ದುರ್ಬಲತೆ ಮತ್ತು ಪರೀಕ್ಷೆಯ ಕಾಲದಲ್ಲಿ ಸದಾ ಇರುವ ಹಾಜರಾತಿ: ಸಮರ್ಪಿತ ಜೀವನ
ವ್ಯಾಟಿಕನ್ ವರದಿ
ಸಮರ್ಪಿತ ಜೀವನ ಸಂಸ್ಥೆಗಳು ಮತ್ತು ಪ್ರೇಷಿತರ ಜೀವನ ಸಮಾಜಗಳಿಗಾಗಿ ಇರುವ ಡಿಕಾಸ್ಟರಿ, ಜಗತ್ತಿನ ಎಲ್ಲ ಭಾಗಗಳಲ್ಲಿ ತಮ್ಮ ಗುರಿಯನ್ನು ನೆರವೇರಿಸುತ್ತಿರುವ ಎಲ್ಲಾ ಸಮರ್ಪಿತ ಪುರುಷರು ಮತ್ತು ಮಹಿಳೆಯರಿಗೆ ಒಂದು ಪತ್ರವನ್ನು ಕಳುಹಿಸಿದೆ. ಸುವಾರ್ತೆಗೆ ನಿಷ್ಠರಾಗಿರುವುದಕ್ಕಾಗಿ ಹಾಗೂ ತಮ್ಮ ಜೀವನವನ್ನು ಸಂಪೂರ್ಣವಾಗಿ ದೇವರಿಗೆ ಸಮರ್ಪಿಸಿರುವ ವರಕ್ಕಾಗಿ ಡಿಕಾಸ್ಟರಿಯ ಮುಖ್ಯಸ್ಥರು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗಳಿಂದ ಕೂಡಿದ ಜೀವನವಾಗಿದ್ದರೂ, ಅದು ಸದಾ ನಿರೀಕ್ಷೆಯ ಸಂಕೇತವಾಗಿಯೇ ಬದುಕಲ್ಪಡುತ್ತಿದೆ ಎಂದು ಪತ್ರವು ಹೇಳುತ್ತದೆ.
ಕಳೆದ ವರ್ಷವನ್ನು ಅವಲೋಕಿಸುವಾಗ, ಸಂಘರ್ಷ, ದಾರಿದ್ರ್ಯ, ಬಲವಂತದ ವಲಸೆ, ಧಾರ್ಮಿಕ ಅಲ್ಪಸಂಖ್ಯಾತ ಸ್ಥಿತಿ ಹಾಗೂ ಸಾಮಾಜಿಕ-ರಾಜಕೀಯ ಅಸ್ಥಿರತೆಗಳಿಂದ ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಬದುಕುತ್ತಿರುವ ಅನೇಕ ಸಮರ್ಪಿತ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ದೊರೆತದ್ದು ಒಂದು ಮಹತ್ವದ ಅನುಗ್ರಹ ಎಂದು ಡಿಕಾಸ್ಟರಿ ಸೂಚಿಸುತ್ತದೆ. ಇಂತಹ ಸಂಕೀರ್ಣ ಪರಿಸ್ಥಿತಿಗಳಲ್ಲಿಯೇ ಸಮರ್ಪಿತ ಜೀವನವು ಗಾಯಗೊಂಡ ಜನರ ಜೊತೆಯಲ್ಲಿ ಉಳಿಯುವ ಹಾಜರಾತಿಯಾಗಿ ಕಾಣಿಸಿಕೊಳ್ಳುತ್ತದೆ.
ಪ್ರತಿ ದೇಶ ಮತ್ತು ಸಮಾಜದ ಪರಿಸ್ಥಿತಿಯಂತೆ ಈ ಹಾಜರಾತಿಯ ರೂಪ ಬದಲಾಗುತ್ತದೆ. ಆದರೆ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳು ನಂಬಿಕೆಯನ್ನು ಪರೀಕ್ಷಿಸಿ ನಿರೀಕ್ಷೆಯನ್ನು ಕುಗ್ಗಿಸುವ ಸ್ಥಳಗಳಲ್ಲಿಯೇ, ಸಮರ್ಪಿತ ವ್ಯಕ್ತಿಗಳ ನಿಷ್ಠಾವಂತ, ವಿನಮ್ರ, ಸೃಜನಶೀಲ ಮತ್ತು ಮೌನಪೂರ್ಣ ಹಾಜರಾತಿ ದೇವರು ತನ್ನ ಜನರನ್ನು ತ್ಯಜಿಸುವುದಿಲ್ಲ ಎಂಬ ಸಂಕೇತವಾಗುತ್ತದೆ ಎಂದು ಪತ್ರವು ಒತ್ತಿಹೇಳುತ್ತದೆ.
