ಜಗದ್ಗುರು XIVನೇ ಲಿಯೋರವರು ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ ಸದಸ್ಯರನ್ನು ಭೇಟಿಯಾದರು ಜಗದ್ಗುರು XIVನೇ ಲಿಯೋರವರು ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ ಸದಸ್ಯರನ್ನು ಭೇಟಿಯಾದರು  (ANSA)

ಜಗದ್ಗರುಗಳು: ಯುದ್ಧವು ಜೀವನ ಮತ್ತು ಸಾರ್ವಜನಿಕ ಆರೋಗ್ಯದ ವಿರುದ್ಧ ಸಾಧ್ಯವಿರುವ ಅತ್ಯಂತ ಗಂಭೀರ ದಾಳಿಯಾಗಿದೆ

ಜಗದ್ಗುರು XIVನೇ ಲಿಯೋರವರು ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ ಸಂಸ್ಥೆಯ ಪೂರ್ಣಸಭೆಯಲ್ಲಿ ಭಾಗವಹಿಸಿದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ಸಂಘರ್ಷಗಳಿಂದ ಕಂಗೆಟ್ಟಿರುವ ಈ ಜಗತ್ತಿನಲ್ಲಿ ಆರೋಗ್ಯವನ್ನು ಉತ್ತೇಜಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದರು.

ವ್ಯಾಟಿಕನ್ ವರದಿ

ಫೆಬ್ರವರಿ 16ರಂದು ವ್ಯಾಟಿಕನ್‌ನಲ್ಲಿ ನಡೆದ ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ ಸಂಸ್ಥೆಯ ಪೂರ್ಣಸಭೆಯಲ್ಲಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಸಂಘರ್ಷಗಳಿಂದ ಕಂಗೆಟ್ಟಿರುವ ಜಗತ್ತಿನಲ್ಲಿ ಜೀವ ಮತ್ತು ಆರೋಗ್ಯವನ್ನು ರಕ್ಷಿಸಲು ಸಮಯ, ಸಂಪನ್ಮೂಲಗಳು ಮತ್ತು ಪರಿಣತಿಯನ್ನು ಸಮರ್ಪಿಸುವುದು ಅತ್ಯಗತ್ಯವೆಂದು ಒತ್ತಿ ಹೇಳಿದರು. ಯುದ್ಧಗಳು ನಾಗರಿಕ ಸೌಕರ್ಯಗಳು, ವಿಶೇಷವಾಗಿ ಆಸ್ಪತ್ರೆಗಳ ಮೇಲೆ ದಾಳಿ ಮಾಡುವ ಮೂಲಕ, ಜೀವನ ಮತ್ತು ಸಾರ್ವಜನಿಕ ಆರೋಗ್ಯದ ವಿರುದ್ಧ ಮಾನವ ಕೈಗಳಿಂದಾಗುವ ಅತ್ಯಂತ ಭೀಕರ ದಾಳಿಗಳಾಗಿವೆ ಎಂದು ಅವರು ಹೇಳಿದರು.

ಆಯುಧಗಳ ಉತ್ಪಾದನೆಗೆ ಅಪಾರ ಆರ್ಥಿಕ ಮತ್ತು ತಾಂತ್ರಿಕ ಸಂಪನ್ಮೂಲಗಳನ್ನು ಬಳಸುತ್ತಿರುವ ಈ ಕಾಲದಲ್ಲಿ, ಆರೋಗ್ಯ ಮತ್ತು ಜೀವ ರಕ್ಷಣೆಗೆ ಆದ್ಯತೆ ನೀಡುವುದು ಅತ್ಯಂತ ಮುಖ್ಯವಾಗಿದೆ ಎಂದು ಜಗದ್ಗುರುಗಳು ಹೇಳಿದರು. "ಎಲ್ಲರಿಗೂ ಆರೋಗ್ಯ ರಕ್ಷಣೆ: ಸುಸ್ಥಿರತೆ ಮತ್ತು ಸಮಾನತೆ" ಎಂಬ ವಿಷಯದಡಿ ನಡೆದ ಈ ಸಭೆಯ ಉದ್ದೇಶವು ಎಲ್ಲರಿಗೂ ಸಮಾನ ಆರೋಗ್ಯ ಸೇವೆಯನ್ನು ಒದಗಿಸುವ ಅಗತ್ಯವನ್ನು ಒತ್ತಿಹೇಳುವುದು ಆಗಿತ್ತು.

