು ಇಂದು ವ್ಯಾಟಿಕನ್ನಿನ ಸಂತ ಪೇತ್ರರ ಮಹಾದೇವಾಲಯದಲ್ಲಿ ಅರ್ಪಿಸಿದ್ದಾರೆ. ಬದುಕಿನಲ್ಲಿ ಸಂಕಷ್ಟಗಳು ಹಾಗೂ ಸವಾಲುಗಳನ್ನು ಎದುರಿಸುತ್ತಿರುವಾಗಲು ಸಹ ದೇವರಲ್ಲಿ ನಾವು ಪ್ರಾರ್ಥಿಸಬೇಕೆಂದು ಅವರು ಹೇಳಿದ್ದಾರೆ.
ಇಗ್ನೇಷಿಯಸ್ ಚೌಕ್ರಲ್ಲಾ ಮಲೋಯನ್, ಪೀಟರ್ ಟು ರೋಟ್, ವಿನ್ಸೆಂಝ ಮರಿಯ ಪೊಲೋನಿ, ಮರಿಯ ದೆಲ್ ಮೊಂತೆ ಕಾರ್ಮೆಲೋ ರೆಂಡಿಲೆಸ್ ಮಾರ್ಟಿನೆಝ್, ಮರಿಯ ಟ್ರೊನ್ಕಾಟಿ, ಹೊಸೆ ಗ್ರೆಗೋರಿಯೋ ಹೆರ್ನಾಂಡೆಝ್, ಸಿಸ್ನೆರೋಸ್, ಮತ್ತು ಬಾರ್ತೋಲೋ ಲೊಂಗೋ ಎಂಬ ದೈವಜನರನ್ನು ಪೋಪ್ ಲಿಯೋ XIV ಅವರು ಇಂದು ಸಂತ ಪದವಿಗೇರಿಸಿದರು.
ಪೋಪ್ ಲಿಯೋ ಅವರು ತಮ್ಮ ಪ್ರಬೋಧನೆಯಲ್ಲಿ ನರಪುತ್ರನು ಮತ್ತೆ ಈ ಜಗತ್ತಿಗೆ ಬಂದಾಗ ಇಲ್ಲಿ ವಿಶ್ವಾಸವನ್ನು ಕಾಣುತ್ತಾನೆಯೇ ಎಂಬ ಯೇಸುವಿನ ಪ್ರಶ್ನೆಯ ಕುರಿತು ಚಿಂತನೆಯನ್ನು ನಡೆಸಿದರು.
"ಇಂದು ನಮ್ಮ ನಡುವೆ ಏಳು ಜನ ಸಾಕ್ಷಿಗಳಿದ್ದಾರೆ. ಈ ಹೊಸ ಸಂತರುಗಳ ದೇವರ ಕೃಪೆಯಿಂದ ತಮ್ಮ ವಿಶ್ವಾಸವನ್ನು ಸದಾ ಪ್ರಜ್ವಲಿಸುವಂತೆ ನೋಡಿಕೊಂಡರು" ಎಂದು ಪೋಪ್ ಲಿಯೋ ಅವರು ಹೇಳಿದರು.
"ವಿಶ್ವಾಸವಿಲ್ಲದ ಈ ಜಗತ್ತು ತಂದೆಯಿಲ್ಲದ ಮಕ್ಕಳಂತಾಗುತ್ತದೆ" ಎಂದು ಪೋಪ್ ಲಿಯೋ ಅವರು ಹೇಳಿದರು. ಇದಕ್ಕಾಗಿಯೇ ಯೇಸುಕ್ರಿಸ್ತರು ಸದಾ ಪ್ರಾರ್ಥಿಸುವಂತೆ ನಮಗೆ ಕರೆ ನೀಡುತ್ತಾರೆ ಎಂದು ಪೋಪ್ ಲಿಯೋ ಅವರು ಹೇಳಿದರು.
