VATICAN-RELIGION-POPE-MASS

ಜಗದ್ಗುರು ಧಾರ್ಮಿಕ ಸಹೋದರ ಸಹೋದರಿಯರಿಗೆ: ಆಯುಧಗಳ ಗರ್ಜನೆ ಕೇಳಿಬರುವ ಸ್ಥಳಗಳಲ್ಲಿಯೂ ನೀವು ಯೇಸುವಿನ ಸಾಕ್ಷಿಗಳಾಗಿದ್ದೀರಿ

30ನೇ ವಿಶ್ವ ಸಮರ್ಪಿತ ಜೀವನ ದಿನದ ಅಂಗವಾಗಿ ಜಗದ್ಗುರು XIVನೇ ಲಿಯೋರವರು ಪವಿತ್ರ ಬಲಿ ಪೂಜೆಯನ್ನು ಆಚರಿಸಿ, ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿಯೂ ತಮ್ಮ ಅಚಲ ನಂಬಿಕೆಯಲ್ಲಿ ಬದುಕುತ್ತಿರುವ ಸಮರ್ಪಿತ ಪುರುಷರು ಮತ್ತು ಮಹಿಳೆಯರನ್ನು ಪ್ರಶಂಸಿಸಿದರು. ಅವರು ಅವರನ್ನು ಶಾಂತಿಯ ಸಾಧನಗಳಾಗಿ ಹಾಗೂ ಭರವಸೆಯ ಚಿಹ್ನೆಗಳಾಗಿ ಇರಲು ಆಹ್ವಾನಿಸಿದರು.

ವ್ಯಾಟಿಕನ್ ವರದಿ

ಕ್ರಿಸ್ತನನ್ನು ಇನ್ನಷ್ಟು ಸಮೀಪದಿಂದ ಅನುಸರಿಸುವ ನಿಮ್ಮ ಸಮರ್ಪಣೆಯ ಮೂಲಕ ಆತನ ಸ್ವಯಂಶೂನ್ಯತೆಯಲ್ಲೂ ಆತ್ಮದಲ್ಲಿ ಇರುವ ಆತನ ಜೀವನದಲ್ಲೂ ಪಾಲ್ಗೊಳ್ಳುವ ಮೂಲಕ  ಸಂಘರ್ಷಗಳನ್ನು ಹೇಗೆ ಜಯಿಸಬಹುದು ಎಂಬ ದಾರಿಯನ್ನು ನೀವು ಲೋಕಕ್ಕೆ ತೋರಿಸಬಲ್ಲಿರಿ ಅಳತೆಯಿಲ್ಲದೆ ಪ್ರೀತಿಸಿ ಕ್ಷಮಿಸುವವರ ಸ್ವಾತಂತ್ರ್ಯದ ಮೂಲಕ ಸಹೋದರತ್ವವನ್ನು ಬಿತ್ತಬಹುದು ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು.

ವಿಶ್ವ ಸಮರ್ಪಿತ ಜೀವನ ದಿನದ ಅಂಗವಾಗಿ ಸೋಮವಾರ ಆಚರಿಸಿದ ಪವಿತ್ರ ಬಲಿ ಪೂಜೆಯಲ್ಲಿ ಮಾತನಾಡಿದ ಜಗದ್ಗುರಗಳು, ಈ ದಿನವನ್ನು 1997ರಲ್ಲಿ ಜಗದ್ಗುರು ಸಂತ II ನೇ ಜಾನ್ ಪಾಲ್  ರವರು ಸ್ಥಾಪಿಸಿದ್ದು, ಫೆಬ್ರವರಿ 2ರಂದು ಪ್ರಭುವಿನ ಅರ್ಪಣೆಯ ಹಬ್ಬದಂದು ಆಚರಿಸಲಾಗುತ್ತದೆ ಎಂದು ಸ್ಮರಿಸಿದರು. ಈ ಹಬ್ಬದಲ್ಲಿ ಸಿಮೆಯೋನ್ ಮತ್ತು ಅನ್ನಾ ಯೇಸುವನ್ನು ಮೆಸ್ಸಿಯಾನೆಂದು ಗುರುತಿಸಿದ ಘಟನೆಯನ್ನು ಸ್ಮರಿಸುತ್ತಾ, ಇದು ದೇವರ ರಕ್ಷಣೆಯ ಪ್ರೀತಿಯ ಚಲನೆ ಮತ್ತು ಮಾನವಕುಲದ ನಿರೀಕ್ಷೆಯ ನಂಬಿಕೆಯ ನಡುವೆ ನಡೆದ ಭೇಟಿಯಾಗಿದೆ ಎಂದು ಹೇಳಿದರು.

