ಪೂರ್ವ ಸಂಪ್ರದಾಯಬದ್ದ ಯಾಜಕರು ಮತ್ತು ಸಂನ್ಯಾಸಿಗಳು ಸಾಮೂಹಿಕ ವಿಶ್ವಾಸದಲ್ಲಿ ಬೆಳೆಯಿರಿ ಎಂದು ಜಗದ್ಗುರುಗಳು ಆಹ್ವಾನಿಸಿದರು
ವ್ಯಾಟಿಕನ್ ವರದಿ
ವಾಟಿಕನ್‌ನಲ್ಲಿ ನಡೆದ ಸಭೆಯಲ್ಲಿ, ಪೂರ್ವ ಸಾಂಪ್ರದಾಯಿಕ ಧರ್ಮ ಸಭೆಗಳಿಂದ ಬಂದ ಯುವ ಯಾಜಕರು ಮತ್ತು ಸಂನ್ಯಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಧರ್ಮ ಸಭೆಗಳಲ್ಲಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಭಿನ್ನತೆಗಳು ನಮ್ಮ ಸಾಮಾನ್ಯ ಕ್ರೈಸ್ತ ಪರಂಪರೆಯ ಅದ್ಭುತ ಚಿತ್ರ ಕಲೆಯಂತೆ ಇರುವುದಾಗಿ ಹೇಳಿದರು. ಕ್ರೈಸ್ತ ಏಕತೆಗೆ ಉತ್ತೇಜನ ನೀಡುವ ಡಿಕಾಸ್ಟರಿಯು ಆಯೋಜಿಸಿದ ಅಧ್ಯಯನ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅರ್ಮೇನಿಯನ್, ಕಾಪ್ಟಿಕ್, ಇಥಿಯೋಪಿಯನ್, ಎರಿಟ್ರಿಯನ್, ಮಲಂಕಾರ ಮತ್ತು ಸಿರಿಯಕ್ ಆರ್ಥಡಾಕ್ಸ್ ಚರ್ಚುಗಳ ಪ್ರತಿನಿಧಿಗಳನ್ನು ಅವರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅವರು ಸಂತ ಪೇತ್ರರ ಮಾತುಗಳನ್ನು ನೆನಪಿಸಿಕೊಂಡು, ಕ್ರಿಸ್ತನಲ್ಲಿ ಇರುವ ಶಾಂತಿ ಎಲ್ಲರಿಗೂ ಇರಲಿ ಎಂದು ಹೇಳಿದರು.
ಕ್ರೈಸ್ತ ಏಕತೆಗಾಗಿ ಪ್ರಾರ್ಥನಾ ವಾರವನ್ನು ಇತ್ತೀಚೆಗೆ ಧರ್ಮ ಸಭೆಯು ಆಚರಿಸಿದುದನ್ನು ಸ್ಮರಿಸಿದ ಜಗದ್ಗುರು ಲಿಯೋರವರು, ಅದರ ವಿಷಯವು ಸಂತ ಪೌಲನ ಎಫೆಸಿಯರಿಗೆ ಬರೆದ ಪತ್ರದಿಂದ ತೆಗೆದುಕೊಳ್ಳಲಾಗಿತ್ತು ಎಂದು ಹೇಳಿದರು. ಒಂದು ದೇಹವೂ, ಒಂದು ಆತ್ಮವೂ ಇದೆ ನಿಮಗೆ ಕರೆಯಲ್ಪಟ್ಟ ಭರವಸೆಯು ಒಂದೇ ಎಂಬ ವಾಕ್ಯದ ಮೂಲಕ ವಿಶ್ವಾಸದಲ್ಲಿ ಏಕತೆಯ ಮಹತ್ವವನ್ನು ಸಂತ ಪೌಲರು ಒತ್ತಿಹೇಳಿದ್ದನ್ನು ಅವರು ಉಲ್ಲೇಖಿಸಿದರು.
ಸಂತ ಪೌಲರು ಇಸ್ರೇಲ್, ಏಷ್ಯಾ ಮೈನರ್, ಸಿರಿಯ, ಅರೇಬಿಯಾ ಮತ್ತು ಯುರೋಪ್‌ನಲ್ಲಿಯೂ ವ್ಯಾಪಕವಾಗಿ ಸಂಚರಿಸಿ ಅನೇಕ ಕ್ರೈಸ್ತ ಸಮುದಾಯಗಳನ್ನು ಸ್ಥಾಪಿಸಿ ಭೇಟಿಯಾದ ರೀತಿಯನ್ನು ಜಗದ್ಗುರುಗಳು ನೆನಪಿಸಿದರು. ಈ ಪ್ರಯಾಣಗಳು ಪ್ರತಿಯೊಂದು ಧರ್ಮ ಸಭೆಯ ವಿಶಿಷ್ಟ ಲಕ್ಷಣಗಳು ಜನಾಂಗೀಯ ಹಿನ್ನೆಲೆ, ಸಂಪ್ರದಾಯಗಳು ಮತ್ತು ಎದುರಿಸುತ್ತಿದ್ದ ಸವಾಲುಗಳು ಅವರ ಗಮನಕ್ಕೆ ತಂದವು. ಜೊತೆಗೆ, ಕೆಲವು ಸಮುದಾಯಗಳು ತಮ್ಮದೇ ಚಿಂತನೆಗಳಲ್ಲಿ ಮುಳುಗಿ ಒಳಮುಖವಾಗುವ ಅಪಾಯವನ್ನೂ ಅವರು ಗಮನಿಸಿದರು.
