ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು  (ANSA)

ಇಟಾಲಿಯನ್ ಪತ್ರಿಕೆಗೆ ಸಂದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಶ್ಲಾಘಿಸಿದ ಜಗದ್ಗುರುಗಳು

ಇಟಾಲಿಯನ್ ಪತ್ರಿಕೆ ಲಾ ರಿಪಬ್ಲಿಕಾ 50ನೇ ವಾರ್ಷಿಕೋತ್ಸವದ ಅಂಗವಾಗಿ ಜಗದ್ಗುರು XIVನೇ ಲಿಯೋರವರು ತಮ್ಮ ಹಾರೈಕೆಗಳನ್ನು ಕಳುಹಿಸಿ, ಪತ್ರಿಕೋದ್ಯಮವು ಯಾವಾಗಲೂ ಸತ್ಯದ ಹುಡುಕಾಟದಿಂದ ಪ್ರೇರಿತವಾಗಿರುವ, ಪೂರ್ವಾಗ್ರಹರಹಿತ ಹಾಗೂ ಸ್ವತಂತ್ರ ಮತ್ತು ಸಂವಾದಾತ್ಮಕ ಸಂವಹನವನ್ನು ಉತ್ತೇಜಿಸಲಿ ಎಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದರು

ವ್ಯಾಟಿಕನ್ ವರದಿ

ಇಟಾಲಿಯನ್ ಪತ್ರಿಕೆ ಲಾ ರಿಪಬ್ಲಿಕಾ 50ನೇ ವಾರ್ಷಿಕೋತ್ಸವದ ಅಂಗವಾಗಿ ಜಗದ್ಗುರು XIVನೇ ಲಿಯೋರವರು ಅದರ ಸಂಪಾದಕ ಮಾರಿಯೊ ಓರ್ಫಿಯೋ ರವರಿಗೆ ವಿಶೇಷ ಸಂದೇಶವನ್ನು ಕಳುಹಿಸಿದ್ದಾರೆ. ಈ ಸಂದೇಶದಲ್ಲಿ ಅವರು ಇಟಲಿಯ, ಜಗತ್ತಿನ ಹಾಗೂ ಧರ್ಮ ಸಭೆಯ ಇತಿಹಾಸವನ್ನು ಐವತ್ತು ವರ್ಷಗಳಿಂದ ದಾಖಲಿಸಿಕೊಂಡು ಬಂದಿರುವ ಪತ್ರಿಕೆಯ ಪಾತ್ರವನ್ನು ಶ್ಲಾಘಿಸಿದ್ದಾರೆ. ಓದುಗರೊಂದಿಗೆ ನಿರಂತರ ಸಂಬಂಧವನ್ನು ಬೆಳೆಸಿಕೊಂಡು, ಸಂಶೋಧನಾ ಸ್ವಾತಂತ್ರ್ಯ ಮತ್ತು ಸಂವಾದವನ್ನು ಶಾಂತಿ ನಿರ್ಮಾಣದ ಪ್ರಮುಖ ಮಾರ್ಗವಾಗಿ ಉತ್ತೇಜಿಸಿರುವುದನ್ನು ಜಗದ್ಗುರುಗಳು ಮೆಚ್ಚಿದ್ದಾರೆ.

ತಮ್ಮ ಪತ್ರದಲ್ಲಿ, ಜಗದ್ಗುರು XIVನೇ ಲಿಯೋರವರು ಅರ್ಧ ಶತಮಾನದಿಂದ ಇತಿಹಾಸವನ್ನು ದಾಖಲಿಸಿದ ಪತ್ರಕರ್ತರಿಗೆ ಶುಭಾಶಯಗಳನ್ನು ತಿಳಿಸಿ, ನಿಮ್ಮನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದುದು ಓದುಗರೊಂದಿಗೆ ನೀವು ಬೆಳೆಸಿಕೊಂಡಿರುವ ಆಳವಾದ ಸಂಬಂಧವೇ ಎಂದು ಹೇಳಿದ್ದಾರೆ. ಹಲವಾರು ನಗರಗಳಲ್ಲಿ ಬೇರೂರಿದ್ದರೂ, ಜಗದ್ಗುರುಗಳ ಧರ್ಮಪ್ರಾಂತ್ಯವಾದ ರೋಮ್‌ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಪತ್ರಿಕೆ, ಇಟಲಿ ಹಾಗೂ ಜಗತ್ತಿನ ಘಟನೆಗಳನ್ನು ಗಮನಿಸುವ ವಿಶೇಷ ದೃಷ್ಟಿಕೋನವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. ಈ ಐವತ್ತು ವರ್ಷಗಳಲ್ಲಿ ಚರ್ಚಿನ ಇತಿಹಾಸವನ್ನೂ ಸ್ವಾತಂತ್ರ್ಯದಿಂದ ದಾಖಲಿಸಿರುವುದನ್ನು ಜಗದ್ಗುರುಗಳು ಪ್ರಶಂಸಿಸಿದ್ದಾರೆ.

