ಸೇಂಟ್ ಪೀಟರ್ಸ್ ಬಸಿಲಿಕಾದಲ್ಲಿ ಜಗದ್ಗುರು XIV ನೇ ಲಿಯೋರವರು ಯಾಜಕರನ್ನು  ನೇಮಿಸುತ್ತಿರುವ ಚಿತ್ರ ಸೇಂಟ್ ಪೀಟರ್ಸ್ ಬಸಿಲಿಕಾದಲ್ಲಿ ಜಗದ್ಗುರು XIV ನೇ ಲಿಯೋರವರು ಯಾಜಕರನ್ನು ನೇಮಿಸುತ್ತಿರುವ ಚಿತ್ರ  (ANSA)

ಜಗದ್ಗುರುಗಳು ಸ್ಪೇನ್ ಯಾಜಕರಿಗೆ: ‘ಪವಿತ್ರರಾಗಿರಿ ಮತ್ತು ನಿಮ್ಮನ್ನು ಕ್ರಿಸ್ತನಿಗೆ ಹೊಂದಿಸಿಕೊಳ್ಳಿರಿ’

ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿರುವ ಯಾಜಕರ ಸಭೆಯ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಯಾಜಕರಿಗೆ ಸವಾಲುಗಳು ಮತ್ತು ಧರ್ಮನಿರಪೇಕ್ಷತೆಯಿಂದ ಭಯಪಡಬಾರದೆಂದು ಆಹ್ವಾನಿಸಿದರು. ಬದಲಾಗಿ, ತಮ್ಮ ಪ್ರಾರ್ಥನಾ ಜೀವನ ಮತ್ತು ಕ್ರಿಸ್ತನೊಂದಿಗೆ ಇರುವ ಆಪ್ತ ಸಂಬಂಧದ ಮೂಲಕ, ಪ್ರಭು ಮಾನವರ ಹೃದಯದ ಅತ್ಯಂತ ಆಳವಾದ ಭರವಸೆಗಳನ್ನೂ ನೆರವೇರಿಸಲು ಸಹಾಯ ಮಾಡುವನೆಂಬ ಸತ್ಯವನ್ನು ಇತರರು ಗುರುತಿಸಲು ನೆರವಾಗಬಹುದು ಎಂದು ಅವರು ತಿಳಿಸಿದರು.

ವ್ಯಾಟಿಕನ್ ವರದಿ

ಮ್ಯಾಡ್ರಿಡ್ ಮಹಾಧರ್ಮಕ್ಷೇತ್ರದ ಯಾಜಕರಿಗೆ ಕಳುಹಿಸಿದ ಪತ್ರದಲ್ಲಿ, ಜಗದ್ಗುರು XIVನೇ ಲಿಯೋರವರು ಅವಿಲಾದ ಸಂತ ಜಾನ್ ರವರ ಮಾತುಗಳನ್ನು ಉಲ್ಲೇಖಿಸಿ, ಪೂರ್ಣವಾಗಿ ಆತನವರಾಗಿರಿ ಪವಿತ್ರರಾಗಿರಿ ಎಂದು ಪ್ರೋತ್ಸಾಹಿಸಿದರು. 2026ರ ಜನವರಿ 28ರಂದು, ಧರ್ಮ ಸಭೆಯ ಗುರು ಸಂತ ತೋಮಸ್ ಅಕ್ವಿನಾಸ್ ರವರ ಸ್ಮರಣಾ ದಿನದಂದು ಸಹಿ ಮಾಡಲಾದ ಈ ಪತ್ರದಲ್ಲಿ, ಯಾಜಕರು ಎದುರಿಸುತ್ತಿರುವ ಸವಾಲುಗಳನ್ನು ಅವರು ಸ್ಪಷ್ಟವಾಗಿ ಒಪ್ಪಿಕೊಂಡರು. ಇಂದಿನ ಅಶಾಂತಿ ಮತ್ತು ಧರ್ಮನಿರಪೇಕ್ಷತೆಯ ನಡುವೆ ಪವಿತ್ರತೆಯನ್ನು ಬದುಕಿ ತೋರಿಸುವುದು ಅತ್ಯಂತ ಅಗತ್ಯವೆಂದು ಅವರು ಹೇಳಿದರು.

ಧರ್ಮ ಸಭೆ ಅನುಭವಿಸುತ್ತಿರುವ ಈ ಕಾಲವು ತುರ್ತು ಸಮಸ್ಯೆಗಳ ನಿರ್ವಹಣೆಯಲ್ಲೇ ಸೀಮಿತವಾಗದೆ, ನಿಷ್ಠಾವಂತ ಹಾಗೂ ಶಾಂತ ಮನಸ್ಸಿನಿಂದ ಆಲೋಚಿಸಲು ಆಹ್ವಾನಿಸುತ್ತಿದೆ ಎಂದು ಜಗದ್ಗುರುಗಳು ಹೇಳಿದರು. ನಂಬಿಕೆಯ ಬೆಳಕಿನಲ್ಲಿ, ನಮ್ಮ ಮುಂದಿರುವ ಸವಾಲುಗಳನ್ನೂ ಅವಕಾಶಗಳನ್ನೂ ಅರಿತುಕೊಳ್ಳಬೇಕು. ದೇವರು ನಮ್ಮ ನಡುವೆ ಮೌನವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಗುರುತಿಸಲು ವಿವೇಕದ ದೃಷ್ಟಿ ಅಗತ್ಯವೆಂದು ಅವರು ಸೂಚಿಸಿದರು.

