ಜಗದ್ಗುರು XIV ನೇ ಲಿಯೋರವರು ಇಟಾಲಿಯನ್ ಗಣರಾಜ್ಯದ ಪ್ರಿಫೆಕ್ಟ್‌ಗಳನ್ನು ಭೇಟಿಯಾಗುತ್ತಾರೆ ಜಗದ್ಗುರು XIV ನೇ ಲಿಯೋರವರು ಇಟಾಲಿಯನ್ ಗಣರಾಜ್ಯದ ಪ್ರಿಫೆಕ್ಟ್‌ಗಳನ್ನು ಭೇಟಿಯಾಗುತ್ತಾರೆ  (ANSA)

ಜಗದ್ಗರುಗಳು: ನಾಗರಿಕ ಸೌಹಾರ್ದತೆ ಬಡವರಿಗೆ ಸ್ವಾಗತ ದೊರಕುವಂತೆ ಮಾಡುತ್ತದೆ ಮತ್ತು ಸೇವೆಗಳು ಎಲ್ಲರಿಗೂ ತಲುಪುವಂತೆ ಮಾಡುತ್ತದೆ.

ಇಟಲಿಯ ಪ್ರಿಫೆಕ್ಟ್‌ಗಳೊಂದಿಗೆ ನಡೆದ ಸಭೆಯಲ್ಲಿ ಜಗದ್ಗುರು XIVನೇ ಲಿಯೋರವರು ನಾಗರಿಕ ಸೇವಕರಿಗೆ ರಾಷ್ಟ್ರದ ಹಿತವನ್ನು ಕಾಪಾಡುವಂತೆ ಆಹ್ವಾನಿಸಿದರು, ಹಾಗಾಗಿ ಪ್ರತಿಯೊಬ್ಬರೂ ಕಾನೂನಿನ ಆಳ್ವಿಕೆಯಿಂದ ಪ್ರಯೋಜನ ಪಡೆಯುವಂತೆ ಮತ್ತು ಸರ್ಕಾರದ ಸೇವೆಗಳಿಗೆ ಸಮಾನ ಪ್ರವೇಶವನ್ನು ಹೊಂದುವಂತೆ ಆಗಬೇಕು ಎಂದು ಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಸೋಮವಾರ ಇಟಾಲಿಯನ್ ಗಣರಾಜ್ಯದ ಪ್ರಿಫೆಕ್ಟ್‌ಗಳನ್ನು ಭೇಟಿ ಮಾಡಿದರು. ಇವರು ಪ್ರಾಂತ್ಯ ಮಟ್ಟದಲ್ಲಿ ಸರ್ಕಾರದ ಕಾರ್ಯನಿರ್ವಹಣಾ ಅಧಿಕಾರವನ್ನು ಪ್ರತಿನಿಧಿಸುತ್ತಾರೆ.

ತಮ್ಮ ಭಾಷಣದಲ್ಲಿ ಜಗದ್ಗುರುಗಳು ರೋಮನ್ ಸಾಮ್ರಾಜ್ಯದ ಕಾಲದಲ್ಲಿ ಪ್ರಿಫೆಕ್ಟ್‌ಗಳು ಮತ್ತು ಬಿಷಪ್‌ಗಳ ನಡುವಿನ ಪ್ರಾಚೀನ ಸಂಬಂಧವನ್ನು ಸ್ಮರಿಸಿದರು. ಆಗ ಇಬ್ಬರೂ ನಾಗರಿಕರ ಜೀವನದ ವಿಭಿನ್ನ ಆಯಾಮಗಳನ್ನು ಗಮನಿಸುತ್ತಿದ್ದರು. ಅವರು ಸಂತ ಅಂಬ್ರೋಸರನ್ನು ಉಲ್ಲೇಖಿಸಿದರು. ಮಿಲಾನ್ ನಗರವು ರೋಮನ್ ಸಾಮ್ರಾಜ್ಯದ ರಾಜಧಾನಿಯಾಗಿದ್ದಾಗ ಅವರು ಪ್ರಿಫೆಕ್ಟ್ ಆಗಿ ಸೇವೆ ಸಲ್ಲಿಸಿ, ನಂತರ ಸ್ಥಳೀಯ ಜನರಿಂದ ಬಿಷಪ್ ಆಗಿ ಆರಿಸಲ್ಪಟ್ಟರು. “ಈ ವೇಗದ ಬದಲಾವಣೆಯ ನಂತರ, ಅಂಬ್ರೋಸ್ ರವರು ತಮ್ಮ ಆಧ್ಯಾತ್ಮಿಕ ಅಧಿಕಾರವನ್ನು ಜನರ ಸೇವೆಗೆ ಅರ್ಪಿಸಿ ತಮ್ಮ ಸಾರ್ವಜನಿಕ ಕರ್ತವ್ಯಗಳನ್ನು ಹೊಸ ರೀತಿಯಲ್ಲಿ ನಿರ್ವಹಿಸಿದರು, ಎಂದು ಜಗದ್ಗುರುಗಳು ಹೇಳಿದರು.

ಇಂದಿಗೂ ಧರ್ಮ ಸಭೆ ಮತ್ತು ಇಟಾಲಿಯನ್ ರಾಜ್ಯವು ಜನರ ಆಧ್ಯಾತ್ಮಿಕ ಹಾಗೂ ಭೌತಿಕ ಅಗತ್ಯಗಳನ್ನು ಪೂರೈಸಲು ಸಹಕಾರದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಜಗದ್ಗುರುಗಳು ಹೇಳಿದರು. “ಸಂಘರ್ಷಗಳು ಮತ್ತು ಅಂತರಾಷ್ಟ್ರೀಯ ಉದ್ವಿಗ್ನತೆಗಳಿಂದ ಗುರುತಿಸಲ್ಪಟ್ಟಿರುವ ನಮ್ಮ ಕಾಲದಲ್ಲಿ, ಸಾಮೂಹಿಕ ಹಿತವನ್ನು ರಕ್ಷಿಸುವುದು ಅತ್ಯಂತ ಮುಖ್ಯವಾಗಿದೆ. ಇದು ಕೇವಲ ಭೌತಿಕ ಅಂಶಗಳಿಗೆ ಸೀಮಿತವಲ್ಲ ಇಟಾಲಿಯನ್ ಗಣರಾಜ್ಯದ ನೈತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನೂ ಒಳಗೊಂಡಿದೆ,ಎಂದು ಅವರು ಹೇಳಿದರು.

