ITALY-VATICAN-RELIGION-WEDNESDAY-ASHES

ವಿಭೂತಿ ಬುಧವಾರದ ಸಂದರ್ಭದಲ್ಲಿ ಜಗದ್ಗುರುಗಳ ಸಂದೇಶ: “ಸಾವು ಎಂದರೆ ಅದನ್ನು ಸಾವು ಎಂದು ಕರೆಯಿರಿ”

ತಪಸ್ಸು ಕಾಲವು ಆರಂಭವಾಗುತ್ತಿದ್ದಂತೆ, ಜಗದ್ಗುರು XIVನೇ ಲಿಯೋರವರು, ಬೂದಿ ನಮಗೆ ಬೆಂಕಿಗಾಹುತಿಯಾಗಿರುವ ಜಗತ್ತಿನ ಭಾರವನ್ನು ಹಾಗೂ ಯುದ್ಧದಿಂದ ಸಂಪೂರ್ಣವಾಗಿ ನಾಶವಾದ ನಗರಗಳ ನೋವನ್ನು ನೆನಪಿಸುತ್ತದೆ ಎಂದು ಹೇಳಿದ್ದಾರೆ.

ವ್ಯಾಟಿಕನ್ ವರದಿ

ರೋಮ್‌ನ ಸಂತ ಸಬೀನಾ ಬಸಿಲಿಕಾದಲ್ಲಿ ವಿಭೂತಿ ಬುಧವಾರದ ಪವಿತ್ರ ಬಲಿಪೂಜೆಯನ್ನು ಅಧ್ಯಕ್ಷತೆ ವಹಿಸಿದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಈ ಸಂಜೆ ಪಶ್ಚಾತ್ತಾಪ, ಸಮುದಾಯ ಮತ್ತು ಸಾವಿನ ಕುರಿತು ಮನನ ಮಾಡಿದರು.

ಭಕ್ತರು ತಮ್ಮ ಹಣೆಯ ಮೇಲೆ ಸ್ವೀಕರಿಸಲಿರುವ ವಿಭೂತಿ, “ಬೆಂಕಿಗಾಹುತಿಯಾಗಿರುವ ಜಗತ್ತಿನ ಭಾರವನ್ನು ಹಾಗೂ ಯುದ್ಧದಿಂದ ಸಂಪೂರ್ಣವಾಗಿ ನಾಶವಾದ ನಗರಗಳ ನೋವನ್ನು” ನಮಗೆ ನೆನಪಿಸುತ್ತದೆ ಎಂದು ಅವರು ಹೇಳಿದರು.

ಈ ವಿಭೂತಿ ಬುಧವಾರದಂದು ಜಗತ್ತಿನ ಸ್ಥಿತಿ ನಮ್ಮನ್ನು ಸಾವು ಎಂದರೆ ಅದನ್ನು ಸಾವು ಎಂದು ಕರೆಯಲು ಮತ್ತು ಅದರ ಗುರುತುಗಳನ್ನು ನಮ್ಮೊಳಗೆ ಹೊತ್ತುಕೊಳ್ಳಲು ಕರೆದೊಯ್ಯುತ್ತದೆ ಎಂದು ಜಗದ್ಗುರು ಲಿಯೋರವರು ಒತ್ತಿ ಹೇಳಿದರು.

ವೈಯಕ್ತಿಕ ಮತ್ತು ಸಾರ್ವಜನಿಕ ಪಾಪ

ವಿಭೂತಿ ಬುಧವಾರವು ತಪಸ್ಸು ಕಾಲದ ಮೊದಲ ದಿನವಾಗಿದ್ದು, ಇದು ಪುನರುತ್ಥಾನದ ಹಬ್ಬಕ್ಕೆ ಮುನ್ನ ನಡೆಯುವ 40 ದಿನಗಳ ಉಪವಾಸ ಮತ್ತು ಪ್ರಾರ್ಥನೆಯ ಅವಧಿಯಾಗಿದೆ.

