ಅಲೆಪ್ಪೊದಲ್ಲಿ ಸಿರಿಯನ್ ಸೇನೆಯೊಬ್ಬ ಸದಸ್ಯನು ಪಿಕ್ - ಅಪ್ ಟ್ರಕ್ ನ ಮೇಲೆ ನಿಂತಿರುವುದು. ಅಲೆಪ್ಪೊದಲ್ಲಿ ಸಿರಿಯನ್ ಸೇನೆಯೊಬ್ಬ ಸದಸ್ಯನು ಪಿಕ್ - ಅಪ್ ಟ್ರಕ್ ನ ಮೇಲೆ ನಿಂತಿರುವುದು. 

ಪೋಪ್ ಇರಾನ್ ಮತ್ತು ಸಿರಿಯಾದಲ್ಲಿ ಸಹನೆ ಮತ್ತು ಸಂವಾದಕ್ಕೆ ಕರೆ ನೀಡಿದರು

ಭಾನುವಾರದ ತ್ರಿಕಾಲ ಪ್ರಾರ್ಥನೆಯ ಅಂತ್ಯದಲ್ಲಿ, ಜಗದ್ಗುರು ಲಿಯೋರವರು ಪ್ರತಿಭಟನೆಗಳು ಮುಂದುವರಿದಿರುವ ಇರಾನ್‌ನಲ್ಲಿ ಮತ್ತು ಅಲೆಪ್ಪೋ ನಗರದಲ್ಲಿ ಕುರ್ಡಿಶ್ ಪಡೆಗಳೊಂದಿಗೆ ಸೇನೆ ಸಂಘರ್ಷ ನಡೆಸುತ್ತಿರುವ ಸಿರಿಯಾದಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು. ಜೊತೆಗೆ, ಉಕ್ರೇನ್‌ನ ನಾಗರಿಕರ ಮೇಲೆ ನಡೆದ ಇತ್ತೀಚಿನ ರಷ್ಯಾದ ದಾಳಿಗಳನ್ನು ಅವರು ಕಠಿಣವಾಗಿ ಖಂಡಿಸಿದರು.

ವ್ಯಾಟಿಕನ್ ವರದಿ

ಭಾನುವಾರ, ಜನವರಿ 11ರಂದು ತ್ರಿಕಾಲ ಪ್ರಾರ್ಥನೆಯ ನಂತರ, ಜಗದ್ಗುರು ಲಿಯೋರವರು ಶಾಂತಿ ಮತ್ತು ಸಂವಾದಕ್ಕೆ ಕರೆ ನೀಡಿದರು. ವಿಶೇಷವಾಗಿ ಮಧ್ಯಪೂರ್ವದ ಇರಾನ್ ಮತ್ತು ಸಿರಿಯಾ ಎಂಬ ಎರಡು ದೇಶಗಳ ಬಗ್ಗೆ ಮಾತನಾಡುತ್ತಾ, ನಿರಂತರ ಉದ್ವಿಗ್ನತೆಗಳು ಅನೇಕ ಜನರ ಸಾವಿಗೆ ಕಾರಣವಾಗುತ್ತಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಡಿಸೆಂಬರ್ ಅಂತ್ಯದಿಂದ ಇರಾನ್‌ನಲ್ಲಿ ಆಡಳಿತದ ವಿರುದ್ಧ ಹೊಸ ಪ್ರತಿಭಟನೆಗಳು ಆರಂಭಗೊಂಡಿದ್ದು, ಅವು ದೇಶದ ಅನೇಕ ಪ್ರಾಂತ್ಯಗಳಿಗೆ ವ್ಯಾಪಿಸಿಕೊಂಡಿವೆ. ಈ ಪ್ರತಿಭಟನೆಗಳನ್ನು ಭದ್ರತಾ ಪಡೆಗಳು ಕಠಿಣವಾಗಿ ಹತ್ತಿಕ್ಕಿರುವುದಾಗಿ ಜಗದ್ಗುರುಗಳು ಸ್ಮರಿಸಿದರು. ಸಿರಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಉತ್ತರದ ಅಲೆಪ್ಪೋ ನಗರದಲ್ಲಿ ಸೇನೆ ಮತ್ತು ಕುರ್ಡಿಶ್ ಪಡೆಗಳ ನಡುವೆ ವ್ಯಾಪಕ ಹೋರಾಟಗಳು ನಡೆದಿವೆ.

ಈ ಎರಡು ದೇಶಗಳ ಪರಿಸ್ಥಿತಿಯನ್ನು ಉಲ್ಲೇಖಿಸಿ, ಸಂಪೂರ್ಣ ಸಮಾಜದ ಸಾಮಾನ್ಯ ಹಿತಕ್ಕಾಗಿ ಸಹನೆಹೊಂದಿದ ಸಂವಾದ ಮತ್ತು ಶಾಂತಿಯನ್ನು ಬೆಳೆಸಲಾಗಲಿ ಎಂದು ಜಗದ್ಗರುಗಳು ತಮ್ಮ ಆಶಯ ಮತ್ತು ಪ್ರಾರ್ಥನೆಯನ್ನು ವ್ಯಕ್ತಪಡಿಸಿದರು.

ಇದಲ್ಲದೆ, ರಷ್ಯಾದ ಬಾಂಬ್ ದಾಳಿಗಳಿಂದ ಬಳಲುತ್ತಿರುವ ಉಕ್ರೇನ್ ಜನರ ಸಂಕಷ್ಟವನ್ನು ಜಗದ್ಗುರು ಲಿಯೋರವರು ನೆನಪಿಸಿಕೊಂಡರು. ವಿಶೇಷವಾಗಿ ಶಕ್ತಿ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿರುವ ಈ ದಾಳಿಗಳು ತೀವ್ರ ಶೀತದ ನಡುವೆ ನಾಗರಿಕ ಜನಸಂಖ್ಯೆಗೆ ಭಾರೀ ಹಾನಿ ಉಂಟುಮಾಡುತ್ತಿರುವುದಾಗಿ ಅವರು ವಿಷಾದಿಸಿದರು.

ನೋವು ಅನುಭವಿಸುತ್ತಿರುವ ಎಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ. ಹಿಂಸೆ ಅಂತ್ಯವಾಗಲಿ ಮತ್ತು ಶಾಂತಿಯನ್ನು ಸಾಧಿಸಲು ಇನ್ನಷ್ಟು ತೀವ್ರ ಪ್ರಯತ್ನಗಳು ನಡೆಯಲಿ ಎಂದು ಜಗದ್ಗರು ಲಿಯೋ ತಮ್ಮ ಮನವಿಯನ್ನು ಪುನರುಚ್ಚರಿಸಿದರು.

11 ಜನವರಿ 2026, 22:17