ಇಂದಿನ ಸಾಂಸ್ಕೃತಿಕ ಹಾಗೂ ಸಾಮಾಜಿಕ ಪರಿಸ್ಥಿತಿಯಲ್ಲಿ ನಂಬಿಕೆಗೆ ಹೊಸ ಸವಾಲುಗಳಿವೆ. ಧರ್ಮನಿರಪೇಕ್ಷತೆಯ ಪ್ರಭಾವ, ಸಾರ್ವಜನಿಕ ವಾದ-ವಿವಾದಗಳಲ್ಲಿ ಧ್ರುವೀಕರಣ ಮತ್ತು ಮಾನವನ ಅಸ್ತಿತ್ವವನ್ನು ಸೀಮಿತ ಕಲ್ಪನೆಗಳಲ್ಲಿ ಸೀಮಿತಗೊಳಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ, ನಂಬಿಕೆ ಅಲ್ಪಪ್ರಾಮುಖ್ಯವಾಗುವುದು ಅಥವಾ ಕೇವಲ ಉಪಕರಣದಂತೆ ಬಳಸಿಕೊಳ್ಳುವುದು ಎಂಬ ಅಪಾಯ ಉಂಟಾಗಿದೆ. ಹಿಂದೆ ಕ್ರೈಸ್ತ ಮೌಲ್ಯಗಳನ್ನು ಬೆಳೆಸಲು ಇದ್ದ ಸಾಮಾನ್ಯ ನೆಲೆಯು ಈಗ ಬಹಳಷ್ಟು ದುರ್ಬಲವಾಗಿದೆ ಎಂದು ಅವರು ವಿಷಾದಿಸಿದರು.

ಆದರೆ ಈ ಪರಿಸ್ಥಿತಿಯಲ್ಲಿಯೇ, ವಿಶೇಷವಾಗಿ ಯುವಕರ ಹೃದಯಗಳಲ್ಲಿ ಹೊಸ ಅಶಾಂತಿ ಮೂಡುತ್ತಿದೆ ಎಂದು ಜಗದ್ಗುರುಗಳು ಹೇಳಿದರು. ಸುಖಸಮೃದ್ಧಿಯನ್ನು ಪರಮ ಗುರಿಯನ್ನಾಗಿ ಮಾಡಿಕೊಂಡರೂ ಸಂತೋಷ ಸಿಕ್ಕಿಲ್ಲ; ಸತ್ಯವಿಲ್ಲದ ಸ್ವಾತಂತ್ರ್ಯವು ತೃಪ್ತಿಯನ್ನು ನೀಡಲಿಲ್ಲ ಭೌತಿಕ ಪ್ರಗತಿಯೂ ಮಾನವನ ಆಳವಾದ ಆಸೆಗಳನ್ನು ತೃಪ್ತಿಪಡಿಸಲಿಲ್ಲ. ಈ ಖಾಲಿತನವನ್ನು ದೇವರೇ ತುಂಬಬಲ್ಲನು ಎಂಬುದನ್ನು ಅವರು ನೆನಪಿಸಿದರು.

ಧರ್ಮ ಸಭೆಗೆ ಇಂದಿನ ಕಾಲದಲ್ಲಿ ಅಗತ್ಯವಿರುವ ಯಾಜಕರು ಕೆಲಸಗಳ ಸಂಖ್ಯೆಯಿಂದ ಅಥವಾ ಫಲಿತಾಂಶಗಳ ಒತ್ತಡದಿಂದ ಗುರುತಿಸಲ್ಪಡುವವರಲ್ಲ, ಆದರೆ ಕ್ರಿಸ್ತನಿಗೆ ಹೊಂದಿಕೊಂಡು ಬದುಕುವವರಾಗಿರಬೇಕು ಎಂದು ಜಗದ್ಗುರುಗಳು ಒತ್ತಿಹೇಳಿದರು. ಸಂಸ್ಕಾರದಿಂದ ಪೋಷಿಸಲ್ಪಡುವ ಪ್ರಾರ್ಥನಾ ಜೀವನ ಮತ್ತು ನಿಷ್ಠಾವಂತ ಸೇವಾಭಾವನೆಯಿಂದ ಅವರ ಸೇವೆ ಬೆಳಗಬೇಕು. ಯಾಜಕರು ಕ್ರೀಸ್ತರ ಪ್ರತಿಬಿಂಬ ಎಂಬ ಆತ್ಮಸಾಕ್ಷಾತ್ಕಾರದೊಂದಿಗೆ ಬದುಕಬೇಕು.

ಅಂತಿಮವಾಗಿ, ಯಾಜಕರು ಸಹೋದರತ್ವದ ಮಹತ್ವವನ್ನು ಜಗದ್ಗುರುಗಳು ಪುನಃ ನೆನಪಿಸಿದರು. ಸೇವೆಯಲ್ಲಿ ಯಾರೂ ಒಂಟಿಯಾಗಿರುವಂತೆ ಭಾವಿಸಬಾರದು ವೈಯಕ್ತಿಕತೆಯ ಮನೋಭಾವವನ್ನು ತೊಡೆದು ಹಾಕಿ ಒಟ್ಟಾಗಿ ಸೇವೆ ಸಲ್ಲಿಸಬೇಕು ಎಂದು ಅವರು ಹೇಳಿದರು. ಕ್ರಿಸ್ತನ ಆರಾಧನೆಯಲ್ಲಿ ಆಳವಾಗಿ ಬೆಳೆದು, ಪ್ರಾರ್ಥನೆಯಲ್ಲಿ ಗಾಢರಾಗಿದ್ದು, ಜನರನ್ನು ಕೂಡ ಅದೇ ಮಾರ್ಗದಲ್ಲಿ ನಡೆಸುವಂತೆ ಅವರು ಸ್ಪ್ಯಾನಿಷ್ ಯಾಜಕರನ್ನು ಪ್ರೋತ್ಸಾಹಿಸಿದರು.

09 ಫೆಬ್ರವರಿ 2026, 00:00