ಪತ್ರವು ಉಳಿಯುವುದು ಎಂದರೆ ನಿಷ್ಕ್ರಿಯತೆ ಅಥವಾ ನಿರಾಶೆ ಅಲ್ಲ, ಬದಲಾಗಿ ಶಾಂತಿಯನ್ನು ಹುಟ್ಟುಹಾಕುವ ಕ್ರಿಯಾಶೀಲ ನಿರೀಕ್ಷೆಯಾಗಿದೆ ಎಂದು ತಿಳಿಸುತ್ತದೆ. ಸಂಘರ್ಷದ ನಡುವೆ ಶಸ್ತ್ರರಹಿತ ಮಾತುಗಳು, ಸಂವಾದಕ್ಕೆ ದಾರಿ ಮಾಡಿಕೊಡುವ ಸಂಬಂಧಗಳು, ದುರ್ಬಲರನ್ನು ರಕ್ಷಿಸುವ ನಿರ್ಧಾರಗಳು ಎಲ್ಲವು ಸಮರ್ಪಿತ ಜೀವನದ ಸಾಕ್ಷಿಗಳಾಗಿವೆ. ಈ ಉಳಿಯುವ ಆಯ್ಕೆ ವ್ಯಕ್ತಿಗತವಲ್ಲ ಅದು ಧರ್ಮಸಭೆಗೂ ಜಗತ್ತಿಗೂ ಪ್ರವಾದನಾತ್ಮಕ ಸಂದೇಶವಾಗುತ್ತದೆ.
ಜಗದ್ಗುರು XIVನೇ ಲಿಯೋರವರು ವಿವರಿಸಿದಂತೆ, ಶಾಂತಿ ಒಂದು ಸಿದ್ಧಾಂತಿಕ ಕಲ್ಪನೆ ಅಲ್ಲ, ಬದಲಾಗಿ ಪ್ರತಿದಿನದ ಕಠಿಣ ಪ್ರಯಾಣ. ಅದು ಆಲಿಸುವಿಕೆ, ಸಹನೆ, ಸಂವಾದ, ಹೃದಯ ಮತ್ತು ಮನಸ್ಸಿನ ಪರಿವರ್ತನೆ ಹಾಗೂ ಬಲಶಾಲಿಗಳು ದುರ್ಬಲರ ಮೇಲೆ ಮೇಲುಗೈ ಸಾಧಿಸುವ ಮನೋಭಾವವನ್ನು ತಿರಸ್ಕರಿಸುವುದನ್ನು ಬೇಡುತ್ತದೆ. ಅಗತ್ಯವಿರುವವರ ಬಳಿ ಸಮೀಪವಿದ್ದು ಸಂಘರ್ಷವನ್ನು ತೊರೆದು ನಡೆಯುವಾಗ, ಸಮರ್ಪಿತ ಜೀವನವು ಶಾಂತಿಯ ಶಿಲ್ಪಿಯಾಗುತ್ತದೆ.
ಪತ್ರವು 2025ರ ಸಮರ್ಪಿತ ಜೀವನದ ಜುಬಿಲಿಯ ಬೆಳಕಿನಲ್ಲಿ, ಎಲ್ಲ ಸಮರ್ಪಿತ ಪುರುಷರು ಮತ್ತು ಮಹಿಳೆಯರು ತಮ್ಮ ಗುರಿಯಲ್ಲಿ ಸ್ಥಿರವಾಗಿ ಮುಂದುವರೆಯಬೇಕೆಂದು ಕರೆ ನೀಡುತ್ತದೆ. ಮಾನವ ಘನತೆ ಗಾಯಗೊಂಡಿರುವ ಮತ್ತು ನಂಬಿಕೆ ಪರೀಕ್ಷೆಗೆ ಒಳಗಾಗುತ್ತಿರುವ ಎಲ್ಲ ಸ್ಥಳಗಳಲ್ಲಿ, ಪ್ರತಿದಿನವೂ ನಿರೀಕ್ಷೆಯ ಯಾತ್ರಿಕರಾಗಿ ಶಾಂತಿಯ ಬೀಜ ಬಿತ್ತುವಂತೆ ಪ್ರೇರೇಪಿಸುತ್ತದೆ. ಸಮರ್ಪಿತ ಜನರು ತಮ್ಮ ಗುರಿಯಲ್ಲಿ ಹಾಜರಾತಿಯ ಪ್ರವಾದನೆ ಮತ್ತು ಶಾಂತಿಯ ಬೀಜವಾಗಿರಲಿ ಎಂದು ಡಿಕಾಸ್ಟರಿಯ ಮುಖ್ಯಸ್ಥರು ಅವರನ್ನು ಪ್ರಭುವಿಗೆ ಸಮರ್ಪಿಸುತ್ತಾರೆ.
