ಜಗದ್ಗುರುಗಳ ವಿಶ್ವ ರೋಗಿಗಳ ದಿನದ ಸಂದೇಶ: ಇನ್ನೊಬ್ಬರ ನೋವನ್ನು ಹೊತ್ತುಕೊಳ್ಳುವ ಪ್ರೀತಿ
ವ್ಯಾಟಿಕನ್ ವರದಿ
ಜಗದ್ಗುರು XIV ನೇ ಲಿಯೋರವರು 2026ರ ಫೆಬ್ರವರಿ 11ರಂದು ಆಚರಿಸಲ್ಪಡುವ 34ನೇ ವಿಶ್ವ ರೋಗಿಗಳ ದಿನದ ಸಂದೇಶದ ವಿಷಯವಾಗಿ “ಇನ್ನೊಬ್ಬರ ನೋವನ್ನು ಹೊತ್ತುಕೊಂಡು ಪ್ರೀತಿಸುವ ಸಮಾರಿಯದವನ ಕರುಣೆ” ಎಂಬ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಂದೇಶದಲ್ಲಿ ಅವರು ಉತ್ತಮ ಸಮಾರಿಯದವನ ರೂಪಕವನ್ನು ಆಳವಾಗಿ ಚಿಂತಿಸಲು ವಿಶ್ವಾಸಿಗಳನ್ನು ಆಹ್ವಾನಿಸುತ್ತಾರೆ. ಈ ಚಿತ್ರವು ದಯೆಯ ಸೌಂದರ್ಯವನ್ನು ಮರುಕಂಡುಕೊಳ್ಳಲು ಹಾಗೂ ಕರುಣೆಯ ಸಾಮಾಜಿಕ ಆಯಾಮವನ್ನು ಅರಿತುಕೊಳ್ಳಲು ಸದಾ ಪ್ರಸ್ತುತ ಮತ್ತು ಅಗತ್ಯವೆಂದು ಜಗದ್ಗುರುಗಳು ಹೇಳಿದ್ದಾರೆ.
ಸಂತ ಲೂಕನ ಸುವಾರ್ತೆಯಲ್ಲಿ ಯೇಸು ಒಳ್ಳೆಯ ಸಮಾರಿಯದವನ ಕಥೆಯನ್ನು ಹೇಳುವ ಮೂಲಕ “ಯಾರು ನನ್ನ ನೆರೆಯವರು?” ಎಂಬ ಪ್ರಶ್ನೆಗೆ ಉತ್ತರಿಸುತ್ತಾರೆ. ದೋಚಲ್ಪಟ್ಟು ಗಾಯಗೊಂಡ ವ್ಯಕ್ತಿಯನ್ನು ಯಾಜಕ ಮತ್ತು ಲೇವಿಯನು ನಿರ್ಲಕ್ಷ್ಯಿಸಿದರೆ, ಸಮಾರಿಯದವನು ಮಾತ್ರ ಅವನ ಮೇಲೆ ಕರುಣೆ ತೋರಿಸಿ, ಅವನ ಗಾಯಗಳಿಗೆ ಮದ್ದು ಹಚ್ಚಿ, ಆಶ್ರಯ ನೀಡುತ್ತಾನೆ. ಈ ಕಥೆಯ ಬೆಳಕಿನಲ್ಲಿ, ಇತರರ ನೋವನ್ನು ಗಮನಿಸಿ ಹತ್ತಿರ ಹೋಗಿ ಸಹಾಯ ಮಾಡುವುದೇ ನಿಜವಾದ ಪ್ರೀತಿಯೆಂದು ಜಗದ್ಗುರುಗಳು ಒತ್ತಿ ಹೇಳಿದ್ದಾರೆ.
ಜಗದ್ಗುರು XIV ನೇ ಲಿಯೋರವರು ತಮ್ಮ ಸಂದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ: ಹತ್ತಿರತೆ ಮತ್ತು ಸಾನ್ನಿಧ್ಯವನ್ನು ನೀಡುವ ಆನಂದ, ರೋಗಿಗಳ ಆರೈಕೆಯಲ್ಲಿನ ಹಂಚಿಕೊಂಡ ಹೊಣೆಗಾರಿಕೆ, ಮತ್ತು ದೇವರ ಪ್ರೀತಿಯಿಂದ ಪ್ರೇರಿತರಾಗಿ ಸ್ವತಃ ನಮ್ಮನ್ನೂ ನಮ್ಮ ನೆರೆಯವರನ್ನೂ ಭೇಟಿಯಾಗುವುದು. ಪ್ರೀತಿ ಎಂದರೆ ನಿಷ್ಕ್ರಿಯವಲ್ಲ ಅದು ಇತರರ ಕಡೆಗೆ ಹೆಜ್ಜೆ ಇಡುವ ಕ್ರಿಯಾಶೀಲ ಮನೋಭಾವವಾಗಿದೆ ಎಂದು ಅವರು ಹೇಳಿದ್ದಾರೆ.
