ತ್ರಿಕಾಲ ಪ್ರಾಥ೯ನೆಯಲ್ಲಿ ಜಗದ್ಗುರು XIV ನೇ ಲಿಯೋರವರು ತ್ರಿಕಾಲ ಪ್ರಾಥ೯ನೆಯಲ್ಲಿ ಜಗದ್ಗುರು XIV ನೇ ಲಿಯೋರವರು  (ANSA)

ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ದೇವರ ಸಮಯದಲ್ಲಿ ವಿಶ್ವಾಸ ಇಡಿ, ಸುವಾರ್ತೆಯನ್ನು ಎಲ್ಲೆಡೆ ತಲುಪಿಸಿ

ತ್ರಿಕಾಲ ಪ್ರಾರ್ಥನೆಯ ವೇಳೆ, ಜಗದ್ಗುರು XIVನೇ ಲಿಯೋರವರು ಯೇಸು ಅವರ ಸಾರ್ವಜನಿಕ ಸೇವೆಯ ಆರಂಭದ ಕುರಿತು ಚಿಂತನೆ ವ್ಯಕ್ತಪಡಿಸುತ್ತಾ, ಭಯ ಅಥವಾ ಅನಾನುಕೂಲಕರ ಪರಿಸ್ಥಿತಿಗಳಿಂದ ಕ್ರೈಸ್ತರು ಸ್ಥಬ್ಧರಾಗಬಾರದೆಂದು, ಬದಲಾಗಿ ದೇವರ ಸಮಯದಲ್ಲಿ ದೃಢವಾದ ವಿಶ್ವಾಸವಿರಿಸಬೇಕೆಂದು ಕರೆ ನೀಡಿದರು.ಅದೇ ವೇಳೆ, ಸಹೋದರತ್ವ ಮತ್ತು ಶಾಂತಿಯ ಶಕ್ತಿಯಾಗಿ ಸುವಾರ್ತೆಯನ್ನು ಪ್ರತಿಯೊಂದು ಮಾನವೀಯ ಪರಿಸ್ಥಿತಿಯಲ್ಲಿಯೂ ಘೋಷಿಸಬೇಕೆಂದು ಜಗದ್ಗುರುಗಳು ವಿಶ್ವಾಸಿಗಳಿಗೆ ಮನವಿ ಮಾಡಿದರು.

ವ್ಯಾಟಿಕನ್ ವರದಿ

ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು ಯೇಸು ಅವರ ಸಾರ್ವಜನಿಕ ಸೇವೆಯ ಆರಂಭದ ಕುರಿತು ಚಿಂತನೆ ನಡೆಸಿದರು. ಭಯ, ಹಿಂಜರಿಕೆ ಅಥವಾ ಅನಾನುಕೂಲಕರ ಪರಿಸ್ಥಿತಿಗಳಿಂದ ವಿಶ್ವಾಸಿಗಳು ಸ್ಥಬ್ಧರಾಗಬಾರದೆಂದು, ಬದಲಾಗಿ ದೇವರ ಸಮಯದಲ್ಲಿ ದೃಢ ವಿಶ್ವಾಸ ಇಟ್ಟುಕೊಂಡು, ಮಾನವ ಜೀವನದ ಪ್ರತಿಯೊಂದು ಪರಿಸ್ಥಿತಿಗೂ ಸುವಾರ್ತೆಯನ್ನು ಕೊಂಡೊಯ್ಯಬೇಕೆಂದು ಅವರು ಕರೆ ನೀಡಿದರು.

ಯೇಸು ತಮ್ಮ ಬೋಧನೆಯನ್ನು ಯಾವಾಗ ಮತ್ತು ಎಲ್ಲಿಂದ ಆರಂಭಿಸಿದರು ಎಂಬ ಎರಡು ಪ್ರಶ್ನೆಗಳ ಮೇಲೆ ಜಗದ್ಗುರುಗಳು ಗಮನ ಹರಿಸಿದರು. ಸ್ನಾನಿಕ ಯಾವಾನ್ನರನ್ನು ಬಂಧಿಸಲಾದ ಸಮಯದಲ್ಲೇ ಯೇಸು ಬೋಧನೆಯನ್ನು ಆರಂಭಿಸಿದರು ಎಂಬುದು ಹೊರಗೆ ನೋಡಲು ಅಸಮಯದಂತೆ ಕಾಣುತ್ತಿತ್ತು. ಆದರೂ, ಅದೇ ಅಂಧಕಾರದ ಸಂದರ್ಭದಲ್ಲಿ ಯೇಸು ಸ್ವರ್ಗಸಾಮಾ೯ಜ್ಯ ಸಮೀಪದಲ್ಲಿದೆ ಎಂಬ ಶುಭಸಂದೇಶದ ಬೆಳಕನ್ನು ತರುವ ಮೂಲಕ ದೇವರು ಯಾವ ಕ್ಷಣದಲ್ಲೂ ಕಾರ್ಯನಿರತತೆಯಲ್ಲಿ ಇದ್ದಾರೆ ಎಂಬುದನ್ನು ತೋರಿಸಿದರು.

