Pope Leo XIV meets Jubilee collaborators and volunteers in the Paul VI Hall at the Vatican

ಜಗದ್ಗುರು XIV ನೇ ಲಿಯೋ ರವರು ಪ್ರಭುವಿನ ದೈವ ದಶ೯ನದ ಮಹೊತ್ಸವದಂದು ಜುಬಿಲಿ ನಿರೀಕ್ಷೆಯ ವರ್ಷವನ್ನು ಸಮಾಪ್ತಿಗೊಳಿಸಿದರು‌.

ಮಹಾದೇವಾಲಯದಲ್ಲಿ ಸುಮಾರು 5,800 ಭಕ್ತರ ಸಮ್ಮುಖದಲ್ಲಿ ಪವಿತ್ರ ಬಲಿ ಪೂಜೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅವರು ಕೊನೆಯ ಪವಿತ್ರ ದ್ವಾರವನ್ನು ಮುಚ್ಚಿ, ಜುಬಿಲಿ ನಿರೀಕ್ಷೆಯ ವರ್ಷದ ಅಧಿಕೃತ ಸಮಾಪ್ತಿಯನ್ನು ಘೋಷಿಸಿದರು

ವ್ಯಾಟಿಕನ್ ವರದಿ

ಪ್ರಭುವಿನ ದೈವದಶ೯ನದ ಮಹೋತ್ಸವದಂದು ಜಗದ್ಗುರು XIVನೇ ಲಿಯೋರವರು ಸಂತ ಪೇತ್ರ ಮಹಾದೇವಾಲಯದಲ್ಲಿ ಸುಮಾರು 5,800 ಭಕ್ತರೊಂದಿಗೆ ಪವಿತ್ರ ಬಲಿ ಪೂಜೆಯನ್ನು ಆಚರಿಸಿದರು. ಬಲಿಪೂಜೆಯ ಆರಂಭದಲ್ಲೇ ಅವರು ಜುಬಿಲಿ ನಿರೀಕ್ಷೆಯ ವರ್ಷಕ್ಕಾಗಿ ತೆರೆಯಲಾಗಿದ್ದ ಕೊನೆಯ ಪವಿತ್ರ ದ್ವಾರವನ್ನು ಮುಚ್ಚಿದರು. ಈ ಸಂಕೇತಾತ್ಮಕ ಕ್ರಿಯೆಯೊಂದಿಗೆ, ನಿರೀಕ್ಷೆಯ ಯಾತ್ರಿಕರಾದ ಅಸಂಖ್ಯಾತ ಪುರುಷರು ಮತ್ತು ಮಹಿಳೆಯರು ದೇವಾಲಯದ ದ್ವಾರವನ್ನು ದಾಟಿ ಯಾವಾಗಲೂ ತೆರೆದಿರುವ ದ್ವಾರಗಳಿರುವ ಹೊಸ ಜೆರೂಸಲೇಮ್ ಕಡೆಗೆ ಪ್ರಯಾಣ ಮಾಡಿದ ಜುಬಿಲಿ ವರ್ಷದ ಅಧಿಕೃತ ಸಮಾಪ್ತಿ ನಡೆದಿದೆ ಎಂದು ಜಗದ್ಗುರುಗಳು ಹೇಳಿದರು.

ಆ ದಿನದ ಸುವಾರ್ತೆಯನ್ನು ಧ್ಯಾನಿಸುತ್ತಾ, ಜಗದ್ಗುರು XIVನೇ ಲಿಯೋರವರು ಜ್ಞಾನಿಗಳ ಆನಂದ ಮತ್ತು ಹೆರೋದನ ಭಯದ ನಡುವಿನ ವ್ಯತ್ಯಾಸವನ್ನು ವಿವರಿಸಿದರು. ಆನಂದ ಮತ್ತು ಅಶಾಂತಿ, ಭಯ ಮತ್ತು ಆಸೆ, ಪ್ರತಿರೋಧ ಮತ್ತು ವಿಧೇಯತೆಗಳ ಬಗ್ಗೆ ತಿಳಿಯಪಡಿಸಿದರು.ದೈವ ದಶ೯ನ ಮಹೊತ್ಸವದಂದು ದೇವರ ಸನ್ನಿಧಿಯಲ್ಲಿ ಯಾವುದೂ ಹಿಂದಿನಂತೆಯೇ ಉಳಿಯುವುದಿಲ್ಲ ಎಂಬ ಸತ್ಯವನ್ನು ನಮಗೆ ಬೋಧಿಸುತ್ತದೆ. ದೇವರ ಸಾನ್ನಿಧ್ಯವು ಸೂರ್ಯನ ಕೆಳಗೆ ಹೊಸದೇನೂ ಇಲ್ಲ ಎನ್ನುವ ನಿರಾಸೆಯ ಮನಸ್ಥಿತಿಗೆ ಅಂತ್ಯ ಮಾಡಿ, ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸುವ ಹೊಸ ಆರಂಭವನ್ನು ನೀಡುತ್ತದೆ ಎಂದರು.

