ಜಗದ್ಗರುಗಳು ನಿಯೊ ಕ್ಯಾಟಕ್ಯೂಮೆನಲ್ ಹಾದಿಯಲ್ಲಿ: ಐಕ್ಯದ ನಿರ್ಮಾತೃಗಳೂ ಸಾಕ್ಷಿಗಳೂ ಆಗಿರಿ
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನಲ್ಲಿ ನಿಯೊ ಕ್ಯಾಟಕ್ಯೂಮೆನಲ್ ನ ನಾಯಕರ ಮತ್ತು ಸದಸ್ಯರನ್ನು ಭೇಟಿಯಾಗಿ, ಜಗತ್ತಿನಾದ್ಯಂತ ಸುವಾರ್ತೆಯನ್ನು ಸಾರುವಲ್ಲಿ ಅವರು ನೀಡುತ್ತಿರುವ ಸಾಕ್ಷ್ಯ ಮತ್ತು ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿದರು. ಸಂತೋಷ ಮತ್ತು ವಿನಯದಲ್ಲಿ ಮುಂದುವರಿಯುತ್ತಾ, ತಮ್ಮೊಳಗೆ ಮುಚ್ಚಿಕೊಳ್ಳದೆ, ಚರ್ಚಿನೊಳಗೆ ಐಕ್ಯದ ನಿರ್ಮಾತೃಗಳಾಗಿಯೂ ಸಾಕ್ಷಿಗಳಾಗಿಯೂ ಇರುವಂತೆ ಅವರು ಅವರನ್ನು ಪ್ರೋತ್ಸಾಹಿಸಿದರು. ಧರ್ಮ ಸಭೆಯು ನಿಮ್ಮೊಂದಿಗೆ ನಡೆದು, ನಿಮಗೆ ಬೆಂಬಲ ನೀಡುತ್ತಿದ್ದು, ನಿಮ್ಮ ಸೇವೆಗೆ ಕೃತಜ್ಞವಾಗಿದೆ ಎಂದು ಜಗದ್ಗರುಗಳು ಹೇಳಿದರು.
ನಿಯೊ ಕ್ಯಾಟಕ್ಯೂಮೆನಲ್ ಹಾದಿಯ ಗುರಿ ಧರ್ಮ ಸಭೆಯ ಜೀವನಕ್ಕೆ ಅಮೂಲ್ಯ ಕೊಡುಗೆ ಎಂದು ಜಗದ್ಗರುಗಳು ಶ್ಲಾಘಿಸಿದರು. ವಿಶೇಷವಾಗಿ, ಆತ್ಮದ ಪ್ರೇರಣೆಗೆ ಸ್ಪಂದಿಸಿ, ಸಾಮಾನ್ಯ ಜೀವನದ ಭದ್ರತೆಯನ್ನು ಬಿಟ್ಟು ದೂರದ ಮತ್ತು ಕಷ್ಟಕರ ಪ್ರದೇಶಗಳಿಗೂ ಪಾಲನ ಸೇವೆಗೆ ಹೊರಡುವ ಕುಟುಂಬಗಳನ್ನು ಅವರು ಪ್ರಶಂಶಿಸಿದರು. ಕುಟುಂಬಗಳು, ಧರ್ಮೋಪದೇಶ ತರಿಗತಿಗಾರರು ಮತ್ತು ಗುರುಗಳಿಂದ ರೂಪುಗೊಂಡ ಸಂಚಾರಿ ತಂಡಗಳು, ಸುವಾರ್ತಾ ಕಾರ್ಯದ ಮೂಲಕ ನಂಬಿಕೆಯನ್ನು ಮರುಜಾಗೃತಗೊಳಿಸಿ, ಯೇಸು ಕ್ರಿಸ್ತನನ್ನು ತಿಳಿಯದವರಲ್ಲೂ ಮತ್ತು ನಂಬಿಕೆಯನ್ನು ಮರೆತ ದೀಕ್ಷಾಸ್ನಾನ ಪಡೆದವರಲ್ಲೂ ವಿಶ್ವಾಸದ ಆನಂದವನ್ನು ಪುನರ್ಜೀವಂತಗೊಳಿಸುತ್ತಿವೆ ಎಂದು ಜಗದ್ಗರುಗಳು ಹೇಳಿದರು.