ಈ ಅಂಶವು ಇಂದಿನ ವಿಶ್ವಾಸಿಗಳ ಅನುಭವಕ್ಕೂ ಅನ್ವಯಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು. ವೈಯಕ್ತಿಕ ಜೀವನದಲ್ಲಾಗಲಿ ಅಥವಾ ಧರ್ಮ ಸಭೆಯ ಜೀವನದಲ್ಲಾಗಲಿ, ಒಳಗಣ ಹೋರಾಟಗಳು ಅಥವಾ ಕಷ್ಟಕರ ಪರಿಸ್ಥಿತಿಗಳು ಸುವಾರ್ತೆ ಘೋಷಿಸಲು ಇದು ಸರಿಯಾದ ಸಮಯವಲ್ಲ ಎಂದು ನಮಗೆ ತೋರುವ ಸಾಧ್ಯತೆ ಇದೆ. ಆದರೆ ಇಂತಹ ಹಿಂಜರಿಕೆ ನಮ್ಮನ್ನು ನಿರ್ಣಯಶೂನ್ಯತೆ ಮತ್ತು ಅತಿಯಾದ ಎಚ್ಚರಿಕೆಯ ಬಂಧನಕ್ಕೆ ತಳ್ಳಬಹುದು ಎಂದು ಜಗದ್ಗುರುಗಳು ಎಚ್ಚರಿಸಿದರು.

ಯೇಸು ತಮ್ಮ ಸೇವೆಯನ್ನು ಆರಂಭಿಸಿದ ಸ್ಥಳವಾದ ಗಲಿಲೆಯ ಕೆರ್ಪನವುಮ್ ಬಗ್ಗೆ ಮಾತನಾಡಿದ ಜಗದ್ಗುರುಗಳು, ಅದು ವ್ಯಾಪಾರ, ಸಾಂಸ್ಕೃತಿಕ ವೈವಿಧ್ಯ ಮತ್ತು ಧಾರ್ಮಿಕ ಭಿನ್ನತೆಯಿಂದ ಕೂಡಿದ ಪ್ರದೇಶವಾಗಿತ್ತು ಎಂದು ವಿವರಿಸಿದರು. ಅಲ್ಲಿ ನೆಲೆಸಿದ ಯೇಸು, ತಮ್ಮ ಗುರಿ ಯಾವುದೇ ಗಡಿ ಅಥವಾ ಮಿತಿಗಳೊಳಗೆ ಸೀಮಿತವಲ್ಲ ಎಂಬುದನ್ನು ತೋರಿಸಿದರು. ದೇವರು ಯಾರನ್ನೂ ಹೊರಗಿಡದೆ, ಮಾನವ ಜೀವನದ ಸಂಕೀರ್ಣತೆಯೊಳಗೇ ಪ್ರವೇಶಿಸುವವನು ಎಂಬುದನ್ನು ಪ್ರಕಟಿಸಿದರು.

ಸಂದೇಶದ ಅಂತ್ಯದಲ್ಲಿ, ಜಗದ್ಗುರು XIVನೇ ಲಿಯೋರವರು  ಕ್ರೈಸ್ತರು ತಮ್ಮೊಳಗೆ ಮುಚ್ಚಿಕೊಳ್ಳುವ ಪ್ರಲೋಭನೆಯನ್ನು ತಳ್ಳಿಹಾಕಿ, ಸುವಾರ್ತೆಯನ್ನು ಎಲ್ಲ ಪರಿಸರಗಳಲ್ಲಿ ಬದುಕಿ ಘೋಷಿಸಬೇಕೆಂದು ಕರೆ ನೀಡಿದರು. ಮೊದಲ ಶಿಷ್ಯರಂತೆ, ಪ್ರತಿಯೊಂದು ಕಾಲವೂ ಮತ್ತು ಸ್ಥಳವೂ ದೇವರ ಸಾನ್ನಿಧ್ಯ ಮತ್ತು ಪ್ರೀತಿಯಿಂದ ತುಂಬಿದೆ ಎಂಬ ವಿಶ್ವಾಸದೊಂದಿಗೆ, ಆನಂದದಿಂದ ಕರ್ತನ ಆಹ್ವಾನಕ್ಕೆ ಪ್ರತಿಕ್ರಿಯಿಸಬೇಕೆಂದು ಅವರು ಉತ್ತೇಜಿಸಿದರು.

25 ಜನವರಿ 2026, 00:00