ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು   (AFP or licensors)

ಟೋಲೇಡೋ ಕ್ಯಾಥೆಡ್ರಲ್‌ನ 800 ವರ್ಷಗಳಿಗಾಗಿ ಜಗದ್ಗುರು XIVನೇ ಲಿಯೋರವರು ಕೃತಜ್ಞತೆ ವ್ಯಕ್ತಪಡಿಸಿದರು.

ಜಗದ್ಗುರು ಲಿಯೋರವರು ಟೋಲೇಡೋ ನಗರದ ವಿಶ್ವಾಸಿಗಳಿಗೆ ಒಂದು ಪತ್ರವನ್ನು ಕಳುಹಿಸಿ, ಪ್ರೈಮೇಟ್ ಕ್ಯಾಥೆಡ್ರಲ್‌ನ ಆಧ್ಯಾತ್ಮಿಕ, ಐತಿಹಾಸಿಕ ಮತ್ತು ಸಾಮಾಜಿಕ ವೈಭವವನ್ನು ಒತ್ತಿಹೇಳಿದ್ದಾರೆ. ಅಲ್ಲದೆ, 2026ರಲ್ಲಿ ಯೋಜಿಸಲಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವರು ಪ್ರೋತ್ಸಾಹಿಸಿದ್ದಾರೆ.

ವ್ಯಾಟಿಕನ್ ವರದಿ

ಟೋಲೇಡೋ ಮಹಾಧರ್ಮಕ್ಷೇತ್ರದ ವಿಶ್ವಾಸಿಗಳಿಗೆ ಜಗದ್ಗುರುXIVನೇ ಲಿಯೋರವರು, ಪ್ರೈಮೇಟ್ ಗೋಥಿಕ್ ಕ್ಯಾಥೆಡ್ರಲ್ ನಿರ್ಮಾಣದ 800ನೇ ವಾರ್ಷಿಕೋತ್ಸವದ ಆರಂಭಿಕ ಕಾರ್ಯಕ್ರಮದ ಸಂದರ್ಭದಲ್ಲಿ ಒಂದು ಸಂದೇಶವನ್ನು ಕಳುಹಿಸಿದ್ದಾರೆ. ಈ ಎಂಟನೇ ಶತಮಾನೋತ್ಸವದ ಆಚರಣೆಗಾಗಿ ಯೋಜಿಸಲಾದ ಚಟುವಟಿಕೆಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಜಗದ್ಗರುಗಳು, 2026ರ ವರ್ಷವು ಸ್ಪೇನ್, ಯುರೋಪ್ ಮತ್ತು ಹಿಸ್ಪಾನಿಕ್ ಅಮೇರಿಕಾದಲ್ಲಿನ ಟೋಲೇಡೋ ಧರ್ಮ ಸಭೆಯ ಶ್ರೀಮಂತ ಇತಿಹಾಸಕ್ಕಾಗಿ ಅನುಗ್ರಹ, ಕ್ಷಮೆ, ಕರುಣೆ ಮತ್ತು ಕೃತಜ್ಞತೆಯ ಕಾಲವಾಗಲಿ ಎಂದು ಆಶಿಸಿದರು.

1226ರಲ್ಲಿ, ಮಹಾಧರ್ಮಾಧ್ಯಕ್ಷ ರೋದ್ರಿಗೊ ಜಿಮೆನೆಸ್ ದೆ ರಾದಾ ಮತ್ತು ಕ್ಯಾಸ್ಟೈಲ್‌ನ ಸಂತ ರಾಜ III ನೇ ಫರ್ಡಿನಾಂಡ್ ರವರು, ಸಂತ ಮರಿಯಮ್ಮನವರ ಹಿಂದಿನ ವಿಸಿಗೋಥಿಕ್ ಬಸಿಲಿಕಾ ಇದ್ದ ಸ್ಥಳದಲ್ಲಿ ಇಂದಿನ ಪ್ರೈಮೇಟ್ ಕ್ಯಾಥೆಡ್ರಲ್‌ಗೆ ಮೊದಲ ಕಲ್ಲನ್ನು ಇಟ್ಟರು ಎಂಬುದನ್ನು ಜಗದ್ಗುರುಗಳು ಸ್ಮರಿಸಿದರು. ಕಳೆದ 800 ವರ್ಷಗಳ ಅವಧಿಯಲ್ಲಿ, ಟೋಲೇಡೋ ಕ್ಯಾಥೆಡ್ರಲ್ ಧಾರ್ಮಿಕ ಮತ್ತು ಸಾಂಸ್ಕೃತಿಕ ಇತಿಹಾಸದ ನಿರ್ಣಾಯಕ ಘಟನೆಗಳಿಗೆ ಸಾಕ್ಷಿಯಾಗಿದ್ದು, ಅವುಗಳ ಪ್ರತಿಬಿಂಬವನ್ನು ಅದರ ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಕಾಣಬಹುದು ಎಂದು ಅವರು ಹೇಳಿದರು.

