ಜಗದ್ಗುರು XIV ನೇ ಲಿಯೋರವರು ದಾನ ಮಾಡಿದ ಔಷಧ ಮತ್ತು ಜನರೇಟರ್‌ಗಳು ಜಗದ್ಗುರು XIV ನೇ ಲಿಯೋರವರು ದಾನ ಮಾಡಿದ ಔಷಧ ಮತ್ತು ಜನರೇಟರ್‌ಗಳು  (ANSA)

ಉಕ್ರೇನ್‌ನ ಹಿಮ ಚಳಿಗಾಲದ ಮಧ್ಯ ಜಗದ್ಗುರುಗಳ ಐಕ್ಯತೆ

ಉಕ್ರೇನ್‌ನಲ್ಲಿ ತೀವ್ರ ಹಿಮ ಚಳಿಗಾಲ ಮುಂದುವರಿಯುತ್ತಿರುವ ಸಂದರ್ಭದಲ್ಲೇ, ಜಗದ್ಗುರು XIVನೇ ಲಿಯೋರವರು ತಮ್ಮ ಐಕ್ಯತೆ ಮತ್ತು ಸಮೀಪತೆಯನ್ನು ವ್ಯಕ್ತಪಡಿಸಿದ್ದಾರೆ. ಅವರು 80 ವಿದ್ಯುತ್ ಜನರೇಟರ್‌ಗಳ ಜೊತೆಗೆ ಔಷಧಿ ಮತ್ತು ಆಹಾರ ಸಾಮಗ್ರಿಗಳನ್ನು ಉಕ್ರೇನ್‌ಗೆ ಕಳುಹಿಸುವಂತೆ ವ್ಯವಸ್ಥೆ ಮಾಡಿದ್ದಾರೆ.

ವ್ಯಾಟಿಕನ್ ವರದಿ 

ಜಗದ್ಗುರು XIVನೇ ಲಿಯೋರವರು ಫೆಬ್ರವರಿ 4 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಉಕ್ರೇನ್‌ಗಾಗಿ ಮಾಡಿದ ಮನವಿ ಈಗ ಕಾರ್ಯರೂಪಕ್ಕೆ ಬಂದಿದೆ. ಇಂಧನ ಮೂಲಸೌಕರ್ಯಗಳ ಮೇಲೆ ನಡೆಯುತ್ತಿರುವ ಬಾಂಬ್ ದಾಳಿಗಳ ಪರಿಣಾಮವಾಗಿ ಜನರು ಅನುಭವಿಸುತ್ತಿರುವ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, ಅವರು ಸಹಾಯ ಕಾರ್ಯಗಳನ್ನು ಪ್ರಾರಂಭಿಸಿದರು. VI ನೇ ಪೌಲ್ ಸಭಾಂಗಣದಲ್ಲಿ ಮಾತನಾಡಿದ ಜಗದ್ಗುರುಗಳು, ವಿಶೇಷವಾಗಿ ಪೋಲ್ಯಾಂಡ್ ಸೇರಿದಂತೆ ಅನೇಕ ಧರ್ಮಪ್ರಾಂತ್ಯಗಳಲ್ಲಿ ವ್ಯಕ್ತವಾಗಿರುವ ಐಕ್ಯತಾ ಕಾರ್ಯಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು.

ಜಗದ್ಗುರುಗಳ ವಿನಂತಿಯ ಮೇರೆಗೆ ದಾನ ಸೇವಾ ದಿಕಾಸ್ತೇರಿ  ಮೂರು ಲಾರಿಗಳ ಮೂಲಕ 80 ವಿದ್ಯುತ್ ಜನರೇಟರ್‌ಗಳನ್ನು ಉಕ್ರೇನ್‌ಗೆ ಕಳುಹಿಸಿದೆ. ಯುದ್ಧದಿಂದ ಉಂಟಾದ ನೋವು ಮತ್ತು ತೀವ್ರ ಚಳಿಯಿಂದ ಜನರು ಎದುರಿಸುತ್ತಿರುವ ಸಂಕಷ್ಟವನ್ನು ಅರಿತ ಅನೇಕ ಬಿಷಪ್‌ಗಳು ಸಹಾಯಕ್ಕಾಗಿ ಮನವಿ ಮಾಡಿದ್ದರು. ಉಕ್ರೇನ್‌ನಲ್ಲಿ ರಾತ್ರಿ ತಾಪಮಾನ -15 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಯುತ್ತಿದ್ದು, ಹಗಲು -10 ರಿಂದ -12 ಡಿಗ್ರಿವರೆಗೆ ಇರುತ್ತದೆ. ಹಲವರು ತಮ್ಮ ಮನೆಗಳನ್ನು ಬಿಟ್ಟು  ಆಶ್ರಯ ಕೇಂದ್ರಗಳಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ.