ಇಟಲಿಯ ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡುವ ಮೂಲಕ, ಪ್ರಿಫೆಕ್ಟ್‌ಗಳು ಸಾಮಾಜಿಕ ಶಿಸ್ತು ಮತ್ತು ಸುವ್ಯವಸ್ಥೆಯನ್ನು ಉತ್ತೇಜಿಸುತ್ತಾರೆ. ಇದರಿಂದ ಬಡವರಿಗೆ ಸ್ವಾಗತ ದೊರಕುತ್ತದೆ, ವೃದ್ಧರಿಗೆ ಮನಶಾಂತಿ ಸಿಗುತ್ತದೆ, ಹಾಗೂ ಕುಟುಂಬಗಳು, ಯುವಕರು ಮತ್ತು ರೋಗಿಗಳಿಗೆ ಅಗತ್ಯ ಸೇವೆಗಳು ತಲುಪುತ್ತವೆ. ಸಾರ್ವಜನಿಕ ಶಿಸ್ತು ಎಂದರೆ ಕೇವಲ ಅಪರಾಧದ ವಿರುದ್ಧ ಹೋರಾಟವಲ್ಲ ಹಿಂಸಾಚಾರ, ಸುಳ್ಳು ಮತ್ತು ಅಶ್ಲೀಲತೆ ಮುಂತಾದ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಪ್ರವೃತ್ತಿಗಳನ್ನು ತಡೆಯುವುದೂ ಅಗತ್ಯವೆಂದು ಅವರು ಹೇಳಿದರು.

ನಾಗರಿಕ ಸೇವಕರು ರಾಷ್ಟ್ರದ ಹಿತಕ್ಕಾಗಿ ಸೇವೆ ಸಲ್ಲಿಸಬೇಕಾದವರು ಇದಕ್ಕೆ ಒಳಗಿನ ಶಿಸ್ತು ಮತ್ತು ಸನ್ಮಾರ್ಗದ ಮನಸ್ಸು ಅಗತ್ಯವೆಂದು ಜಗದ್ಗುರುಗಳು ನೆನಪಿಸಿದರು. ಇಟಾಲಿಯನ್ ಪ್ರಿಫೆಕ್ಟ್‌ಗಳು ವಿವಿಧ ಸರ್ಕಾರಿ ಸಂಸ್ಥೆಗಳ ನಡುವೆ ಸಹಕಾರವನ್ನು ಉತ್ತೇಜಿಸುವುದರೊಂದಿಗೆ, ವೃತ್ತಿಪರ ಹೊಣೆಗಾರಿಕೆ ಮತ್ತು ಸನ್ಮಾರ್ಗದ ಜೀವನಶೈಲಿಯನ್ನು ಕಾಪಾಡುತ್ತಾರೆ ಎಂದು ಹೇಳಿದರು. ವಿಶೇಷವಾಗಿ ಆಪತ್ತಿನ ಸಂದರ್ಭಗಳಲ್ಲಿ ಪ್ರಳಯಗಳು ಅಥವಾ ಅಪಾಯಗಳ ಸಂದರ್ಭದಲ್ಲಿ ಅವರ ಪಾತ್ರವು ಐಕ್ಯತೆ, ಧೈರ್ಯ ಮತ್ತು ನ್ಯಾಯದ ಮೌಲ್ಯಗಳನ್ನು ಅತ್ಯುತ್ತಮವಾಗಿ ವ್ಯಕ್ತಪಡಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಸಾರ್ವಜನಿಕ ಆಡಳಿತಕ್ಕೆ ಹೊಸ ತಂತ್ರಜ್ಞಾನಗಳು, ವಿಶೇಷವಾಗಿ ಕೃತಕ ಬುದ್ಧಿಮತ್ತೆ, ಉಂಟುಮಾಡುವ ಸವಾಲುಗಳನ್ನು ಜಗದ್ಗುರುಗಳು ಗುರುತಿಸಿ, ಅವುಗಳನ್ನು ಇಟಲಿಯ ಎಲ್ಲಾ ನಿವಾಸಿಗಳ ಹಿತಕ್ಕಾಗಿ ಬಳಸುವಂತೆ ಆಹ್ವಾನಿಸಿದರು. ಕೊನೆಯಲ್ಲಿ, ಇಟಾಲಿಯನ್ ರಾಜ್ಯದ ಹಿತಕ್ಕಾಗಿ ಕಥೋಲಿಕ ಧರ್ಮ ಸಭೆ ತನ್ನ ಸಹಕಾರ ಮತ್ತು ಗೌರವವನ್ನು ನೀಡುವುದಾಗಿ ಅವರು ಭರವಸೆ ನೀಡಿ, ಜಾಗೃತ, ಪ್ರಾಮಾಣಿಕ ಮತ್ತು ಸಕ್ರಿಯ ನಾಗರಿಕತ್ವದ ಶೈಲಿಯನ್ನು ಬೆಳೆಸುತ್ತಿರುವ ನಾಗರಿಕ ಸೇವಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

16 ಫೆಬ್ರವರಿ 2026, 15:36