ಅದರ ಕಾರಣಕ್ಕಾಗಿ, ಸಂತ ಪೌಲರು ತಮ್ಮ ಪತ್ರಗಳ ಮೂಲಕ, ಎಲ್ಲರೂ ಕ್ರಿಸ್ತನ ಏಕೈಕ ಅತೀಂದ್ರೀಯ ದೇಹದ ಅಂಗಗಳೆಂಬುದನ್ನು ನಿರಂತರವಾಗಿ ನೆನಪಿಸುತ್ತಿದ್ದರು ಎಂದು ಜಗದ್ಗುರುಗಳು ಹೇಳಿದರು. ಈ ಮೂಲಕ ಅವರು ಪರಸ್ಪರ ಬೆಂಬಲಿಸಬೇಕೆಂದು ಮತ್ತು ದೇವರ ಏಕತ್ವ ಹಾಗೂ ಅತೀತ ಸ್ವಭಾವವನ್ನು ಪ್ರತಿಬಿಂಬಿಸುವ ವಿಶ್ವಾಸ ಮತ್ತು ಉಪದೇಶದ ಏಕತೆಯನ್ನು ಕಾಯ್ದುಕೊಳ್ಳಬೇಕೆಂದು ಉತ್ತೇಜಿಸಿದರು.
ಜಗದ್ಗುರು ಲಿಯೋರವರು, ಪ್ರತಿನಿಧಿತ ಧರ್ಮ ಸಭೆಗಳ ಸಾಮಾನ್ಯ ಕ್ರೈಸ್ತ ಪರಂಪರೆಯನ್ನು ಪ್ರಶಂಸಿಸುತ್ತಾ, ಒಟ್ಟಾಗಿ ಕೆಲಸ ಮಾಡುವ ಮತ್ತು ಪ್ರಾರ್ಥಿಸುವ ಅಗತ್ಯವನ್ನು ಒತ್ತಿಹೇಳಿದರು. ನಮ್ಮ ಶಾಂತಿಯ ಪರಮ ಮೂಲವಾದ ಕ್ರಿಸ್ತನ ಮೇಲಿನ ನಮ್ಮ ಸಾಮೂಹಿಕ ವಿಶ್ವಾಸದಲ್ಲಿ ಬೆಳೆಯಲು ನಾವು ಪರಸ್ಪರ ಬೆಂಬಲಿಸಬೇಕು, ಎಂದು ಅವರು ಹೇಳಿದರು. ಈ ಬೆಳವಣಿಗೆಗಾಗಿ ನಾವು ನಮ್ಮನ್ನು ನಿಶಸ್ತ್ರೀಕರಣಗೊಳಿಸುವುದನ್ನು ಕಲಿಯಬೇಕು ಎಂದು ಅವರು ತಿಳಿಸಿದರು.
ಕೊನೆಗೆ, ಕಾಂಸ್ಟಾಂಟಿನೋಪಲ್‌ನ ದಿವಂಗತ ಎಕ್ಯುಮೆನಿಕಲ್ ಪ್ಯಾಟ್ರಿಯಾರ್ಕ್ ಅತೇನಾಗೋರಸ್ ಪ್ರಥಮರ ಮಾತುಗಳನ್ನು ಉಲ್ಲೇಖಿಸಿದ ಜಗದ್ಗುರುಗಳು, ತಮ್ಮೊಳಗಿನ ಪೂರ್ವಾಗ್ರಹಗಳನ್ನು ತೊರೆದು ಹೃದಯಗಳನ್ನು ನಿಶಸ್ತ್ರೀಕರಣಗೊಳಿಸಿದಾಗ, ದಯೆ ಹೆಚ್ಚುತ್ತದೆ, ಸಹಕಾರ ಗಾಢವಾಗುತ್ತದೆ ಮತ್ತು ಕ್ರಿಸ್ತನಲ್ಲಿ ಏಕತೆ ಬಲವಾಗುತ್ತದೆ ಎಂದು ಹೇಳಿದರು. ಈ ರೀತಿ ಕ್ರೈಸ್ತ ಏಕತೆ ಭೂಮಿಯಲ್ಲಿ ಶಾಂತಿ ಮತ್ತು ಸಮನ್ವಯಕ್ಕೆ ಪೂರಕವಾಗುತ್ತದೆ ಎಂದು ಅವರು ತಿಳಿಸಿದರು. ನಂತರ ಅವರು ಭೇಟಿಗೆ ಕೃತಜ್ಞತೆ ವ್ಯಕ್ತಪಡಿಸಿ, ಎಲ್ಲರೊಂದಿಗೆ “ಸ್ವಗ೯ಲೋಕದಲ್ಲಿರುವ ನಮ್ಮ ತಂದೆ” ಪ್ರಾರ್ಥನೆಯನ್ನು ಸೇರಿ ಸಲ್ಲಿಸಿ, ದೇವರು ಅವರನ್ನು ಆಶೀರ್ವದಿಸಿ ಸುರಕ್ಷಿತವಾಗಿರಿಸಲಿ ಎಂದು ಪ್ರಾರ್ಥಿಸಿದರು.