ಈ ಎಂಟನೇ ಶತಮಾನೋತ್ಸವವನ್ನು ನಂಬಿಕೆ, ಕಲೆ, ಸಂಗೀತ ಮತ್ತು ಪರಂಪರೆ ಸಂವಾದದಲ್ಲಿ ಒಂದಾಗುವ ಸಮಗ್ರ ಆಚರಣೆಯಾಗಿ ರೂಪಿಸಲಾಗಿದೆ. ಧ್ವನಿ, ಸ್ಮೃತಿ, ಕಲ್ಲಿನ ದೇಹ ಮತ್ತು ದೇವಾಲಯದ ಹಾಗೂ ಅದರ ಸಮುದಾಯದ ಆಧ್ಯಾತ್ಮಿಕ ಜೀವನ ಎಂಬ ನಾಲ್ಕು ಪ್ರಮುಖ ವಿಷಯಗಳ ಮೂಲಕ ಕ್ಯಾಥೆಡ್ರಲ್‌ನ ಜೀವಂತ ಇತಿಹಾಸವನ್ನು ಈ ಕಾರ್ಯಕ್ರಮ ಸ್ಮರಿಸುತ್ತದೆ. 2026ರ ಮೇ 25ರಂದು ಆರಂಭವಾಗಿ ಅಕ್ಟೋಬರ್ 14ರವರೆಗೆ ನಡೆಯಲಿರುವ “ಪ್ರಿಮಾಡಾ” ಎಂಬ ಪ್ರಮುಖ ಪ್ರದರ್ಶನದಲ್ಲಿ, ಎಲ್ ಗ್ರೆಕೋ, ವೆಲಾಸ್ಕೆಸ್, ಝುರ್ಬರಾನ್ ಮುಂತಾದ ಕಲಾವಿದರ ಕೃತಿಗಳನ್ನು ಒಳಗೊಂಡಂತೆ 350ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ.

ಜಗದ್ಗುರು XIV ನೇ ಲಿಯೋರವರು ಟೋಲೇಡೋ ಕ್ಯಾಥೆಡ್ರಲ್‌ನಲ್ಲಿ ಪ್ರತಿದಿನ ಆಚರಿಸಲ್ಪಡುವ ಹಿಸ್ಪಾನೋ–ಮೊಜಾರಬಿಕ್ ಲಿಟರ್ಜಿ ಮಹತ್ವವನ್ನು ವಿಶೇಷವಾಗಿ ಉಲ್ಲೇಖಿಸಿದರು. ಈ ಸಂಗೀತ ಮತ್ತು ಆಧ್ಯಾತ್ಮಿಕ ಪರಂಪರೆ, ಕ್ಯಾಥೆಡ್ರಲ್‌ನ ಧ್ವನಿಪರಂಪರೆಯನ್ನು ಪುನರುಜ್ಜೀವನಗೊಳಿಸುವ ಶತಮಾನೋತ್ಸವ ಸಂಗೀತ ಕಾರ್ಯಕ್ರಮದ ಕೇಂದ್ರವಾಗಿದ್ದು, ಧರ್ಮ ಸಭೆಯ ಸಾಮಾಜಿಕ ಮತ್ತು ದಾನಧರ್ಮದ ಸೇವೆಗಳ ಜೊತೆಗೆ ಸಾಗುತ್ತದೆ. ಹೊಸ ಬಗೆಯ ದಾರಿದ್ರ್ಯಗಳಿಗೆ ಪ್ರತಿಕ್ರಿಯಿಸುವಲ್ಲಿ, ಬಡವರನ್ನು ಮರೆಯದಿರಬೇಕೆಂದು ಜಗದ್ಗುರುಗಳು ಸಮುದಾಯವನ್ನು ಪ್ರೋತ್ಸಾಹಿಸಿದರು.

ಈ ಶತಮಾನೋತ್ಸವವು 2026ರ ಅಕ್ಟೋಬರ್ 25ರಿಂದ 2027ರ ಅಕ್ಟೋಬರ್ 27ರವರೆಗೆ ನಡೆಯಲಿರುವ ಜುಬಿಲಿ ವರ್ಷಾಚರಣೆಯೊಂದಿಗೆ ಸಮಾಪ್ತಿಯಾಗಲಿದೆ. ಈ ಅವಧಿಯಲ್ಲಿ ಜಗತ್ತಿನಾದ್ಯಂತದಿಂದ ಬರುವ ವಿಶ್ವಾಸಿಗಳು ಮತ್ತು ಯಾತ್ರಿಕರು ಅನುಗ್ರಹ, ಭೇಟಿಯ ಮತ್ತು ಆಂತರಿಕ ನವೀಕರಣದ ಕಾಲವನ್ನು ಅನುಭವಿಸಲು ಆಹ್ವಾನಿತರಾಗುತ್ತಾರೆ. ಜಗದ್ಗುರು XIVನೇ ಲಿಯೋರವರು ತಮ್ಮ ಆತ್ಮೀಯ ಸಮೀಪತೆಯನ್ನು ಭರವಸೆ ನೀಡಿ, ಟೋಲೇಡೋ ನಗರ ಮತ್ತು ಕ್ಯಾಥೆಡ್ರಲ್‌ನ ರಕ್ಷಕಿಯಾಗಿರುವ ತಾಬೆರ್ನಾಕಲ್‌ನ ಧನ್ಯ ಮರಿಯಮ್ಮನವರ ರಕ್ಷಣೆಯನ್ನು ಪ್ರಾರ್ಥಿಸಿದರು.

29 ಜನವರಿ 2026, 00:00