ಜನವರಿ 19 2026ರಂದು ಜಗದ್ಗುರುಗಳು ಫಿನ್ ಲ್ಯಾಂಡ್ ನಿಯೋಗವನ್ನು ಭೇಟಿಮಾಡಿದರು. ಜನವರಿ 19 2026ರಂದು ಜಗದ್ಗುರುಗಳು ಫಿನ್ ಲ್ಯಾಂಡ್ ನಿಯೋಗವನ್ನು ಭೇಟಿಮಾಡಿದರು.  (ANSA)

ಜಗದ್ಗರುಗಳು: ನಿರೀಕ್ಷೆಯ ಆಧಾರದ ಮೇಲೆ ಸ್ಥಾಪಿತವಾದ ಐಕ್ಯಮತ ಸಹಕಾರಕ್ಕೆ ಫಿನ್‌ಲ್ಯಾಂಡ್ ಉದಾಹರಣೆ

ಕ್ರೈಸ್ತರ ಐಕ್ಯತೆಗಾಗಿ ಪ್ರಾರ್ಥನೆಯ ವಾರದ ಎರಡನೇ ದಿನದಂದು, ಜಗದ್ಗುರು XIVನೇ ಲಿಯೋರವರು ಫಿನ್‌ಲ್ಯಾಂಡ್‌ನ ಐಕ್ಯಮತ ಪ್ರತಿನಿಧಿ ಮಂಡಳಿಯನ್ನು ಭೇಟಿಯಾಗಿ, ಫಿನ್‌ಲ್ಯಾಂಡ್‌ನ ಲೂಥರನ್‌, ಆರ್ಥೋಡಾಕ್ಸ್‌ ಹಾಗೂ ಕಥೋಲಿಕ್ ಸಮುದಾಯಗಳ ನಡುವೆ ದೀರ್ಘಕಾಲದಿಂದ ನಡೆದುಬಂದಿರುವ ಸಹಕಾರವನ್ನು ಪ್ರಶಂಶಿಸಿದರು.

ವ್ಯಾಟಿಕನ್ ವರದಿ

ಜಗದ್ಗರು XIV ನೇ ಲಿಯೋರವರು ವ್ಯಾಟಿಕನ್‌ನಲ್ಲಿ ಫಿನ್‌ಲ್ಯಾಂಡ್‌ನ ಐಕ್ಯಮತ ಪ್ರತಿನಿಧಿ ಮಂಡಳಿಯನ್ನು ಭೇಟಿಯಾಗಿ, ಸಂತ ಹೆನ್ರಿಕ್ ರವರ ಹಬ್ಬದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಿದರು. ಕ್ರೈಸ್ತರ ಐಕ್ಯತೆಗಾಗಿ ಪ್ರಾರ್ಥನೆಯ ವಾರದ ಆರಂಭದಲ್ಲಿ ಮಾತನಾಡಿದ ಜಗದ್ಗುರುಗಳು, ಲೂಥರನ್‌, ಆರ್ಥೋಡಾಕ್ಸ್‌ ಹಾಗೂ ಕಥೋಲಿಕ ಪ್ರತಿನಿಧಿಗಳನ್ನು ಅಭಿನಂದಿಸಿ, ಟುರ್ಕು ಮಹಾಧರ್ಮಪ್ರಾಂತ್ಯದ 750ನೇ ವಾರ್ಷಿಕೋತ್ಸವವನ್ನು ಸ್ಮರಿಸಿದ ಮಹಾಧರ್ಮಾಧ್ಯಕ್ಷ ಲುಓಮಾಗೆ ಕೃತಜ್ಞತೆ ಸಲ್ಲಿಸಿದರು.

ಈ ವರ್ಷದ ಪ್ರಾರ್ಥನಾ ವಾರದ ವಿಷಯವಾದ ಒಂದು ದೇಹ, ಒಂದು ಆತ್ಮ ಒಂದೇ ನಿರೀಕ್ಷೆಗೆ ನಿಮಗೆ ಕರೆಯಲಾಗಿದೆ ಎಂಬ ವಾಕ್ಯದ ಕುರಿತು ಜಗದ್ಗುರುಗಳು ಚಿಂತನೆ ನಡೆಸಿದರು. ನಮ್ಮ ಕ್ರೈಸ್ತ ನಿರೀಕ್ಷೆ ಒಂದೇ ಜ್ಞಾನಸ್ನಾನದಲ್ಲಿ, ಪಾಪಕ್ಷಮೆಯ ಮೂಲದಲ್ಲಿ ನೆಲೆಗೊಂಡಿದ್ದು, ಅದೇ ಎಲ್ಲಾ ಕ್ರೈಸ್ತ ಸಹೋದರತ್ವದ ಮೂಲವೆಂದು ಅವರು ವಿವರಿಸಿದರು. ಇಂದಿನ ಜಗತ್ತಿನಲ್ಲಿ ಅನೇಕರು ನಿರಾಶೆಗೆ ಒಳಗಾಗುತ್ತಿದ್ದಾರೆ ಎಂದು ಸೂಚಿಸಿ, ಕ್ರೈಸ್ತರಾದ ನಾವು ನಿರೀಕ್ಷೆಯ ಸಂದೇಶವಾಹಕರಾಗಿ ಜಗತ್ತಿನ ಕತ್ತಲೆಯ ಮೂಲೆಗಳಿಗೆ ದೇವರ ಬೆಳಕನ್ನು ತಲುಪಿಸುವ ಕರ್ತವ್ಯ ಹೊಂದಿದ್ದೇವೆ ಎಂದು ಹೇಳಿದರು.

