ಜಗದ್ಗುರು XIVನೇ ಲಿಯೋರವರು ಇಟಲಿಯ ರಾಷ್ಟ್ರೀಯ ಮಿಸೆರಿಕಾರ್ಡಿಯ ಸದಸ್ಯರನ್ನು ಭೇಟಿಯಾಗುತ್ತಾರೆ ಜಗದ್ಗುರು XIVನೇ ಲಿಯೋರವರು ಇಟಲಿಯ ರಾಷ್ಟ್ರೀಯ ಮಿಸೆರಿಕಾರ್ಡಿಯ ಸದಸ್ಯರನ್ನು ಭೇಟಿಯಾಗುತ್ತಾರೆ  (ANSA)

ಜಗದ್ಗರುಗಳು: ಕ್ರೈಸ್ತ ವಿಶ್ವಾಸವು ಪ್ರೀತಿಯ ಸೇವೆಯಲ್ಲಿ ಜೀವಂತವಾಗಿದ್ದು, ಸಮಕಾಲೀನ ಅಗತ್ಯಗಳಿಗೆ ಹೊಂದಿಕೊಳ್ಳುತ್ತದೆ

ಜಗದ್ಗರು XIVನೇ ಲಿಯೋರವರು ಇಟಲಿಯ ಮಿಸೆರಿಕಾರ್ಡಿಯ ರಾಷ್ಟ್ರೀಯ ಒಕ್ಕೂಟದ ಸದಸ್ಯರನ್ನು ಭೇಟಿಯಾಗಿ, ಇಂದಿನ ಕಾಲದ ಅಗತ್ಯಗಳಿಗೆ ಪ್ರತಿಕ್ರಿಯಿಸುವ ದಾನಧರ್ಮದ ಕಾರ್ಯಗಳ ಮೂಲಕ ಕ್ರೈಸ್ತ ವಿಶ್ವಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಾಮಾನ್ಯ ಜನರನ್ನು ಉತ್ತೇಜಿಸಿದರು.

ವ್ಯಾಟಿಕನ್ ವರದಿ

ಇಟಲಿಯ ಮಿಸೆರಿಕಾರ್ಡಿಯ ರಾಷ್ಟ್ರೀಯ ಒಕ್ಕೂಟ ಸಂಸ್ಥೆಯ ಬೇರುಗಳು 13ನೇ ಶತಮಾನಕ್ಕೆ ಸೇರಿವೆ. ಆ ಕಾಲದಲ್ಲಿ ವೆರೋನಾದ ಸಂತ ಪೀಟರ್ ರವರು ಧರ್ಮ ಸಭೆ ಮತ್ತು ಇಟಾಲಿಯನ್ ಸಮಾಜದಲ್ಲಿ ಉಂಟಾದ ಸಂಘರ್ಷಗಳ ಮಧ್ಯೆ ಹಲವಾರು ಸಾಮಾನ್ಯ ಕ್ರೈಸ್ತ ವಿಶ್ವಾಸಿಗಳನ್ನು ಸೇವೆ ಮತ್ತು ಭಕ್ತಿಯ ಮಾರ್ಗಕ್ಕೆ ಕರೆತಂದರು.

ಜಗದ್ಗುರು XIVನೇ ಲಿಯೋರವರು ಶನಿವಾರ ವ್ಯಾಟಿಕನ್‌ನಲ್ಲಿ ಈ ಸ್ವಯಂಸೇವಕ ಸಂಘಟನೆಯ ಸದಸ್ಯರನ್ನು ಭೇಟಿಯಾಗಿ ಮಾತನಾಡಿದರು. ತಮ್ಮ ಭಾಷಣದಲ್ಲಿ ಅವರು ಮಿಸೆರಿಕೋರ್ಡಿಯೆಗಳ ಶತಮಾನಗಳ ಇತಿಹಾಸವನ್ನು ಸ್ಮರಿಸಿ, ಅದು ಆತ್ಮೀಯತೆ, ದಾನಧರ್ಮ ಮತ್ತು ಸಮಕಾಲೀನ ಅಗತ್ಯಗಳಿಗೆ ಸ್ಪಂದಿಸುವ ಮನೋಭಾವದಲ್ಲಿ ಬೇರುಬಿಟ್ಟಿದೆ ಎಂದು ಹೇಳಿದರು.