ಪತ್ರಿಕಾ ಸ್ವಾತಂತ್ರ್ಯದ ಹೃದಯದಲ್ಲಿ ಸ್ವಾತಂತ್ರ್ಯ, ಕಥನಶೈಲಿ ಮತ್ತು ಜಗತ್ತಿನ ಕುರಿತು ವಿಶಿಷ್ಟ ದೃಷ್ಟಿಕೋನವಿದೆ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದ್ದಾರೆ. ಅಭಿಪ್ರಾಯಗಳು, ದೃಷ್ಟಿಕೋನಗಳು ಮತ್ತು ಸಂಸ್ಕೃತಿಗಳ ವೈವಿಧ್ಯತೆಯ ನಡುವೆಯೂ ಪತ್ರಿಕೋದ್ಯಮವು ಯಾವಾಗಲೂ ಪಾರದರ್ಶಕತೆ ಮತ್ತು ನೈತಿಕತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಇದಲ್ಲದೆ, ವೈರತ್ವವಿಲ್ಲದ ಸಂವಾದವು ಸಾಮೂಹಿಕ ಹಿತಕ್ಕೆ ಹಾಗೂ ಮಾನವ ಕುಟುಂಬದ ಏಕತೆಗೆ ಕೊಡುಗೆ ನೀಡುತ್ತದೆ ಎಂದು ಜಗದ್ಗುರುಗಳು ಹೇಳಿದರು. ಇಂತಹ ಸಂವಾದವು ಸಂಘರ್ಷವನ್ನು ಮೀರಿಸಿ ಶಾಂತಿಯನ್ನು ನಿರ್ಮಿಸುತ್ತದೆ ಎಂದು ಅವರು ವಿವರಿಸಿದರು. ತಮ್ಮ ಸಂದೇಶದ ಕೊನೆಯಲ್ಲಿ, ಲಾ ರಿಪಬ್ಲಿಕಾ ಪತ್ರಿಕೆ ಸತ್ಯದ ಹುಡುಕಾಟದಿಂದ ಪ್ರೇರಿತವಾಗಿರುವ, ಪೂರ್ವಾಗ್ರಹರಹಿತ, ಸ್ವತಂತ್ರ ಮತ್ತು ಸಂವಾದಾತ್ಮಕ ಸಂವಹನವನ್ನು ಸದಾ ನಿರ್ಮಿಸಲಿ ಎಂದು ಆಶಿಸಿದರು ಹಾಗೂ 50ನೇ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಹೇಳಿದರು.

ಈ ಮಹತ್ವದ ಮೈಲಿಗಲ್ಲನ್ನು ಆಚರಿಸಲು, ಲಾ ರಿಪಬ್ಲಿಕಾ ಪತ್ರಿಕೆ ರೋಮ್‌ನ ಮಟಾಟೊಯೊನಲ್ಲಿ ‘ಲಾ ರಿಪಬ್ಲಿಕಾ ಭವಿಷ್ಯದ ಇತಿಹಾಸ ಎಂಬ ಪ್ರದರ್ಶನವನ್ನು ಆಯೋಜಿಸಿದೆ. ಮಾರ್ಚ್ 15ರವರೆಗೆ ನಡೆಯುವ ಈ ಬಹುಮಾಧ್ಯಮ ಪ್ರದರ್ಶನದಲ್ಲಿ, ಪತ್ರಿಕೆಯ ಇತಿಹಾಸದ ಪ್ರಮುಖ ಕ್ಷಣಗಳನ್ನು ಚಿತ್ರಗಳು ಮತ್ತು ಪತ್ರಿಕೆ ಪುಟಗಳ ಮೂಲಕ ಪ್ರದರ್ಶಿಸಲಾಗಿದೆ.

15 ಜನವರಿ 2026, 16:13