ಉಕ್ರೇನ್ ಜಪೋರಿಝಿಯಾ ಪ್ರದೇಶದಲ್ಲಿ ಮಕ್ಕಳಿರುವ ಕುಟುಂಬಗಳ ಸ್ಥಳಾಂತರಿಸುವಿಕೆ ಉಕ್ರೇನ್ ಜಪೋರಿಝಿಯಾ ಪ್ರದೇಶದಲ್ಲಿ ಮಕ್ಕಳಿರುವ ಕುಟುಂಬಗಳ ಸ್ಥಳಾಂತರಿಸುವಿಕೆ 

ಉಕ್ರೇನ್ ಹಾಗೂ ಯುದ್ಧಪೀಡಿತ ಎಲ್ಲಾ ಪ್ರದೇಶಗಳಲ್ಲಿ ಶಾಂತಿಗಾಗಿ ಜಗದ್ಗುರು ಲಿಯೋರವರ ಮನವಿ

ತ್ರಿಕಾಲ ಪ್ರಾರ್ಥನೆಯ ಸಂದೇಶದ ವೇಳೆ, ಜಗದ್ಗುರು XIVನೇ ಲಿಯೋರವರು ಉಕ್ರೇನ್‌ನಲ್ಲಿನ ಯುದ್ಧವನ್ನು ಅಂತ್ಯಗೊಳಿಸಲು ಪ್ರಯತ್ನಗಳನ್ನು ಮತ್ತಷ್ಟು ತೀವ್ರಗೊಳಿಸಬೇಕೆಂದು ಕರೆ ನೀಡಿದರು. ಜೊತೆಗೆ, ಯುದ್ಧದಿಂದ ತತ್ತರಿಸಿರುವ ಉಕ್ರೇನ್ ಹಾಗೂ ಸಂಘರ್ಷದಿಂದ ಬಳಲುತ್ತಿರುವ ಇತರ ಎಲ್ಲಾ ಪ್ರದೇಶಗಳಲ್ಲಿ ಶಾಂತಿಗಾಗಿ ಪ್ರಾರ್ಥನೆ ಮಾಡುವಂತೆ ತಮ್ಮ ಮನವಿಯನ್ನು ಪುನರುಚ್ಚರಿಸಿದರು.

ವ್ಯಾಟಿಕನ್ ವರದಿ

ಭಾನುವಾರ ತ್ರಿಕಾಲ ಪ್ರಾರ್ಥನೆಯ ನಂತರ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಯುದ್ಧ ಮತ್ತು ಸಂಘರ್ಷಗಳಿಂದ ಬಳಲುತ್ತಿರುವ ಎಲ್ಲಾ ಪ್ರದೇಶಗಳಲ್ಲಿ ಶಾಂತಿಗಾಗಿ ಪ್ರಾರ್ಥನೆ ಮಾಡುವಂತೆ ವಿಶ್ವಾಸಿಗಳಿಗೆ ಕರೆ ನೀಡಿದರು. ವಿಶೇಷವಾಗಿ ಉಕ್ರೇನ್, ಮಧ್ಯಪ್ರಾಚ್ಯ ಹಾಗೂ ಇತರ ಯುದ್ಧಪೀಡಿತ ಪ್ರದೇಶಗಳಲ್ಲಿ ಜನರು ಅನುಭವಿಸುತ್ತಿರುವ ದುಃಖವನ್ನು ಅವರು ಗಮನಕ್ಕೆ ತಂದರು.

ಉಕ್ರೇನ್‌ನ ಪರಿಸ್ಥಿತಿಯನ್ನು ಉಲ್ಲೇಖಿಸಿದ ಜಗದ್ಗುರುಗಳು, ಇಂದಿಗೂ ಅಲ್ಲಿನ ಜನರು ನಿರಂತರ ದಾಳಿಗಳಿಗೆ ಒಳಗಾಗುತ್ತಿದ್ದು, ಸಂಪೂರ್ಣ ಜನಸಂಖ್ಯೆಯೇ ತೀವ್ರ ಚಳಿಯ ನಡುವೆಯೇ ಅನಿಶ್ಚಿತ ಸ್ಥಿತಿಗೆ ತಳ್ಳಲ್ಪಟ್ಟಿದೆ ಎಂದು ಹೇಳಿದರು. ನಡೆಯುತ್ತಿರುವುದನ್ನು ನಾನು ದುಃಖದಿಂದ ಅನುಸರಿಸುತ್ತಿದ್ದೇನೆ; ದುಃಖಿಸುತ್ತಿರುವವರ ಸಮೀಪದಲ್ಲಿದ್ದೇನೆ ಮತ್ತು ಅವರಿಗಾಗಿ ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದರು.

