ಒಬ್ಬ ಒಲಿಂಪಿಕ್ ಕ್ರೀಡಾಪಟು ಅಭ್ಯಾಸ ಅಧಿವೇಶನದಲ್ಲಿ ಭಾಗವಹಿಸುತ್ತಾನೆ. ಒಬ್ಬ ಒಲಿಂಪಿಕ್ ಕ್ರೀಡಾಪಟು ಅಭ್ಯಾಸ ಅಧಿವೇಶನದಲ್ಲಿ ಭಾಗವಹಿಸುತ್ತಾನೆ.  (AFP or licensors)

2026 ಚಳಿಗಾಲದ ಒಲಿಂಪಿಕ್ಸ್‌ಗೂ ಮುನ್ನ ಒಲಿಂಪಿಕ್ ವಿರಾಮಕ್ಕೆ ಜಗದ್ಗುರುಗಳ ಕರೆ

ಫೆಬ್ರವರಿ 6ರಿಂದ ಆರಂಭವಾಗಲಿರುವ 2026ರ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟಗಳ ಹಿನ್ನೆಲೆಯಲ್ಲಿ, ಸಂಘರ್ಷದಲ್ಲಿರುವ ರಾಷ್ಟ್ರಗಳು ಪರಂಪರಾಗತ ಒಲಿಂಪಿಕ್ ವಿರಾಮವನ್ನು ಗೌರವಿಸಬೇಕೆಂದು ಜಗದ್ಗುರು XIVನೇ ಲಿಯೋರವರು ಮನವಿ ಮಾಡಿದ್ದಾರೆ.

ವ್ಯಾಟಿಕನ್ ವರದಿ

 

ಉತ್ತರ ಇಟಲಿಯಲ್ಲಿ ಈ ವಾರದ ನಂತರ ಆರಂಭವಾಗಲಿರುವ ಮಿಲಾನೋ–ಕೋರ್ಟಿನಾ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟಗಳ ಸಂದರ್ಭದಲ್ಲಿ, ಪ್ರಾಚೀನ ಒಲಿಂಪಿಕ್ ವಿರಾಮ (ಒಲಿಂಪಿಕ್ ಟ್ರ್ಯೂಸ್) ಎಂಬ ಪರಂಪರೆಯನ್ನು ಗೌರವಿಸಬೇಕೆಂದು ಜಗದ್ಗುರು XIVನೇ ಲಿಯೋರವರು ಮನವಿ ಮಾಡಿದ್ದಾರೆ.

ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರುಗಳು, ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳು ಸಹೋದರತ್ವದ ಮಹತ್ವದ ಸಂದೇಶವನ್ನು ಪ್ರತಿನಿಧಿಸುವುದರ ಜೊತೆಗೆ, ಶಾಂತಿಪೂರ್ಣ ಜಗತ್ತಿನ ಭರವಸೆಯನ್ನು ಪುನರ್ಜೀವನಗೊಳಿಸುತ್ತವೆ ಎಂದು ಹೇಳಿದರು.

ಇದು ಒಲಿಂಪಿಕ್ ವಿರಾಮದ ಅರ್ಥವೂ ಹೌದು ಕ್ರೀಡಾಕೂಟಗಳ ಆಯೋಜನೆಯೊಂದಿಗೆ ಸಾಗುವ ಅತ್ಯಂತ ಪ್ರಾಚೀನ ಸಂಪ್ರದಾಯ ಇದಾಗಿದೆ, ಎಂದು ಅವರು ಹೇಳಿದರು.

ಒಲಿಂಪಿಕ್ ವಿರಾಮವು ಕ್ರಿ.ಪೂ. 776ರಲ್ಲಿ ಪ್ರಾಚೀನ ಗ್ರೀಸ್‌ನಲ್ಲಿ ಆರಂಭವಾದ ಪರಂಪರೆಯಾಗಿದ್ದು, ಆ ಕಾಲದಲ್ಲಿ ರಾಜ್ಯಗಳು ಕ್ರೀಡಾಕೂಟಗಳ ಮೊದಲು ಮತ್ತು ಅವುಗಳ ನಡೆಯುವ ಅವಧಿಯಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಇಳಿಸಿ ಯುದ್ಧವನ್ನು ನಿಲ್ಲಿಸುತ್ತಿದ್ದವು.

ಜನಾಂಗಗಳ ನಡುವೆ ಶಾಂತಿಗೆ ಹೃತ್ಪೂರ್ವಕವಾಗಿ ಕಾಳಜಿ ವಹಿಸುವವರು ಮತ್ತು ಅಧಿಕಾರ ಸ್ಥಾನದಲ್ಲಿರುವ ಎಲ್ಲರೂ ಈ ಅವಕಾಶವನ್ನು ಬಳಸಿಕೊಂಡು ಉದ್ವಿಗ್ನತೆಯನ್ನು ತಗ್ಗಿಸಲು ಹಾಗೂ ಸಂವಾದವನ್ನು ಹುಡುಕಲು ಸ್ಪಷ್ಟ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬುದು ನನ್ನ ಭರವಸೆ ಎಂದು ಜಗದ್ಗುರುಗಳು ಹೇಳಿದರು.

2026ರ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟಗಳು ಫೆಬ್ರವರಿ 6ರಂದು ಉತ್ತರ ಪೂರ್ವ ಇಟಲಿಯಲ್ಲಿ ಆರಂಭಗೊಂಡು ಫೆಬ್ರವರಿ 26ರವರೆಗೆ ನಡೆಯಲಿವೆ.

ಈಗಾಗಲೇ ಜಗದ್ಗುರು XIVನೇ ಲಿಯೋರವರು ಒಲಿಂಪಿಕ್ಸ್‌ಗೆ ಮುನ್ನ ನಡೆದ ಕಾರ್ಯಕ್ರಮಗಳಿಗೆ ಎರಡು ಸಂದೇಶಗಳನ್ನು ಕಳುಹಿಸಿದ್ದು, ಕ್ರೀಡಾಪಟುಗಳು ಮತ್ತು ಸ್ವಯಂಸೇವಕರು ಕ್ರೀಡೆಯ ನಿಜವಾದ ಮೌಲ್ಯಗಳನ್ನು ಅಪ್ಪಿಕೊಳ್ಳಬೇಕೆಂದು ಪ್ರೋತ್ಸಾಹಿಸಿದ್ದಾರೆ. ಅವರು ಕ್ರೀಡೆಯ ಮೌಲ್ಯಗಳನ್ನು ನ್ಯಾಯಯುತ ಆಟ, ಪರಸ್ಪರ ಗೌರವ, ತಂಡ ಮನೋಭಾವ ಮತ್ತು ತ್ಯಾಗ, ಜೊತೆಗೆ ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಭೇಟಿಯ ಆನಂದ  ಎಂದು ವಿವರಿಸಿದ್ದಾರೆ.

01 ಫೆಬ್ರವರಿ 2026, 15:11