ರೋಗಿಗಳ ಆರೈಕೆ ವೈಯಕ್ತಿಕ ಕರ್ತವ್ಯವಷ್ಟೇ ಅಲ್ಲ, ಅದು ಧರ್ಮ ಸಭೆಯ ಮೂಲಭೂತ ಮಿಷನ್‌ನ ಭಾಗವೆಂದು ಜಗದ್ಗುರುಗಳು ಸ್ಪಷ್ಟಪಡಿಸಿದ್ದಾರೆ. ತಮ್ಮ ಪೆರು ದೇಶದ ಸೇವೆಯ ಅನುಭವವನ್ನು ನೆನಪಿಸಿಕೊಂಡ ಅವರು, ಕುಟುಂಬದ ಸದಸ್ಯರು, ಆರೋಗ್ಯ ಕಾರ್ಯಕರ್ತರು, ಧಾರ್ಮಿಕ ಸೇವಕರು ಮತ್ತು ಅನೇಕ ಸಾಮಾನ್ಯ ಜನರು ಸಮಾರಿಯಾದವನಂತೆ ಕರುಣೆ ತೋರಿಸುತ್ತಿರುವುದನ್ನು ಸಾಕ್ಷ್ಯಪಡಿಸಿದ್ದಾರೆ. ಈ ರೀತಿಯ ಸೇವೆ ಸಂಬಂಧಗಳ ಜಾಲದಲ್ಲಿ ಬೆಳೆಯುವ ಸಾಮಾಜಿಕ ಕರುಣೆಯಾಗಿದೆ.
ದೇವರನ್ನು ಸಂಪೂರ್ಣ ಹೃದಯದಿಂದ ಪ್ರೀತಿಸುವುದು ಮತ್ತು ನೆರೆಯವರನ್ನು ನಮ್ಮಂತೆ ಪ್ರೀತಿಸುವುದು ಎಂಬ ದ್ವಿತೀಯ ಆಜ್ಞೆಯ ಮೂಲಕ, ದೇವರ ಮೇಲಿನ ಪ್ರೀತಿ ಮಾನವ ಸಂಬಂಧಗಳಲ್ಲಿ ವ್ಯಕ್ತವಾಗಬೇಕು ಎಂದು ಜಗದ್ಗರುಗಳು ಹೇಳಿದ್ದಾರೆ. ನೆರೆಯವರಿಗೆ ಸೇವೆ ಮಾಡುವುದೇ ದೇವರನ್ನು ಕ್ರಿಯೆಯ ಮೂಲಕ ಪ್ರೀತಿಸುವುದೆಂದು ಅವರು ನೆನಪಿಸಿದ್ದಾರೆ. ಮಾನವನು ಒಂಟಿತನದಲ್ಲಿ ಅಲ್ಲ, ದೇವರೊಂದಿಗೆ ಮತ್ತು ಇತರರೊಂದಿಗೆ ಸಂಬಂಧದಲ್ಲಿರುವಾಗಲೇ ತನ್ನ ಮೌಲ್ಯವನ್ನು ಕಂಡುಕೊಳ್ಳುತ್ತಾನೆ ಎಂಬುದನ್ನೂ ಅವರು ಸ್ಮರಿಸಿದ್ದಾರೆ.
ಕೊನೆಗೆ, ಮಾನವಕೋಟಿಯ ಗಾಯಗಳಿಗೆ ನಿಜವಾದ ಔಷಧಿ ಸಹೋದರ ಪ್ರೀತಿಯ ಮೇಲೆ ಆಧಾರಿತ ಜೀವನಶೈಲಿಯೇ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು. ರೋಗಿಗಳ ಆರೋಗ್ಯದ ಬಗ್ಗೆ ಮಾತೆ ಮರಿಯಮ್ಮನಿಗೆ ಪ್ರಾರ್ಥನೆ ಸಲ್ಲಿಸಲು ಅವರು ವಿಶ್ವಾಸಿಗಳನ್ನು ಆಹ್ವಾನಿಸಿ, ರೋಗಿಗಳು, ಅವರ ಕುಟುಂಬಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಧರ್ಮಾಧಿಕಾರಿಗಳ ಸೇವಕರಿಗೆ ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡುತ್ತಾ ಸಂದೇಶವನ್ನು ಮುಕ್ತಾಯಗೊಳಿಸಿದ್ದಾರೆ.
