ಕ್ರಾನ್ಸ್-ಮೋಂಟಾನಾ ಅಗ್ನಿದುರಂತದ ಬಲಿದಾನಿಗಳ ಕುಟುಂಬಗಳನ್ನು ಭೇಟಿಯಾದ ಜಗದ್ಗುರು ಲಿಯೋ
ವ್ಯಾಟಿಕನ್ ವರದಿ
ಸ್ವಿಟ್ಜರ್‌ಲ್ಯಾಂಡ್‌ನ ಕ್ರಾನ್ಸ್–ಮೋಂಟಾನಾ ಪಟ್ಟಣದಲ್ಲಿ ಹೊಸ ವರ್ಷದ ದಿನ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರ ಕುಟುಂಬ ಸದಸ್ಯರನ್ನು ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನಲ್ಲಿ ಭೇಟಿ ಮಾಡಿದರು. ಈ ಭೇಟಿಯಲ್ಲಿ ಅವರು ನಂಬಿಕೆ ಮತ್ತು ಸಾಂತ್ವನದ ಮಾತುಗಳನ್ನು ಹೇಳುತ್ತಾ, “ಕ್ರಿಸ್ತನ ಸಮೀಪತೆಯ ಬಗ್ಗೆ ನಿಶ್ಚಿಂತರಾಗಿರಿ ನೀವು ಅನುಭವಿಸುತ್ತಿರುವ ನೋವಿನಿಂದ ಅವರು ದೂರದಲ್ಲಿಲ್ಲ, ಬದಲಾಗಿ ಅದನ್ನು ನಿಮ್ಮೊಡನೆ ಹಂಚಿಕೊಂಡು ನಿಮ್ಮೊಡನೆ ಹೊತ್ತುಕೊಂಡಿದ್ದಾರೆ ಎಂದು ಭರವಸೆ ನೀಡಿದರು. ಈ ಅಗ್ನಿದುರಂತದಲ್ಲಿ ಕನಿಷ್ಠ 40 ಮಂದಿ ಸಾವನ್ನಪ್ಪಿ, 119 ಮಂದಿ ಗಾಯಗೊಂಡಿದ್ದಾರೆ ಎಂದು ಸ್ವಿಸ್ ಪೊಲೀಸರು ತಿಳಿಸಿದ್ದಾರೆ.
ಕುಟುಂಬಗಳನ್ನು ಭೇಟಿಯಾದ ಸಂದರ್ಭದಲ್ಲಿ ಜಗದ್ಗುರುಗಳು ಆಳವಾದ ದುಃಖವನ್ನು ವ್ಯಕ್ತಪಡಿಸಿದರು. ಅತಿಯಾದ ಹಿಂಸಾಚಾರದ ಈ ದುರಂತದಲ್ಲಿ ಅತ್ಯಂತ ಪ್ರಿಯ ವ್ಯಕ್ತಿಯನ್ನು ಕಳೆದುಕೊಳ್ಳುವುದು ಅಥವಾ ಭೀಕರ ಬೆಂಕಿಯ ಪರಿಣಾಮಗಳಿಂದ ಆಸ್ಪತ್ರೆಯಲ್ಲಿ ದೀರ್ಘಕಾಲ ಚಿಕಿತ್ಸೆ ಪಡೆಯುತ್ತಿರುವ ಸ್ಥಿತಿಯನ್ನು ನೋಡುವುದು ಮಾನವನ ನಂಬಿಕೆಯನ್ನು ಪರೀಕ್ಷಿಸುತ್ತದೆ ಎಂದು ಅವರು ಹೇಳಿದರು. ಹರ್ಷ ಮತ್ತು ಸಂಭ್ರಮದಿಂದ ಆಚರಿಸಬೇಕಾದ ದಿನದಲ್ಲೇ ಈ ದುರಂತ ಸಂಭವಿಸಿರುವುದು ಇನ್ನಷ್ಟು ನೋವು ತಂದಿದೆ ಎಂದು ಜಗದ್ಗರುಗಳು ವಿಷಾದಿಸಿದರು.
