ಜಗದ್ಗುರುಗಳು ಜೇಮ್ಸ್ ಆರ್. ಗೋಲ್ಕಾರವರನ್ನು ಡೆನ್ವರ್‌ನ ಹೊಸ ಮಹಾಧರ್ಮಾಧ್ಯಕ್ಷರಾಗಿ ನೇಮಿಸಿದ್ದಾರೆ
ವ್ಯಾಟಿಕನ್ ವರದಿ
ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಿಸಿರುವಂತೆ, ಜಗದ್ಗುರು XIVನೇ ಲಿಯೋರವರು ಅಮೆರಿಕದ ಕೊಲೊರಾಡೊ ರಾಜ್ಯದ ಡೆನ್ವರ್ ಮಹಾಧರ್ಮಾಧ್ಯಕ್ಷರಾದ ಸ್ಯಾಮುಯೆಲ್ ಜೋಸೆಫ್ ಅಕ್ವಿಲಾರವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಅವರ ಉತ್ತರಾಧಿಕಾರಿಯಾಗಿ, ಜಗದ್ಗುರು XIVನೇ ಲಿಯೋರವರು ಅಮೆರಿಕದ ಕೊಲೊರಾಡೊ ರಾಜ್ಯದ ಕೊಲೊರಾಡೊ ಸ್ಪ್ರಿಂಗ್ಸ್ ಧರ್ಮಪ್ರಾಂತ್ಯದ ಬಿಷಪ್ ಜೇಮ್ಸ್ ಆರ್. ಗೋಲ್ಕಾರವರನ್ನು ನೇಮಿಸಿದ್ದಾರೆ.
ಸಂಕ್ಷಿಪ್ತ ಜೀವನ ಚರಿತ್ರೆ
ಜೇಮ್ಸ್ ಆರ್. ಗೋಲ್ಕಾರವರು ಸೆಪ್ಟೆಂಬರ್ 22, 1966 ರಂದು ಅಮೆರಿಕದ ನೆಬ್ರಾಸ್ಕಾ ರಾಜ್ಯದ ಗ್ರ್ಯಾಂಡ್ ಐಲ್ಯಾಂಡ್‌ನಲ್ಲಿ ಜನಿಸಿದರು. ಅವರು ಕ್ರೈಟನ್ ವಿಶ್ವವಿದ್ಯಾಲಯದಿಂದ ತತ್ತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ನಂತರ ಮಿನೆಸೋಟಾದ ಸೇಂಟ್ ಪೌಲ್ ಸೆಮಿನರಿಯಲ್ಲಿ ದಿವ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಮಾಸ್ಟರ್ ಆಫ್ ಡಿವಿನಿಟಿ) ಪೂರ್ಣಗೊಳಿಸಿ, 1994ರಲ್ಲಿ ಯಾಜಕತ್ವಕ್ಕೆ ದೀಕ್ಷಿತರಾದರು.
ಅವರು ಈ ಕೆಳಗಿನ ಹುದ್ದೆಗಳನ್ನು ವಹಿಸಿಕೊಂಡಿದ್ದಾರೆ:
ಕಿಯರ್ನಿಯ ಸೇಂಟ್ ಜೇಮ್ಸ್ ದೇವಾಲಯದ ಧರ್ಮಕೇಂದ್ರದ ಪ್ರತಿನಿಧಿ (1994–2000) ಮತ್ತು ಅಲಯನ್ಸ್‌ನ ಹೊಲಿ ರೋಸರಿ ದೇವಾಲಯದ ಧರ್ಮಕೇಂದ್ರದ ಪ್ರತಿನಿಧಿ (2000–2001);
ಸ್ಕಾಟ್ಸ್‌ಬ್ಲಫ್‌ನ ಅವರ್ ಲೇಡಿ ಆಫ್ ಗುಡಲುಪೆ ದೇವಾಲಯದ ಧರ್ಮಕೇಂದ್ರದ ಯಾಜಕ (2001–2006) ಮತ್ತು ನಾರ್ತ್ ಪ್ಲಾಟ್‌ನ ಸೇಂಟ್ ಪ್ಯಾಟ್ರಿಕ್ ದೇವಾಲಯದ ಧರ್ಮಕೇಂದ್ರದ ಯಾಜಕ (2006–2016);
ವಿಕಾರ್ ಜನರಲ್ (2018–2021) ಹಾಗೂ ಆಶೀರ್ವದಿತ ಕನ್ಯಾ ಮರಿಯ ಜನನ ಮಹಾಕತೀಡ್ರಲ್‌ನ ರೆಕ್ಟರ್ (2016–2021).
ಅವರನ್ನು 2021ರ ಏಪ್ರಿಲ್ 30ರಂದು ಕೊಲೊರಾಡೊ ಸ್ಪ್ರಿಂಗ್ಸ್ ಧರ್ಮಪ್ರಾಂತ್ಯದ ಬಿಷಪ್ ಆಗಿ ನೇಮಿಸಲಾಗಿದ್ದು, 2021ರ ಜೂನ್ 29ರಂದು ಅವರು ಧರ್ಮಾಧ್ಯಕ್ಷೀಯ ದೀಕ್ಷೆಯನ್ನು ಸ್ವೀಕರಿಸಿದರು.