ಜುಬಿಲಿ ವರ್ಷದ ಬೆಳಕಿನಲ್ಲಿ, ಜಗದ್ಗುರುಗಳು ಇಂದಿನ ಪುರುಷರು ಮತ್ತು ಮಹಿಳೆಯರ ಆಧ್ಯಾತ್ಮಿಕ ಹುಡುಕಾಟದ ಬಗ್ಗೆ ಚಿಂತನೆ ನಡೆಸಿದರು. ಜ್ಞಾನಿಗಳಂತೆ, ಇಂದಿಗೂ ಅನೇಕರು ಹುಡುಕಾಟಕ್ಕೆ ಹೊರಡಲು ಪ್ರೇರೇಪಿತರಾಗುತ್ತಿದ್ದಾರೆ ಎಂದು ಅವರು ಹೇಳಿದರು. ಅಪಾಯಗಳ ನಡುವೆಯೂ ಪ್ರಯಾಣ ಮಾಡಲು ಸಿದ್ಧರಾಗಿರುವವರೇ ಇಂದಿನ ಜ್ಞಾನಿಗಳು. ಈ ಹುಡುಕಾಟವನ್ನು  ಭಯಪಡುವ ಬದಲು, ಅದನ್ನು ಗೌರವಿಸಿ, ಜೀವದಾತನಾದ ದೇವರ ಕಡೆಗೆ ದಾರಿ ತೋರಿಸಬೇಕು ಎಂದು ಜಗದ್ಗುರುಗಳು ಒತ್ತಿ ಹೇಳಿದರು.

ಹೆರೋದನ ಭಯವು ಅಧಿಕಾರ ಕಳೆದುಕೊಳ್ಳುವ ಆತಂಕದಿಂದ ಹುಟ್ಟಿದ್ದು, ಅದು ದೇವರ ಕಾರ್ಯವನ್ನು ಅರ್ಥಮಾಡಿಕೊಳ್ಳಲು ಅಡ್ಡಿಯಾಗುತ್ತದೆ ಎಂದು ಜಗದ್ಗುರುಗಳು ಎಚ್ಚರಿಸಿದರು. ಭಯವು ಕಣ್ಣು ಮುಚ್ಚುತ್ತದೆ ಆದರೆ ಸುವಾರ್ತೆಯ ಆನಂದವು ನಮ್ಮನ್ನು ಮುಕ್ತಗೊಳಿಸುತ್ತದೆ. ಆ ಆನಂದವೇ ನಮ್ಮನ್ನು ಜಾಗರೂಕರಾಗಿ, ಧೈರ್ಯಶಾಲಿಗಳಾಗಿ, ಸೃಜನಶೀಲರಾಗುವಂತೆ ಮಾಡಿ, ಈಗಾಗಲೇ ನಡೆದ ದಾರಿಗಳಿಗಿಂತ ವಿಭಿನ್ನ ಹೊಸ ಮಾರ್ಗಗಳನ್ನು ತೆರೆದುಕೊಡುತ್ತದೆ.

ತಮ್ಮ ಪ್ರಭೋಧನೆಯ ಅಂತ್ಯದಲ್ಲಿ, ಜಗದ್ಗುರು XIVನೇ ಲಿಯೋರವರು ದೈವದಶ೯ನ ಮಹೊತ್ಸವದ ದಿನದಂದು ಹೃದಯದಲ್ಲಿ ಇರುವ ಮಹತ್ತಾದ ವರವನ್ನು ಸ್ಮರಿಸಿದರು ಜ್ಞಾನಿಗಳು ಆರಾಧಿಸಿದ ಶಿಶು ಯೇಸು, ಖರೀದಿಸಲೂ ನಿಯಂತ್ರಿಸಲೂ ಸಾಧ್ಯವಿಲ್ಲದ ಅಮೂಲ್ಯ ವರ. ಧರ್ಮ ಸಭೆಯು ಒಂದು ಸ್ಮಾರಕವಾಗದೇ, ಜೀವಂತ ಮನೆ ಆಗಿ ಉಳಿದರೆ, ಮರಿಯಮ್ಮನವರ ಮಾರ್ಗದರ್ಶನದಲ್ಲಿ ಹೊಸ ಪ್ರಭಾತದ ತಲೆಮಾರಾಗಿ”ರೂಪುಗೊಂಡು, ಪ್ರೀತಿಯಿಂದ ಮಾನವನಾಗಿ ಬಂದ ದೇವರಿಂದ ಪರಿವರ್ತಿತವಾದ ಅದ್ಭುತ ಮಾನವೀಯತೆಯ ಕಡೆಗೆ ಸಾಗಬಹುದು ಎಂದು ಅವರು ಹೇಳಿದರು.

10 ಜನವರಿ 2026, 12:06