ಜಗದ್ಗುರುಗಳು 20 ಮಕ್ಕಳಿಗೆ ದೀಕ್ಷಾಸ್ನಾನ ನೀಡಿದರು: ಈಗ ಅವರಿಗೆ ಜೀವನದ ಅರ್ಥ ದೊರೆತಿದೆ
ವ್ಯಾಟಿಕನ್ ವರದಿ
45 ವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದಿರುವ ಪರಂಪರೆಯನ್ನು ಮುಂದುವರಿಸುತ್ತಾ, ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ನೌಕರರ 20 ಮಕ್ಕಳಿಗೆ ಸಿಸ್ಟಿನ್ ಚಾಪೆಲ್‌ನಲ್ಲಿ ದೀಕ್ಷಾಸ್ನಾನ ನೀಡಿದರು. ಪ್ರಭುವಿನ ದೀಕ್ಷಾಸ್ನಾನದ ಹಬ್ಬದ ದಿನ ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ ಈ ಸಂಸ್ಕಾರ ನೆರವೇರಿಸಲಾಯಿತು. ತಮ್ಮ ಪೂರ್ವಾಧಿಕಾರಿಗಳ ಹಾದಿಯನ್ನು ಅನುಸರಿಸುತ್ತಾ, ಜಗದ್ಗುರು ಲಿಯೋರವರು ಈ ಪವಿತ್ರ ಆಚರಣೆಯ ಮೂಲಕ ದೇವರ ಕೃಪೆಯ ಅರ್ಥವನ್ನು ಮತ್ತೊಮ್ಮೆ ಎತ್ತಿ ತೋರಿಸಿದರು.
ತಮ್ಮ ಪ್ರಭೋಧನೆಯಲ್ಲಿ ಜಗದ್ಗುರುಗಳು, ದೇವರು ಮಾನವನಾಗಿ ಭೂಮಿಗೆ ಇಳಿದು ಬಂದು ನಮ್ಮ ಪ್ರತಿಯೊಬ್ಬರನ್ನೂ ವಿನಮ್ರ ಹಾಗೂ ತೆರೆದ ಹೃದಯದಿಂದ ಭೇಟಿಯಾಗುವವನಾಗಿದ್ದಾನೆ ಎಂದು ಧ್ಯಾನಿಸಿದರು. ಯೇಸು ಕ್ರಿಸ್ತನಲ್ಲೇ ರಕ್ಷಣೆಯ ವಾಕ್ಯ ನಮ್ಮ ಮುಂದೆ ಬಹಿರಂಗವಾಗುತ್ತದೆ ಎಂದು ಅವರು ತಿಳಿಸಿದರು. ಪಾಪಿಗಳ ನಡುವೆ ನಿಂತಿರುವ ಪವಿತ್ರನಾಗಿ ಯೇಸು ನಮ್ಮಿಂದ ದೂರವಿರದೆ, ಸಂಪೂರ್ಣ ಮಾನವತ್ವವನ್ನು ಸ್ವೀಕರಿಸಿದವರು ಎಂದು ಜಗದ್ಗರುಗಳು ವಿವರಿಸಿದರು.
ಜೋರ್ಧಾನ್ ನದಿಯಲ್ಲಿ ಯೇಸು ದೀಕ್ಷಾಸ್ನಾನ ಸ್ವೀಕರಿಸಿದುದು ನೀತಿ ಪೂರ್ಣಗೊಳಿಸುವುದಕ್ಕಾಗಿ ಎಂಬುದರ ಅರ್ಥವನ್ನು ಜಗದ್ಗುರುಗಳು ವಿವರಿಸುತ್ತಾ, ಅದರಲ್ಲಿ ಮರಣ ಮತ್ತು ಪುನರುತ್ಥಾನ, ಕ್ಷಮೆ ಮತ್ತು ಸಮಾಗಮದ ಹೊಸ ಸಂಕೇತ ಅಡಗಿದೆ ಎಂದು ಹೇಳಿದರು. ಇದೇ ಸಂಕೇತವನ್ನು ಇಂದು ಈ 20 ಮಕ್ಕಳು ದೀಕ್ಷಾಸ್ನಾನದ ಮೂಲಕ ಸ್ವೀಕರಿಸಿದ್ದಾರೆ. ದೇವರು ಅವರನ್ನು ಪ್ರೀತಿಸುತ್ತಾರೆ, ಅವರು ಕ್ರೈಸ್ತರಾಗುತ್ತಾರೆ ಮತ್ತು ನಮ್ಮ ಸಹೋದರ-ಸಹೋದರಿಯರಾಗುತ್ತಾರೆ ಎಂದು ಜಗದ್ಗರುಗಳು ಹೇಳಿದರು.
ಪೋಷಕರು ಮಕ್ಕಳಿಗೆ ಜೀವನವನ್ನು ನೀಡಿದಂತೆ, ಈಗ ಅವರಿಗೆ ಜೀವನಕ್ಕೆ ಅರ್ಥ ನೀಡುವ ವಿಶ್ವಾಸವನ್ನು ಕೊಡುತ್ತಾರೆ ಎಂದು ಜಗದ್ಗರುಗಳು ಹೇಳಿದರು. ಆಹಾರ ಮತ್ತು ಬಟ್ಟೆಗಿಂತಲೂ ಮಹತ್ವವಾದುದು ವಿಶ್ವಾಸ, ಏಕೆಂದರೆ ದೇವರೊಂದಿಗೆ ಜೀವನಕ್ಕೆ ರಕ್ಷಣೆಯು ದೊರೆಯುತ್ತದೆ ಎಂದು ಅವರು ಒತ್ತಿಹೇಳಿದರು. ಪೋಷಕರ ಮೂಲಕವೇ ದೇವರ ಪ್ರೀತಿ ಸ್ಪಷ್ಟವಾಗುತ್ತದೆ ಎಂದು ಜಗದ್ಗರುಗಳು ಹೇಳಿದರು.
ಕೊನೆಯಲ್ಲಿ, ಮಕ್ಕಳ ಜೀವನದಲ್ಲಿ ಮುಂದೆ ಬರುವ ದಿನಗಳನ್ನು ನೆನಪಿಸಿಕೊಂಡು, ಕುಟುಂಬಗಳಿಗೆ ಧೈರ್ಯ ಮತ್ತು ಸ್ಥೈರ್ಯ ನೀಡುವಂತೆ ಸಂಸ್ಕಾರ ಸಹಾಯ ಮಾಡಲಿ ಎಂದು ಜಗದ್ಗರುಗಳು ಪ್ರಾರ್ಥಿಸಿದರು. ಪವಿತ್ರ ಜಲ, ಬಿಳಿ ವಸ್ತ್ರ ಮತ್ತು ಬೆಳಗುವ ದೀಪ ಇವು ಹೊಸ ಜೀವನದ ಸಂಕೇತಗಳೆಂದು ವಿವರಿಸಿ, ಈ ವಿಶ್ವಾಸದ ಪಯಣವನ್ನು ಸಂತೋಷದಿಂದ ಜೀವನಪೂರ್ತಿ ಮುಂದುವರಿಸಲಿ ಎಂದು ಜಗದ್ಗರು XIVನೇ ಲಿಯೋರವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.