ಈ ದೃಶ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು 30ನೇ ವಿಶ್ವ ಸಮರ್ಪಿತ ಜೀವನ ದಿನವನ್ನು ಆಚರಿಸುವಾಗ, ಸಮರ್ಪಿತ ಪುರುಷರು ಮತ್ತು ಮಹಿಳೆಯರು ಧರ್ಮ ಸಭೆ ಮತ್ತು ಲೋಕದಲ್ಲಿನ ತಮ್ಮ ಗುರಿಯ ಪ್ರತಿರೂಪವನ್ನು ಇದರಲ್ಲಿ ಕಾಣಬೇಕೆಂದು ಜಗದ್ಗುರುಗಳು ಹೇಳಿದರು. ಪವಿತ್ರಾತ್ಮನ ಮಾರ್ಗದರ್ಶನಕ್ಕೆ ವಿಧೇಯರಾದ ಸ್ಥಾಪಕರು ಮತ್ತು ಸ್ಥಾಪಕಿಯರು ಭೂಮಿಯೂ ಆಕಾಶವೂ ನಡುವಿನ ಒತ್ತಡದಲ್ಲಿ ನಂಬಿಕೆ ಮತ್ತು ಧೈರ್ಯದಿಂದ ನಡೆದು, ಸಂಸ್ಕಾರದ ಮೇಜಿನಿಂದ ಮಠದ ಮೌನಕ್ಕೂ, ಪ್ರೇಷಿತರ ಸೇವೆಗಳಿಗೂ, ಶಾಲೆಗಳ ತರಗತಿಗಳಿಗೂ, ಬೀದಿಗಳ ಬಡತನಕ್ಕೂ, ಮಿಷನ್‌ಗಳ ಕಠಿಣ ಶ್ರಮಕ್ಕೂ ತೆರಳಿದರೆಂದು ಅವರು ಪ್ರಶಂಸಿಸಿದರು.

ಅದೇ ನಂಬಿಕೆ ಅವರನ್ನು ಶಿಲುಬೆಯ ಅಡಿಯಲ್ಲೂ ಪರಮ ಪ್ರಸಾದದ ಪೆಟ್ಟಿಗೆಯ ಬಳಿಯಲ್ಲೂ ತಂದು ನಿಲ್ಲಿಸಿತು ಅಲ್ಲಿ ಅವರು ಎಲ್ಲವನ್ನೂ ದೇವರಿಗೆ ಅರ್ಪಿಸಿ, ತಮ್ಮ ಕಾರ್ಯಗಳ ಮೂಲವನ್ನೂ ಗುರಿಯನ್ನೂ ದೇವರಲ್ಲಿ ಕಂಡರು. ದೇವರ ಕೃಪೆಯಿಂದ ಅವರು ಅಪಾಯಕರ ಕಾರ್ಯಗಳನ್ನು ಕೈಗೊಂಡು, ವೈರಿಯಾಗಿದ್ದ ಅಥವಾ ನಿರ್ಲಕ್ಷ್ಯ ತೋರಿದ ಪರಿಸರಗಳಲ್ಲಿ ಪ್ರಾರ್ಥನಾಮಯ ಸಾನ್ನಿಧ್ಯವಾಗಿ, ತ್ಯಜಿಸಿದವರ ನಡುವೆ ದಯಾಳು ಕೈಯಾಗಿ, ಹಿಂಸೆಯ ನಡುವೆಯೂ ಶಾಂತಿ ಮತ್ತು ಸಂಧಾನದ ಸಾಕ್ಷಿಗಳಾಗಿ ನಿಂತರು.