ಇಂತಹ ಸಂದರ್ಭಗಳಲ್ಲಿ ಮಾನವ ಮಾತುಗಳಿಗೆ ಮಿತಿಯಿದೆ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು. ಇಂತಹ ದುಃಖಕ್ಕೆ ಅರ್ಥವೇನು, ನಿಜವಾದ ಸಾಂತ್ವನ ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ಸುಲಭವಲ್ಲ ಎಂದರು. ಈ ಸಂದರ್ಭಕ್ಕೆ ತಕ್ಕ ಪ್ರತಿಬಿಂಬವೆಂದರೆ ಶಿಲುಬೆಯ ಮೇಲಿರುವ ದೇವರ ಪುತ್ರನಾದ ಯೇಸು ಕ್ರಿಸ್ತನೇ ಎಂದು ಅವರು ಸೂಚಿಸಿದರು. "ನನ್ನ ದೇವರೇ, ನನ್ನ ದೇವರೇ, ನೀನು ನನ್ನನ್ನು ಏಕೆ ನನ್ನ ಕೈ ಬಿಟ್ಟಿರಿ?” ಎಂಬ ಯೇಸುವಿನ ಕೂಗು ನೋವಿನ ನಡುವೆಯೂ ಆಶೆಯ ಮೂಲವಾಗಿದೆ ಎಂದು ಜಗದ್ಗರುಗಳು ವಿವರಿಸಿದರು.
ಯೇಸುವಿನ ಪುನರುತ್ಥಾನವೇ ನಮ್ಮ ನಂಬಿಕೆಯ ಕೇಂದ್ರಬಿಂದುವಾಗಿದೆ ಎಂದು ಜಗದ್ಗರುಗಳು ಹೇಳಿದರು. ಏಕೆ ಇಂತಹ ಪರೀಕ್ಷೆಯನ್ನು ಎದುರಿಸಬೇಕಾಯಿತು ಎಂಬುದಕ್ಕೆ ತಾವು ಸ್ಪಷ್ಟ ಉತ್ತರ ನೀಡಲಾಗುವುದಿಲ್ಲ ಎಂದು ಒಪ್ಪಿಕೊಂಡರೂ, ಕ್ರಿಸ್ತನು ನಿಜವಾಗಿಯೂ ಪುನರುತ್ಥಾನಗೊಂಡಿದ್ದಾನೆ ಎಂಬ ಸತ್ಯದಲ್ಲಿ ನಮ್ಮ ಆಶೆ ವ್ಯರ್ಥವಲ್ಲ ಎಂದು ಅವರು ದೃಢವಾಗಿ ಹೇಳಿದರು. ಕ್ರಿಸ್ತನ ಪ್ರೀತಿಯಿಂದ ಏನೂ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಅವರು ಕುಟುಂಬಗಳಿಗೆ ಭರವಸೆ ನೀಡಿದರು.
ಸಂದೇಶದ ಕೊನೆಯಲ್ಲಿ, ದುಃಖಿತ ಹೃದಯಗಳಿಗೆ ಮಾತೃತ್ವದ ಸಾಂತ್ವನ ನೀಡುವ ದುಃಖಿತ ಮಾತೆ ಮರಿಯಮ್ಮಳ ಕಡೆಗೆ ಮುಖಮಾಡುವಂತೆ ಜಗದ್ಗುರುಗಳು ಆಹ್ವಾನಿಸಿದರು. ಶಿಲುಬೆಯ ಪಾದದಲ್ಲಿ ತನ್ನ ಮಗನ ನೋವನ್ನು ಅನುಭವಿಸಿದ ಮರಿಯಮ್ಮಳಂತೆ, ಇಂದಿನ ದಿನಗಳಲ್ಲಿ ಅವರು ಕುಟುಂಬಗಳ ಸಮೀಪದಲ್ಲಿದ್ದಾರೆ ಎಂದು ಹೇಳಿದರು. ಪ್ರೇಷಿತರ ಆಶೀರ್ವಾದವನ್ನು ನೀಡುವ ಮೊದಲು, ಜಗದ್ಗುರು XIVನೇ ಲಿಯೋರವರು ಎಲ್ಲರೊಂದಿಗೆ “ ಪ್ರಭುವಿನ ಪ್ರಾಥ೯ನೆ” ಮತ್ತು “ಮಂಗಳ ವಾತೆ೯ಯ” ಪ್ರಾರ್ಥನೆಗಳನ್ನು ಪ್ರಾರ್ಥಿಸಿದರು ಮತ್ತು ಧರ್ಮ ಸಭೆಯ ಹಾಗೂ ತಮ್ಮ ವೈಯಕ್ತಿಕ ಪ್ರಾರ್ಥನೆಗಳು ಸದಾ ಅವರೊಂದಿಗೆ ಇವೆ ಎಂದು ಭರವಸೆ ನೀಡಿದರು.