ಜನರೇಟರ್‌ಗಳು ಮತ್ತು ಔಷಧಿಗಳನ್ನು ಹೊತ್ತ ವಾಹನಗಳು ರೋಮ್‌ನ ಸಂತ ಸೋಫಿಯಾ ಬಸಿಲಿಕಾದಿಂದ ಹೊರಟು, ಈಗಾಗಲೇ ಫಾಸ್ಟಿವ್ ಮತ್ತು ಕೀವ್ ಪ್ರದೇಶಗಳಿಗೆ ತಲುಪಿವೆ. ಇತ್ತೀಚಿನ ದಾಳಿಗಳಿಂದ ಈ ಪ್ರದೇಶಗಳು ಬಹಳವಾಗಿ ಹಾನಿಗೊಳಗಾಗಿವೆ. ಒಡೆಸ್ಸಾ ಮತ್ತು ಖಾರ್ಕಿವ್ ನಗರಗಳಲ್ಲಿ ನಡೆದ ದಾಳಿಗಳಲ್ಲಿ 10 ವರ್ಷದ ಬಾಲಕನೊಬ್ಬ ಮೃತಪಟ್ಟಿರುವುದು ಯುದ್ಧದ ಕ್ರೌರ್ಯವನ್ನು ತೋರಿಸುತ್ತದೆ.

ಜನರೇಟರ್‌ಗಳ ಜೊತೆಗೆ ಸಾವಿರಾರು ಔಷಧಿಗಳನ್ನು ಕೂಡ ಕಳುಹಿಸಲಾಗಿದೆ. ಇದರಲ್ಲಿ ಆಂಟಿಬಯಾಟಿಕ್‌ಗಳು, ಆಂಟಿ-ಇನ್ಫ್ಲಮೇಟರಿ ಔಷಧಿಗಳು, ಪೂರಕಗಳು ಮತ್ತು ನಿದ್ರೆಗೆ ಸಹಾಯ ಮಾಡುವ ಮೆಲಟೋನಿನ್ ಸೇರಿವೆ. ನಿರಂತರ ಭಯ ಮತ್ತು ಒತ್ತಡದ ನಡುವೆ ಜನರಿಗೆ ನಿದ್ರೆ ಬಹಳ ಅಗತ್ಯವಾಗಿರುವುದರಿಂದ ಈ ಔಷಧಿಗಳಿಗೆ ಹೆಚ್ಚಿನ ಬೇಡಿಕೆ ಇದೆ.

ದಾನ ಸೇವಾ ದಿಕಾಸ್ತೇರಿಯ ಮುಖ್ಯಸ್ಥರಾದ ಕಾರ್ಡಿನಲ್ ಕೊನ್ರಾಡ್ ಕ್ರಾಜೆವ್ಸ್ಕಿ ರವರು ಮತ್ತೊಂದು ಲಾರಿ ಸಹಾಯ ಸಾಮಗ್ರಿಗಳೊಂದಿಗೆ ಶೀಘ್ರದಲ್ಲೇ ಹೊರಡುವುದಾಗಿ ತಿಳಿಸಿದ್ದಾರೆ. ಸಹಾಯವು ತಲುಪಿದ ನಂತರ ಧರ್ಮಪ್ರಾಂತ್ಯಗಳ ಧರ್ಮ ಕೇಂದ್ರದ ಜಾಲಗಳ ಮೂಲಕ ವಿತರಣೆ ಮಾಡಲಾಗುತ್ತದೆ. ಬ್ಯಾಂಕೊ ಫಾರ್ಮಾಸ್ಯುಟಿಕೋ, ಔಷಧ ಕಂಪನಿಗಳು, ಪ್ರಾಕ್ಟರ್ & ಗ್ಯಾಂಬಲ್ ಗುಂಪು ಮತ್ತು ಸಹಾಯ ಮಾಡಲು ಮುಂದಾಗಿರುವ ಎಲ್ಲ ಸದುದ್ದೇಶದ ಜನರಿಗೆ ಜಗದ್ಗುರುಗಳ ಪರವಾಗಿ ಧನ್ಯವಾದಗಳು ಸಲ್ಲಿಸಲಾಗಿದೆ.

09 ಫೆಬ್ರವರಿ 2026, 00:00