ಜಗದ್ಗರುಗಳು,“ಜೀವ ಮತ್ತು ಆರೋಗ್ಯ ಎಲ್ಲರಿಗೂ ಸಮಾನ ಮೌಲ್ಯಗಳು” ಎಂದು ಹೇಳಲಾಗುತ್ತಿದೆಯಾದರೂ, ವಾಸ್ತವದಲ್ಲಿ ಎಲ್ಲರಿಗೂ ಸಮಾನ ಗೌರವ ಅಥವಾ ಆರೋಗ್ಯ ರಕ್ಷಣೆ ದೊರೆಯುವುದಿಲ್ಲ ಎಂದು ಗಮನಿಸಿದರು. ಆದಾಯ, ಶಿಕ್ಷಣ, ವಾಸಿಸುವ ಪ್ರದೇಶ ಮತ್ತು ಸಾಮಾಜಿಕ-ಪರಿಸರ ನೀತಿಗಳು ಆರೋಗ್ಯದ ಗುಣಮಟ್ಟವನ್ನು ನಿರ್ಧರಿಸುತ್ತವೆ. ವಿವಿಧ ದೇಶಗಳು ಮತ್ತು ಸಮಾಜ ಗುಂಪುಗಳ ನಡುವೆ ಆಯುಷ್ಯ ಹಾಗೂ ಆರೋಗ್ಯದ ಮಟ್ಟದಲ್ಲಿ ದೊಡ್ಡ ಅಸಮಾನತೆಗಳಿವೆ ಎಂದು ಅವರು ಹೇಳಿದರು.

“ಒನ್ ಹೆಲ್ತ್” (ಒಂದೇ ಆರೋಗ್ಯ) ಎಂಬ ಪರಿಕಲ್ಪನೆಯನ್ನು ಅವರು ಒತ್ತಿ ಹೇಳಿದರು. ಮಾನವನ ಆರೋಗ್ಯವು ಪರಿಸರದ ಆರೋಗ್ಯ ಹಾಗೂ ಇತರ ಜೀವಿಗಳೊಂದಿಗೆ ಅತೀ ಆಪ್ತವಾಗಿ ಸಂಪರ್ಕ ಹೊಂದಿದೆ ಎಂಬುದನ್ನು ಕೋವಿಡ್-19 ಮಹಾಮಾರಿ ನಮಗೆ ತೋರಿಸಿತು ಎಂದು ಅವರು ಹೇಳಿದರು. ಆರೋಗ್ಯ ಸಮಸ್ಯೆಗಳನ್ನು ಸಮಗ್ರವಾಗಿ ಪರಿಹರಿಸಲು ವೈದ್ಯಕೀಯ, ರಾಜಕೀಯ, ನೈತಿಕ ಮತ್ತು ಆಡಳಿತ ಕ್ಷೇತ್ರಗಳ ಸಹಕಾರ ಅಗತ್ಯವಿದೆ ಎಂದು ಅವರು ವಿವರಿಸಿದರು.

ಸಾರ್ವಜನಿಕ ಹಿತ ಎಂಬ ಧರ್ಮಸಭೆಯ ಸಾಮಾಜಿಕ ಬೋಧನೆಯ ಮೂಲತತ್ವವನ್ನು ಬಲಪಡಿಸಬೇಕೆಂದು ಜಗದ್ಗುರುಗಳು ಕರೆ ನೀಡಿದರು. ವೈಯಕ್ತಿಕ ಅಥವಾ ರಾಷ್ಟ್ರೀಯ ಸ್ವಾರ್ಥಕ್ಕಿಂತ ಸಮಾಜದ ಒಟ್ಟು ಹಿತವೇ ಮುಖ್ಯವಾಗಬೇಕು. ಪರಸ್ಪರ ಕಾಳಜಿ, ಸಹಾನುಭೂತಿ ಮತ್ತು ಒಗ್ಗಟ್ಟಿನ ಮನೋಭಾವದಿಂದ ಮಾತ್ರ ಸಮರ್ಥ ಹಾಗೂ ದೀರ್ಘಕಾಲಿಕ ಆರೋಗ್ಯ ವ್ಯವಸ್ಥೆಗಳನ್ನು ನಿರ್ಮಿಸಬಹುದು ಎಂದು ಅವರು ಹೇಳಿದರು.

ಅಂತಾರಾಷ್ಟ್ರೀಯ ಹಾಗೂ ಬಹುಪಕ್ಷೀಯ ಸಹಕಾರವನ್ನು ಬಲಪಡಿಸಿ, ಬಲಪ್ರಯೋಗದ ಮನೋಭಾವದಿಂದ ಸಂಘರ್ಷಗಳನ್ನು ಉಂಟುಮಾಡುವುದನ್ನು ತಪ್ಪಿಸಬೇಕು ಎಂದರು ಜಗದ್ಗುರು XIVನೇ ಲಿಯೋರವರು ಪುನರುಚ್ಚರಿಸಿದರು. ಶಾಂತಿ, ಸಹಕಾರ ಮತ್ತು ಸಮಾನತೆಯ ಆಧಾರದ ಮೇಲೆ ಮಾತ್ರ ಜಗತ್ತಿನ ಆರೋಗ್ಯ ಮತ್ತು ಮಾನವ ಗೌರವವನ್ನು ರಕ್ಷಿಸಲು ಸಾಧ್ಯವೆಂದು ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

16 ಫೆಬ್ರವರಿ 2026, 15:41