ಜಗದ್ಗುರು ಲಿಯೋರವರು: ‘ನನ್ನ ಚಿಂತನೆಗಳು ಪ್ರೀತಿಯ ಮೊಜಾಂಬಿಕ್ ಜನರತ್ತ ಸಾಗುತ್ತಿವೆ’
ವ್ಯಾಟಿಕನ್ ವರದಿ
ವ್ಯಾಟಿಕನ್‌ನಲ್ಲಿ ಬುಧವಾರ ನಡೆದ ತಮ್ಮ ವಾರದ ಸಾಮಾನ್ಯ ಸಭೆಯಲ್ಲಿ, ಜಗದ್ಗುರು XIVನೇ ಲಿಯೋರವರು ಭೀಕರ ಪ್ರವಾಹಗಳಿಂದ ತೀವ್ರವಾಗಿ ಬಳಲುತ್ತಿರುವ “ಮೊಜಾಂಬಿಕ್ ಜನರನ್ನು” ವಿಶೇಷವಾಗಿ ಸ್ಮರಿಸಿದರು. ಈ ಪ್ರಕೃತಿ ವಿಕೋಪದಿಂದ ಬಾಧಿತರಾದವರಿಗಾಗಿ ಅವರು ಪ್ರಾರ್ಥನೆ ಸಲ್ಲಿಸಿ, ಸ್ಥಳಾಂತರಗೊಂಡವರಿಗೆ ಹಾಗೂ ಅವರಿಗೆ ಸಹಾಯ ಮಾಡುತ್ತಿರುವ ಎಲ್ಲರಿಗೂ ತಮ್ಮ ಆಧ್ಯಾತ್ಮಿಕ ಸಮೀಪತೆಯನ್ನು ವ್ಯಕ್ತಪಡಿಸಿದರು. ಪ್ರಭು ನಿಮಗೆ ಸಹಾಯ ಮಾಡಿ ಆಶೀರ್ವದಿಸಲಿ ಎಂದು ಜಗದ್ಗುರುಗಳು ಹೇಳಿದರು.
ಮೊಜಾಂಬಿಕ್‌ನಲ್ಲಿ ಕಳೆದ ಅಕ್ಟೋಬರ್‌ನಿಂದ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹಗಳಲ್ಲಿ ಕನಿಷ್ಠ 137 ಮಂದಿ ಮೃತಪಟ್ಟಿದ್ದು, ಸುಮಾರು 8 ಲಕ್ಷ 12 ಸಾವಿರ ಜನರು ಪರಿಣಾಮಕ್ಕೆ ಒಳಗಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಐ ಎನ್ ಜಿ ಡಿ ) ತಿಳಿಸಿದೆ. ದಕ್ಷಿಣ-ಪೂರ್ವ ಆಫ್ರಿಕಾದ ಈ ದೇಶವು ಪ್ರಸ್ತುತ ಮಳೆಗಾಲದ ತೀವ್ರ ಹಂತದಲ್ಲಿದ್ದು, ಅದು 2025ರ ಅಕ್ಟೋಬರ್‌ನಲ್ಲಿ ಆರಂಭವಾಗಿ 2026ರ ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳಲಿದೆ.
ಪೋಲಿಷ್ ಭಾಷಾಭಿಮಾನಿ ಯಾತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು ಪೋಲ್ಯಾಂಡ್‌ನಲ್ಲಿ ಸೈನಿಕ ಒರ್ಡಿನಾರಿಯೇಟ್ ಪುನಃಸ್ಥಾಪನೆಯಾಗಿ 35 ವರ್ಷಗಳು ಪೂರ್ಣಗೊಂಡಿರುವುದನ್ನು ನೆನಪಿಸಿದರು. ದೇವರ ಸೇವೆಗೂ ಮತ್ತು ಮಾತೃಭೂಮಿಯ ಸೇವೆಗೆ ಸಮರ್ಪಿತರಾದವರ ಅಂತರಾತ್ಮವನ್ನು ರೂಪಿಸುವುದೇ ಇದರ ಮುಖ್ಯ ಕರ್ತವ್ಯ ಎಂದು ಅವರು ಹೇಳಿದರು. ಕಷ್ಟ ಮತ್ತು ಅನಿಶ್ಚಿತತೆಯ ಸಂದರ್ಭಗಳಲ್ಲಿ, ವಿಶೇಷವಾಗಿ ಸಂಸ್ಕಾರಗಳ ನಿರ್ವಹಣೆಯಲ್ಲಿ, ದೇವರ ವಾಕ್ಯ ಮತ್ತು ಧರ್ಮ ಸಭೆಯ ಪರಂಪರೆಯ ಮೇಲಿನ ನಿಷ್ಠೆಯೇ ಧರ್ಮಾಧಿಕಾರಿಗಳ ಸೇವೆಗೆ ದಿಕ್ಕು ತೋರಿಸುವ ದಿಕ್ಸೂಚಿಯಾಗಿರಲಿ ಎಂದು ಅವರು ಆಶಿಸಿದರು.
ಅರೇಬಿಕ್ ಭಾಷಾಭಿಮಾನಿ ಯಾತ್ರಿಕರನ್ನು ಉದ್ದೇಶಿಸಿ, ಜಗದ್ಗುರುಗಳು ನಂಬಿಕೆಯ ಠೇವಣಿಯನ್ನು ಸುರಕ್ಷಿತವಾಗಿ ಕಾಪಾಡಿ, ಪವಿತ್ರಾತ್ಮನ ಬೆಳಕಿನಲ್ಲಿ ಅದನ್ನು ನಿಷ್ಠೆಯಿಂದ ಮುಂದಿನ ಪೀಳಿಗೆಗಳಿಗೆ ಹಸ್ತಾಂತರಿಸುವಂತೆ ಆಹ್ವಾನಿಸಿದರು. ಪವಿತ್ರಾತ್ಮನೇ ಧರ್ಮ ಸಭೆಯನ್ನು ಸಂಪೂರ್ಣ ಸತ್ಯದತ್ತ ನಡೆಸುವವನು ಎಂದು ಅವರು ನೆನಪಿಸಿದರು.
ಫ್ರೆಂಚ್ ಭಾಷಾಭಿಮಾನಿ ಯಾತ್ರಿಕರಿಗೆ ಸಂದೇಶ ನೀಡುತ್ತಾ, ಧರ್ಮ ಸಭೆ ಇಂದು ಧರ್ಮ ಸಭೆಯ ಮಹಾಗುರು ಸಂತ ತೋಮಸ್ ಅಕ್ವಿನಾಸ್ ರವರ ಸ್ಮರಣೆಯನ್ನು ಆಚರಿಸುತ್ತಿದೆ ಎಂದು ಜಗದ್ಗರು ಹೇಳಿದರು. ಪವಿತ್ರ ಗ್ರಂಥಗಳನ್ನು ಅಪಾರ ಜ್ಞಾನದಿಂದ ವಿವೇಚಿಸಿದ ಈ ಪ್ರಿಯ ಸಂತರು, ದೇವರು ನಮ್ಮನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತಾನೆ ಮತ್ತು ನಮ್ಮ ರಕ್ಷಣೆಯನ್ನು ಎಷ್ಟರಮಟ್ಟಿಗೆ ಬಯಸುತ್ತಾನೆ ಎಂಬುದನ್ನು ನಾವು ಅರಿಯಲು ನಮ್ಮನ್ನು ಮಾರ್ಗದರ್ಶನ ಮಾಡಲಿ ಎಂದು ಜಗದ್ಗರುಗಳು ಪ್ರಾರ್ಥಿಸಿದರು.
