ಪೋಪ್: ಒಳಿತಿನ ಮೇಲಿನ ನಂಬಿಕೆ ಕುಂದುವಾಗ ಜಗದ್ಗುರುಗಳ ರಾಜತಾಂತ್ರಿಕರು ನಿರೀಕ್ಷೆಯ ಸೇತುವೆಗಳು ಆಗಿರಬೇಕು
ವ್ಯಾಟಿಕನ್ ವರದಿ
1701ರಲ್ಲಿ ಜಗದ್ಗುರು XIನೇ ಕ್ಲೆಮೆಂಟ್ ರವರು ಇಂದು “ ಜಗದ್ಗುರುಗಳ ಧರ್ಮ ಸಭೆಯ ಸಂಸ್ಥೆ” ಎಂಬ ಹೆಸರಿನಿಂದ ಪರಿಚಿತವಾದ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆ ಪವಿತ್ರ ಸಿಂಹಾಸನದ ರಾಜತಾಂತ್ರಿಕ ಸೇವೆ ಮತ್ತು ರಾಜ್ಯ ಕಾರ್ಯದರ್ಶಾಲಯದಲ್ಲಿ ಸೇವೆ ಸಲ್ಲಿಸಲು ಯಾಜಕರನ್ನು ತರಬೇತಿಗೊಳಿಸುತ್ತದೆ. ಇದರ ಹಳೆಯ ವಿದ್ಯಾರ್ಥಿಗಳಲ್ಲಿ ಜಗದ್ಗುರುಗಳಾದ XIII ನೇ ಕ್ಲೆಮೆಂಟ್ , XII ನೇ ಲಿಯೋ ,XIII ನೇ ಲಿಯೋ , XV ನೇ ಬೆನೆಡಿಕ್ಟ್ ಹಾಗೂ VI ನೇ ಪೌಲ್ ಸೇರಿದ್ದಾರೆ.
ಈ ಸಂಸ್ಥೆ ತನ್ನ 325ನೇ ವಾರ್ಷಿಕೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಸಂಸ್ಥೆಯ ಸಮುದಾಯಕ್ಕೆ ಪತ್ರವೊಂದನ್ನು ಕಳುಹಿಸಿ, ಜಗದ್ಗುರುಗಳ ಸೇವೆಯಲ್ಲಿ ಅದರ ದೀರ್ಘ ಮತ್ತು ಫಲಪ್ರದ ಇತಿಹಾಸಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಪವಿತ್ರ ಸಿಂಹಾಸನವು ಜಗದ್ಗುರುಗಳನ್ನು ಯೋಗ್ಯವಾಗಿ ಪ್ರತಿನಿಧಿಸುವ ಸಾಮರ್ಥ್ಯ ಹೊಂದಿದ ರಾಜತಾಂತ್ರಿಕರನ್ನು ಸದಾ ಹೊಂದಿರಲು, ತಮ್ಮ ಅನೇಕ ಪೂರ್ವಜರು ಸಂಸ್ಥೆಯ ಧ್ಯೇಯ ಮತ್ತು ಬೆಳವಣಿಗೆಯನ್ನು ಸಂರಕ್ಷಿಸಿಕೊಂಡಿದ್ದಾರೆ ಎಂದು ಅವರು ಸ್ಮರಿಸಿದರು.
ತಮ್ಮ ನಿಧನಕ್ಕೆ ಸ್ವಲ್ಪ ಮೊದಲು ಜಗದ್ಗುರು ಫ್ರಾನ್ಸಿಸ್ ರವರು “ಪೇತ್ರನ ಸೇವೆ” ಎಂಬ ಚಿರೋಗ್ರಾಫ್ ಪ್ರಕಟಿಸಿ, ಈ ಅಕಾಡೆಮಿಯನ್ನು ರಾಜತಾಂತ್ರಿಕ ವಿಜ್ಞಾನಗಳ ಕ್ಷೇತ್ರದಲ್ಲಿ ಉನ್ನತ ಅಧ್ಯಯನ ಮತ್ತು ಸಂಶೋಧನೆಯ ಕೇಂದ್ರವೆಂದು ಘೋಷಿಸಿದ್ದರು. ಜಗದ್ಗರು XIVನೇ ಲಿಯೋರವರು ತಮ್ಮ ಪೂರ್ವಾಧಿಕಾರಿಯ ಈ ನಿರ್ಧಾರವನ್ನು ಸಮರ್ಥಿಸಿ, ಸಂಸ್ಥೆಯನ್ನು ಪವಿತ್ರ ಸಿಂಹಾಸನದ ರಾಜತಾಂತ್ರಿಕ ಕಾರ್ಯಾಚರಣೆಯ ನೇರ ಸಾಧನವೆಂದು ದೃಢಪಡಿಸಿದರು.