ನಿರೀಕ್ಷೆಯ ಜುಬಿಲಿ ಮುಕ್ತಾಯವಾದರೂ, ಕ್ರೈಸ್ತ ನಿರೀಕ್ಷೆಗೆ ಅಂತ್ಯವೂ ಮಿತಿಯೂ ಇಲ್ಲ ಎಂದು ಜಗದ್ಗರುಗಳು ಸ್ಪಷ್ಟಪಡಿಸಿದರು. ಮಾತುಗಳ ಮೂಲಕ ಮಾತ್ರವಲ್ಲದೆ, ಕ್ರಿಸ್ತನಿಂದ ಬಲ ಪಡೆದ ದಾನಧರ್ಮದ ಕಾರ್ಯಗಳ ಮೂಲಕವೂ ಈ ನಿರೀಕ್ಷೆಗೆ ಸಾಕ್ಷಿಯಾಗಬೇಕೆಂದು ಅವರು ಎಲ್ಲ ಕ್ರೈಸ್ತರನ್ನು ಉತ್ತೇಜಿಸಿದರು. ಕ್ರಿಸ್ತನೇ ಎಲ್ಲರಿಗೂ ನಿರೀಕ್ಷೆಯ ಜೀವಂತ ಅವತಾರ ಎಂದು ಅವರು ಹೇಳಿದರು.

ಫಿನ್‌ಲ್ಯಾಂಡ್‌ ಕುರಿತು ಮಾತನಾಡಿದ ಜಗದ್ಗುರುಗಳು, ಅಲ್ಲಿ ಕಂಡುಬರುವ ಸ್ಪಷ್ಟ ಐಕ್ಯಮತವನ್ನು ಸಹಕಾರದ ಗುರುತುಗಳನ್ನು ಪ್ರಶಂಸಿಸಿದರು. ಫಿನ್‌ಲ್ಯಾಂಡ್‌ನ್ನು ಐಕ್ಯಮತಕ್ಕೆ ಮಾದರಿ ದೇಶವೆಂದು ವರ್ಣಿಸಿ, ನಿರೀಕ್ಷೆ, ಗೌರವ ಮತ್ತು ಸಹಾನುಭೂತಿಯ ಸಂಸ್ಕೃತಿಯನ್ನು ಉತ್ತೇಜಿಸಲು ಲೂಥರನ್‌, ಆರ್ಥೋಡಾಕ್ಸ್‌ ಮತ್ತು ಕ್ಯಾಥೋಲಿಕ್‌ ಸಮುದಾಯಗಳು ಒಟ್ಟಾಗಿ ಕೈಜೋಡಿಸಿರುವುದನ್ನು ವಿಶೇಷವಾಗಿ ಉಲ್ಲೇಖಿಸಿದರು. ಪ್ಯಾಲಿಯೇಟಿವ್ ಹಾಗೂ ಅಂತಿಮ ಹಂತದ ಆರೈಕೆಯ ಅಭಿವೃದ್ಧಿ ಮುಂದುವರಿಯಬೇಕೆಂಬ ಅವರ ಸಂಯುಕ್ತ ನಿಲುವಿಗೂ ಕೃತಜ್ಞತೆ ಸಲ್ಲಿಸಿದರು.

ಭಾಷಣದ ಅಂತ್ಯದಲ್ಲಿ, ಕಮ್ಯುನಿಯನ್ ಇನ್ ಗ್ರೋತ್  ಎಂಬ ದಾಖಲೆ ಐಕ್ಯಮತ ಯಾತ್ರೆಯಲ್ಲಿ ಮಹತ್ವದ ಮೈಲುಗಲ್ಲೆಂದು ಜಗದ್ಗುರುಗಳು ಹೇಳಿದರು, ಸಂತ ಹೆನ್ರಿಕ್ ಹಬ್ಬದ ದಿನವನ್ನು ಒಟ್ಟಾಗಿ ಆಚರಿಸುವ ಪರಂಪರೆಯನ್ನೂ ಫಲಪ್ರದ ಐಕ್ಯಮತದ ಚಿಹ್ನೆಯೆಂದು ಬಣ್ಣಿಸಿದರು. ಮುಂದಿನ ಹಂತಕ್ಕೆ ಸಾಗುತ್ತಿರುವ ಅಂತರರಾಷ್ಟ್ರೀಯ ಕಥೋಲಿಕ ಲೂಥರನ್ ಸಂವಾದಕ್ಕೆ ಅವರು ಉತ್ತೇಜನ ನೀಡಿ, ಸಂತ ಪೇತ್ರ, ಸಂತ ಪೌಲ ಮತ್ತು ಸಂತ ಹೆನ್ರಿಕ್ ರವರ ಮಧ್ಯಸ್ಥಿಕೆಗೆ ಪ್ರತಿನಿಧಿಗಳನ್ನು ಒಪ್ಪಿಸಿ, ಒಟ್ಟಾಗಿ ನಮ್ಮ ತಂದೆಯ ಪ್ರಾರ್ಥನೆಯನ್ನು ಸಲ್ಲಿಸಲು ಆಹ್ವಾನಿಸಿದರು.

19 ಜನವರಿ 2026, 00:00