ಅದೇ ಸಮಯದಲ್ಲಿ, ಆಧ್ಯಾತ್ಮಿಕ ಮತ್ತು ಧರ್ಮಸಭೆಯ ಜೀವನದಲ್ಲಿ ಸದಾ ಇರುವ ಕೆಲವು ಅಪಾಯಗಳನ್ನು ಗುರುತಿಸಲು ಆಂತರಿಕ ಎಚ್ಚರಿಕೆ ಮತ್ತು ವಿವೇಕ ಅಗತ್ಯವೆಂದು ಜಗದ್ಗುರುಗಳು ಎಚ್ಚರಿಸಿದರು. ದೀಕ್ಷಾಸ್ನಾನವು ನಮ್ಮನ್ನು ಕ್ರಿಸ್ತನೊಂದಿಗೆ ಐಕ್ಯಗೊಳಿಸಿ, ಒಂದೇ ದೇಹ ಮತ್ತು ಒಂದೇ ಕುಟುಂಬದ ಜೀವಂತ ಅಂಗಗಳಾಗಿಸುತ್ತದೆ ಎಂದು ಅವರು ನೆನಪಿಸಿದರು. ಎಲ್ಲ ವರ್ಚಸ್ಸುಗಳು ದೇವರ ರಾಜ್ಯ ಮತ್ತು ಕ್ರಿಸ್ತನ ಒಂದೇ ಧರ್ಮ ಸಭೆಯ ಸೇವೆಗೆ ಇರಬೇಕು ಪ್ರೀತಿಯೇ ಎಲ್ಲ ದಾನಗಳನ್ನು ಪೂರ್ಣಗೊಳಿಸಿ ಐಕ್ಯತೆ ತರುತ್ತದೆ ಎಂದು ಅವರು ಹೇಳಿದರು.
ನಿಯೊ ಕ್ಯಾಟಕ್ಯೂಮೆನಲ್ ಹಾದಿಯ ಗುರಿ ವಿಶೇಷವಾದದ್ದಾದರೂ, ಅದು ಏಕೈಕವಲ್ಲ ಅದರ ಫಲವು ಧರ್ಮ ಸಭೆಯ ಇತರ ದಾನಗಳೊಂದಿಗೆ ಐಕ್ಯದಲ್ಲಿದ್ದಾಗಲೇ ಬೆಳೆಯುತ್ತದೆ ಎಂದು ಜಗದ್ಗರುಗಳು ಸ್ಪಷ್ಟಪಡಿಸಿದರು. ಕಠೋರತೆ ಮತ್ತು ನೈತಿಕತಾವಾದವನ್ನು ತಪ್ಪಿಸಿ, ಪ್ರತಿಯೊಬ್ಬರ ಜೀವನಯಾತ್ರೆ ಮತ್ತು ಅಂತಃಕರಣವನ್ನು ಗೌರವಿಸುತ್ತಾ ಸುವಾರ್ತೆಯನ್ನು ಘೋಷಿಸುವಂತೆ ಅವರು ಕರೆ ನೀಡಿದರು. ಸುವಾರ್ತಾ ಪ್ರಚಾರ ಮತ್ತು ಸೇವಾ ಕಾರ್ಯಗಳು ಸದಾ ಸ್ವಾತಂತ್ರ್ಯದಿಂದ ತುಂಬಿರಬೇಕು ಅವು ಅಪರಾಧಬೋಧನೆ ಮತ್ತು ಭಯಕ್ಕಿಂತ ಆಂತರಿಕ ಮುಕ್ತಿಯನ್ನು ತರುವುದು ಅಗತ್ಯವೆಂದು ಜಗದ್ಗುರುಗಳು ಹೇಳಿದರು.
ಭಾಷಣದ ಅಂತ್ಯದಲ್ಲಿ, ಜಗದ್ಗುರು XIVನೇ ಲಿಯೋರವರು ಆಶೀರ್ವಾದ ನೀಡುತ್ತಾ, ಧರ್ಮ ಸಭೆಗೂ ಜಗತ್ತಿಗೂ ನೀಡುತ್ತಿರುವ ಅವರ ಸಂತೋಷಭರಿತ ಸಾಕ್ಷ್ಯ, ನಿಷ್ಠಾವಂತ ಸೇವೆ ಮತ್ತು ಬದ್ಧತೆಗೆ ಧನ್ಯವಾದ ಅರ್ಪಿಸಿದರು. ಅದೇ ಉತ್ಸಾಹ ಮತ್ತು ಆನಂದದೊಂದಿಗೆ ತಮ್ಮ ಗುರಿ ಮುಂದುವರಿಸಬೇಕೆಂದು ಅವರು ಅವರನ್ನು ಪ್ರೇರೇಪಿಸಿದರು.