ದೀರ್ಘಕಾಲದ ಯುದ್ಧವು ನಾಗರಿಕರ ಮೇಲೆ ಇನ್ನಷ್ಟು ಗಂಭೀರ ಪರಿಣಾಮಗಳನ್ನು ಬೀರುತ್ತಿದ್ದು, ಜನಾಂಗಗಳ ನಡುವಿನ ಅಂತರವನ್ನು ಹೆಚ್ಚಿಸಿ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಇನ್ನಷ್ಟು ದೂರ ಮಾಡುತ್ತಿದೆ ಎಂದು ಜಗದ್ಗರುಗಳು ಎಚ್ಚರಿಸಿದರು. ಆದ್ದರಿಂದ ಯುದ್ಧವನ್ನು ಅಂತ್ಯಗೊಳಿಸಲು ಎಲ್ಲರೂ ತಮ್ಮ ಪ್ರಯತ್ನಗಳನ್ನು ಮತ್ತಷ್ಟು ತೀವ್ರಗೊಳಿಸಬೇಕೆಂದು ಅವರು ಮನವಿ ಮಾಡಿದರು.

ಈ ಮಾತುಗಳು, ಅಮೆರಿಕದ ಮಧ್ಯಸ್ಥಿಕೆಯಲ್ಲಿ ಅಬುಧಾಬಿಯಲ್ಲಿ ಉಕ್ರೇನ್ ಮತ್ತು ರಷ್ಯಾ ಪ್ರತಿನಿಧಿಗಳು ನೇರ ಮಾತುಕತೆ ನಡೆಸಲು ಸಿದ್ಧರಾಗಿರುವ ಸಮಯದಲ್ಲಿ ಬಂದಿವೆ. ನಿರಂತರ ದಾಳಿಗಳ ನಡುವೆಯೂ ಶಾಂತಿಗಾಗಿ ಮುಂದಿನ ಸುತ್ತಿನ ಮಾತುಕತೆಗಳಿಗೆ ಒಪ್ಪಂದವಾಗಿರುವುದು ನಿರೀಕ್ಷೆಯ ಕಿರಣವಾಗಿದೆ ಎಂದು ಹೇಳಬಹುದು.

ಅದೇ ವೇಳೆ, ಸಂತ ಪೇತ್ರ ಚೌಕದಲ್ಲಿ ಹಾಜರಿದ್ದ ಕಥೋಲಿಕ ಆಕ್ಷನ್‌ನ ಯುವಕರ ಗುಂಪನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಅವರು ಆರಂಭಿಸಿರುವ “ಶಾಂತಿಯ ಕಾರವಾನ್” ಉಪಕ್ರಮಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು. ವಿಭಿನ್ನ ಜನರು ಮತ್ತು ಸಮುದಾಯಗಳ ನಡುವಿನ ಸಹಕಾರದ ದೃಷ್ಟಿಕೋನವನ್ನು ಯುವಕರು ನಮಗೆ ತೋರಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ಸಂದೇಶದ ಅಂತ್ಯದಲ್ಲಿ, ಜಗದ್ಗುರು XIVನೇ ಲಿಯೋರವರು  ಎಲ್ಲರೊಂದಿಗೆ ಸೇರಿ ಶಾಂತಿಗಾಗಿ ಪ್ರಾರ್ಥಿಸಿದರು: ಉಕ್ರೇನ್‌ನಲ್ಲಿ, ಮಧ್ಯಪ್ರಾಚ್ಯದಲ್ಲಿ ಹಾಗೂ ಜನರ ಹಿತಕ್ಕಿಂತ ಬೇರೆ ಸ್ವಾರ್ಥಗಳಿಗಾಗಿ ಹೋರಾಟ ನಡೆಯುತ್ತಿರುವ ಪ್ರತಿಯೊಂದು ಪ್ರದೇಶದಲ್ಲಿಯೂ ಶಾಂತಿ ನೆಲೆಯಾಗಲಿ ಎಂದು ಅವರು ಮನವಿ ಮಾಡಿದರು. ಶಾಂತಿ ಎಂದರೆ ಮಾನವನ ಗೌರವ ಮತ್ತು ಪರಸ್ಪರ ಗೌರವದ ಮೇಲೆಯೇ ನಿರ್ಮಾಣವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

25 ಜನವರಿ 2026, 00:00