ಪ್ರವಾಹದ ವಿರುದ್ಧ ಹೋಗಲು ಸಿದ್ಧರಾಗಿದ್ದ ಅವರು, ಕ್ರಿಸ್ತನಲ್ಲಿ ವಿರೋಧದ ಚಿಹ್ನೆಗಳಾಗಿ, ಕೆಲವೊಮ್ಮೆ ಹುತಾತ್ಮತ್ವದ ಮಟ್ಟಕ್ಕೂ ತಲುಪಿದರು ಎಂದು ಜಗದ್ಗರುಗಳು ಹೇಳಿದರು. ದೇವರ ವಾಕ್ಯವನ್ನು ನಿಜವಾಗಿ ಬದುಕಿದವರ ಸಾಕ್ಷ್ಯವಿಲ್ಲದೆ ಪವಿತ್ರ ಶಾಸ್ತ್ರದ ವ್ಯಾಖ್ಯಾನ ಅಪೂರ್ಣವಾಗುತ್ತದೆ ಎಂಬ ಜಗದ್ಗುರು XVI ನೇ ಬೆನೆಡಿಕ್ಟ್ ರವರ ಮಾತನ್ನು ಸ್ಮರಿಸಿ, ಇಂತಹ ಭವಿಷ್ಯವಾಣಿ ಪರಂಪರೆಯ ವಾರಸುದಾರಿಕೆಯನ್ನು ಮುಂದುವರಿಸುವುದೇ ನಮ್ಮ ಕರ್ತವ್ಯವೆಂದರು.

ಇಂದಿನ ಸಮಾಜದಲ್ಲಿ ಮಾನವನ ಕುರಿತು ತಪ್ಪಾದ ಹಾಗೂ ಕುಗ್ಗಿದ ಅರ್ಥಗಳು ನಂಬಿಕೆ ಮತ್ತು ಜೀವನದ ನಡುವೆ ಅಂತರವನ್ನು ಹೆಚ್ಚಿಸುತ್ತಿರುವ ಸಂದರ್ಭದಲ್ಲಿ, ಯುವಕರು, ವೃದ್ಧರು, ಬಡವರು, ರೋಗಿಗಳು ಮತ್ತು ಕಾರಾಗೃಹದಲ್ಲಿರುವವರು ದೇವರ ಹೃದಯದಲ್ಲಿ ಹಾಗೂ ಆತನ ಬಲಿಪೀಠದ ಮೇಲೆ ಪವಿತ್ರ ಸ್ಥಾನ ಹೊಂದಿದ್ದಾರೆ ಎಂದು ಸಾಕ್ಷ್ಯ ನೀಡಲು ಸಮರ್ಪಿತರಿಗೆ ಕರೆಯಲಾಗಿದೆ ಎಂದು ಜಗದ್ಗುರುಗಳು ಹೇಳಿದರು. ಆಯುಧಗಳ ಗರ್ಜನೆ ಕೇಳಿಬರುವ ಸ್ಥಳಗಳಲ್ಲಿಯೂ ಧಾರ್ಮಿಕ ಸಮುದಾಯಗಳು ತಮ್ಮ ಜನರನ್ನು ತ್ಯಜಿಸುವುದಿಲ್ಲ ಬದಲಾಗಿ ಅತಿ ದುರ್ಬಲ ಪರಿಸ್ಥಿತಿಗಳಲ್ಲಿಯೂ ಜೀವನದ ಅಖಂಡ ಪಾವಿತ್ರ್ಯದ ಜೀವಂತ ನೆನಪಾಗಿ ಉಳಿಯುತ್ತವೆ ಎಂದರು.

ಕೊನೆಯಲ್ಲಿ, ಧರ್ಮ ಸಭೆ ಸಮರ್ಪಿತ ಪುರುಷರು ಮತ್ತು ಮಹಿಳೆಯರ ಉಪಸ್ಥಿತಿಗಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದು, ಅವರು ಎಲ್ಲೆಡೆ ಶಾಂತಿಯ ಸಾಧನಗಳಾಗಿ ಮತ್ತು ಭರವಸೆಯ ಚಿಹ್ನೆಗಳಾಗಿ ಇರಲಿ ಎಂದು ಪ್ರೋತ್ಸಾಹಿಸುತ್ತಾರೆ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು. ತಮ್ಮ ಜೀವನವನ್ನು ಮರುಕಳಿಸಿ ದೇವರಿಗೆ ಅರ್ಪಿಸುವಾಗ, ಅವರ ಸೇವೆಯನ್ನು ಪರಿಶುದ್ಧ ಮರಿಯಮ್ಮನ ಹಾಗೂ ಎಲ್ಲಾ ಪರಿಶುದ್ಧ ಸ್ಥಾಪಕರ ಮತ್ತು ಸ್ಥಾಪಕಿಯರ ಮಧ್ಯಸ್ಥಿಕೆಗೆ ಒಪ್ಪಿಸಿದರು.

02 ಫೆಬ್ರವರಿ 2026, 00:00