ಸಂಸ್ಥೆಯ ಆಧಾರವು ಆಧ್ಯಾತ್ಮಿಕತೆಯಲ್ಲಿದೆ ಎಂದು ಜಗದ್ಗುರುಗಳು ಹೇಳಿದರು. ಇದರ ಮೂಲವು ದೀಕ್ಷಾಸ್ನಾನದಲ್ಲಿ ನೆಲೆಯೂರಿದ್ದು, ನೈತಿಕ ಮತ್ತು ತಪಸ್ಸಿನ ಜೀವನಕ್ಕೆ ದಾರಿಯಾಗಿದೆ ಎಂದು ವಿವರಿಸಿದರು. 13ನೇ ಶತಮಾನದಲ್ಲಿ ಇಟಲಿಯಲ್ಲಿ ಆರಂಭವಾದ ಈ ಸೇವಾ ಚಟುವಟಿಕೆ ನಂತರ ಪೋರ್ಚುಗಲ್ ಹಾಗೂ ಅಮೆರಿಕಾದಲ್ಲಿಯೂ ವಿಸ್ತರಿಸಿತು.

ಸಂಸ್ಥೆಯ ಸದಸ್ಯರು ಪ್ರಾರ್ಥನೆ, ಧರ್ಮೋಪದೇಶ ಮತ್ತು ಸಂಸ್ಕಾರ ನಿಷ್ಠೆಯ ಮೂಲಕ ತಮ್ಮ ಕ್ರೈಸ್ತ ರೂಪುಗೊಳ್ಳುವಿಕೆಯನ್ನು ಬೆಳೆಸಬೇಕು ಎಂದು ಜಗದ್ಗುರುಗಳು ಪ್ರೇರೇಪಿಸಿದರು. ವಿಶೇಷವಾಗಿ ಭಾನುವಾರದ ಪವಿತ್ರ ಬಲಿ ಪೂಜೆಯನ್ನು ಮತ್ತು ಅಂಗೀಕಾರಕ್ಕೆ ಮಹತ್ವ ನೀಡಬೇಕು ಎಂದು ಹೇಳಿದರು. ಕರುಣೆಯ ರಕ್ಷಕರು ಎಂಬ ಸಾಮಾನ್ಯ ಸದಸ್ಯರ ಹೊಸ ಉಪಕ್ರಮವನ್ನು ಅವರು ಪ್ರಶಂಸಿಸಿ, ಪರಸ್ಪರ ಜವಾಬ್ದಾರಿ ಮತ್ತು ಏಕತೆಯ ಮನೋಭಾವದಲ್ಲಿ ವಿಶ್ವಾಸಯಾತ್ರೆಯನ್ನು ನಡೆಸಬೇಕೆಂದರು.

ಮಿಸೆರಿಕೋರ್ಡಿಯೆಗಳು ಯುದ್ಧ ಮತ್ತು ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿಯೂ ಸಕ್ರಿಯವಾಗಿವೆ ಎಂದು ಜಗದ್ಗುರುಗಳು ಹೇಳಿದರು. ಅವರು ಕೇವಲ ಮಾಡುವುದರಲ್ಲಿ ಸೀಮಿತರಾಗದೆ, ಇತರರೊಂದಿಗೆ ನಡೆಯುವ ಮೂಲಕ ಪ್ರತಿಯೊಬ್ಬರ ಮಾನ ಮತ್ತು ಕಥೆಯನ್ನು ಗೌರವಿಸುತ್ತಾರೆ ಎಂದು ಹೇಳಿದರು. ಕಾಲದ ಅಗತ್ಯಗಳಿಗೆ ಅನುಗುಣವಾಗಿ ಸದಾ ಹೊಂದಿಕೊಂಡು ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಅವರು ಶ್ಲಾಘಿಸಿದರು.

ಕೊನೆಯಲ್ಲಿ, ಜಗದ್ಗುರು ಲಿಯೋರವರು ಕ್ರೈಸ್ತ ಸಾಮಾನ್ಯರಿಗೆ ದಾನಧರ್ಮದ ಮೂಲಕ ತಮ್ಮ ವಿಶ್ವಾಸವನ್ನು ಉತ್ಸಾಹದಿಂದ ಬದುಕಲು ಕರೆ ನೀಡಿದರು. ಅಧಿಕಾರದ ಮನೋಭಾವವನ್ನು ತೊರೆದು, ದೇವರ ಮಹಿಮೆಗೆ ಮತ್ತು ನೆರೆಯವರ ಹಿತಕ್ಕಾಗಿ ಸರಳತೆ ಹಾಗೂ ಸಂತೋಷದಿಂದ ಸೇವೆ ಸಲ್ಲಿಸಬೇಕು ಎಂದು ಅವರು ಪ್ರೋತ್ಸಾಹಿಸಿದರು.

14 ಫೆಬ್ರವರಿ 2026, 19:49