ಇತ್ತೀಚಿನ ಸುಧಾರಣೆಗಳು ದೃಢವಾದ ವೈಜ್ಞಾನಿಕ ಅಡಿಪಾಯದ ಮೇಲೆ ನಿರ್ಮಿತವಾದ ಶಿಕ್ಷಣವನ್ನು ನೀಡುವ ಉದ್ದೇಶ ಹೊಂದಿದ್ದು, ಕಾನೂನು, ಇತಿಹಾಸ, ರಾಜಕೀಯ, ಆರ್ಥಿಕ ಹಾಗೂ ಭಾಷಾ ಸಾಮರ್ಥ್ಯಗಳನ್ನು ಮಾನವೀಯ ಮತ್ತು ಯಾಜಕ ಗುಣಗಳೊಂದಿಗೆ ಒಗ್ಗೂಡಿಸುವುದನ್ನು ಗುರಿಯಾಗಿಟ್ಟುಕೊಂಡಿವೆ ಎಂದು ಜಗದ್ಗರುಗಳು ಹೇಳಿದರು. ಅವರು ನಂಬಿಕೆ ಮತ್ತು ಮುಕ್ತತೆಯ ಮನೋಭಾವದಲ್ಲಿ ಐಕ್ಯತೆ ಮತ್ತು ನವೀಕರಣದ ಮಾರ್ಗವನ್ನು ಅನುಸರಿಸುತ್ತಿರುವ ಸಂಸ್ಥೆಯ ಮೇಲ್ವಿಚಾರಕರು ಹಾಗೂ ವಿದ್ಯಾರ್ಥಿಗಳಿಗೆ ಧನ್ಯವಾದ ಸಲ್ಲಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರ, ರಾಜತಾಂತ್ರಿಕ ಸೇವೆ ಒಂದು ವೃತ್ತಿಯಲ್ಲ, ಬದಲಾಗಿ ಧರ್ಮಾಧಿಕಾರಿಯೆಂದು ಕರೆಯಲಾಗಿದೆ ಎಂದು ಒತ್ತಿ ಹೇಳಿದರು. ಇತರರು ಗೋಡೆಗಳನ್ನು ಕಟ್ಟುವ ಮತ್ತು ಅವಿಶ್ವಾಸವನ್ನು ಬೀಜ ಬಿತ್ತುವ ಸ್ಥಳಗಳಲ್ಲಿ, ಸಂಧಾನದ ಮಾರ್ಗಗಳನ್ನು ಹುಡುಕುವುದು ಈ ಸೇವೆಯ ಧ್ಯೇಯವಾಗಿದೆ ಎಂದರು. ನಮ್ಮ ರಾಜತಾಂತ್ರಿಕತೆ ಸುವಾರ್ತೆಯಿಂದ ಹುಟ್ಟಿದದ್ದು ಅದು ತಂತ್ರವಲ್ಲ, ಬದಲಾಗಿ ವಿವೇಕಪೂರ್ಣ ಪ್ರೀತಿ ಎಂದು ಅವರು ಹೇಳಿದರು.
ಅಂತಿಮವಾಗಿ, ಸಂಸ್ಥೆಯ ಪೋಷಕ ಸಂತ ಆಂಟನಿ ಅಭಾಟ್ ರವರನ್ನು ಅನುಕರಿಸಲು ಜಗದ್ಗುರುಗಳು ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳನ್ನು ಆಹ್ವಾನಿಸಿದರು. ಅವರು ಅರಣ್ಯದ ಮೌನವನ್ನು ದೇವರೊಂದಿಗೆ ಫಲಪ್ರದ ಸಂವಾದವಾಗಿ ಪರಿವರ್ತಿಸಲು ತಿಳಿದವರಾಗಿದ್ದರು ಎಂದು ಹೇಳಿ, ಆಳವಾದ ಆತ್ಮೀಯತೆಯ ಯಾಜಕರಾಗಿರಿ ಪ್ರಾರ್ಥನೆಯಿಂದಲೇ ಇತರರೊಂದಿಗೆ ಭೇಟಿಯಾಗಲು ಅಗತ್ಯವಾದ ಶಕ್ತಿಯನ್ನು ಪಡೆಯಿರಿ ಎಂದು ಜಗದ್ಗುರು XIVನೇ ಲಿಯೋರವರು ಕರೆ ನೀಡಿದರು.