ಇದು ಸಮುದಾಯಕ್ಕಾಗಿ ಶಕ್ತಿಯುತ ಸಮಯ, ಎಂದು ಜಗದ್ಗುರುಗಳು ಹೇಳಿದರು. ಇಂದಿನ ಕಾಲದಲ್ಲಿ ಸಮುದಾಯವು ಅಪರೂಪವಾಗುತ್ತಿದೆ ಎಂದು ಅವರು ಗಮನಿಸಿದರು ಆದರೆ ತಪಸ್ಸು ಕಾಲವು ತಮ್ಮ ಪಾಪಗಳನ್ನು ಅರಿಯುವ ಸಾಕ್ಷಿಗಳ ಸಮುದಾಯವಾಗಿ ಜನರನ್ನು ಒಂದಾಗಿಸುತ್ತದೆ.

ಈ ಪಾಪಗಳು ವೈಯಕ್ತಿಕವೂ ಆಗಿವೆ ಮತ್ತು ಸಮುದಾಯ ಸಂಬಂಧಿತವೂ ಆಗಿವೆ ಎಂದು ಜಗದ್ಗುರು ಲಿಯೋರವರು ಸ್ಪಷ್ಟಪಡಿಸಿದರು. ಪಾಪವು ನಮ್ಮ ಹೃದಯಗಳನ್ನು ಬಾಧಿಸುತ್ತದೆ ಮತ್ತು ನಮ್ಮೊಳಗೆ ಅಸ್ತಿತ್ವದಲ್ಲಿದೆ. ಅದೇ ಸಮಯದಲ್ಲಿ, ಅದು ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಧಾರ್ಮಿಕ ಸ್ವರೂಪಗಳಲ್ಲಿಯೂ ಕಾಣಿಸಿಕೊಳ್ಳುವ ವಿಶಾಲವಾದ ಪಾಪದ ರಚನೆಗಳ ಒಳಗೂ ನಡೆಯುತ್ತದೆ.

ತಪಸ್ಸು ಕಾಲವು ಪಶ್ಚಾತ್ತಾಪ ಮತ್ತು ಪರಿವರ್ತನೆಯ ಮೂಲಕ ಇವುಗಳನ್ನೆಲ್ಲ ಮೀರಿ ಸ್ವತಂತ್ರರಾಗಲು ಧೈರ್ಯ ಮಾಡುವ ಸಮಯ ಎಂದು ಜಗದ್ಗುರು ಲಿಯೋರವರು ಉಲ್ಲೇಖಿಸಿದರು.

ತಪಸ್ಸು ಕಾಲದ ‘ಮಿಷನರಿ ಮಹತ್ವ’

ಇಂದಿನ ಧರ್ಮನಿರಪೇಕ್ಷ ಯುಗದಲ್ಲಿ ಈ ಸಂದೇಶವು ವಿಶೇಷವಾಗಿ ಯುವಜನತೆಗೆ ಆಕರ್ಷಕವಾಗಿದೆ ಎಂದು ಜಗದ್ಗುರುಗಳು ಹೇಳಿದರು.

ಧರ್ಮಸಭೆ ಮತ್ತು ಜಗತ್ತಿನಲ್ಲಿ ನಡೆದ ತಪ್ಪುಗಳಿಗೆ ಹೊಣೆಗಾರಿಕೆ ಇರಬೇಕು ಎಂಬುದನ್ನು ಯುವಕರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರು ಸೂಚಿಸಿದರು.

ಆದ್ದರಿಂದ, ತಪಸ್ಸು ಕಾಲವನ್ನು ಕೇವಲ ವೈಯಕ್ತಿಕ ಭಕ್ತಿಯ ಕಾರ್ಯವೆಂದು ನೋಡುವುದಕ್ಕಿಂತ, ತಮ್ಮ ಜೀವನವನ್ನು ನಿಜವಾಗಿ ನವೀಕರಿಸಲು ಬಯಸುವ, ಒಳ್ಳೆಯ ಮನಸ್ಸಿನ ಅಶಾಂತ ಅನೇಕ ಜನರಿಗೆ ಅದನ್ನು ಪರಿಚಯಿಸುವ ಮಾರ್ಗಗಳನ್ನು ಕ್ರೈಸ್ತರು ಹುಡುಕಬೇಕು ಎಂದು ಜಗದ್ಗುರುಗಳು ಹೇಳಿದರು.

18 ಫೆಬ್ರವರಿ 2026, 20:58